ಅದ್ಧೂರಿಯಾಗಿ ನಡೆದ ಶ್ರೀಸೌಮ್ಯಕೇಶವ ಸ್ವಾಮಿ ಬ್ರಹ್ಮರಥೋತ್ಸವ

| Published : Mar 26 2024, 01:18 AM IST

ಅದ್ಧೂರಿಯಾಗಿ ನಡೆದ ಶ್ರೀಸೌಮ್ಯಕೇಶವ ಸ್ವಾಮಿ ಬ್ರಹ್ಮರಥೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಸೋಮವಾರ ನಡೆದ ಬ್ರಹ್ಮರಥೋತ್ಸವಕ್ಕೆ ನೆರೆಯ ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳ ಸೇರಿದಂತೆ ನಾಡಿನ ವಿವಿಧೆಡೆಯಿಂದ ಅಪಾರ ಸಂಖ್ಯೆ ಭಕ್ತರು ಪಾಲ್ಗೊಂಡು ಶ್ರೀಸೌಮ್ಯಕೇಶವನಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಧ್ಯಾಹ್ನ ೧.೩೦ರ ವೇಳೆಗೆ ಮಂಗಳವಾದ್ಯದೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ದೇವಾಲಯದ ಆವರಣದಲ್ಲಿ ಮೆರವಣಿಗೆ ನಡೆಸಿದ ರಥೋತ್ಸವಕ್ಕೆ ಭಕ್ತಾದಿಗಳು ತಮ್ಮ ಭಕ್ತಿ ನಮನ ಸಲ್ಲಿಸಿದರು. ನಂತರ ನಡೆದ ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿಯೂ ಸಹ ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀಸೌಮ್ಯಕೇಶವಸ್ವಾಮಿ ಬ್ರಹ್ಮರಥೋತ್ಸವ ಸೋಮವಾರ ಬಹಳ ವಿಜೃಂಭಣೆಯಿಂದ ನೆರವೇರಿತು.

ಬ್ರಹ್ಮರಥೋತ್ಸವದ ಅಂಗವಾಗಿ ಕಳೆದ ಐದು ದಿನಗಳಿಂದ ಶ್ರೀಸೌಮ್ಯಕೇಶವಸ್ವಾಮಿಗೆ ದೇವಸ್ಥಾನದ ಪ್ರಧಾನ ಅರ್ಚಕ ತಿರುನಾರಾಯಣ ಅಯ್ಯಂಗಾರ್ ನೇತೃತ್ವದಲ್ಲಿ ಅಂಕುರಾರ್ಪಣೆ, ಗರುಡ ಪ್ರತಿಷ್ಠೆ, ಅಭಿಷೇಕ ಶೇಷವಾಹನೋತ್ಸವ, ಗಜವಾಹನೋತ್ಸವ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದಿದ್ದವು.

ಸೋಮವಾರ ನಡೆದ ಬ್ರಹ್ಮರಥೋತ್ಸವಕ್ಕೆ ನೆರೆಯ ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳ ಸೇರಿದಂತೆ ನಾಡಿನ ವಿವಿಧೆಡೆಯಿಂದ ಅಪಾರ ಸಂಖ್ಯೆ ಭಕ್ತರು ಪಾಲ್ಗೊಂಡು ಶ್ರೀಸೌಮ್ಯಕೇಶವನಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಧ್ಯಾಹ್ನ ೧.೩೦ರ ವೇಳೆಗೆ ಮಂಗಳವಾದ್ಯದೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ದೇವಾಲಯದ ಆವರಣದಲ್ಲಿ ಮೆರವಣಿಗೆ ನಡೆಸಿದ ರಥೋತ್ಸವಕ್ಕೆ ಭಕ್ತಾದಿಗಳು ತಮ್ಮ ಭಕ್ತಿ ನಮನ ಸಲ್ಲಿಸಿದರು. ನಂತರ ನಡೆದ ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿಯೂ ಸಹ ಸಾವಿರಾರು ಭಕ್ತರು ಪ್ರಸಾದ ಸ್ವೀಕರಿಸಿದರು.

