ನರಸಿಂಹರಾಜಪುರ, ಬಲಿಪಾಡ್ಯಮಿಯ ಬುಧವಾರ ಎಲ್ಲಾ ಕಡೆ ದೀಪಾವಳಿ ಸಂಭ್ರಮ, ಪಟಾಕಿ ಸಿಡಿತ ಹಾಗೂ ಗೋವುಗಳಿಗೆ ಪೂಜೆ ಸಲ್ಲಿಸಲಾಯಿತು.
ದೀಪಾವಳಿ ಸಂಬ್ರಮಕ್ಕೂ ಅಡ್ಡಿಯಾದ ಮಳೆ
ಕನ್ನಡಪ್ರಭ ವಾರ್ತೆ,ನರಸಿಂಹರಾಜಪುರಬಲಿಪಾಡ್ಯಮಿಯ ಬುಧವಾರ ಎಲ್ಲಾ ಕಡೆ ದೀಪಾವಳಿ ಸಂಭ್ರಮ, ಪಟಾಕಿ ಸಿಡಿತ ಹಾಗೂ ಗೋವುಗಳಿಗೆ ಪೂಜೆ ಸಲ್ಲಿಸಲಾಯಿತು.
ಬುಧವಾರ ಬೆಳಿಗ್ಗೆ 11 ಗಂಟೆವರೆಗೂ ಮಳೆ ಬರುತ್ತಿದ್ದು ದೀಪಾವಳಿ ಸಂಬ್ರಮಕ್ಕೆ ಅಡ್ಡಿಯಾಯಿತು. ನಂತರ ಮಳೆ ಕಡಿಮೆಯಾಗಿ ದೀಪಾವಳಿ ಸಡಗರಕ್ಕೆ ಮತ್ತಷು ರಂಗು ತಂದಿತು. ಗ್ರಾಮೀಣ ಪ್ರದೇಶದಲ್ಲಿ ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸ ಲಾಯಿತು. ದನದ ಕೊಟ್ಟಿಗೆ ಸ್ವಚ್ಛಗೊಳಿಸಿ ಹಸುಗಳನ್ನು ತೊಳೆದು ಕೊಟ್ಟಿಗೆಗೆ ಮಾವಿನ ತೋರಣ ಕಟ್ಟಿ, ರಂಗೋಲಿ ಬರೆದು ಸಿಂಗರಿಸಲಾಯಿತು. ದನಗಳಿಗೆ ಸಿಂಗಾರ, ಚೆಂಡು ಹೂ, ಉಗುಣೆ ಕಾಯಿ, ಪಚ್ಚೆ ಸರಗಳನ್ನು ಹಾಕಲಾಯಿತು.ಅನೇಕ ಗ್ರಾಮಗಳಲ್ಲಿ ದನಗಳಿಗೆ ಕೆಂಪು ಹಾಗೂ ಬಿಳಿ ಬಣ್ಣಗಳಿಂದ ಸಿಂಗಾರ ಮಾಡಲಾಗಿತ್ತು. ಬೆಳಿಗ್ಗೆ ಗೋಪೂಜೆ ಸಮಯದಲ್ಲಿ ಹಸು ಗಳಿಗೆ ದೋಸೆ, ಸಿಹಿ ತಿನ್ನಿಸಲಾಯಿತು. ವರ್ಷವಿಡೀ ಹಾಲು ನೀಡುವ ಹಸುಗಳಿಗೆ ಧನ್ಯತಾ ಭಾವದಿಂದ ಪೂಜೆ ಸಲ್ಲಿಸಲಾಯಿತು.ಹಳ್ಳಿಗಳಲ್ಲಿ ಗದ್ದೆ, ತೋಟಗಳಿಗೆ ಕೆಲಸ ಮಾಡುವ ಕೃಷಿ ಪರಿಕರಗಳನ್ನು ತೊಳೆದು ಪೂಜೆ ಸಲ್ಲಿಸಲಾಯಿತು. ಸಂಜೆ ಬಲೀಂದ್ರ ಪೂಜೆ ನಡೆಯಿತು. ಕತ್ತಲು ಆವರಿಸುವ ಸಮಯದಲ್ಲಿ ರೈತರು ದೀಪದ ಕೋಲುಗಳನ್ನು ಗದ್ದೆ, ತೋಟಗಳಿಗೆ ನೆಟ್ಟು ಪಟಾಕಿ ಗಳನ್ನು ಸಿಡಿಸಿ ದೀಪ್, ದೀಪ್ ಹೋಳಿಗೆ ಎಂದು ಕೂಗುತ್ತಾ ಮನೆಗಳಿಗೆ ವಾಪಾಸಾಗುವ ದೃಶ್ಯ ಎಲ್ಲಾ ಕಡೆ ಸಾಮಾನ್ಯ ವಾಗಿತ್ತು.
ಅತಿಶಯ ಕ್ಷೇತ್ರ ಸಿಂಹನಗದ್ದೆ ಬಸ್ತಿಮಠದಲ್ಲಿ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ಮಠದ ಗೋಶಾಲೆಯಲ್ಲಿ ಗೋವುಗಳಿಗೆ ಸಿಹಿ ತಿನಿಸಿ ಪೂಜೆ ಸಲ್ಲಿಸಿದರು.