ಪ್ರವಾಸೋದ್ಯಮ ನವನೀತಿಯಂತೆ ಕೊಡಗಿನಲ್ಲಿ ಹೊಣೆಯರಿತ ಯೋಜನೆಗಳ ಜಾರಿಗೆ ಕ್ರಮ: ಅನಿತಾ ಭಾಸ್ಕರ್

| Published : Apr 04 2025, 12:47 AM IST

ಪ್ರವಾಸೋದ್ಯಮ ನವನೀತಿಯಂತೆ ಕೊಡಗಿನಲ್ಲಿ ಹೊಣೆಯರಿತ ಯೋಜನೆಗಳ ಜಾರಿಗೆ ಕ್ರಮ: ಅನಿತಾ ಭಾಸ್ಕರ್
Share this Article
  • FB
  • TW
  • Linkdin
  • Email

ಸಾರಾಂಶ

ಈಗಾಗಲೇ ಕೊಡಗಿನ 23 ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ವಿವಿಧ ಪ್ರಗತಿ ಯೋಜನೆ ಜಾರಿಗೊಳಿಸಲಾಗುತ್ತಿದೆ. 9 ಗೈಡ್‌ಗಳನ್ನು ವಿವಿಧ ಪ್ರವಾಸಿ ತಾಣಗಳಲ್ಲಿ ನೇಮಕ ಮಾಡಲಾಗುತ್ತದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಘೋಷಿಸಲಾದ ನವನೀತಿಯಂತೆ ಕೊಡಗಿನಲ್ಲಿಯೂ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳುವ ಮೂಲಕ ಜಿಲ್ಲೆಯಲ್ಲಿ ಪರಿಸರ ಸ್ನೇಹಿ ಪ್ರವಾಸೋದ್ಯಮದ ಜತೆಯಲ್ಲಿಯೇ ಜವಬ್ದಾರಿಯುತ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಾಗುತ್ತದೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕಿ ಅನಿತಾ ಭಾಸ್ಕರ್ ಹೇಳಿದ್ದಾರೆ.

ನಗರದ ಪ್ರವಾಸೋದ್ಯಮ ಇಲಾಖೆಯ ಸಭಾಂಗಣದಲ್ಲಿ ಕೊಡಗು ಪತ್ರಕರ್ತರ ಸಂಘ ವತಿಯಿಂದ ಆಯೋಜಿಸಲಾದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಕೊಡಗಿನಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿದರು.

ಕೊಡಗು ಜಿಲ್ಲೆ ಪ್ರವಾಸಿಗರ ಮೆಚ್ಚಿನ ತಾಣವಾಗಿಯೇ ಮುಂದುವರೆದಿದ್ದು ಈ ನಿಟ್ಟಿನಲ್ಲಿ ಮತ್ತಷ್ಟು ಹೊಣೆಯರಿತ ಪ್ರವಾಸೋದ್ಯಮದ ಯೋಜನೆಗಳನ್ನು ಪ್ರವಾಸೋದ್ಯಮ ಇಲಾಖೆ 2029 ರವರೆಗೆ ಜಾರಿಯಲ್ಲಿಟ್ಟಿರುವ ನವ ನೀತಿಯಂತೆ ಜಾರಿಗೊಳಿಸಲಾಗುತ್ತದೆ ಎಂದು ಅನಿತಾ ಭಾಸ್ಕರ್ ಹೇಳಿದರು.

