ಶಾಸಕ ಮಂಜುಗೆ ಶ್ರೀಧರ ಗೌಡ ಸವಾಲು

| Published : Aug 08 2025, 01:00 AM IST

ಸಾರಾಂಶ

ಅರಕಲಗೂಡು ಪಟ್ಟಣದ ಸಮಗ್ರ ಅಭಿವೃದ್ದಿ ಹಿನ್ನೆಲೆಯಲ್ಲಿ ಸಿದ್ಧಗೊಂಡಿರುವ ''''ಮಾಸ್ಟರ್ ಪ್ಲಾನ್-2041'''' ದುರ್ಬಳಕೆ ಮಾಡಿರುವ ಬಗ್ಗೆ ದಾಖಲೆಯನ್ನು ಶಾಸಕರು ಬಿಡುಗಡೆ ಮಾಡಿದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವೆ. ಇಲ್ಲವಾದರೆ ವಸೂಲಿ ಕುಲ ಕಸುಬು ಮುಂದುವರಿಸಿಕೊಂಡು ತಾಲೂಕಿನಲ್ಲಿ ಕೈಗಾರಿಕೋದ್ಯಮಿಗಳು ಕಾಲಿಡದಂತೆ ಮಾಡಿ ನಿರುದ್ಯೋಗ ಸೃಷ್ಟಿಗೆ ಕಾರಣವಾದ ಶಾಸಕರು ರಾಜಕೀಯ ನಿವೃತ್ತಿ ಘೋಷಿಸಬೇಕು ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಪಿ. ಶ್ರೀಧರ್‌ ಗೌಡ ಸವಾಲು ಹಾಕಿದರು.

ಕನ್ನಡಪ್ರಭ ವಾರ್ತೆ ಅರಕಲಗೂಡು

ಪಟ್ಟಣದ ಸಮಗ್ರ ಅಭಿವೃದ್ದಿ ಹಿನ್ನೆಲೆಯಲ್ಲಿ ಸಿದ್ಧಗೊಂಡಿರುವ ''''ಮಾಸ್ಟರ್ ಪ್ಲಾನ್-2041'''' ದುರ್ಬಳಕೆ ಮಾಡಿರುವ ಬಗ್ಗೆ ದಾಖಲೆಯನ್ನು ಶಾಸಕರು ಬಿಡುಗಡೆ ಮಾಡಿದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವೆ. ಇಲ್ಲವಾದರೆ ವಸೂಲಿ ಕುಲ ಕಸುಬು ಮುಂದುವರಿಸಿಕೊಂಡು ತಾಲೂಕಿನಲ್ಲಿ ಕೈಗಾರಿಕೋದ್ಯಮಿಗಳು ಕಾಲಿಡದಂತೆ ಮಾಡಿ ನಿರುದ್ಯೋಗ ಸೃಷ್ಟಿಗೆ ಕಾರಣವಾದ ಶಾಸಕರು ರಾಜಕೀಯ ನಿವೃತ್ತಿ ಘೋಷಿಸಬೇಕು ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಪಿ. ಶ್ರೀಧರ್‌ ಗೌಡ ಸವಾಲು ಹಾಕಿದರು.

