ತರೀಕೆರೆಯಲ್ಲಿ ಶ್ರೀ ಶಾಂಕರ ಪ್ರವಚನ ಮಾಲಿಕೆಯ ಉಪನ್ಯಾಸ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ತರೀಕೆರೆಶ್ರೀ ಶಂಕರ ಭಗವತ್ಪಾದರ ಉಪದೇಶಗಳನ್ನು ಮನದಟ್ಟು ಮಾಡಿಕೊಳ್ಳಿ ಅವರ ಜೀವನವೇ ನಮಗೆ ಸಂದೇಶವಾಗಿದೆ ಎಂದು ಶ್ರೀ ಕ್ಷೇತ್ರ ಬೆಲಗೂರು ಶ್ರೀ ವಿಜಯ ಮಾರುತಿ ಶರ್ಮ ಗುರೂಜೀ ಹೇಳಿದ್ದಾರೆ.ಶ್ರೀ ಶಾಂಕರ ತತ್ವ ಪ್ರಸಾರ ಅಭಿಯಾನ, ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ದಕ್ಷಿಣಾಮ್ನಾಯ ಶ್ರಿ ಶಾರದ ಪೀಠ, ಶೃಂಗೇರಿ ತರೀಕೆರೆ ತಾಲೂಕು ಸಮಿತಿ ಹಾಗೂ ಶೃಂಗೇರಿ ಶ್ರೀ ಶಂಕರಮಠ ಮತ್ತು ಬ್ರಾಹ್ಮಣ ಮಹಾಸಭಾ ಸಹಯೋಗದಲ್ಲಿ ಶ್ರೀ ಭಾರತೀತೀರ್ಥ ಮಹಾಸ್ವಾಮಿ ವರ್ಧಂತ್ಯುತ್ಸವ ಹಾಗೂ ಶ್ರೀ ಶಾಂಕರ ಪ್ರವಚನ ಮಾಲಿಕೆ ಉಪನ್ಯಾಸದಲ್ಲಿ ಆಶೀರ್ವಚನ ನೀಡಿದರು.
ಶ್ರೀ ಶಂಕರರು ಭರತಭೂಮಿಯಲ್ಲಿ ಚತುರಾಮ್ನಾಯ ಪೀಠಗಳನ್ನು ಸ್ಥಾಪಿಸಿ ಸನಾತನ ಧರ್ಮ ಪ್ರಸರಣಾ ಕಾರ್ಯ ನಿರ್ವಹಿಸಿದ್ದಾರೆ. ಧರ್ಮ ಅರಿತು ಅದರಂತೆ ಸರ್ವರೂ ನಡೆಯಬೇಕು. ಪುಣ್ಯ ಸಂಪಾದನೆ ಮನುಷ್ಯನ ಆದ್ಯ ಕರ್ತವ್ಯ. ಸಂಸ್ಕಾರ ತಿಳಿದು ಆಚರಿಸಿ ಜೀವನ ಸಾರ್ಥಕಪಡಿಸಿಕೊಳ್ಳಬೇಕು. ಶತಮಾನಗಳು ಕಳೆದರೂ ಇಂದಿಗೂ ಶ್ರೀ ಶಂಕರ ಭಗವತ್ಪಾದರ ಸಂದೇಶಗಳು ಪ್ರಸ್ತುತ ಎಂದರು.ಸಾಧಕರು, ಸಂತರು, ಯತಿಗಳು ಅನವರತ ಪರಮಾತ್ಮನ ಸ್ಮರಣೆ ಮಾಡುತ್ತಾ ಪರಮಾತ್ಮನ ಅಂಶವೇ ಆಗುತ್ತಾರೆ. ಶ್ರೀ ಶಂಕರರು ಎಲ್ಲರಿಗೂ ಜಗದ್ಗುರು, ಭಕ್ತಿಮಾರ್ಗ ಮತ್ತು ಜ್ಞಾನಮಾರ್ಗಕ್ಕೆ ಶ್ರೀ ಶಂಕರರು ಕೊಡುಗೆ ನೀಡಿ ಅನುಗ್ರಹಿಸಿ ದ್ದಾರೆ. ಗುರುಗಳು ಸಿಗುವುದು ಪುಣ್ಯ, ಸಾರ್ಥಕತೆ ಗುರುಗಳ ಉಪದೇಶದಿಂದ ದೊರಕುತ್ತದೆ ಎಂದು ಹೇಳಿದರು.