ವಿವಿಧ ಪ್ರಗತಿ ಯೋಜನೆ ಜಾರಿ: ಈಗಾಗಲೇ ಕೊಡಗಿನ 23 ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ವಿವಿಧ ಪ್ರಗತಿ ಯೋಜನೆ ಜಾರಿಗೊಳಿಸಲಾಗುತ್ತಿದೆ. 9 ಗೈಡ್ ಗಳನ್ನು ಪ್ರವಾಸಿ ಮಿತ್ರ ಯೋಜನೆಯಡಿಯಲ್ಲಿ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಲ್ಲಿ ನೇಮಕ ಮಾಡಲಾಗುತ್ತದೆ. ಇನ್ನೂ 10 ಪ್ರವಾಸೀ ಮಿತ್ರರು ಕೊಡಗಿನ ಪ್ರವಾಸೀ ತಾಣಗಳಿಗೆ ದೊರಕುವ ಸಾಧ್ಯತೆ ಇದೆ. ಅಂತೆಯೇ ಒಂದು ಜಿಲ್ಲೆ - ಒಂದು ತಾಣ ಯೋಜನೆಯಡಿ ಕೊಡಗಿನಲ್ಲಿ ಮಾಂದಲಪಟ್ಟಿ ತಾಣವನ್ನು ಗುರುತಿಸಲಾಗಿದ್ದು ಮಾಂದಲಪಟ್ಟಿಯಲ್ಲಿಯೂ ಇಲಾಖೆ ವತಿಯಿಂದ ಪ್ರವಾಸೀ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ. ಕೊಡಗು ಜಿಲ್ಲೆಯನ್ನು ಇದೇ ಮೊದಲ ಬಾರಿಗೆ ಪ್ರವಾಸೀ ಸರ್ಕ್ಯೂಟ್ ಯೋಜನೆಯಡಿ ಸೇರ್ಪಡೆ ಮಾಡಲಾಗುತ್ತದೆ ಎಂದೂ ಅನಿತಾ ಭಾಸ್ಕರ್ ಮಾಹಿತಿ ನೀಡಿದರು.

ಮಡಿಕೇರಿಯ ರಾಜಾಸೀಟ್ ಬಳಿಯಲ್ಲಿರುವ ಕೂಗ್೯ ವಿಲೇಜ್ ನಲ್ಲಿ ಕೊಡಗಿನ ಸವಿಕಿತ್ತಳೆಯನ್ನು ಪ್ರಚುರ ಪಡಿಸಲು ಗೋಣಿಕೊಪ್ಪಲುವಿನ ಕಿತ್ತಳೆ ಬೆಳೆಗಾರರ ಸಹಕಾರ ಸಂಘದ ಸಹಯೋಗ ಪಡೆಯಲಾಗಿದೆ ಎಂದು ತಿಳಿಸಿದ ಅನಿತಾ ಭಾಸ್ಕರ್, ಕೂರ್ಗ್‌ ವಿಲೇಜ್ ಎಂಬುದೇ ಚಂದದ ಯೋಜನೆಯಾಗಿದ್ದು ಇದನ್ನು ಮತ್ತಷ್ಟು ಪ್ರಚಾರದೊಂದಿಗೆ ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗುತ್ತಿದೆ. ಕೊಡಗು ಜಿಲ್ಲಾಧಿಕಾರಿ ವೆಂಕಟರಾಜಾ ಅವರು ಜಿಲ್ಲೆಯಲ್ಲಿನ ಪ್ರವಾಸೀ ತಾಣಗಳ ಅಭಿವೃದ್ಧಿ ಬಗ್ಗೆ ವಿಶೇಷ ಕಾಳಜಿ ವಹಿಸಿರುವುದಿಂದಾಗಿ ಕೊಡಗು ಈಗ ಡಿಜಿಟಲ್ ಮೀಡಿಯಾ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಂದರ್ಶಕರನ್ನು ತಲುಪಿ ಬಹುತೇಕರು ಕೊಡಗಿನತ್ತ ಬರುವಂತಾಗಿದೆ ಎಂದು ಹೇಳಿದರು.

