ಸಾರಾಂಶ
ಸುವರ್ಣ ಭಾರತೀ ಕಾರ್ಯಕ್ರಮದಲ್ಲಿ ಸಹೃದಯ ಸೇವಾ ಸಂಸ್ಥೆಗೆ ಗಣಕ ಯಂತ್ರಗಳ ಕೊಡುಗೆ
ಕನ್ನಡಪ್ರಭ ವಾರ್ತೆ, ತರೀಕೆರೆಆದಿ ಗುರು ಶ್ರೀ ಶಂಕರಾಚಾರ್ಯರು ವಿಶ್ವಕ್ಕೆ ಅಧ್ಯಾತ್ತಿಕ ಮತ್ತು ಲೌಕಿಕ ಬೆಳಕನ್ನು ತೋರಿದ ಮಹಾನ್ ಚೇತನರು ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಕನ್ನಡಶ್ರೀ ಬಿ.ಎಸ್.ಭಗವಾನ್ ಹೇಳಿದ್ದಾರೆ.ಭಾನುವಾರ, ಪಟ್ಟಣದ ಶ್ರೀ ಶೃಂಗೇರಿ ಶಂಕರ ಮಠದಿಂದ ಶ್ರೀ ಶೃಂಗೇರಿ ಜಗದ್ಗುರು ಶ್ರೀ ಭಾರತೀ ತೀರ್ಥ ಮಹಾ ಸ್ವಾಮಿಯ 50ನೇ ಸನ್ಯಾಸ ಸ್ವೀಕಾರ ಸಮಾರಂಭ ಅಂಗವಾಗಿ ನಡೆಯುತ್ತಿರುವ ಸುವರ್ಣ ಭಾರತಿ ಕಾರ್ಯಕ್ರಮದಲ್ಲಿ ಪಟ್ಟಣದ ಸಹೃದಯ ಸೇವಾ ಸಂಸ್ಥೆಗೆ ಗಣಕ ಯಂತ್ರಗಳ ಕೊಡುಗೆ ಸಮಾರಂಭದಲ್ಲಿ ಮಾತನಾಡುತ್ತಿದ್ದರು.ಶ್ರೀ ಶಂಕರಾಚಾರ್ಯರು ಸ್ಥಾಪಿಸಿದಂತ ಶೃಂಗೇರಿ ಶಾರದಾ ಪೀಠದಿಂ ನಿರಂತರವಾಗಿ ಸಮಾಜಮುಖಿ ಸೇವಾ ಕಾರ್ಯ ನಿರ್ವಹಿಸುತ್ತಿರುವುದು ಎಲ್ಲರಿಗೂ ಸಂತೋಷ ತಂದಿದೆ. ಜನಸಾಮಾನ್ಯರಿಗೆ ತಲುಪುವ ಉಪಯುಕ್ತ ಸಮಾಜಮುಖಿ ಕಾರ್ಯಕ್ರಮ ಶಾಶ್ವತವಾಗಿರುತ್ತದೆ. ಶ್ರೀ ಮಠದಿಂದ ಸಮಾಜಮುಖಿ ಸೇವಾ ಕಾರ್ಯಗಳಾದ ಆರೋಗ್ಯ ತಪಾಸಣೆ, ರಕ್ತದಾನ ಶಿಬಿರ, ಅರ್ಹರಿಗೆ ಪ್ರಾಥಮಿಕ ಶಾಲೆಯಿಂದ ಸ್ನಾತಕೋತ್ತರ, ಎಂಜಿನಿಯರಿಂಗ್, ವೈದ್ಯಕೀಯ ವಿದ್ಯಾಭ್ಯಾಸದ ವರೆವಿಗೆ ಪ್ರೋತ್ಸಾಹ ನೀಡುವುದು, ಆರ್ಥಿಕ ನೆರವು, ಉಚಿತ ವಿವಾಹ ಇತ್ಯಾದಿ ಸಮಾಜಮುಖಿ ಸೇವಾ ಕಾರ್ಯಗಳಿಗೆ ಶ್ರೀ ಜಗದ್ಗುರುಗಳ ದಿವ್ಯ ಆಶೀರ್ವಾದ ನಮ್ಮ ಸುಕೃತ ಎಂದರು.ಪಟ್ಟಣಲ್ಲಿರುವ ಶ್ರೀ ಶೃಂಗೇರಿ ಶಂಕರ ಮಠದ ಶಾಖೆ ವ್ಯವಸ್ಥಾಪಕ ಆರ್.