ಪಟ್ಟಣದ ಸಮಗ್ರ ಅಭಿವೃದ್ಧಿಗಾಗಿ 2015-18ರ ಅವಧಿಯಲ್ಲಿ ಮಾಸ್ಟರ್ ಪ್ಲಾನ್‌ನ ಸಿದ್ಧತೆ ಆರಂಭಗೊಂಡಿದ್ದು ಉದ್ಯೋಗ ಸೃಷ್ಟಿಗಾಗಿ ಈಗ 200 ಎಕರೆ ಜಮೀನು ಮೀಸಲಿಡುವಂತೆ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಮನವಿ ಮಾಡಲಾಗಿದೆ. ಆದರೆ ಆ ಅವಧಿಯಲ್ಲಿ ಮಂಜು ಅವರೇ ಶಾಸಕರು, ಸಚಿವರಾಗಿದ್ದರು. ಅವರ ನಂತರ ರಾಮಸ್ವಾಮಿ ಅವರು ಶಾಸಕರಾಗಿದ್ದರು. 2023ರಲ್ಲಿ ಈ ಉದ್ದೇಶಿತ ಪ್ಲಾನ್‌ನ ಕುರಿತು ಸಾರ್ವಜನಿಕ ಆಕ್ಷೇಪಣೆಯನ್ನು ವಾರ್ತಾ ಇಲಾಖೆ ಮೂಲಕ ಪ್ರಕಟಣೆ ಕೂಡ ನಡೆದಿದೆ. ಹಾಲಿ ಈ ಅವಧಿಯಲ್ಲಿಯೂ ಕೂಡ ಎ. ಮಂಜು ಅವರೇ ಶಾಸಕರಾಗಿದ್ದಾರೆ. ಈ ಪ್ಲಾನ್‌ನ ಸಾಧಕ - ಬಾಧಕಗಳ ಕುರಿತು ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿಲ್ಲ. ನಗರ ಯೋಜನಾ ಪ್ರಾಧಿಕಾರದ ಆಡಳಿತ ಮಂಡಳಿ ಪ್ಲಾನ್‌ನಲ್ಲಿ ಕಂಡುಬಂದಿರುವ ಕೆಲವು ತಾಂತ್ರಿಕ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕ ಮಾಹಿತಿ ಮೇರೆಗೆ ಶ್ರೀದೊಡ್ಡಮಠದ ಶ್ರೀಮಲ್ಲಿಕಾರ್ಜುನಸ್ವಾಮಿಯವರು ಸೇರಿದಂತೆ ಕೆಲವು ರೈತರು ನನ್ನಬಳಿ ಹಾಗೂ ಪ್ರಾಧಿಕಾರದ ಅಧ್ಯಕ್ಷರು, ಸದಸ್ಯರೊಂದಿಗೆ ಚರ್ಚೆ ನಡೆಸಿದ್ದಾರೆಯೇ ವಿನಃ ಈ ಸಂಬಂಧ ಯಾವುದೇ ಆಸೆ, ಆಮಿಷಗಳನ್ನು ಒಳಗೊಂಡು ಭೇಟಿ ನಡೆದಿಲ್ಲ. ಶಾಸಕರ ಅಕ್ರಮ ಅವ್ಯವಹಾರಗಳಿಗೆ ಕಡಿವಾಣ ಹಾಕಿದ್ದೇವೆ ಹೊರತು ನಮ್ಮ ಒಳ್ಳೆಯ ಕೆಲಸ ಮುಂದುವರಿಯಲಿದೆ. ಮಲ್ಲಿಕಾರ್ಜುನಸ್ವಾಮಿ ಅವರು ಪೂಜಿಸುವ ದೇವಸ್ಥಾನ ಬಳಿ ಬಂದು ನಾವು ಹಣ ಕೇಳಿದ್ದರೆ ಪ್ರಮಾಣ ಮಾಡಲಿ ಎಂದು ಪಂಥ್ವಾಹನ ನೀಡಿದರು.ಈ ಹಿಂದೆ ಸಿದ್ದರಾಮಯ್ಯ ಅವರಿಂದ ಸಚಿವರಾಗಿ ಅಧಿಕಾರ ಅನುಭವಿಸಿ ಕ್ಷೇತ್ರದ ಅಭಿವೃದ್ಧಿಗೆ ಹಣ ಪಡೆದಿದ್ದಾರೆ. ಈಗ ಬೇರೆ ಪಕ್ಷದಲ್ಲಿದ್ದೇನೆ ಎಂಬ ಅಹಂನಿಂದ ನಮ್ಮ ಮುಖ್ಯಮಂತ್ರಿ ವಿರುದ್ಧ ನಾಲಿಗೆ ಹರಿಬಿಡುತ್ತಿರುವ ಮಂಜು ಅವರ ರಾಜಕೀಯ ನಡೆ ಏನೆಂಬುದು ಜನರಿಗೆ ಗೊತ್ತಿರುವ ವಿಚಾರ. ಹಾಲಿ ಶಾಸಕರು ಅವರೇ ಆಗಿದ್ದಾರೆ. ಕಳೆದ ಎರಡು ವರ್ಷಗಳ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಯೋಜನೆ ರೂಪಿಸಿ ಸರ್ಕಾರದಿಂದ ಅನುದಾನ ತರುವ ನಿಟ್ಟಿನಲ್ಲಿ ಇದುವರೆಗೂ ಯಾವುದೇ ಕ್ರಮವಹಿಸಿಲ್ಲ. ಬದಲಾಗಿ ರಾಜಕೀಯವಾಗಿ ಎದುರಾಳಿಗಳಾಗಿರುವ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ನೇತೃತ್ವದಲ್ಲಿ ಉತ್ತಮವಾಗಿ ನಡೆಯುತ್ತಿರುವ ಶಕ್ತಿ ದೇವತಾ ಪೀಠ ಶ್ರೀ ಅರಸೀಕಟ್ಟೆಯಮ್ಮ ದೇವಸ್ಥಾನ ಸಮಿತಿ, ಕೃಷ್ಣೇಗೌಡರ ಕ್ರಷರ್‌ ಮತ್ತು ನನ್ನ ವಿರುದ್ಧ ಶಾಸನ ಸಭೆಯಲ್ಲಿ ಪ್ರತಿಪಾದಿಸಿ ರಾಜಕೀಯವಾಗಿ ದ್ವೇಷ ಸಾಧಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಾರೂ ಉದ್ಧಾರವಾಗಿಲ್ಲ:

ಕ್ಷೇತ್ರದಲ್ಲಿ ರಾಜಕೀಯವಾಗಿ ಕಳೆದ 40 ವರ್ಷಗಳಿಂದ ಅಧಿಕಾರ ಅನುಭವಿಸುತ್ತಿರುವ ಶಾಸಕ ಎ. ಮಂಜು ಅವರು ಕಾಲಿಟ್ಟ ಮನೆ ಮತ್ತು ಒಡನಾಟ ಇಟ್ಟುಕೊಂಡಿರುವ ಯಾವುದೇ ಕಟುಂಬ ಉದ್ಧಾರ ಆಗಿಲ್ಲ. ಬದಲಾಗಿ ಸರ್ವನಾಶವಾಗಿರುವ ಉದಾಹರಣೆ ದೊಡ್ಡಸಂಖ್ಯೆಯಲ್ಲಿ ಇದೆ. ಈಗ ಇವರು ಕಾಲಿಟ್ಟ ದೇವೇಗೌಡರ ಕುಟುಂಬದವರ ಸ್ಥಿತಿ ಇದಕ್ಕೆ ಉದಾಹರಣೆ. ಈ ಬಗ್ಗೆ ನಾನು ಹೆಸರು ಹೇಳುವ ಅಗತ್ಯವಿಲ್ಲ. ಜನರಿಗೆ, ರಾಜಕೀಯ ಮುಖಂಡರಿಗೆ ತಿಳಿದಿದೆ ಎಂದು ವ್ಯಂಗ್ಯವಾಡಿದರು.