ಕೊಡಗು ಜಿಲ್ಲೆಯಲ್ಲಿ ಅಂದಾಜು 3,500 ಹೋಂಸ್ಟೇಗಳಿರಬಹುದು ಎಂದು ಅಂದಾಜಿಸಲಾಗಿದ್ದು ಈ ಪೈಕಿ ಪ್ರವಾಸೋದ್ಯಮ ಇಲಾಖೆಯಲ್ಲಿ ಈವರೆಗೂ 2269 ಹೋಂಸ್ಟೇಗಳು ನೋಂದಣಿ ಮಾಡಿಕೊಂಡಿವೆ. ತಿಂಗಳಿಗೆ 30-50 ಹೊಸ ಹೋಂಸ್ಟೇ ಮಾಲೀಕರು ನೋಂದಣಿಗಾಗಿ ಅಜಿ೯ ಸಲ್ಲಿಸುತ್ತಿದ್ದಾರೆ ಎಂದು ಹೇಳಿದ ಅನಿತಾ ಭಾಸ್ಕರ್, ಶಾಸಕ ಎ.ಎಸ್. ಪೊನ್ನಣ್ಣ ಪ್ರಯತ್ನ ಫಲವಾಗಿ ವಿರಾಜಪೇಟೆಯ ಮಲತಿರಿಕೆ ಬೆಟ್ಟ , ಅಬ್ಬಿಫಾಲ್ಸ್, ಬರಪೊಳೆ, ಇಪು೯ ಫಾಲ್ಸ್ ಅಭಿವೃದ್ಧಿಗಾಗಿ ಸರ್ಕಾರದಿಂದ 1 ಕೋಟಿ ರುಪಾಯಿ ಅನುದಾನ ದೊರಕಿದೆ ಎಂದು ಮಾಹಿತಿ ನೀಡಿದರು.

ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಸಾಹಸ ಕ್ರೀಡಾ ಪ್ರವಾಸೋದ್ಯಮ, ಆರೋಗ್ಯ ಸ್ಯಾಸ್ಥ್ಯ ಸಂಬಂಧಿತ ಪ್ರವಾಸೋದ್ಯಮ, ಸ್ಥಳೀಯ ಸಂಸ್ಖೖತಿಯನ್ನು ಪರಿಚಯಿಸುವ ಪ್ರವಾಸೋದ್ಯಮಗಳಿಗೆ ಯೋಜನೆ ರೂಪಿಸಲಾಗುತ್ತದೆ ಎಂದೂ ಅವರು ತಿಳಿಸಿದರು.

ಪ್ರವಾಸೋದ್ಯಮಕ್ಕೆ ಕಾಯಕಲ್ಪ: ಶಕ್ತಿ ಸಂಪಾದಕ ಜಿ. ಚಿದ್ವಿಲಾಸ್ ಅವರು ಮಡಿಕೇರಿ ನಗರದಲ್ಲಿ ಪ್ರವಾಸಿಗರನ್ನು ಗುರಿಯಾಗಿರಿಸಿಕೊಂಡು ಪ್ರವಾಸಿ ತಾಣಗಳಿಗೆ ಕರೆದೊಯ್ಯಲು ಸಿಟಿ ರೌಂಡ್ಸ್ ಬಸ್ ಸಂಚಾರ ಅಗತ್ಯವಿದೆ ಎಂದು ಸಲಹೆ ನೀಡಿದರು. ನಿಸಗ೯ಧಾಮ ಸಂಪೂರ್ಣ ಕಾಂಕ್ರೀಟ್ ಕಾಡಾಗುತ್ತಿದ್ದು, ಈ ನಿಟ್ಟಿನಲ್ಲಿ ಪ್ರವಾಸೋದ್ಯಮ ಮತ್ತು ಅರಣ್ಯ ಇಲಾಖೆ ಗಮನ ಹರಿಸುವಂತೆ ಚಿದ್ವಿಲಾಸ್ ಮನವಿ ಮಾಡಿದರು. ಕೊಡಗಿನಲ್ಲಿ ಪ್ರವಾಸಿ ಉತ್ಸವ ಆಯೋಜಿಸುವ ಮೂಲಕ ಪ್ರವಾಸೋದ್ಯಮಕ್ಕೆ ಕಾಯಕಲ್ಪ ನೀಡಬೇಕಾಗಿದೆ. ರಾಜಾಸೀಟ್ ನಲ್ಲಿ ಪುಟಾಣಿ ರೈಲಿನ ಮರುಸಂಚಾರಕ್ಕೆ ಕೂಡ ಪ್ರವಾಸೋದ್ಯಮ ಇಲಾಖೆ ಗಮನ ಹರಿಸುವಂತೆ ಸಲಹೆ ನೀಡಿದರು.