ಕೃಷ್ಣಮೂರ್ತಿ ಅವರು ಇಂತಹ ಸಮಾಜಮುಖಿ ಕಾರ್ಯ ಗಳಿಗೆ ಪ್ರೋತ್ಸಾಹದಾಯಕವಾಗಿ ಶ್ರಮಿಸುತ್ತಾ ಸಹೃದಯ ಸೇವಾ ಸಂಸ್ಥೆ, ಅರಿವು ವೇದಿಕೆ, ವಿಕಸನ ಸಂಸ್ಥೆ, ತಾ.ಕಸಾಪ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವುದು ಶ್ಲಾಘನೀಯ ಎಂದು ಹೇಳಿದರು. ವ್ಯವಸ್ಥಾಪಕ ಆರ್.ಕೃಷ್ಣಮೂರ್ತಿ ಮಾತನಾಡಿ ಸಮಾಜಕ್ಕೆ ಅಗತ್ಯವಿರುವ ಸೇವಾ ಕಾರ್ಯ ನಿರ್ವಹಿಸಲು ಹಾಗೂ ಸ್ಥಳೀಯ ಸಂಘ ಸಂಸ್ಥೆಗಳೊಂದಿಗೆ ಜನೋಪಯೋಗಿ ಕಾರ್ಯಕ್ರಮಕ್ಕೆ ಸಹಕಾರ ನೀಡಲು ಶ್ರೀಶಂಕರ ಮಠ ಸದಾ ಸಿದ್ದ ವಿರುತ್ತದೆ ಎಂದು ಶ್ರೀಮಠದ ಆಡಳಿತಾಧಿಕಾರಿ ಟಿ.ಎ.ಮುರುಳಿ ತಿಳಿಸಿದ್ದಾರೆ ಎಂದು ಹೇಳಿದರು.
ಸಹೃದಯ ಸೇವಾ ಸಂಸ್ಥೆ ಸಂಸ್ಥಾಪಕ ಕ್ರಿಸ್ತ ದಯಾ ಕುಮಾರ್ ಗಣಕ ಯಂತ್ರಗಳನ್ನು ಸ್ವೀಕರಿಸಿ ಮಾತನಾಡಿ ಸುಮಾರು 30 ವರ್ಷಗಳಿಂದಲೂ ವಿಶೇಷ ಚೇತನರ ಅಭ್ಯುದಯಕ್ಕಾಗಿ ಸೇವಾ ಸಂಸ್ಥೆಯನ್ನು ಸಮಾನ ಮನಸ್ಕರೊಂದಿಗೆ ಸ್ಥಾಪಿಸಿ ನಿರಂತರವಾಗಿ ಸರ್ಕಾರದ ಸೌಲಭ್ಯ ಹಾಗೂ ಸಾರ್ವಜನಿಕರ ಸಹಕಾರದಿಂದ ಅನೇಕ ಉಪಯುಕ್ತ ಕಾರ್ಯಕ್ರಮ ಗಳನ್ನು ಅರ್ಥಪೂರ್ಣವಾಗಿ ನೆರವೇರಿಸಲಾಗುತ್ತಿದೆ. ಸಹಕರಿಸುತ್ತಿರುವ ಎಲ್ಲರಿಗೂ ಅವರು ಕೃತಜ್ಞತೆ ಸಲ್ಲಿಸಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪ್ರಧಾನ ಸಂಚಾಲಕ ಇಮ್ರಾನ್ ಅಹಮದ್ ಬೇಗ್ ಮಾತನಾಡಿ ಸುವರ್ಣ ಭಾರತಿ ಕಾರ್ಯಕ್ರಮದಲ್ಲಿ ಗಣಕ ಯಂತ್ರಗಳ ಕೊಡುಗೆ ನೀಡುತ್ತಿರುವುದು ಪುಣ್ಯದ ಕಾರ್ಯ. ಐಕ್ಯತೆ ಇದ್ದರೆ ಅಭಿವೃದ್ಧಿ ಕಾಣ ಬಹುದು ಎಂದು ತಿಳಿಸಿದರು.