ಸಾರಾಂಶ
ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ವ್ಯಾಸಮಹರ್ಷಿ ಸಂಸ್ಕೃತ ವೇದ ಪಾಠಶಾಲೆಯಲ್ಲಿ ವೇದ ಪಾಠ ಶಾಲೆಯ 19ನೇ ವಾರ್ಷಿಕೋತ್ಸವ ಮತ್ತು ಪ್ರಮಾಣಪತ್ರ ವಿತರಣಾ ಸಮಾರಂಭ ಇತ್ತೀಚೆಗೆ ನೆರವೇರಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಹಿಮಾಲಯ ಪರ್ವತ ಶ್ರೇಣಿಯಿಂದ ಕನ್ಯಾಕುಮಾರಿ ವರೆಗಿನ ನಮ್ಮ ದೇಶವು ಋಷಿ ಮುನಿಗಳ ತಪಃ ನಿಷ್ಠೆಯಿಂದ ಬೆಳಗಿದ ಪವಿತ್ರ ಭೂಮಿಯಾಗಿದೆ. ನಮ್ಮ ದೈನಂದಿನ ಜೀವನದಲ್ಲಿ ಅವರನ್ನು ಸದಾ ನೆನಪಿಸಿಕೊಂಡು ಸುಸಂಸ್ಕೃತರಾಗಿ ಬಾಳಿ ಬದುಕಬೇಕೆಂದು ಹಿರಿಯ ವೈದಿಕ ವೇದಮೂರ್ತಿ ಬಸ್ರೂರು ಪಾಂಡುರಂಗ ಆಚಾರ್ಯ ಉಡುಪಿ ಹೇಳಿದ್ದಾರೆ.ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ವ್ಯಾಸಮಹರ್ಷಿ ಸಂಸ್ಕೃತ ವೇದ ಪಾಠಶಾಲೆಯಲ್ಲಿ ಜರುಗಿದ ವೇದ ಪಾಠ ಶಾಲೆಯ 19ನೇ ವಾರ್ಷಿಕೋತ್ಸವ ಮತ್ತು ಪ್ರಮಾಣಪತ್ರ ವಿತರಣಾ ಸಮಾರಂಭದ ಮುಖ್ಯ ಅಭ್ಯಾಗತರಾಗಿ ಮಾತನಾಡಿದರು.
ನಾಲ್ಕು ವರ್ಷಗಳ ಶಿಕ್ಷಣ ಸಂಪನ್ನಗೊಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ, ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನ, ಮೂಲ್ಕಿ ಶಾಂಭವಿ ನರಸಿಂಹ ಕುಡ್ವಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ದತ್ತಿ ಪ್ರಶಸ್ತಿ ನೀಡಲಾಯಿತು. ನಿರ್ಗಮನ ವಿದ್ಯಾರ್ಥಿಗಳಿಂದ ಗುರು ವಂದನೆ ನಡೆಯಿತು.ಶ್ರೀ ವ್ಯಾಸಮಹರ್ಷಿ ವಿದ್ಯಾಪೀಠದ ಕಾರ್ಯದರ್ಶಿ ಎಚ್.ರಾಮದಾಸ್ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಶಾಲೆಯ ಮಹಾಪೋಷಕರಾದ ವಿಶ್ವನಾಥ.ಎನ್.ಶೆಣೈ ಮುಂಬೈ, ದೇವಳದ ಮೊಕ್ತೇಸರರಾದ ಜಯರಾಮ್ ಶೆಣೈ,ಹರಿ ಕಾಮತ್, ಶಿಕ್ಷಕರಾದ ರವಿ ಪ್ರಕಾಶ ಉಪಾದ್ಯಾಯ, ನಾರಾಯಣ ಶರ್ಮ, ನವೀನ್ ಜೆ ಭಟ್,ಎಂ. ಪಾಂಡುರಂಗ ಭಟ್ ಉಪಸ್ಥಿತರಿದ್ದರು.
ಪ್ರಥಮ್ ಭಟ್ ಸ್ವಾಗತಿಸಿದರು. ಹರಿ ಕಾಮತ್ ವರದಿ ಮಂಡಿಸಿದರು. ಲಕ್ಷ್ಮೀ ನಾರಾಯಣ ಭಟ್ ನಿರೂಪಿಸಿದರು. ಅಮರನಾಥ ಭಟ್ ವಂದಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಅರಿಷ್ಟವೃಷಭಾಸುರ ವಧಃ ಎಂಬ ಸಂಸ್ಕೃತ ನಾಟಕ ಪ್ರದರ್ಶನ ನಡೆಯಿತು.