ನಾಳೆ ನಂಜನಗೂಡಿನಲ್ಲಿ ಶ್ರೀಕಂಠೇಶ್ವರಸ್ವಾಮಿ ಚಿಕ್ಕಜಾತ್ರಾ ಮಹೋತ್ಸವ

| Published : Nov 16 2024, 12:31 AM IST

ನಾಳೆ ನಂಜನಗೂಡಿನಲ್ಲಿ ಶ್ರೀಕಂಠೇಶ್ವರಸ್ವಾಮಿ ಚಿಕ್ಕಜಾತ್ರಾ ಮಹೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕ ಜಾತ್ರಾ ಮಹೋತ್ಸವ ಅಂಗವಾಗಿ ರಥಗಳನ್ನು ವಿಶೇಷವಾಗಿ ಕಂಗೊಳಿಸುವಂತೆ ಬಣ್ಣ ಬಣ್ಣದ ಬಾವುಟ, ಬಟ್ಟೆಯ ಬಾವುಟಗಳಿಂದ ಸಿಂಗರಿಸಲಾಗಿದೆ. ರಥೋತ್ಸವದಂದು ರಥದಲ್ಲಿ ವಜ್ರ ವೈಡುರ್ಯಖಚಿತ ಶ್ರೀಕಂಠೇಶ್ವರ ಸ್ವಾಮಿ ಅವರ ಉತ್ಸವ ಮೂರ್ತಿಯನ್ನು ಇರಿಸಿ ಅವರನ್ನು ಹೂವಿನ ಅಲಂಕಾರದಿಂದ ವಿಶೇಷವಾಗಿ ಅಲಂಕರಿಸಲಾಗುತ್ತದೆ.

ಕನ್ನಡಪ್ರಭ ವಾರ್ತೆ ನಂಜನಗೂಡು

ದಕ್ಷಿಣಕಾಶಿ ಎಂದೇ ಪ್ರಸಿದ್ದಿ ಪಡೆದಿರುವ ಶ್ರೀ ಶ್ರೀ ಕಂಠೇಶ್ವರಸ್ವಾಮಿಯವರ ವೈಭವಯುತ ಚಿಕ್ಕ ಜಾತ್ರಾ ಮಹೋತ್ಸವವು ನ.17ರ ಬೆಳಗ್ಗೆ 10.45 ರಿಂದ 11.30 ರೊಳಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ನೆರವೇರಲಿದೆ.

ಚಿಕ್ಕ ಜಾತ್ರಾ ಮಹೋತ್ಸವದಲ್ಲಿ ಪ್ರಮುಖವಾಗಿ ಮೂರು ರಥಗಳು ಜರುಗಲಿದ್ದು, ಮೊದಲು ಗಣಪತಿ ಮತ್ತು ಚಂಡಿಕೇಶ್ವರ, ಎರಡೆಯನೆಯದಾಗಿ ಪಾರ್ವತಿ ಸಮೇತ ಶ್ರೀಕಂಠೇಶ್ವರ, ಮನೋನ್ಮಣಿ ಅಮ್ಮನವರ ರಥಗಳು ರಥ ಬೀದಿಯಲ್ಲಿ ಚಲಿಸಲಿವೆ.

ಚಿಕ್ಕ ಜಾತ್ರಾ ಮಹೋತ್ಸವ ಅಂಗವಾಗಿ ರಥಗಳನ್ನು ವಿಶೇಷವಾಗಿ ಕಂಗೊಳಿಸುವಂತೆ ಬಣ್ಣ ಬಣ್ಣದ ಬಾವುಟ, ಬಟ್ಟೆಯ ಬಾವುಟಗಳಿಂದ ಸಿಂಗರಿಸಲಾಗಿದೆ. ರಥೋತ್ಸವದಂದು ರಥದಲ್ಲಿ ವಜ್ರ ವೈಡುರ್ಯಖಚಿತ ಶ್ರೀಕಂಠೇಶ್ವರ ಸ್ವಾಮಿ ಅವರ ಉತ್ಸವ ಮೂರ್ತಿಯನ್ನು ಇರಿಸಿ ಅವರನ್ನು ಹೂವಿನ ಅಲಂಕಾರದಿಂದ ವಿಶೇಷವಾಗಿ ಅಲಂಕರಿಸಲಾಗುತ್ತದೆ.

ಅಲ್ಲದೇ, ಜಾತ್ರಾ ಮಹೋತ್ಸವದ ಅಂಗವಾಗಿ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ಶ್ರೀಕಂಠೇಶ್ವರ ಸ್ವಾಮಿ ಅವರಿಗೆ ವಿವಿಧ ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಗುತ್ತದೆ, ಮೊದಲಿಗೆ ಏಕದಶಾವರ ರುದ್ರಾಭಿಷೇಕ, ಕ್ಷೀರಾಭಿಷೇಕ, ರತ್ನಾಭಿಷೇಕ, ಫಲಮಂಚಾಮೃತಾಭಿಷೇಕ, ಗಣಪತಿ ಪೂಜೆ, ನವಗ್ರಹ ಪೂಜೆಗಳು ಜರುಗಿದ ನಂತರ ಪಾರ್ವತಿ ಸಮೇತ ಶ್ರೀಕಂಠೇಶ್ವರಸ್ವಾಮಿ ಅವರನ್ನು ರಥೋತ್ಸವದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.

