ಲೌಕಿಕ-ವೈದಿಕ ಶಿಕ್ಷಣಕ್ಕಾಗಿ ಪುತ್ತಿಗೆ ಮಠದಿಂದ ಶ್ರೀ ಸುಗುಣ ಸ್ಕೂಲ್ ಆರಂಭ

| Published : May 28 2024, 01:04 AM IST

ಲೌಕಿಕ-ವೈದಿಕ ಶಿಕ್ಷಣಕ್ಕಾಗಿ ಪುತ್ತಿಗೆ ಮಠದಿಂದ ಶ್ರೀ ಸುಗುಣ ಸ್ಕೂಲ್ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ಕೃಷ್ಣ ಮಠದಲ್ಲಿ ಶ್ರೀಪಾದರು ಶ್ರೀ ವೇದವ್ಯಾಸ ದೇವರ ಪೂಜೆ ನೆರವೇರಿಸಿ ಸರ್ವಜ್ಞ ಪೀಠದಿಂದಲೇ ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಮಾಡಿಸಿದರು. ಈ ಅಪೂರ್ವವಾದ ಸುಯೋಗವನ್ನು ಹೊಂದಿದ ಮಕ್ಕಳ ಪೋಷಕರು ಧನ್ಯತೆಯ ಭಾವವನ್ನು ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಭಾರತೀಯ ಸನಾತನ ಸಂಸ್ಕೃತಿಯ ಪೋಷಣೆ ಜೊತೆಗೆ ಆಧುನಿಕ ಶಿಕ್ಷಣ ಕಲಿಕೆಯ ಪರಿಕಲ್ಪನೆಯ ಸಾಕಾರಕ್ಕೆ ಪರ್ಯಾಯ ಪೀಠಾಧೀಶ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಸೋಮವಾರ ಶ್ರೀ ಸುಗುಣ ಸ್ಕೂಲ್‌ಗೆ ಚಾಲನೆ ನೀಡಿದರು.

ಪುತ್ತಿಗೆ ಶ್ರೀಪಾದರು ಕಳೆದ ಹತ್ತು ವರ್ಷಗಳಿಂದ ಪಾಡಿಗಾರದಲ್ಲಿರುವ ತಮ್ಮ ಮಠದಲ್ಲಿ ಲೌಕಿಕ - ವೈದಿಕ ಶಿಕ್ಷಣವನ್ನು ಪ್ರಾರಂಭಿಸಿ ಅನೇಕ ವಿದ್ಯಾರ್ಥಿಗಳನ್ನು ತರಬೇತಿಗೊಳಿಸಿ ಸಮಾಜಕ್ಕೆ ನೀಡುತ್ತಿದ್ದಾರೆ. ಈ ಅನುಭವದ ಪರಿಷ್ಕೃತ ರೂಪವಾಗಿ ಅದಕ್ಕಾಗಿಯೇ ನಿರ್ಮಿಸಿದ ಭವ್ಯ ಕಟ್ಟಡದಲ್ಲಿ ಈ ವರ್ಷದಿಂದಲೇ ಎಲ್‌ಕೆಜಿಯಿಂದ ಎಸ್‌ಎಸ್‌ಎಲ್‌ಸಿ ವರೆಗಿನ ಶಿಕ್ಷಣವನ್ನು ನೀಡಲು ಶ್ರೀಪಾದರು ಸಂಕಲ್ಪಿಸಿದ್ದಾರೆ.

ಆ ಪ್ರಯುಕ್ತ ಶ್ರೀ ಕೃಷ್ಣ ಮಠದಲ್ಲಿ ಶ್ರೀಪಾದರು ಶ್ರೀ ವೇದವ್ಯಾಸ ದೇವರ ಪೂಜೆ ನೆರವೇರಿಸಿ ಸರ್ವಜ್ಞ ಪೀಠದಿಂದಲೇ ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಮಾಡಿಸಿದರು. ಈ ಅಪೂರ್ವವಾದ ಸುಯೋಗವನ್ನು ಹೊಂದಿದ ಮಕ್ಕಳ ಪೋಷಕರು ಧನ್ಯತೆಯ ಭಾವವನ್ನು ವ್ಯಕ್ತಪಡಿಸಿದರು.

ಶ್ರೀಪಾದರು ಮಕ್ಕಳ ಕೈಯಿಂದಲೇ ಶ್ರೀ ಕೃಷ್ಣಾಯ ನಮಃ, ಶ್ರೀ ಗಣೇಶಾಯ ನಮಃ ಬರೆಯಿಸುವ ಮೂಲಕ ಮತ್ತು ಶಾಂತಿ ಮಂತ್ರವನ್ನು ಮಕ್ಕಳಿಗೆ ಭೋದಿಸುವ ಮೂಲಕ ಸುಗುಣ ಪಾಠ ಶಾಲೆಗೆ ವಿದ್ಯುಕ್ತ ಚಾಲನೆ ನೀಡಿದರು.

ಕಿರಿಯ ಪಟ್ಟ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಮತ್ತು ಶ್ರೀ ಮಠದ ಕಾರ್ಯದರ್ಶಿ ಪ್ರಸನ್ನ ಆಚಾರ್ಯರು ಉಪಸ್ಥಿತರಿದ್ದರು.

ಈ ಸ್ಕೂಲಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಾರ್ಯದರ್ಶಿ ಪ್ರಮೋದ್ ಸಾಗರ್ ಅವರನ್ನು (+91 9986030899) ರಲ್ಲಿ ಸಂಪರ್ಕಿಸಬಹುದಾಗಿದೆ.