ಮಾ.೨೬ರಂದು ಬೆಳಗ್ಗೆ ಗರುಡೋತ್ಸವ ಹಾಗೂ ಶಯನೋತ್ಸವ. ಮಾ.೨೭ರಂದು ಅಶ್ವವಾಹನೋತ್ಸವ, ಅವಭೃತಸ್ನಾನ, ಚೂರ್ಣಾಭಿಷೇಕ ಮತ್ತು ಹನುಮಂತೋತ್ಸವ ಹಾಗೂ ಮಾ.೨೮ರಂದು ನಡೆಯುವ ಮಹಾಭಿಷೇಕ ಮತ್ತು ದ್ದಾದಶಾರಾಧನೆದೊಂದಿಗೆ ಒಂಭತ್ತು ದಿನಗಳ ಬ್ರಹ್ಮೋತ್ಸವ ಕಾರ್ಯಕ್ರಮಕ್ಕೆ ತೆರೆ ಬೀಳಲಿದೆ.

ವಿಜೃಂಭಣೆಯ ಶ್ರೀಅರ್ಕೇಶ್ವರಸ್ವಾಮಿ ಬ್ರಹ್ಮರಥೋತ್ಸವ

ಕನ್ನಡಪ್ರಭ ವಾರ್ತೆ ಮಂಡ್ಯನಗರದ ಗುತ್ತಲು ಕಾಲೋನಿಯ ಶ್ರೀಅರ್ಕೇಶ್ವರಸ್ವಾಮಿಸ್ವಾಮಿ ಬ್ರಹ್ಮ ರಥೋತ್ಸವ ಸೋಮವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.ಬೆಳಗ್ಗೆ ೯.೪೫ ರಿಂದ ೧೦.೩೦ಕ್ಕೆ ಸಲ್ಲುವ ವೃಷಭ ಲಗ್ನದಲ್ಲಿ ಶ್ರೀ ಅರ್ಕೇಶ್ವರಸ್ವಾಮಿಯ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ರಥದಲ್ಲಿ ವಿರಾಜಮಾನರಾದ ಶ್ರೀ ಅರ್ಕೇಶ್ವರ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸಲಾಯಿತು.ಬಳಿಕ ಜಿಲ್ಲಾಧಿಕಾರಿ ಡಾ.ಕುಮಾರ್ ರಥೋತ್ಸವಕ್ಕೆ ಚಾಲನೆ ನೀಡಿದರು. ನಂತರ ರಥೋತ್ಸವ ಅರ್ಕೇಶ್ವನಗರದಲ್ಲಿ ಸಂಭ್ರಮದಿಂದ ನೆರವೇರಿತು.ಮಂಡ್ಯ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ಹಾಗೂ ಶ್ರೀ ಅರ್ಕೇಶ್ವರಸ್ವಾಮಿ ಒಕ್ಕಲಿನವರು ಸೇರಿದಂತೆ ಸಹಸ್ರಾರು ಮಂದಿ ಭಕ್ತರು ಬ್ರಹ್ಮ ರಥೋತ್ಸವದಲ್ಲಿ ಪಾಲ್ಗೊಂಡು ರಥಕ್ಕೆ ಹಣ್ಣು- ಜವನ ಎಸೆಯುವ ಮೂಲಕ ತಮ್ಮ ಭಕ್ತಿಯನ್ನು ಪ್ರದರ್ಶಿಸಿದರು.ರಥೋತ್ಸವಕ್ಕೂ ಮುನ್ನ ದೇವಾಲಯದಲ್ಲಿ ವಿವಿಧ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ನಂತರ ಮಂಗಳವಾಧ್ಯದೊಂದಿಗೆ ದೇವಾಲಯದ ಗರ್ಭಗುಡಿಯಿಂದ ಹೊರ ಬಂದ ಉತ್ಸವ ಮೂರ್ತಿಯನ್ನು ದೇವಾಲಯದ ಹೊರಗೆ ನಿಲ್ಲಿಸಲಾಗಿದ್ದ ರಥೋತ್ಸವದಲ್ಲಿ ಪ್ರತಿಷ್ಠಾಪಿಸಲಾಯಿತು. ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್ ಇತರೆ ಮುಜರಾಯಿ ಅಧಿಕಾರಿಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮಂಜೇಶ್ ತಿಳಿಸಿದರು.