ಫೆ.5 ರಂದು ಶ್ರೀ ರಂಗನಾಥಸ್ವಾಮಿ ದೇವಾಲಯ ರಥಸಪ್ತಮಿ: ರಮೇಶ ಬಂಡಿಸಿದ್ದೇಗೌಡ

| Published : Jan 24 2025, 12:46 AM IST

ಸಾರಾಂಶ

ರಥ ಸಾಗುವ ರಸ್ತೆಗಳನ್ನು ಪರಿಶೀಲಿಸಿ ರಥ ಚಲಿಸುವ ಮಾರ್ಗದಲ್ಲಿ ಗುಂಡಿಗಳಿದ್ದಲ್ಲಿ ಸರಿಪಡಿಸಬೇಕು. ರಸ್ತೆ ಎರಡು ಬದಿಗಳಲ್ಲಿ ಬೆಳೆದಿರುವ ಗಿಡ ಹಾಗೂ ಕಸವನ್ನು ತೆರವು ಮಾಡಬೇಕು. ಜೋತು ಬಿದ್ದಿರುವ ವಿದ್ಯುತ್ ತಂತಿಗಳು ಇತರೆ ಕೇಬಲ್ ಗಳಿದ್ದಲ್ಲಿ ತೆರವುಗೊಳಿಸಲು‌ ಸೂಚನೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ಫೆ.5ರಂದು ರಥಸಪ್ತಮಿ ಕಾರ್ಯಕ್ರಮ ನಡೆಯಲಿದ್ದು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಶಾಸಕ ರಮೇಶ ಬಂಡಿಸಿದ್ದೇಗೌಡ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪೂರ್ವಭಾವಿ ಸಿದ್ಧತಾ ಸಭೆ ನಡೆಸಿ, ರಥಸಪ್ತಮಿ ಅಂಗವಾಗಿ ಬ್ರಹ್ಮರಥ ಚಾಲನೆ ಮಾಡಲು ಯೋಗ್ಯವಾಗಿರುವ ಬಗ್ಗೆ ಪರಿಶೀಲಿಸಬೇಕು. ಅಗತ್ಯವಿದ್ದಲ್ಲಿ ದುರಸ್ತಿ ಪಡಿಸುವಂತೆ ತಿಳಿಸಿದರು.

ರಥ ಸಾಗುವ ರಸ್ತೆಗಳನ್ನು ಪರಿಶೀಲಿಸಿ ರಥ ಚಲಿಸುವ ಮಾರ್ಗದಲ್ಲಿ ಗುಂಡಿಗಳಿದ್ದಲ್ಲಿ ಸರಿಪಡಿಸಬೇಕು. ರಸ್ತೆ ಎರಡು ಬದಿಗಳಲ್ಲಿ ಬೆಳೆದಿರುವ ಗಿಡ ಹಾಗೂ ಕಸವನ್ನು ತೆರವು ಮಾಡಬೇಕು. ಜೋತು ಬಿದ್ದಿರುವ ವಿದ್ಯುತ್ ತಂತಿಗಳು ಇತರೆ ಕೇಬಲ್ ಗಳಿದ್ದಲ್ಲಿ ತೆರವುಗೊಳಿಸಲು‌ ಸೂಚನೆ ನೀಡಿದರು.

ಅಗತ್ಯವಾದ ಸ್ಥಳಗಳಲ್ಲಿ ಆರಕ್ಷಕ ಸಿಬ್ಬಂದಿ, ಬ್ಯಾರಿಕೇಡ್ ವ್ಯವಸ್ಥೆ, ಸರ್ತಿ ಸಾಲಿನ ವ್ಯವಸ್ಥೆ, ಸೂಕ್ತ ಪಾರ್ಕಿಂಗ್ ವ್ಯವಸ್ಥೆ, ಅಗ್ನಿಶಾಮಕ ವಾಹನ ನಿಯೋಜನೆ, ಬ್ರಹ್ಮ ರಥ ಎಳೆಯುವಾಗ ಭಕ್ತಾದಿಗಳು ರಥದ ಸಮೀಪಕ್ಕೆ ಬರದಂತೆ ರೋಪ್ ಸರ್ಕಲ್ ವ್ಯವಸ್ಥೆ ಮಾಡುವಂತೆ ತಿಳಿಸಿದರು.

ದೇವಾಸ್ಥಾನದ ಸಮೀಪ ರಸ್ತೆ ಮತ್ತು ಚರಂಡಿಗಳನ್ನು ಶುಚಿಗೊಳಿಸಬೇಕು.ದೇವಾಲಯದ ಒಳಭಾಗ ಮತ್ತು ಹೊರ ಭಾಗದಲ್ಲಿ ಸ್ವಚ್ಛತೆ ಕಾಪಾಡುವುದು, ಸ್ವಚ್ಛತೆ ಮತ್ತು ನೈರ್ಮಲ್ಯದ ಕುರಿತು ಜಾಗೃತಿ ಕ್ರಮ ವಹಿಸುವುದು ಅಗತ್ಯ ಎಂದರು.

ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ:

ಶುದ್ಧ ಕುಡಿಯುವ ನೀರಿನ ಮೂಲಗಳನ್ನು ಶುಚಿಗೊಳಿಸಿ ಹೆಚ್ಚುವರಿ ನಲ್ಲಿಗಳನ್ನೂ ಅಳವಡಿಸಲಾಗುವುದು ಮತ್ತು ಅಗತ್ಯವಿರುವ ಕಡೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂತೆ ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಭಕ್ತಾದಿಗಳಿಗೆ ದೇವರ ದರ್ಶನ ಮತ್ತು ಧಾರ್ಮಿಕ ಕಾರ್ಯಕ್ರಮಗಳಿಗೆ ತೊಂದರೆಯಾಗದಂತೆ ನಿರಂತರ ವಿದ್ಯುತ್ ಸರಬರಾಜಾಗುವಂತೆ ನೋಡಿಕೊಳ್ಳಬೇಕು‌. ದೇವಾಲಯದ ವ್ಯಾಪ್ತಿಯ ಬೀದಿ ದೀಪಗಳು ಸರಿಪಡಿಸಿ ಸೂಕ್ತ ಬೆಳಕಿನ ವ್ಯವಸ್ಥೆ ಯಾಗಬೇಕು. ವಿದ್ಯುತ್ ಅವಘಡಗಳು ಸಂಭವಿಸದಂತೆ ಎಚ್ಚರ ವಹಿಸಿ ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸಿ ಶಿವಾನಂದ ಮೂರ್ತಿ, ನಿಮಿಷಾಂಬ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ, ಶ್ರೀರಂಗನಾಥಸ್ವಾಮಿ ದೇವಸ್ಥಾನದ ಕಾರ್ಯನಿರ್ವಾಹಕ ಆಧಿಕಾರಿ ಉಮಾ, ಮುಜರಾಯಿ ತಹಶೀಲ್ದಾರ್ ತಮ್ಮೇಗೌಡ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.