ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ‘ವಸುದೈವ ಕುಟುಂಬಕಂ’ನಂತೆ ಎಲ್ಲರೊಳಗೊಂದಾಗಿ ಬೆರೆತು ಸಮಾಜದ ಏಳಿಗೆಗಾಗಿ ದುಡಿದವರು. ಅವರು ಹರಿಪಾದ ಸೇರಿದರೂ ಇಂದಿಗೂ ನಮ್ಮ ನಡುವೆಯೇ ಇದ್ದಾರೆ ಎಂದು ಪೇಜಾವರ ಮಠಾಧೀಶ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.ಹರಿಪಾದಗೈದ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಪಂಚಮ ಪುಣ್ಯ ತಿಥಿ ಅಂಗವಾಗಿ ಕಲ್ಕೂರ ಪ್ರತಿಷ್ಠಾನ ವತಿಯಿಂದ ನಗರದ ಕದ್ರಿ ಕಂಬಳ ರಸ್ತೆ ಮಲ್ಲಿಕಾ ಬಡಾವಣೆಯ ‘ಮಂಜುಪ್ರಾಸಾದ’ದಲ್ಲಿ ಭಾನುವಾರ ‘ಪೇಜಾವರ ವಿಶ್ವೇಶತೀರ್ಥ ನಮನ - 2024’ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.
ಗುರುಗಳು ತನ್ನ 8ನೇ ವರ್ಷ ವಯಸ್ಸಿನಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿ ಜೀವಮಾನದುದ್ದಕ್ಕೂ ಗಂಧದ ಕೊರಡಿನಂತೆ ಸಮಾಜಕ್ಕಾಗಿ ದುಡಿದವರು. ಸವೆದ ಗಂಧ ಸುಗಂಧ ಸೂಸುವಂತೆ ಗುರುಗಳು ನಮ್ಮೆಲ್ಲರ ನಡುವೇ ಇದ್ದಾರೆ. ಅವರನ್ನು ಸ್ಮರಿಸುವುದರೊಂದಿಗೆ ಅವರು ಸಮಾಜಕ್ಕೆ ಮಾಡಿದ ಉಪಕಾರವನ್ನು ನೆನಪು ಮಾಡಿಕೊಂಡು ಆ ದಾರಿಯಲ್ಲಿ ಸಾಗಿದರೆ ಅದೇ ಅವರಿಗೆ ಸಲ್ಲಿಸುವ ದೊಡ್ಡ ಗೌರವ ಎಂದು ಶ್ರೀಗಳು ಕರೆ ನೀಡಿದರು.ಎಲ್ಲ ಕ್ಷೇತ್ರಗಳ ಜನರೊಂದಿಗೆ ಬೆರೆತು ಮಾರ್ಗದರ್ಶನ ನೀಡಿದವರು ಶ್ರೀ ವಿಶ್ವೇಶತೀರ್ಥರು. ಎಲ್ಲ ವರ್ಗದ ಜನರನ್ನು ಸೇರಿಸಿ ‘ವಸುದೈವ ಕುಟುಂಬಕಂ’ ನ್ಯಾಯ ಪರಿಪಾಲನೆ ಮಾಡಿದವರು ಎಂದು ಸ್ಮರಿಸಿದ ಪೇಜಾವರ ಸ್ವಾಮೀಜಿ, ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಗುರುಗಳ ಅನುಗ್ರಹ ಅತ್ಯಂತ ಹಿರಿದು, ಸಮಾಜಕ್ಕಾಗಿ ತನ್ನ ಜೀವಮಾನವನ್ನೇ ಮುಡಿಪಾಗಿಟ್ಟಿದ್ದರು ಎಂದು ಹೇಳಿದರು.ಜ.1ರಿಂದ ಸಂಸ್ಮರಣೆ: ಪೇಜಾವರ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ವೃಂದಾವನ ಇರುವ ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಜ.1ರಿಂದ ಮೂರು ದಿನಗಳ ಕಾಲ ಗುರುಗಳ ಸಂಸ್ಮರಣಾ ಕಾರ್ಯಕ್ರಮ ನಡೆಯಲಿದೆ. 68 ವರ್ಷಗಳ ಹಿಂದೆ ಗುರುಗಳು ಸ್ಥಾಪಿಸಿದ ವಿದ್ಯಾಪೀಠದಲ್ಲಿ ಈಗ 400ಕ್ಕೂ ಅಧಿಕ ವಿದ್ಯಾರ್ಥಿಗಳು ವಸತಿ ಸಹಿತ 12 ವರ್ಷಗಳ ಕಾಲ ಅಧ್ಯಯನ ನಡೆಯುತ್ತಿದ್ದಾರೆ ಎಂದು ಸ್ವಾಮೀಜಿ ತಿಳಿಸಿದರು.
ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ ಆಶೀರ್ವಚನ ನೀಡಿದರು. ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರತೀರ್ಥ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.ಸಾಧಕರಿಗೆ ಸನ್ಮಾನ:ಈ ಸಂದರ್ಭ ಹಿರಿಯ ಸಾಧಕರಿಗೆ ಜೀವಮಾನ ಸಾಧನಾ ಪ್ರಶಸ್ತಿ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಪೇಜಾವರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿವಿಧ ತಂಡಗಳಿಂದ ಕೃಷ್ಣಗೀತ ಗಾಯನ ನಡೆಯಿತು. ಅಂಚೆ ಕಾರ್ಡಿನಲ್ಲಿ ವಿಶ್ವೇಶತೀರ್ಥ ಶ್ರೀಪಾದರ ಚಿತ್ರ ಹಾಗೂ ಪ್ರಬಂಧ ರಚನಾ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಗಮನ ಸೆಳೆದ ರಂಗೋಲಿ ಚಿತ್ರ:ಕಾರ್ಯಕ್ರಮ ಸ್ಥಳದಲ್ಲಿ ಬಿಂದು ಅವರು ರಂಗೋಲಿಯಲ್ಲಿ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಚಿತ್ರ ರಚಿಸಿದ್ದು ಎಲ್ಲರ ಗಮನ ಸೆಳೆಯಿತು.
ಮೂಡುಬಿದಿರೆ ಚೌಟರ ಅರಮನೆಯ ಕುಲದೀಪ ಎಂ. ಪುಷ್ಪ ನಮನ ಸಲ್ಲಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಎಂ.ಮೋಹನ್ ಆಳ್ವ, ವೇದ ವಿದ್ವಾಂಸ ಡಾ.ಸತ್ಯಕೃಷ್ಣ ಭಟ್ ವಿಶ್ವೇಶತೀರ್ಥರ ಬಗ್ಗೆ ಸಂಸ್ಮರಣಾ ನುಡಿಗಳನ್ನಾಡಿದರು. ಪ್ರಮುಖರಾದ ಶರವು ರಾಘವೇಂದ್ರ ಶಾಸ್ತ್ರಿ, ಡಾ.ಹರಿಕೃಷ್ಣ ಪುನರೂರು, ಡಾ. ಎಂ.ಬಿ.ಪುರಾಣಿಕ್, ಆಯಿಷಾ ಪೆರ್ಲ ಅತಿಥಿಗಳಾಗಿದ್ದರು. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಸ್ವಾಗತಿಸಿದರು.