ಜಿಲ್ಲೆಯಲ್ಲಿ ಯಾವುದೇ ಪ್ರವಾಸೀ ತಾಣಗಳಲ್ಲಿಯೂ ಮೂಲರೂಪವನ್ನು ಕಳೆಗುಂದುವಂತೆ ಮಾಡದೇ ಅಭಿವೃದ್ಧಿ ಯೋಜನೆ ಕೈಗೊಳ್ಳುವಂತೆ ಸಂಘದ ನಿರ್ದೇಶಕ ರಂಜಿತ್ ಕವಲಪಾರ ಸಲಹೆ ನೀಡಿದರು. ಸಂಘದ ನಿರ್ದೇಶಕ ಎಸ್.ಜಿ. ಉಮೇಶ್ ಮಾತನಾಡಿ, ರಾಜಾಸೀಟ್ ಮಾರ್ಗದಲ್ಲಿ ವಾಹನ ಸಂಚಾರ ನಿಯಂತ್ರಣ ಮಾಡದೇ ಹೋದಲ್ಲಿ ಸ್ಥಳೀಯರು ಪ್ರವಾಸಿಗರ ಬಗ್ಗೆ ಜಿಗುಪ್ಸೆ ತಾಳುವ ಸಾಧ್ಯತೆ ಹೆಚ್ಚಾಗಿದೆ. ನಗರದಲ್ಲಿ ಬಹುಮಹಡಿ ಸಂಕೀಣ೯ ನಿರ್ಮಿಸಿ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಸಲಹೆ ನೀಡಿದರು.

ಸಂಘದ ನಿರ್ದೇಶಕ ಬಿ.ಜಿ. ಅನಂತಶಯನ ಮಾತನಾಡಿ, ಕಳಪೆ ಗುಣಮಟ್ಟದ ಸಂಬಾರ ಪದಾರ್ಥ ಮತ್ತು ಚಾಕೋಲೇಟ್, ವೈನ್ ಗಳ ಮಾರಾಟಕ್ಕೆ ಕಡಿವಾಣ ಹಾಕಲೇಬೇಕು. ಕೊಡಗಿನ ಹೆಸರಿನಲ್ಲಿ ಕಳಪೆ ಗುಣಮಟ್ಟದ ಪದಾರ್ಥಗಳ ಮಾರಾಟದಿಂದಾಗಿ ಕೊಡಗಿನ ಹೆಸರಿಗೆ ಅಪಖ್ಯಾತಿ ಬರುವಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಸಂಘದ ನಿರ್ದೇಶಕ ಜಿ. ವಿ. ರವಿಕುಮಾರ್, ಊಟಿ, ಕೊಡೈಕೆನಾಲ್ ನಂತೆ ಕೊಡಗಿಗೆ ವಾಹನಗಳ ಸಂಖ್ಯೆಯನ್ನು ನಿಗದಿಪಡಿಸುವಂತೆ ಸಲಹೆ ಮಾಡಿದರು. ಕುಶಾಲನಗರ ತಾಲೂಕು ಸಂಘದ ಅಧ್ಯಕ್ಷ ವಿಘ್ನೇಶ್ ಭೂತನಕಾಡು, ಜಿಲ್ಲೆಯಲ್ಲಿ ಕೖಷಿ ಸಂಬಂಧಿತ ಪ್ರವಾಸೋದ್ಯಮಕ್ಕೆ ಪ್ರಚಾರ ನೀಡುವಂತೆ ಸಲಹೆ ನೀಡಿದರು. ಗುಡ್ಡೆಮನೆ ವಿಶುಕುಮಾರ್, ನವೀನ್, ಅರುಣ್ ಕೂಗ್೯ ಸೇರಿದಂತೆ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಬೆಳವಣಿಗೆ ನಿಟ್ಟಿನಲ್ಲಿ ಅನೇಕ ಸಲಹೆಗಳನ್ನು ಸಂವಾದದ ಸಂದರ್ಭ ನೀಡಿದರು.

