ವಿ.ಎಂ. ನಾಗಭೂಷಣ
ಸಂಡೂರು: ತಾರಾನಗರ- ಸಂಡೂರು ಮಾರ್ಗಮಧ್ಯೆ ನಾರಿಹಳ್ಳದ ತಟದಲ್ಲಿ ಸುಂದರ ಪ್ರಕೃತಿಯ ತಾಣದಲ್ಲಿ ನಿರ್ಮಾಣವಾಗಿರುವ ಶ್ರೀಗಂಡಿ ಬಸವೇಶ್ವರ ದೇವಸ್ಥಾನ ಅರ್ಧದಷ್ಟು ನೀರಿನಲ್ಲಿ ಮುಳುಗಿತ್ತು. ಶ್ರೀಗಂಡಿ ಬಸವೇಶ್ವರ ದೇವಸ್ಥಾನದಲ್ಲಿ ಇದೀಗ ಬೇಸಿಗೆ ಹಿನ್ನೆಲೆಯಲ್ಲಿ ನೀರು ಹಿಂದೆ ಸರಿದಿದೆ. ಜಲಾವೃತವಾಗಿದ್ದ ದೇವಸ್ಥಾನದಲ್ಲೀಗ ನಿತ್ಯ ಪೂಜಾ ಕಾರ್ಯಗಳು ಆರಂಭವಾಗಿದ್ದು, ಭಕ್ತರು ಚಿತ್ತವೀಗ ದೇವಸ್ಥಾನದತ್ತ ತಿರುಗಿದೆ.ಶ್ರೀಗಂಡಿ ಬಸವೇಶ್ವರ ದೇವಸ್ಥಾನದ ಸುಂದರ ಪ್ರಕೃತಿ ತಾಣದಲ್ಲಿ ನೆಲೆಗೊಂಡಿದೆ. ಹಲವು ಭಕ್ತರ ಆರಾಧ್ಯ ದೈವ ಶ್ರೀಗಂಡಿ ಬಸವೇಶ್ವರ ದೇವಸ್ಥಾನ ನಾರಿಹಳ್ಳ ಜಲಾಶಯ ತುಂಬಿದಾಗ ಜಲಾಶಯದ ಬಸಿ ನೀರು ತುಂಬಿಕೊಂಡು ನೀರಿನಲ್ಲಿ ಮುಳುಗಿ ಹೋಗುತ್ತಿತ್ತು. ಇಂತಹ ಸಂದರ್ಭದಲ್ಲಿ ಅರ್ಚಕರು ದೇವಸ್ಥಾನದ ಇನ್ನೊಂದು ಬದಿಯಲ್ಲಿರುವ ಶ್ರೀಗಣೇಶದ ದೇವಸ್ಥಾನದಲ್ಲಿ ಪೂಜಾ ಕಾರ್ಯಗಳನ್ನು ನೆರವೇರಿಸುತ್ತಿದ್ದರು. ಸಂಸದರಾದ ಈ. ತುಕಾರಾಂ ಅವರು ಶಾಸಕರಾಗಿದ್ದ ಸಂದರ್ಭದಲ್ಲಿ ಜಲಾಶಯದ ನೀರು ದೇವಸ್ಥಾನದ ಆವರಣಕ್ಕೆ ಬಾರದಂತೆ ತಡೆಯಲು ತಡೆಗೋಡೆ ನಿರ್ಮಿಸಲು ಕ್ರಮಕೈಗೊಂಡಿದ್ದರು. ಜಿಂದಾಲ್ ಕಂಪನಿಯವರು ದೇವಸ್ಥಾನವನ್ನು ಅಭಿವೃದ್ಧಿ ಪಡಿಸಿ, ದೇವಸ್ಥಾನದ ಸುತ್ತ ಎತ್ತರದ ಗೋಡೆ ನಿರ್ಮಿಸಿದ್ದಾರೆ. ಆದಾಗ್ಯೂ ಜಲಾಶಯ ತುಂಬಿದಾಗ ಜಲಾಶಯದ ಬಸಿ ನೀರು ದೇವಸ್ಥಾನವನ್ನು ಆವರಿಸಿಕೊಳ್ಳುತ್ತಿದೆ. ಕಳೆದ ಬಾರಿ ಉತ್ತಮ ಮಳೆಯಿಂದಾಗಿ ನಾರಿಹಳ್ಳ ಜಲಾಶಯ ತುಂಬಿದ ಹಿನ್ನೆಲೆಯಲ್ಲಿ ಶ್ರೀಗಂಡಿ ಬಸವೇಶ್ವರ ದೇವಸ್ಥಾನವು 7-8 ತಿಂಗಳ ಕಾಲ ಜಲಾವೃತವಾಗಿತ್ತು.
ಇದೀಗ ಬೇಸಿಗೆ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ಆವರಿಸಿದ್ದ ಜಲವು ಹಿಂದಕ್ಕೆ ಸರಿದಿರುವುದರಿಂದ ಭಕ್ತರ ದರ್ಶನಕ್ಕೆ ಮುಕ್ತವಾಗಿದೆ. ಹೀಗಾಗಿ, ಕೆಲ ದಿನಗಳಿಂದ ದೇವಸ್ಥಾನದಲ್ಲಿ ಪ್ರತಿನಿತ್ಯ ಪೂಜಾ ಕಾರ್ಯಗಳು ಜರುಗುತ್ತಿವೆ. ಭಕ್ತರು ಶ್ರೀಗಂಡಿ ಬಸವೇಶ್ವರನ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿ, ತಮ್ಮ ಭಕ್ತಿ ಸಮರ್ಪಿಸುತ್ತಿದ್ದಾರೆ.7-8 ತಿಂಗಳಿಂದ ಶ್ರೀಗಂಡಿ ಬಸವೇಶ್ವರ ದೇವಸ್ಥಾನ ನೀರಿನಿಂದ ಆವೃತವಾಗಿತ್ತು. ಇದೀಗ ಬೇಸಿಗೆ ಹಿನ್ನೆಲೆಯಲ್ಲಿ ನೀರು ಹಿಂದಕ್ಕೆ ಸರಿದಿರುವುದರಿಂದ ಭಕ್ತರು ದೇವಸ್ಥಾನಕ್ಕೆ ಬಂದು ಹೋಗಲು ಅನುಕೂಲವಾಗಿದೆ. ಹಲವು ಭಕ್ತರು ದೇವಸ್ಥಾನಕ್ಕೆ ಬಂದು ಹೋಗುತ್ತಿದ್ದಾರೆ ಎಂದು ದೇವಸ್ಥಾನದ ಅರ್ಚಕರಾದ - ಎನ್.ಎಂ. ವೀರಯ್ಯಸ್ವಾಮಿ ತಿಳಿಸಿದ್ದಾರೆ.