ಮಠ-ಸಮಾಜ ಜೊತೆಯಾಗಿ ಸಾಗಬೇಕು: ವೇದವರ್ಧನ ಶ್ರೀ
KannadaprabhaNewsNetwork | Published : Oct 12 2023, 12:01 AM IST
ಮಠ-ಸಮಾಜ ಜೊತೆಯಾಗಿ ಸಾಗಬೇಕು: ವೇದವರ್ಧನ ಶ್ರೀ
ಸಾರಾಂಶ
ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಬುಧವಾರ ಉಡುಪಿ ರಥಬೀದಿಯಲ್ಲಿ ತಮ್ಮ 18ನೇ ಜನ್ಮನಕ್ಷತ್ರ ಆಚರಣೆಯ ಸಂದರ್ಭದಲ್ಲಿ ಆಶೀರ್ವಚನ ನೀಡಿದರು.
ಕನ್ನಡಪ್ರಭ ವಾರ್ತೆ ಉಡುಪಿ ಮಠಾಧೀಶರು ಕೇವಲ ಪೂಜೆ ಪಾಠ ಪ್ರವಚನಕ್ಕೆ ನೇಮಕವಾದವರಲ್ಲ, ಮಧ್ವಚಾರ್ಯರೇ ಜನ ಸೇವೆಯೇ ಜನಾರ್ದನ ಸೇವೆ ಎಂದು ಹೇಳಿದ್ದಾರೆ. ಆದ್ದರಿಂದ ಮಠ ಮತ್ತು ಸಮಾಜ ಜೊತೆಯಾಗಿ ಸಾಗಬೇಕು ಎಂದು ಶಿರೂರು ಮಠದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಹೇಳಿದರು. ಅವರು ಬುಧವಾರ ಉಡುಪಿ ರಥಬೀದಿಯಲ್ಲಿ ತಮ್ಮ 18ನೇ ಜನ್ಮನಕ್ಷತ್ರ ಆಚರಣೆಯ ಸಂದರ್ಭದಲ್ಲಿ ಆಶೀರ್ವಚನ ನೀಡಿದರು. ಹಿಂದಿನ 3 ವರ್ಷಗಳ ಕಾಲ ಶಿರೂರು ಮಠದ ಪೀಠ ಖಾಲಿಯಾಗಿತ್ತು, ಈ ಸಂದರ್ಭದಲ್ಲಿ ಮಠ ಮತ್ತು ಭಕ್ತರ ಸಂಪರ್ಕ ಕಡಿದು ಹೋಗಿತ್ತು, ಇದನ್ನು ಮತ್ತೆ ಜೋಡಿಸಲು ಈ ಸಮಾರಂಭವನ್ನು ಆಯೋಜಿಸಲಾಗಿದೆ ಎಂದವರು ಹೇಳಿದರು. ಕಾರ್ಯಕ್ರಮದ ಆಶಯ ಭಾಷಣ ಮಾಡಿದ ಹಿಂ.ಜಾ.ವೇದಿಕೆಯ ಶ್ರೀಕಾಂತ್ ಶೆಟ್ಟಿ, ಹಿಂದೂ ಸಮಾಜ ಒಗ್ಗೂಡುವಿಕೆಯಲ್ಲಿ ಉಡುಪಿ ಮಠಾಧೀಶರ ಕೊಡುಗೆ ಅಪಾರ, ಮಠಾಧೀಶರು ಸಮಾಜಮುಖಿಯಾಗಿ ಹೇಗಿರಬೇಕು ಎಂಬುದನ್ನು ಉಡುಪಿ ಮಠಗಳು ತೋರಿಸಿಕೊಟ್ಟಿವೆ ಎಂದರು. ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ವಿಹಿಂಪ ನಾಯಕ ಎಂ.ಬಿ.ಪುರಾಣಿಕ್, ಕಟೀಲಿನ ಲಕ್ಷ್ಮೀನಾರಾಯಣ ಆಸ್ರಣ್ಣ, ಸಮಾಜಸೇವಕ ಕೃಷ್ಣಮೂರ್ತಿ ಆಚಾರ್ಯ ಮಾತನಾಡಿದರು. ಮಠದ ಗಣ್ಯಭಕ್ತರಾದ ಪ್ರದೀಪ್ ಕುಮಾರ್ ಕಲ್ಕೂರ, ತಲ್ಲೂರು ಶಿವರಾಮ ಶೆಟ್ಟಿ, ಹರಿಕೃಷ್ಣ ಪುನರೂರು, ಪೇಜಾವರ ಮಠದ ರಘುರಾಮ ಆಚಾರ್ಯ, ಅದಮಾರು ಮಠದ ಗೋವಿಂದರಾಜ ಮುಂತಾದವರು ಉಪಸ್ಥಿತರಿದ್ದರು. ಶಾಸಕ ಯಶಪಾಲ್ ಸುವರ್ಣ ಸ್ವಾಗತಿಸಿದರು, ಮಠದ ದಿವಾಣ ಡಾ.ಉದಯಕುಮಾರ್ ಸರಳತ್ತಾಯರು ವಂದಿಸಿದರು, ಅಶ್ವತ್ಥ ಭಾರಧ್ವಜ ನಿರೂಪಿಸಿದರು. ವಿಶೇಷ ಸಾನಿಧ್ಯ ವಹಿಸಿದ್ದ ಕೃಷ್ಣಮಠದ ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಆಶೀರ್ವಚನ ನೀಡುತ್ತಾ, ಜೀವನದಲ್ಲಿ 18 ಸಂವತ್ಸರ ಎನ್ನುವುದು ಪ್ರಾಯಪ್ರಬುದ್ದತೆಯ ಸಂಕೇತ, ಶ್ರೀ ವೇದವರ್ಧನ ತೀರ್ಥರಿಗೆ ಈಗ ಮಠದ ಆಡಳಿತಕ್ಕೆ ವಯಸ್ಸಿನ ಪ್ರಬುದ್ಧತೆ ಸಿಕ್ಕಿದೆ. 2 ವರ್ಷಗಳ ನಂತರ ಅವರು ಪರ್ಯಾಯ ಪೀಠವನ್ನೇರಲಿದ್ದಾರೆ. ಅವರ ಇನ್ನಷ್ಟು ಸಾಧನೆಗೆ ಸಮಾಜ ಸಹಕಾರ ನೀಡಬೇಕು, ದೇವರ ಅನುಗ್ರಹಕ್ಕೆ ಜನರ ಸೇವೆ ಕೂಡ ಅಗತ್ಯ, ಆದ್ದರಿಂದ ಶ್ರೀಗಳು ಸ್ಥಿತಪ್ರಜ್ಞರಾಗಿ ದೇವರ ಮತ್ತು ಸಮಾಜದ ಸೇವೆ ಮಾಡಬೇಕು ಎಂದು ಹಾರೈಸಿದರು.