ಮಂಜು ಅವರು ಈ ಹಿಂದೆ ಸಚಿವರಾಗಿದ್ದ ವೇಳೆ ಕ್ಷೇತ್ರದಲ್ಲಿ ಬಗರ್‌ಹುಕುಂ ಹಗರಣ ನಡೆದಿತ್ತು. ಅಂತಿಮ ಹಂತದಲ್ಲಿ ನಡೆದಿದ್ದ ಆಯ್ಕೆಯನ್ನು ರದ್ದುಗೊಳಿಸಲಾಗಿತ್ತು. ಕ್ಷೇತ್ರದಲ್ಲಿ ಇನ್ನೂ ಕೂಡ 10500 ಬಗರ್‌ಹುಕುಂ ಅರ್ಜಿಗಳು ಬಾಕಿ ಇವೆ. ಕಳೆದ ತಿಂಗಳು ತಾಲೂಕು ಕಚೇರಿ ಆವರಣದಲ್ಲಿ ನೊಂದ ಫಲಾನುಭವಿ ಶಾಸಕರ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಇವರ ಅವಧಿಯಲ್ಲಿ ಇಷ್ಟು ದೊಡ್ಡಸಂಖ್ಯೆಯಲ್ಲಿನ ಫಲಾನುಭವಿಗಳಿಗೆ ನ್ಯಾಯ ಸಿಗುವ ಭರವಸೆ ಇಲ್ಲ. ಬದಲಾಗಿ ಜನರನ್ನು ಎತ್ತಿಕಟ್ಟುವ ಕೆಲಸವನ್ನು ಶಾಸಕರು ಮುಂದುವರಿಸಿದ್ದಾರೆ ಎಂದು ಶ್ರೀಧರ್‌ ಗೌಡ ಆರೋಪಿಸಿದರು.ತಾಲೂಕಿನ ಮೋಕಲಿ ಗ್ರಾಮದ ಬಳಿ ನಡೆಯುತ್ತಿರುವ ಸುನಂದ ಫೀಡ್ಸ್ ಫ್ಯಾಕ್ಟರಿಯಲ್ಲಿ ಪಾಲು ಸಿಗುತ್ತಿಲ್ಲ ಎಂಬ ಕಾರಣಕ್ಕೆ ಸಲ್ಲದ ರೀತಿಯಲ್ಲಿ ತೊಂದರೆಯನ್ನು ಶಾಸಕರು ಕೊಡುತ್ತಿದ್ದಾರೆ. ಅಲ್ಲದೆ ಶೇ. 15ರಷ್ಟು ಪಾಲನ್ನು ಫ್ಯಾಕ್ಟರಿ ಮಾಲೀಕರು ಕೊಡಬೇಕೆಂದು ಧಮ್ಕಿ ಹಾಕಿದ್ದಾರೆ. ಈ ಫ್ಯಾಕ್ಟರಿಯಿಂದ ಪಾಲು ಕೇಳಿಲ್ಲವೆಂದರೇ ಇದೇ ದೊಡ್ಡಮಠದ ಗದ್ದುಗೆ ಬಳಿ ಹೋಗಿ ಇಬ್ಬರು ಪ್ರಮಾಣ ಮಾಡೋಣ. ಈ ಬಗ್ಗೆ ಸತ್ಯವನ್ನು ಶಾಸಕರು ಹೊಂದಿದ್ದರೆ ಆಗಸ್ಟ್ 9ರಂದು ಮಧ್ಯಾಹ್ನ 12 ಗಂಟೆಗೆ ದೊಡ್ಡಮಠದ ಬಳಿ ದೇವರ ಲಿಂಗು ಮುಟ್ಟಿ ಪ್ರಮಾಣವನ್ನು ಸಾರ್ವಜನಿಕರು, ಮಾಧ್ಯಮದವರ ಸಮ್ಮುಖದಲ್ಲಿ ಸತ್ಯ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.ಜನಸಾಮಾನ್ಯರು ಶಾಸಕರ ಬಳಿ ಸುಳಿಯದ ಸ್ಥಿತಿ ನಿರ್ಮಾಣವಾಗಿದೆ. ಉದ್ಯೋಗ ಕೇಳಿಕೊಂಡು ಬಂದ ಯುವಕನಿಗೆ ಮನೆಯಿಂದ ಆಚೆ ನಡಿ ಎಂದು ಹೆದರಿಸುವ ಶಾಸಕರ ನಡೆ ತರವಲ್ಲ. ಶಾಸಕರಿಂದ ಅನ್ಯಾಯಕ್ಕೊಳಗಾದವರು ನಮ್ಮ ಬಳಿ ಬಂದರೆ ರಕ್ಷಣೆ ನೀಡಿ ನ್ಯಾಯ ದೊರಕಿಸಿಕೊಡುವುದಾಗಿ ತಿಳಿಸಿದರು.ಪಪಂ ಉಪಾಧ್ಯಕ್ಷ ಸುಬಾನ್ ಷರಿಫ್‌, ಗ್ಯಾರಂಟಿ ಸಮಿತಿ ಸದಸ್ಯರಾದ ಸಲೀಂ, ನಾಗರಾಜು, ವಕೀಲ ಪ್ರಶಾಂತ್, ಲಕ್ಷ್ಮಣ್ ಇತರರು ಗೋಷ್ಠಿಯಲ್ಲಿದ್ದರು.