ಗಜೇಂದ್ರಗಡ ಪಟ್ಟಣದ ಪತ್ತಾರಗಲ್ಲಿಯ ವಿಶ್ವನಾಥ ಸೀತಾ ರಾಮಚಂದ್ರ ಮಂದಿರ ಹಾಗೂ ಗಂಜಿಪೇಟೆ ಶ್ರೀರಾಮ ದೇವರ ದೇವಸ್ಥಾನದಲ್ಲಿ ಶ್ರೀರಾಮ ನವಮಿ ಉತ್ಸವವನ್ನು ಶುಕ್ರವಾರ ಸಕಲ ಸದ್ಭಕ್ತರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.

ಗಜೇಂದ್ರಗಡ: ಪಟ್ಟಣದ ಪತ್ತಾರಗಲ್ಲಿಯ ವಿಶ್ವನಾಥ ಸೀತಾ ರಾಮಚಂದ್ರ ಮಂದಿರ ಹಾಗೂ ಗಂಜಿಪೇಟೆ ಶ್ರೀರಾಮ ದೇವರ ದೇವಸ್ಥಾನದಲ್ಲಿ ಶ್ರೀರಾಮ ನವಮಿ ಉತ್ಸವವನ್ನು ಶುಕ್ರವಾರ ಸಕಲ ಸದ್ಭಕ್ತರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಇಲ್ಲಿನ ಶ್ರೀರಾಮ ಮಂದಿರದಲ್ಲಿ ಶ್ರೀರಾಮ ಭಜನಾ ಸಪ್ತಾಹ ಅಖಂಡ ನಾಮಸ್ಮರಣೆ ಹಾಗೂ ರಾಮಾಯಣ ಪ್ರವಚನ ಅಂತ್ಯಗೊಳಿಸಲಾಯಿತು. ಬೆಳಗ್ಗೆ ಶ್ರೀರಾಮ, ರುದ್ರ ದೇವರಿಗೆ ರುದ್ರಾಭಿಷೇಕ ಪೂಜೆಯೊಂದಿಗೆ ವಿಶೇಷ ಅಲಂಕಾರಿಕ ಪೂಜೆ ಹಾಗೂ ಶ್ರೀರಾಮನ ತೋಟ್ಟಿಲೋತ್ಸವ ನಡೆಯುತು. ಮಹಿಳೆಯರು ಜೋಗುಳ ಹಾಡುವ ಮೂಲಕ ತೋಟ್ಟಿಲೋತ್ಸವವನ್ನು ಸಂಭ್ರಮದಿಂದ ನಡೆಸಿದರು. ನಂತರ ರಾಮಚಂದ್ರ ಗಾಡಗೋಳಿ ಅವರಿಂದ ಪ್ರವಚನ ನಡೆಯಿತು.

ಶ್ರೀನಿವಾಸ ತೈಲಂಗ, ರಘುನಾಥಭಟ್ಟ ತಾಸಿನ, ಕೃಷ್ಣಾಚಾರ್ಯ ಇಟಗಿ, ವಿನಾಯಕ ಜೀರೆ, ಲಕ್ಷ್ಮೀ ಗಾಡಗೋಳಿ, ಕಲ್ಲಿನಾಥಭಟ್ಟ ಜೀರೆ, ಕೃಷ್ಣಾಚಾರ್ಯ ಇಟಗಿ, ಕೆ. ಸತ್ಯನಾರಾಯಣಭಟ್ಟ, ಗೋಪಾಲ ಕುಲಕರ್ಣಿ, ಮರಳೀಧರ ವೈದ್ಯ, ವಿನಾಯಕ ಜೀರೆ ಹಾಗೂ ಶಾರದಾ ತಾಸಿನ, ಸಂಧ್ಯಾ ಕುಲಕರ್ಣಿ, ಲಕ್ಷ್ಮೀ ಕುಲಕರ್ಣಿ ಸೇರಿದಂತೆ ಸಕಲ ಸದ್ಭಕ್ತರು ಭಾಗವಹಿಸಿ ಕೋಸಂಬರಿ, ಪಾನಕ, ಅಲ್ಪೋಪಹಾರದೊಂದಿಗೆ ತೀರ್ಥ, ಪ್ರಸಾದ ಸ್ವೀಕರಿಸಿ ಶ್ರೀರಾಮನ ಕೃಪೆಗೆ ಪಾತ್ರರಾದರು.