ಬ್ರಾಹ್ಮಣ ಸೇವಾ ಸಮಿತಿ ಮಾಜಿ ಅಧ್ಯಕ್ಷ ಎಚ್.ಸಿ.ಗೋಪಾಲಕೃಷ್ಣ, ವಿಕಸನ ಸಂಸ್ಥೆ ಅಧ್ಯಕ್ಷ ಎ.ಎಂ.ವರ್ಗೀಸ್ ಕ್ಲೀಟಸ್, ತಾ.ಕಸಾಪ ಅಧ್ಯಕ್ಷ ನವೀನ್ ಪೆನ್ನಯ್ಯ, ಟಿ.ಜಿ.ಸದಾನಂದ್, ಶಿಕ್ಷಕ ಟಿ.ಜಿ. ಗೋವಿಂದರಾಜು, ಲತಾ ಗೋಪಾಲಕೃಷ್ಣ, ಲಕ್ಷ್ಮೀ ಭಗವಾನ್, ಅನ್ನಪೂರ್ಣ ಆರ್. ಕೃಷ್ಣಮೂರ್ತಿ, ವಾಣಿಶ್ರೀ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
--- ಬಾಕ್ಸ್--ನಿವೇಶನಕ್ಕೆ ಪ್ರಯತ್ನ
ಶ್ರೀ ಜಗದ್ಗುರುಗಳ ಅಶೀರ್ವಾದದಿಂದ ಯಶಸ್ಸು ಸಾಧ್ಯ ವಾಗುತ್ತದೆ. ಶ್ರೀ ಶಂಕರ ಮಠ ವಿದ್ಯಾದಾನ, ಅನ್ನದಾನಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಪಟ್ಟಣದ ಸಹೃದಯ ಸೇವಾ ಸಂಸ್ಥೆಗೆ ಶಾಸಕ ಜಿ.ಎಚ್.ಶ್ರೀನಿವಾಸ್ ಮತ್ತು ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ, ಸರ್ವ ಸದಸ್ಯರ ಸಹಕಾರದೊಂದಿಗೆ ನಿವೇಶನ ಒದಗಿಸಲು ಪ್ರಯತ್ನಿಸುವುದಾಗಿ ಪುರಸಭಾ ಮಾಜಿ ಅದ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ ಹೇಳಿದರು.12ಕೆಟಿಆರ್.ಕೆ.1ಃ
ತರೀಕೆರೆಯಲ್ಲಿ ಶ್ರೀ ಶೃಂಗೇರಿ ಶಂಕರ ಮಠದಿಂದ ಏರ್ಪಡಿಸಿದ್ದ ಸುವರ್ಣ ಭಾರತೀ ಕಾರ್ಯಕ್ರಮದಲ್ಲಿ ಸಹೃದಯ ಸೇವಾ ಸಂಸ್ಥೆಗೆ ಗಣಕಯಂತ್ರ ಕೊಡುಗೆ ನೀಡಲಾಯಿತು. ಶ್ರೀ ಶೃಂಗೇರಿ ಶಂಕರ ಮಠದ ವ್ಯವಸ್ಥಾಪಕ ಆರ್.ಕೃಷ್ಣಮೂರ್ತಿ, ಕನ್ನಡಶ್ರೀ ಬಿ.ಎಸ್.ಭಗವಾನ್, ಪುರಸಭಾ ಮಾಜಿ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ ಮತ್ತಿತರರು ಇದ್ದರು.