ಸಾರಾಂಶ
ಇಲ್ಲಿನ ಶ್ರೀ ರಾಮೇಶ್ವರ ದಸರಾ ಉತ್ಸವದಲ್ಲಿ ಈ ವರ್ಷ ಗ್ರಾಮೀಣ ಕ್ರೀಡೆ, ಸಾಂಸ್ಕೃತಿಕ, ಕವಿಗೋಷ್ಠಿ ಸೇರಿದಂತೆ ಸೆ.26ರಿಂದ ಒಂದು ವಾರದ ಪರ್ಯಂತ ಅದ್ಧೂರಿಯಾಗಿ ಕಾರ್ಯಕ್ರಮಗಳು ನಡೆಯಲಿವೆ ಎಂದು ಶ್ರೀ ರಾಮೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾಗೂ ದಸರಾ ಸಮಿತಿಯ ಉಪಾಧ್ಯಕ್ಷ ಡಿ.ಎಸ್.ವಿಶ್ವನಾಥ ಶೆಟ್ಟಿ ತಿಳಿಸಿದರು.
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ
ಇಲ್ಲಿನ ಶ್ರೀ ರಾಮೇಶ್ವರ ದಸರಾ ಉತ್ಸವದಲ್ಲಿ ಈ ವರ್ಷ ಗ್ರಾಮೀಣ ಕ್ರೀಡೆ, ಸಾಂಸ್ಕೃತಿಕ, ಕವಿಗೋಷ್ಠಿ ಸೇರಿದಂತೆ ಸೆ.26ರಿಂದ ಒಂದು ವಾರದ ಪರ್ಯಂತ ಅದ್ಧೂರಿಯಾಗಿ ಕಾರ್ಯಕ್ರಮಗಳು ನಡೆಯಲಿವೆ ಎಂದು ಶ್ರೀ ರಾಮೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹಾಗೂ ದಸರಾ ಸಮಿತಿಯ ಉಪಾಧ್ಯಕ್ಷ ಡಿ.ಎಸ್.ವಿಶ್ವನಾಥ ಶೆಟ್ಟಿ ತಿಳಿಸಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸೆ.26ರಂದು ತುಂಗಾ ಮಹಾವಿದ್ಯಾಲಯದಲ್ಲಿ ಶಾಸಕ ಆರಗ ಜ್ಞಾನೇಂದ್ರ ಅಧ್ಯಕ್ಷತೆಯಲ್ಲಿ ಕುವೆಂಪು ಪ್ರತಿಷ್ಠಾನದ ಸಹಯೋಗದಲ್ಲಿ ದಸರಾ ಕವಿಗೋಷ್ಠಿ ನಡೆಯಲಿದೆ. 27ರಂದು ರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಮಕ್ಕಳ ಗುಂಪು ಭಜನಾ ಕಾರ್ಯಕ್ರಮ, ಯುವ ದಸರಾದಲ್ಲಿ ಸೆ.28ರಂದು ಬೆಳಿಗ್ಗೆ 11 ಗಂಟೆಗೆ ಕುರುವಳ್ಳಿ ರಿಂಗ್ ರಸ್ತೆ ಬಳಿ ಪುರುಷರಿಗೆ ಕೆಸರುಗದ್ದೆ ಓಟ, ಮಹಿಳೆಯರಿಗೆ ಹಗ್ಗಜಗ್ಗಾಟ, ಗಿರಿಗಿಟ್ಲಿ ಸ್ಪರ್ಧೆಯನ್ನು ಏರ್ಪಡಿಸಿದ್ದು ಕಿರಿತೆರೆ ನಟ ಹುಲಿ ಕಾರ್ತಿಕ್ ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಹೇಳಿದರು.