ಕೊಡಗು ಮದ ಅಧ್ಯಕ್ಷ ಅನಿಲ್ ಎಚ್.ಟಿ. ಮಾತನಾಡಿ, ಕೊಡಗು ಜಿಲ್ಲೆಯ ಪ್ರವಾಸೋದ್ಯಮ ಇಲಾಖೆಯಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಉಪನಿರ್ದೇಶಕರ ಹುದ್ದೆ 13 ತಿಂಗಳ ಹಿಂದೆ ಭರ್ತಿಯಾಗಿ ಅನಿತಾ ಭಾಸ್ಕರ್ ಮೂಲಕ ಓರ್ವ ಕ್ರಿಯಾಶೀಲ ಅಧಿಕಾರಿ ಕೊಡಗಿನ ಪ್ರವಾಸೋದ್ಯಮ ಇಲಾಖೆಗೆ ದೊರಕಿದ್ದಾರೆ ಎಂದು ಶ್ಲಾಘಿಸಿದರು.

ಸಂಘದ ಪಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ ಸ್ವಾಗತಿಸಿ, ವಂದಿಸಿದರು. ಇದೇ ಸಂದರ್ಭ ಕೊಡಗು ಪತ್ರಕರ್ತರ ಸಂಘ (ರಿ) ವತಿಯಿಂದ ಅನಿತಾ ಭಾಸ್ಕರ್‌ ಅವರಿಗೆ ಅಭಿನಂದನಾ ಪತ್ರವನ್ನು ಶಕ್ತಿ ಪತ್ರಿಕೆಯ ಸಂಪಾದಕ ಜಿ. ಚಿದ್ವಿಲಾಸ್ ನೀಡಿದರು. ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಮಾಲೋಚಕರಾದ ಜತಿನ್ ಬೋಪಣ್ಣ ಹಾಜರಿದ್ದರು.

ಕರ್ನಾಟಕ ರಾಜ್ಯವು ಅತ್ಯಧಿಕ ಸಂಖ್ಯೆಯಲ್ಲಿ ಭಾರತೀಯ ಪ್ರವಾಸಿಗರನ್ನು ಆಕರ್ಷಿಸುವ ರಾಜ್ಯಗಳ ಪೈಕಿ 3 ನೇ ಸ್ಥಾನದಲ್ಲಿದೆ. ಆದರೆ ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಕರ್ನಾಟಕ ಹಿಂದುಳಿದಿದ್ದು ವಾರ್ಷಿಕ 4 ಲಕ್ಷ ವಿದೇಶಿ ಪ್ರವಾಸಿಗರು ಮಾತ್ರ ಭೇಟಿ ನೀಡುತ್ತಿದ್ದಾರೆ. ಕಡಲಕಿನಾರೆ, ಪಶ್ಚಿಮಘಟ್ಟಶ್ರೇಣಿ, ಸ್ಥಳೀಯ ಸಂಸ್ಕೃತಿ ಮುಂತಾದುವುಗಳಿಂದಾಗಿ ಕರ್ನಾಟಕ ರಾಜ್ಯವು ದೇಶದಲ್ಲಿಯೇ ಮನಮೋಹಕ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಅನಿತಾ ಭಾಸ್ಕರ್ ಹೆಮ್ಮೆ ವ್ಯಕ್ತಪಡಿಸಿದರು.