ಚಿಕ್ಕಮಗಳೂರು ಶ್ರೀ ಶಾಂಕರ ತತ್ವ ಪ್ರಸಾರ ಅಭಿಯಾನ ಜಿಲ್ಲಾ ಸಂಚಾಲಕ ನಾಯಕ್ ಸಚ್ಚಿದಾನಂದ ಮಾತನಾಡಿ ಶ್ರೀ ಶಂಕರರ ತತ್ವ ಪ್ರಸಾರಕ್ಕೆ ಎಲ್ಲಡೆ ಕಾರ್ಯಕ್ರಮ ನಡೆಸಲಾಗುತ್ತಿದೆ. ಶ್ರೀ ಶೃಂಗೇರಿ ಶ್ರೀಗಳ ವರ್ಧಂತ್ಯುತ್ಸವ ನಡೆಯುತ್ತಿದೆ. ಶ್ರೀಗಳು ತಪೋನಿಷ್ಠರು, ಕವಿಗಳು ಅನೇಕ ಸ್ತೋತ್ರಗಳನ್ನು ರಚಿಸಿದ್ದಾರೆ ಎಂದು ತಿಳಿಸಿದರು.ಕನ್ನಡಶ್ರೀ ಬಿ.ಎಸ್.ಭಗವಾನ್ ಮಾತನಾಡಿ ಶ್ರೀ ಶಂಕರ ಭಗವತ್ಪಾದರ ಶ್ರೇಷ್ಠ ತತ್ವ ಉಪದೇಶ ಇಂದಿಗೂ ಲೌಕಿಕ ಜಗತ್ತಿನಲ್ಲಿ ಅಗತ್ಯ. ಶ್ರೀ ಗುರುಗಳು ಭಗವಂತನ ಅನೇಕ ಸ್ತೋತ್ರ ಮಾಲಿಕೆಗಳಾದ ಕಲ್ಯಾಣ ವೃಷ್ಠಿತ್ವ, ಶಿವಪಂಚಾಕ್ಷರಿ ಹಾಗೂ ಕನಕಧಾರಾ ಸ್ತೋತ್ರ ಮುಂತಾದ ಅನೇಕ ಕೃತಿಗಳನ್ನು ರಚಿಸಿ ಭಕ್ತಿಮಾರ್ಗ ತೋರಿಸಿದ್ದಾರೆ ಎಂದು ಹೇಳಿದರು.ಚಿಕ್ಕಮಗಳೂರು ಶ್ರೀ ಶಾಂಕರ ತತ್ವ ಪ್ರಸಾರ ಅಭಿಯಾನ ಅಧ್ಯಕ್ಷ ಚಂದ್ರಮೌಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಬ್ರಾಹ್ಮಣ ಸೇವಾ ಸಮಿತಿ ಅಧ್ಯಕ್ಷ ಆರ್.ಎನ್.ಶ್ರೀಧರ್, ತರೀಕೆರೆ ಶ್ರೀ ಶಂಕರಮಠ ಗೌರವ ವ್ಯವಸ್ಥಾಪಕ ಆರ್. ಕೃಷ್ಣಮೂರ್ತಿ, ಶ್ರೀ ಶಾಂಕರ ತತ್ವ ಪ್ರಸಾರ ಅಭಿಯಾನ ತಾಲೂಕು ಸಂಚಾಲಕಿ ಅನ್ನಪೂರ್ಣ ಕೃಷ್ಣಮೂರ್ತಿ, ಶಾರದ ಎನ್.ಮಂಜುನಾಥ್, ಶ್ರೀಲಕ್ಷ್ಮಿ ಮಂಜುನಾಥ್ ಭಾಗವಹಿಸಿದ್ದರು.-
25ಕೆಟಿಆರ್.ಕೆ.4
ತರೀಕೆರೆಯಲ್ಲಿ ನಡೆದ ಶ್ರೀ ಶಾಂಕರ ಪ್ರವಚನ ಮಾಲಿಕೆ ಉಪನ್ಯಾಸದಲ್ಲಿ ಶ್ರೀ ಕ್ಷೇತ್ರ ಬೆಲಗೂರು ಶ್ರೀ ವಿಜಯ ಮಾರುತಿ ಶರ್ಮ ಗುರೂಜೀ, ಶ್ರೀ ಶಂಕರಮಠ ಗೌರವ ವ್ಯವಸ್ಥಾಪಕ ಆರ್. ಕೃಷ್ಣಮೂರ್ತಿ, ಬ್ರಾಹ್ಮಣ ಸೇವಾ ಸಮಿತಿ ಅಧ್ಯಕ್ಷ ಆರ್.ಎನ್.ಶ್ರೀಧರ್, ಜಿಲ್ಲಾ ಸಂಚಾಲಕ ನಾಯಕ್ ಸಚ್ಚಿದಾನಂದ, ಚಂದ್ರಮೌಳಿ ಮತ್ತಿತರರು ಭಾಗವಹಿಸಿದ್ದರು.