ಸಾರಾಂಶ
ಹಿಂದೂ ಧಾರ್ಮಿಕ ಕಾರ್ಯಕ್ರಮದ ಮೆರವಣಿಗೆಗೆ ಶ್ರೀರಾಮ ಸೇನೆ ರಕ್ಷಣೆ ನೀಡಲಿದೆ. ಶಸ್ತ್ರಸಜ್ಜಿತ ತಲವಾರು ಹಿಡಿದ 50 ಮಂದಿ ಶ್ರೀರಾಮಸೇನೆ ಕಾರ್ಯಕರ್ತರು ಇನ್ನುಮುಂದೆ ರಕ್ಷಣೆ ನೀಡಲಿದ್ದಾರೆ ಎಂದು ಗಂಗಾಧರ್ ಕುಲಕರ್ಣಿ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಹಿಂದೂ ಧಾರ್ಮಿಕ ಕಾರ್ಯಕ್ರಮದ ಮೆರವಣಿಗೆಗೆ ಶ್ರೀರಾಮ ಸೇನೆ ರಕ್ಷಣೆ ನೀಡಲಿದೆ. ಶಸ್ತ್ರಸಜ್ಜಿತ ತಲವಾರು ಹಿಡಿದ 50 ಮಂದಿ ಶ್ರೀರಾಮಸೇನೆ ಕಾರ್ಯಕರ್ತರು ಇನ್ನುಮುಂದೆ ರಕ್ಷಣೆ ನೀಡಲಿದ್ದಾರೆ ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.ಮಂಗಳೂರಿನಲ್ಲಿ ಶ್ರೀರಾಮಸೇನೆಯ ಸಮಾವೇಶಕ್ಕೆ ಆಗಮಿಸಿದ ವೇಳೆ ಭಾನುವಾರ ಅವರು ಸುದ್ದಿಗಾರರಲ್ಲಿ ಮಾತನಾಡಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಆಶ್ರಯದಲ್ಲಿ ಜಿಹಾದಿ ಶಕ್ತಿಗಳು ಹದ್ದು ಮೀರುತ್ತಿವೆ. ಮುಸಲ್ಮಾನ ಪುಂಡರು ನಾಗಮಂಗಲ, ದಾವಣಗೆರೆಯಲ್ಲಿ ಗಣಪತಿ ಮೆರವಣಿಗೆ ಮೇಲೆ ಕಲ್ಲು ತೂರಿದ್ದಾರೆ. ಪೆಟ್ರೋಲ್ ಬಾಂಬ್ ಹಾಕುವ ಮಟ್ಟಕ್ಕೆ ಬಂದು ನಿಂತಿದ್ದಾರೆ. ಇದಕ್ಕೆ ಕಾಂಗ್ರೆಸ್ ಸರ್ಕಾರವೇ ನೇರ ಕಾರಣ. ಮುಸ್ಲಿಂ ಗುಂಡಾಗಳು ಕೂಡ ‘ಈಗ ನಮ್ಮ ಸರ್ಕಾರ ಇರುವುದು’ ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ. ಅಂತಹ ಉದ್ಧಟತನಕ್ಕೆ ರಾಜ್ಯ ಸರ್ಕಾರ ಕಾರಣ, ರಾಜ್ಯ ಸರ್ಕಾರ ಅವರ ಜೊತೆ ಸಂಪೂರ್ಣ ನಿಂತಿದೆ ಎಂದು ಅವರು ಆರೋಪಿಸಿದರು.ನಾಗಮಂಗಲ ಘಟನೆ ಆಕಸ್ಮಿಕ ಎನ್ನುವ ಗೃಹ ಮಂತ್ರಿಗಳಿಗೆ ನಾಚಿಕೆ, ಮಾನ, ಮರ್ಯಾದೆ ಇದೆಯೋ ಗೊತ್ತಿಲ್ಲ. ವ್ಯವಸ್ಥಿತವಾಗಿ ನಡೆಸಲಾದ ಗಲಭೆ ಆಕಸ್ಮಿಕ ಎಂದು ತೋರುತ್ತಿದೆಯಾ? ಇದುವೇ ಗೂಂಡಾಗಳಿಗೆ ಪ್ರೇರಣೆ ಆಗುತ್ತಿದೆ. ಇದರ ಹಿಂದೆ ಪಿಎಫ್‌ಐಯವರಿದ್ದಾರೆ. ಮೂರ್ನಾಲ್ಕು ದಿನ ಮುಂಚಿತವಾಗಿ ಅವರು ಬಂದು ನಾಗಮಂಗಲದಲ್ಲಿ ಇದ್ದರು. ಈ ಘಟನೆಗೆ ಬೇಜವಾಬ್ದಾರಿ ನೆಲೆಯಲ್ಲಿ ನೈತಿಕ ಹೊಣೆಹೊತ್ತು ಈ ಕೂಡಲೇ ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದರು.