ಸಾರ್ವಜನಿಕ ಸಹಭಾಗಿತ್ವದ(ಪಿಪಿಪಿ) ಕಾರ್ಯಕ್ರಮ-

ಪ್ರವಾಸಿ ತಾಣಗಳ ಅಭಿವೃದ್ಧಿಯೊಂದಿಗೆ, ಪ್ರವಾಸಿ ಕೇಂದ್ರಗಳ ಬಳಿಯಲ್ಲಿ ಜಾಗವನ್ನು ಹೊಂದಿರುವವರ ಜತೆ ಒಪ್ಪಂದಗಳನ್ನು ಮಾಡಿಕೊಳ್ಳುವ ಮೂಲಕ ಅಲ್ಲಿ ಪ್ರವಾಸಿಗರಿಗೆ ಪೂರಕವಾದ ಉದ್ಯಾನವನ, ಶೌಚಾಲಯ ನಿರ್ಮಾಣದಂತಹ ಮೂಲ ಸೌಲಭ್ಯ ಒದಗಿಸುವುದು ಪ್ರವಾಸೋದ್ಯಮ ಇಲಾಖೆಯ ಉದ್ದೇಶವಾಗಿದೆ. ಆ ಮೂಲಕ ಸಮುದಾಯವನ್ನು ಪ್ರವಾಸೋದ್ಯಮದೊಂದಿಗೆ ಬೆಸೆದು ಪ್ರವಾಸೋದ್ಯಮದಲ್ಲಿ ಅಭವೃದ್ಧಿಯನ್ನು ಕಾಣುವುದು ಪ್ರವಾಸೋದ್ಯಮ ಕಾರ್ಯಯೋಜನೆಯ ಭಾಗವಾಗಿದೆಯೆಂದು ಅನಿತಾ ಭಾಸ್ಕರ್ ನುಡಿದರು.

1.62 ಕೋಟಿ ರು. ವೆಚ್ಚದಲ್ಲಿ ಮಂದ್‌ಲ್ ಪಟ್ಟಿ ಜಂಕ್ಷನ್ ಅಭಿವೃದ್ಧಿ-

ಕೊಡಗಿನ ಗಾಳಿಬೀಡು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪ್ರಸಿದ್ಧ ಪ್ರವಾಸಿ ತಾಣ ಮಂದ್‌ಲ್ ಪಟ್ಟಿ ಅರಣ್ಯ ಇಲಾಖಾ ವ್ಯಾಪ್ತಿಗೆ ಬರುತ್ತದೆ. ಹೀಗಿದ್ದು, ಅಲ್ಲಿಗೆ ತೆರಳುವ ಜಂಕ್ಷನ್ ಬಳಿ ಪ್ರವಾಸೋದ್ಯಮಕ್ಕೆ ಪೂರಕವಾಗಿ 1.62 ಕೋಟಿ ವೆಚ್ಚದ ಅಭಿವೃದ್ಧಿಯ ಕಾರ್ಯಯೋಜನೆಗಳನ್ನು ರೂಪಿಸಲಾಗುತ್ತಿದ್ದು, ಕ್ಷೇತ್ರದ ಶಾಸಕರಾದ ಡಾ.ಮಂತರ್ ಗೌಡ ಅವರ ಸಹಕಾರದೊಂದಿಗೆ ರಸ್ತೆಗಳ ಅಭಿವೃದ್ಧಿಗೂ ಪ್ರಯತ್ನಗಳು ನಡೆಯುತ್ತಿದೆ ಎಂದು ಹೇಳಿದರು.

ಪ್ರವಾಸಿ ಕೇಂದ್ರಗಳ ಅಭಿವೃದ್ಧಿಯ ಪ್ರಯತ್ನಗಳ ನಡುವೆಯೇ ಹೊನ್ನಮ್ಮನ ಕೆರೆಯಲ್ಲಿ ಜಲ ಕ್ರೀಡೆಗಳ ಆಯೋಜನೆ, ಪೊನ್ನಂಪೇಟೆಯಲ್ಲಿ ಕಯಾಕಿಂಗ್ ಮೊದಲಾದ ಸಾಹಸ ಕ್ರೀಡೆಗಳನ್ನು ಪ್ರವಾಸಿಗರ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯರೂಪಕ್ಕೆ ತರುವ ಉದ್ದೇಶವಿರುವುದಾಗಿ ತಿಳಿಸಿದರು.