ಸೆ.29ರಂದು ಯುವ ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಟ್ಟಣದ ಕುಶಾವತಿಯ ನೆಹರೂ ಪಾರ್ಕಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದಲ್ಲಿ ಜಿಲ್ಲೆಯ ಯುವ ಕಲಾವಿದರುಗಳ ವತಿಯಿಂದ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ಕಲಾ ದಸರಾದಲ್ಲಿ ತಾಲೂಕಿನ ಕಲಾವಿದರುಗಳ ಕಲಾಕೃತಿಗಳ ಪ್ರದರ್ಶನ ನಡೆಯಲಿದೆ ಎಂದರು. ಸೆ.30ರಂದು ಪ್ರಥಮ ಬಾರಿಗೆ ನಡೆಯುವ ಮಹಿಳಾ ದಸರಾದಲ್ಲಿ ಮಹಿಳಾ ಹುಲಿ ನೃತ್ಯ, ನೃತ್ಯ ವೈವಿಧ್ಯ ಮತ್ತು ಫ್ಯಾಶನ್ ಷೋ ಕಾರ್ಯಕ್ರಮಗಳು ಕುಶಾವತಿಯ ನೆಹರೂ ಪಾರ್ಕಿನಲ್ಲಿ ನಡೆಯಲಿವೆ. ಅ.1ರಂದು ಸಂಜೆ ಕುಶಾವತಿಯ ನೆಹರೂ ಪಾರ್ಕಿನಲ್ಲಿ ನೃತ್ಯ ರೂಪಕಗಳು, ಸಂಗೀತ, ಯಕ್ಷಗಾನ ಮತ್ತು ಸಮೂಹಗಾನ ನಡೆಯಲಿದೆ. ಅ.2ರಂದು ವಿಜಯದಶಮಿಯಂದು ರಾಮೇಶ್ವರ ದೇವಸ್ಥಾನದಿಂದ ಮಧ್ಯಾಹ್ನ 2 ಗಂಟೆಗೆ ಶ್ರೀ ರಾಮೇಶ್ವರ ದೇವರ ಪಲ್ಲಕ್ಕಿ ಉತ್ಸವದೊಂದಿಗೆ ಚಾಮುಂಡೇಶ್ವರಿ ದೇವಿ ಅಂಬಾರಿ ಮೆರವಣಿಗೆ ಕುಶಾವತಿಯ ಬನ್ನಿ ಮಂಟಪದವರೆಗೆ ನಡೆಯಲಿದೆ. ಈ ಮೆರವಣಿಗೆಯಲ್ಲಿ ಆಕರ್ಷಕ ಸ್ಥಬ್ಧ ಚಿತ್ರಗಳು, ಭಜನಾ ನೃತ್ಯ ಸೇರಿದಂತೆ ಜಾನಪದ ತಂಡಗಳು ಇರಲಿವೆ. ಬನ್ನಿ ಪೂಜೆಯ ನಂತರ ಉಡುಪಿಯ ಡಾ.ಮಂಜರಿ ಚಂದ್ರ ಪುಷ್ಪರಾಜ್ ನಿರ್ದೆಶನದ ಸೃಷ್ಟಿ ನೃತ್ಯ ಕಲಾಕುಟೀರ ತಂಡದವರ ನೃತ್ಯ ಕಾರ್ಯಕ್ರಮ. ನಂತರ ಮಲೆನಾಡಿನ ಹೆಮ್ಮೆಯ ಹುಲಿಹೆಜ್ಜೆ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.ಸುದ್ದಿಗೋಷ್ಠಿಯಲ್ಲಿ ದಸರಾ ಸಮಿತಿಯ ಹೆದ್ದೂರು ನವೀನ್, ಕೆಸ್ತೂರು ಮಂಜುನಾಥ್, ಮುಖ್ಯ ಸಂಚಾಲಕರುಗಳಾದ ಸಂದೇಶ್ ಜವಳಿ ಮತ್ತು ಅಮರನಾಥ ಶೆಟ್ಟಿ, ಉಪ ಸಮಿತಿಗಳ ಪ್ರಶಾಂತ್ ಕುಕ್ಕೆ, ಚಂದವಳ್ಳಿ ಸೋಮಶೇಕರ್, ಟಿ.ಜೆ.ಅನಿಲ್, ಸೊಪ್ಪುಗುಡ್ಡೆ ರಾಘವೇಂದ್ರ, ರಾಘವೇಂದ್ರ ಶೆಟ್ಟಿ,ಜಿ.ಚೇತನ್ ಇತರರು ಇದ್ದರು.