ಕನ್ನಡಪ್ರಭ ವಾರ್ತೆ ಮೈಸೂರು

ಜೂ.27 ರಂದು ನಡೆಯಲಿರುವ ಕೆಂಪೇಗೌಡ 512ನೇ ಜಯಂತಿ ಮಹೋತ್ಸವಕ್ಕೆ ಜಾತ್ಯತೀತ, ಪಕ್ಷಾತೀತವಾಗಿ ಎಲ್ಲರೂ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಕರೆ ನೀಡಿದರು.

ಕೆಂಪೇಗೌಡ ಜಯಂತ್ಯುತ್ಸವ ಸಮಿತಿ, ರಾಜ್ಯ ಒಕ್ಕಲಿಗರ ಸಂಘ ಹಾಗೂ ಮೈಸೂರು- ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದ ಸಂಯುಕ್ತವಾಗಿ ನಗರದ ಕೆ.ಜಿ. ಕೊಪ್ಪಲಿನ ಶ್ರೀ ಬಂದತಮ್ಮ ದೇವಾಲಯ ಎದುರು 512ನೇ ಶ್ರೀ ಕೆಂಪೇಗೌಡರ ಜಯಂತಿ ಮಹೋತ್ಸವದ ಪ್ರಚಾರ ರಥಕ್ಕೆ ಮಂಗಳವಾರ ಪೂಜೆ ಹಾಗೂ ಪುಷ್ಪಾರ್ಚನೆ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

ಕೆಂಪೇಗೌಡರು ಒಂದು ಸೀಮಿತರಾಗಿ ನಾಡು ಕಟ್ಟಿಲ್ಲ. ಎಲ್ಲಾ ಸಮುದಾಯಕ್ಕೂ ಅನುಗುಣವಾಗಿ ಪೇಟೆಗಳನ್ನು ನಿರ್ಮಿಸಿ ಮಾದರಿಯಾಗಿದ್ದಾರೆ. ಅವರ ಕೊಡುಗೆಗಳನ್ನು ಸ್ಮರಿಸುವ ದಿಸೆಯಲ್ಲಿ ನಡೆಯುವ ಜಯಂತಿ ಪ್ರಚಾರ ರಥಕ್ಕೆ ಚಾಲನೆ ನೀಡಲಾಗಿದೆ. ಇಂದಿನಿಂದ ಜಿಲ್ಲೆ, ತಾಲ್ಲೂಕು ಹಾಗೂ ನಗರ ಭಾಗದಲ್ಲಿ ಕೆಂಪೇಗೌಡರ ರಥಯಾತ್ರೆ ಸಂಚರಿಸಲಿದೆ. ಈ ಜಯಂತಿಯಲ್ಲಿ ಎಲ್ಲರೂ ಭಾಗವಹಿಸಿ ಕಾರ್ಯಕ್ರಮದ ಸಂದೇಶ ಮುಂದಿನ ಪೀಳಿಗೆಗೆ ತಲುಪಿಸುವ ಪ್ರಯತ್ನಕ್ಕೆ ಎಲ್ಲರ ಸಹಕಾರ ಇರಲಿದೆ ಎಂದರು.

ಶಾಸಕ ಜಿ.ಟಿ. ದೇವೇಗೌಡ ಮಾತನಾಡಿ, ಕೆಂಪೇಗೌಡ ಜಯಂತಿ ವಿಚಾರದಲ್ಲಿ ತನ್ನದೇ ಆದ ಇತಿಹಾಸ ಹೊಂದಿದೆ. ಅದನ್ನು ಮತ್ತಷ್ಟು ವಿಜೃಂಭಣೆಯಿಂದ ಆಚರಿಸುವ ಕೆಲಸ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕೆಂಪೇಗೌಡ ಜಯಂತಿಯಲ್ಲಿ ಭಾಗವಹಿಸಿ ಎಂದು ಕೋರಿದರು.