ಸ್ಥಳೀಯ ಗಂಜಿಪೇಟೆಯ ಸೀತಾರಾಮದೇವರ ದೇವಸ್ಥಾನದಲ್ಲಿ ಶ್ರೀರಾಮ ನವಮಿಯನ್ನು ಸದ್ಭಕ್ತರು ವೈಭವ ಪೂರ್ವಕವಾಗಿ ಆಚರಿಸಿದರು. ಬೆಳಗ್ಗೆ ಭಜನಾ ಸಪ್ತಾಹದೊಂದಿಗೆ ಅಖಂಡ ನಾಮಸ್ಮರಣೆ ಹಾಗೂ ರಾಮಾಯಣ ಪ್ರವಚನ ನಡೆಯಿತು. ಗುರು ಜಗನ್ನಾಥದಾಸರ ಭಜನಾ ಮಂಡಳಿಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶ್ರೀರಾಮನ ಉತ್ಸವ ಮೂರ್ತಿಯೊಂದಿಗೆ ಪಾಲಕಿ ಉತ್ಸವದ ಮರವಣಿಗೆ ನಡೆಯಿತು.

ನಂತರ ಮಹಿಳೆಯರು ಶ್ರೀರಾಮನ ತೋಟ್ಟಿಲೋತ್ಸ ನೆರವೇರಿಸಿದರು. ಬಳಿಕ ದೇವಸ್ಥಾನದಲ್ಲಿ ಕೋಸಂಬರಿ, ಪಾನಕ ವಿನಿಯೋಗ ಮಾಡಲಾಯಿತು. ಸಕಲ ಸದ್ಭಕ್ತರು ಆಗಮಿಸಿ, ಶ್ರೀರಾಮನ ಕೃಪೆಗೆ ಪಾತ್ರರಾದರು. ಸ್ಥಳೀಯ ಅಗಸಿ ಬಳಿಯ ಹನುಮಂತ ದೇವರ ದೇವಸ್ಥಾನ ಸೇರಿದಂತೆ ವಿವಿಧ ಧಾರ್ಮಿಕ ಕೇಂದ್ರದಲ್ಲಿ ಶ್ರೀರಾಮನಾಮ ಸ್ಮರಣೆಯನ್ನು ಭಕ್ತರು ನಡೆಸಿದರು. ವಿಶೇಷ ಪೂಜೆ, ಅಲಂಕಾರ, ಅಭಿಷೇಕ, ಪಟ್ಟಾಭಿಷೇಕ, ಸೀತಾ ಕಲ್ಯಾಣ ಉತ್ಸವ ನಡೆಸಲಾಯಿತು.

ಶ್ರೀರಾಮನ ಅದ್ಧೂರಿ ತೊಟ್ಟಿಲೋತ್ಸವ

ಲಕ್ಷ್ಮೇಶ್ವರ: ಪಟ್ಟಣದ ಶಂಕರಭಾರತಿಮಠದಲ್ಲಿ ಬ್ರಹ್ಮವೃಂದದ ಪರವಾಗಿ ಶುಕ್ರವಾರ ಶ್ರೀರಾಮನ ತೊಟ್ಟಿಲೋತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಿತು.