ನಿಗದಿತ ಸಮಯದಲ್ಲಿ ಅರ್ಚಕ ವೃಂದ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಿದ ಬಳಿಕ, ವೇದ ಘೋಷಗಳ ಮಹಾ ಮಾರಾಯಣ ಮೊಳಗಿಸುವ ಜೊತೆಗೆ ಮಹಾಮಂಗಳಾರತಿ ಇಡುಗಾಯಿ ಒಡೆದು ರಥೋತ್ಸವಕ್ಕೆ ಚಾಲನೆ ಸಿಗಲಿದೆ.

ಈ ಅಮೃತ ಘಳಿಗೆಯನ್ನೇ ಕಾತರದಿಂದ ಕಾಯುತ್ತಿದ್ದ ಸಾವಿರಾರು ಸಂಖ್ಯೆಯ ಶ್ರೀಕಂಠೇಶ್ವರ ಸ್ವಾಮಿಯವರ ಭಕ್ತಾದಿಗಳು ಪುಳಕಿತಗೊಂಡು ಹಗ್ಗವನ್ನು ಹಿಡಿದು ಜೈ ಶ್ರೀಕಂಠ. ಜೈ ನಂಜುಡ, ಜೈ ಪಾರ್ವತಿದೇವಿ ಎಂಬ ಘೋಷಣೆಯನ್ನು ಮುಗಿಲು ಮುಟ್ಟುವಂತೆ ಕೊಗುತ್ತಾ ರಥವನ್ನು ಎಳೆಯುತ್ತಾರೆ. ರಥವು ರಾಜಗಾಂಭೀರ್ಯತೆಯಿಂದ ಚಲಿಸುವುದನ್ನು ನೋಡಿ ಭಕ್ತರು ಭಾವಪರವಶರಾಗಿ ಪುಳಕಿತರಾಗುತ್ತಾರೆ.

ರಥಗಳು ಯಾವುದೇ ಅಡೆತಡೆ ಇಲ್ಲದೆ ಸ್ವಸ್ಥಾನ ಸೇರಿದಾಗ ಭಕ್ತರು ಭಾವ ಪರವಶರಾಗಿ ಉದ್ಘೋಷಗಳನ್ನು ಕೂಗಿ ಹರ್ಷವ್ಯಕ್ತಪಡಿಸುತ್ತಾರೆ. ರಥೋತ್ಸವ ಜರುಗಿದ ನಂತರ ಅದೇ ದಿನ ಸಂಜೆ ಹಂಸಾ ರೋಹಣ, ನಟೇಶೋತ್ಸವ, ಅಶ್ವಾರೋಹಣ, ನಂತರ ಮಹಾಭೂತ ರೋಹಣೋತ್ಸವ, ದೇವಿ ಪ್ರಣಯ ಕಲಹ ಸಂಧಾನೋತ್ಸವ ಕಾರ್ಯಕ್ರಮಗಳು ಜರುಗಲಿವೆ.

ನ. 19ರ ಬೆಳಗ್ಗೆ ಹಗಲು ಚೂರ್ಣೋತ್ಸವ ಪೂರ್ವಕ ಅವಭೃತ ತೀರ್ಥಸ್ನಾನ, ನಂತರ ರಾತ್ರಿ 7ಕ್ಕೆ ಕಪಿಲಾ ನದಿ ತೀರದ ತೇಲುವ ತೇವಾಲಯದಲ್ಲಿ ಪಾರ್ವತಿ ದೇವಿ ಸಮೇತ ಶ್ರೀಕಂಠೇಶ್ವರ ಸ್ವಾಮಿಯವರ ತೆಪ್ಪೋತ್ಸವವು ನಡೆಯಲಿವೆ.

ನ. 20ಕ್ಕೆ ಪುಷ್ಪಯಾಗಪೂರ್ವಕ ಪಂಚೋಪಚಾರ ಪೂರ್ವಕ ಕೈಲಾಸಯಾನಾ ರೋಹಣೋತ್ಸವ, ನ. 21ರ ಗುರುವಾರದಂದು ಮಹಾಸಂಪ್ರೋಕ್ಷಣೆ ನಂದಿವಾಹನ ಉತ್ಸವ ಮತ್ತು ರಾತ್ರಿ ಶಯಾನೋತ್ಸವದೊಂದಿಗೆ ಚಿಕ್ಕಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದೆ. ಶ್ರೀಕಂಠೇಶ್ವರನ ಭಕ್ತಾದಿಗಳು ಚಿಕ್ಕ ಜಾತ್ರಾ ಮಹೋತ್ಸವಕ್ಕಾಗಿ ಕಾತುರದಿಂದ ಕಾದಿದ್ದಾರೆ.