ಕೈಯಲ್ಲಿ ಕಲ್ಲು, ತಲವಾರು ಹಿಡಿಯಲು ಹಿಂದೂ ಸಮಾಜಕ್ಕೆ ಗೊತ್ತಿಲ್ಲ ಎಂದುಕೊಳ್ಳಬೇಡಿ ಎಂದ ಗಂಗಾಧರ ಕುಲಕರ್ಣಿ, ಮುಂಬರುವ ಗಣೇಶನ ಮೆರವಣಿಗೆ ಸೇರಿದಂತೆ ಇನ್ನಿತರ ಹಿಂದೂ ಧಾರ್ಮಿಕ ಕಾರ್ಯಕ್ರಮ ಮೆರವಣಿಗೆಗೆ ನಾವು ರಕ್ಷಣೆ ನೀಡುತ್ತೇವೆ. ತಲವಾರು ಸಮೇತ 50 ಮಂದಿ ಶ್ರೀರಾಮಸೇನೆಯ ಕಾರ್ಯಕರ್ತರು ರಕ್ಷಣೆ ನೀಡಲಿದ್ದಾರೆ. ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಈ ರಾಜ್ಯ ಸರ್ಕಾರದಿಂದ ನಮಗೆ ರಕ್ಷಣೆ ಇಲ್ಲ ಎನ್ನುವುದು ಸಾಬೀತಾಗಿದೆ. ಅದಕ್ಕೆ ನಾವೇ ರಕ್ಷಣೆಗೆ ಶಸ್ತ್ರ ಹಿಡಿಯುತ್ತೇವೆ ಎಂದರು.ತಿಮ್ಮಪ್ಪನ ವಿಚಾರದಲ್ಲಿ ದ್ರೋಹ:
ತಿರುಪತಿ ತಿಮ್ಮಪ್ಪನ ಪ್ರಸಾದ ವಿಚಾರದಲ್ಲಿ ಬಹಳ ದೊಡ್ಡ ದ್ರೋಹ ಮಾಡಿದ್ದಾರೆ. ಇಡೀ ಹಿಂದೂ ಸಮಾಜಕ್ಕೆ ಆಘಾತ ಮಾಡಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಈ ಬಗ್ಗೆ ಸಂಪೂರ್ಣ ತನಿಖೆ ಆಗಬೇಕು. ಇಡೀ ದೇಶದ ಎಲ್ಲ ಹಿಂದೂ ಸಂಘಟನೆಗಳು ಸೇರಿ ಆಂಧ್ರದ ಮಾಜಿ ಸಿಎಂ ಜಗನ್ ಮನೆಗೆ ಮುತ್ತಿಗೆಗೆ ಚಿಂತನೆ ನಡೆಯುತ್ತಿದೆ. ಮಾತ್ರವಲ್ಲ ರಾಜ್ಯದಲ್ಲೂ ಈ ಕುರಿತು ಚಿಂತನೆ ನಡೆಯುತ್ತಿದೆ. ಈ ವಿಷಯವನ್ನು ಇಲ್ಲಿಗೆ ಬಿಡುವ ಪ್ರಶ್ನೆಯೇ ಇಲ್ಲ. ತಿರುಪತಿಯಲ್ಲಿ ತಕ್ಷಣಕ್ಕೆ ಒಂದು ಸುಸಜ್ಜಿತ ಲ್ಯಾಬ್ ಆಗಬೇಕು ಎಂದು ನಮ್ಮ ಒತ್ತಾಯ. ಮುಂಬರುವ ದಿನಗಳಲ್ಲಿ ಜಗನ್‌ಗೆ ಹಿಂದೂ ಸಮಾಜ ತಕ್ಕ ಉತ್ತರ ನೀಡಲಿದೆ. ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಆಗಬೇಕು ಎಂದು ಅವರು ಆಗ್ರಹಿಸಿದರು. .................ಜಗನ್ ಹುಳ ಬಿದ್ದು ಸಾಯ್ತಾನೆ!
ತನ್ನ ತಂದೆಯ ಸಾವು ಹೇಗೆ ಆಯಿತು ಎಂಬುದನ್ನು ಜಗನ್ ಒಮ್ಮೆ ಯೋಚಿಸಲಿ. ತಿರುಪತಿ ತಿಮ್ಮಪ್ಪನ ಶಾಪದಿಂದ ಅವರ ಹೆಣ ಕೂಡ ಸಿಗಲಿಲ್ಲ, ಬೀದಿ ಹೆಣವಾಗಿ ಹೋದ. ಹಿಂದೂ ಧರ್ಮದ ವಿರುದ್ಧ ಷಡ್ಯಂತ್ರ ಮಾಡಿದವರ ಸಾವು ಇದೇ ರೀತಿ ಬರುತ್ತದೆ. ಜಗನ್ ಕೂಡ ಹುಳ ಬಿದ್ದು ಸಾಯುತ್ತಾನೆ ಎಂದು ಗಂಗಾಧರ ಕುಲಕರ್ಣಿ ಹೇಳಿದರು.