ಶ್ರೀಮಠದಲ್ಲಿ ಸೇರಿದ್ದ ಸುಮಂಗಲೆಯರು ಶ್ರೀರಾಮ ಸ್ವರೂಪಿ ಮೂರ್ತಿಯನ್ನು ತೊಟ್ಟಿಲಲ್ಲಿ ಹಾಕಿ ಭಕ್ತಿಯಿಂದ ತೂಗಿ ರಾಮನಾಮದ ಭಕ್ತಿಗೀತೆ ಹಾಡಿದರು. ಶಂಕರಭಾರತಿಮಠದಲ್ಲಿ ರಾಮ ಜಪ ರಿಂಗಣಿಸಿತು.ಈ ವೇಳೆ ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಕೃಷ್ಣ ಕುಲಕರ್ಣಿ ಮತ್ತು ಬ್ರಹ್ಮವೃಂದದ ಅಧ್ಯಕ್ಷ ಗೋಪಾಲ ಪಡ್ನೀಸ್ ಮಾತನಾಡಿ, ಧರ್ಮ ಸಂಸ್ಥಾಪನೆಗಾಗಿ ಮರ್ಯಾದಾ ಪುರುಷೋತ್ತಮನಾಗಿ ಅವತಾರವೆತ್ತಿದ ಶ್ರೀ ರಾಮ ಸಾಕ್ಷಾತ್ ದೇವರೇ ಆಗಿದ್ದಾನೆ. ಸೂರ್ಯವಂಶಸ್ಥನಾದ ಶ್ರೀರಾಮನು ಕಾಲಾತೀತ, ಗುಣಾತೀತನಾಗಿದ್ದು, ಶ್ರೀರಾಮನೇ ಮೂಲವಾಗಿರುವ ರಾಮಾಯಣದ ಪ್ರಸಂಗಗಳು ಬದುಕಿಗೆ ಆದರ್ಶವಾಗಿವೆ. ಶ್ರೀರಾಮ ಎಲ್ಲರ ಬದುಕಿಗೂ ಆದರ್ಶ ಮತ್ತು ಪೂಜ್ಯನೀಯವಾಗಿದ್ದು, ಶ್ರೀರಾಮ ನಾಮ ಜಪದಿಂದ ಕಷ್ಟಗಳು ಪರಿಹಾರವಾಗಿ ಸುಖ-ನೆಮ್ಮದಿಯ ಬದುಕು ನಮ್ಮದಾಗುತ್ತದೆ. ೨೦೨೪ರಲ್ಲಿ ನಡೆದ ಅಯೋಧ್ಯೆ ರಾಮಮಂದಿರ ಉದ್ಘಾಟನೆ ನಿಮಿತ್ತ ಪಟ್ಟಣದ ಬ್ರಾಹ್ಮಣ ಸಮಾಜ ಒಂದು ಕೋಟಿ ರಾಮನಾಮ ತಾರಕ ಮಂತ್ರದ ಜಪಯಜ್ಞವನ್ನು ಯಶಸ್ವಿಯಾಗಿ ನೆರವೇರಿಸಿದ್ದು ಎಲ್ಲರ ಗಮನ ಸೆಳೆಯುವಂತಾಗಿತ್ತು. ಬ್ರಾಹ್ಮಣ ಸಮಾಜದ ಜೊತೆ ಇತರೆ ಎಲ್ಲ ಸಮಾಜ ಬಾಂಧವರು ಅಂದಿನ ರಾಮತಾರಕ ಯಜ್ಞವನ್ನು ಯಶಸ್ವಿಗೊಳಿಸಲು ಸಹಕರಿಸಿದ್ದನ್ನು ಸ್ಮರಿಸಿದರು.

ಬಳಿಕ ಸೇರಿದ್ದವರಿಗೆ ಪಾನಕ, ಕೋಸುಂಬರಿ, ಪ್ರಸಾದ ವಿತರಿಸಲಾಯಿತು. ಬ್ರಾಹ್ಮಣ ಸಮಾಜದ ನಾರಾಯಣ ಭಟ್ ಪುರಾಣಿಕ, ಗುರುರಾಜ ಪಾಟೀಲಕುಲಕರ್ಣಿ, ಆರ್.ಎಚ್. ಕುಲಕರ್ಣಿ, ಎ.ಪಿ. ಕುಲಕರ್ಣಿ, ಅನಂತ ಭಟ್ ಪೂಜಾರ, ಚಿಕ್ಕರಸ ಪೂಜಾರ, ಗೋಪಾಲ ಕುಲಕರ್ಣಿ, ಡಿ.ಪಿ. ಹೇಮಾದ್ರಿ, ಅರವಿಂದ ದೇಶಪಾಂಡೆ, ದೃವರಾಜ ಬೆಟಗೇರಿ, ವ್ಯಾಪಾರಿ, ನಾಗರಾಜ ಪೂಜಾರ, ಅನಿಲ ಕುಲಕರ್ಣಿ, ನೂರಾರು ಮಹಿಳೆಯರು, ಮಕ್ಕಳು ಸೇರಿದಂತೆ ಅನೇಕರು ಇದ್ದರು.