ಶಾಸಕ ಕೆ. ಹರೀಶ್‌ಗೌಡ ಮಾತನಾಡಿ, ಕೆಂಪೇಗೌಡ ಜಯಂತಿಯನ್ನು ಸಮುದಾಯದ ಎಲ್ಲರೂ ಪಕ್ಷಾತೀತವಾಗಿ ವಿಜೃಂಭಣೆಯಿಂದ ಈ ಸಾಲಿನಲ್ಲಿ ಆಚರಿಸುತ್ತಿರುವುದು ಸಂತಸದ ಸಂಗತಿ. ಕೆಂಪೇಗೌಡರು ಎಲ್ಲಾ ಸಮಾಜಕ್ಕೂ ನೀಡಿರುವ ಕೊಡುಗೆ ಹಾಗೂ ಅವರ ಆದರ್ಶ ವ್ಯಕ್ತಿತ್ವವನ್ನು ಸಾರುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಯಂತಿಯಲ್ಲಿ ಭಾಗವಹಿಸಬೇಕಿದೆ. ಈ ನಿಟ್ಟಿನಲ್ಲಿ ಜಯಂತೋತ್ಸವ ಸಮಿತಿ ಶ್ರಮಿಸುತ್ತಿದ್ದು ಎಲ್ಲರೂ ಸಹಕರಿಸಿ ಎಂದು ಹೇಳಿದರು.

ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಪಿ.ಪ್ರಶಾಂತ್‌ಗೌಡ ಮಾತನಾಡಿ, ಪ್ರತಿ ವರ್ಷಕ್ಕೂ ಕೆಂಪೇಗೌಡರ ಜಯಂತಿ ಆಚರಣೆಯ ಸಂಭ್ರಮವನ್ನು ಹೆಚ್ಚಿಸುತ್ತಾ ಬರಲಾಗುತ್ತಿದೆ. ಈ ಸಾಲಿನಲ್ಲಿ ಚಾಮರಾಜನಗರ ಜಿಲ್ಲೆಯ ತಾಲೂಕುಗಳಿಗೂ ಸಮಿತಿ ಹೋಗಿ ಆಹ್ವಾನಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಜೂ.27 ರಂದು ಎರಡು ಜಿಲ್ಲೆಯಿಂದ ಅತಿಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಜಯಂತಿಯನ್ನು ಯಶಸ್ವಿಗೊಳಿಸಬೇಕು ಎಂದು ಕೋರಿದರು.

ಶಾಸಕ ಟಿ.ಎಸ್. ಶ್ರೀವತ್ಸ, ಮಾಜಿ ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕ ಎಲ್. ನಾಗೇಂದ್ರ, ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಸಿ.ಜಿ. ಗಂಗಾಧರ್, ನಿರ್ದೇಶಕರಾದ ಕೆ.ವಿ. ಶ್ರೀಧರ್‌, ಎಂ.ಬಿ. ಮಂಜೇಗೌಡ, ನಗರ ಪಾಲಿಕೆ ಮಾಜಿ ಸದಸ್ಯರಾದ ಪ್ರೇಮಾ ಶಂಕರೇಗೌಡ, ಎಸ್.ಬಿ.ಎಂ. ಮಂಜು, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಂ. ಮರಿಸ್ವಾಮಿ, ಆಲತ್ತೂರು ಜಯರಾಮ್, ರವಿಕುಮಾರ್ ರಾಜಕೀಯ, ಬನ್ನೂರು ಮಹೇಶ್‌, ಎಂ.ಈ. ಚೇತನ್, ಒಂಟಿಕೊಪ್ಪಲು ಗುರುರಾಜ್‌, ರವಿ, ಬಿ.ಪಿ. ಬೋರೇಗೌಡ, ಗಿರೀಶ್‌ಗೌಡ, ಜಿ. ಕುಮಾರ್‌ಗೌಡ, ಎಂ. ಸುಶೀಲಾ ನಂಜಪ್ಪ, ಉಮೇಶ್, ಕರ್ನಾಟಕ ಕಾವಲುಪಡೆ ಅಧ್ಯಕ್ಷ ಮೋಹನ್‌ಕುಮಾರ್‌ಗೌಡ, ಎಂಡಿಎ ಮಾಜಿ ಸದಸ್ಯೆ ಲಕ್ಷ್ಮಿದೇವಿ, ಮೈಮುಲ್‌ ನಿರ್ದೇಶಕ ಊಮಾಶಂಕರ್‌, ಮಾಜಿ ಮೇಯರ್ ಆರ್. ಲಿಂಗಪ್ಪ, ಮುಖಂಡರಾದ ಮಂಚೇಗೌಡನಕೊಪ್ಪಲು ರವಿ, ಸುಮಿತ್ರಾ ರಮೇಶ್, ಹೇಮಾ ನಂದೀಶ್ ಮೊದಲಾದವರು ಇದ್ದರು.