ಅನ್ಸಾರಿ ನೇತೃತ್ವದ ಸಭೆಗೆ ಶ್ರೀನಾಥ, ಮಲ್ಲಿಕಾರ್ಜುನ ಗೈರು

| Published : Apr 20 2024, 01:10 AM IST

ಅನ್ಸಾರಿ ನೇತೃತ್ವದ ಸಭೆಗೆ ಶ್ರೀನಾಥ, ಮಲ್ಲಿಕಾರ್ಜುನ ಗೈರು
Share this Article
  • FB
  • TW
  • Linkdin
  • Email

ಸಾರಾಂಶ

ಗಂಗಾವತಿ ಸಮೀಪದ ಸಂಗಾಪುರ ಗ್ರಾಮದಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ನೇತೃತ್ವದಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಗೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಆರ್. ಶ್ರೀನಾಥ, ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ನಾಗಪ್ಪ ಗೈರುಹಾಜರಾಗಿದ್ದರು.

ಗಂಗಾವತಿ: ಲೋಕಸಭೆ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಪ್ರಮುಖ ಮುಖಂಡರ ನಡುವೆ ಇರುವ ಮುನಿಸು ಮತ್ತೆ ಬಹಿರಂಗವಾಗಿದೆ.

ಸಮೀಪದ ಸಂಗಾಪುರ ಗ್ರಾಮದಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ನೇತೃತ್ವದಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಮಾಜಿ ಸಂಸದ ಸಂಗಣ್ಣ ಕರಡಿ, ಕ್ಷೇತ್ರದ ಉಸ್ತುವಾರಿ ಕಾಡಾ ಅಧ್ಯಕ್ಷ ಹಸನ್‌ಸಾಬ್ ದೋಟಿಹಾಳ್, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್, ಅಭ್ಯರ್ಥಿ ರಾಜಶೇಖರ ಹಿಟ್ನಾಳ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದಾರೆ. ಆದರೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಆರ್. ಶ್ರೀನಾಥ, ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ನಾಗಪ್ಪ ಇನ್ನಿತರ ಅನ್ಸಾರಿ ವಿರೋಧಿ ಬಣದ ಮುಖಂಡರಿಗೆ ಗೈರುಹಾಜರಾಗಿದ್ದರು.

ಶುಕ್ರವಾರ ತಾಲೂಕಿನ ಸಂಗಾಪುರ ಗ್ರಾಮದಲ್ಲಿ ಚುನಾವಣೆಯ ಪ್ರಚಾರ ಸಭೆ ನಡೆಸಲಾಗಿದೆ. ನಗರಕ್ಕೆ ಕೂಗಳತೆಯಲ್ಲಿರುವ ಈ ಸಭೆಗೆ ಶ್ರೀನಾಥ ಮತ್ತು ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಬಾರದಂತೆ ನೋಡಿಕೊಳ್ಳಲಾಗಿದೆ ಎಂದು ಶ್ರೀನಾಥ ಬಣದ ಕಾರ್ಯಕರ್ತರು ನೇರವಾಗಿ ಆರೋಪಿಸಿದ್ದಾರೆ.

ಚುನಾವಣೆ ಪ್ರಕ್ರಿಯೆ ಪ್ರಾರಂಭವಾಗುತ್ತಿದ್ದಂತೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ತಮ್ಮ ನಿವಾಸದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಶಿವರಾಜ ತಂಗಡಗಿ, ಅಮರೇಗೌಡ ಬಯ್ಯಾಪುರ, ದೋಟಿಹಾಳ ಪಾಲ್ಗೊಂಡಿದ್ದರು. ಆ ಸಂದರ್ಭದಲ್ಲಿ ಎಚ್‌.ಆರ್‌. ಶ್ರೀನಾಥ ಮತ್ತು ಮಲ್ಲಿಕಾರ್ಜುನ ನಾಗಪ್ಪ ಅವರ ವಿರುದ್ಧ ಹರಿಹಾಯಲಾಗಿತ್ತು. ಗಂಗಾವತಿಯಲ್ಲಿ ತಮ್ಮ ಸೂಚನೆಯಂತೆ ಸಭೆ ಸಮಾರಂಭ ನಡೆಸಬೇಕೆಂದು ಅವರು ಸೂಚಿಸಿದ್ದರೆನ್ನಲಾಗಿದೆ.

ಇದಕ್ಕೆ ಪ್ರತಿಯಾಗಿ ಎಚ್.ಆರ್. ಶ್ರೀನಾಥ ಕೂಡ ತಮ್ಮ ನಿವಾಸದಲ್ಲಿ ಸಭೆ ನಡೆಸಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಯ್ಯಾಪುರ, ಹಸನ್‌ಸಾಬ್ ದೋಟಿಹಾಳ, ಮಲ್ಲಿಕಾರ್ಜುನ ನಾಗಪ್ಪ ಮತ್ತಿತರನ್ನು ಅಹ್ವಾನಿಸಿ ಅನ್ಸಾರಿ ಅವರಿಗೆ ಟಾಂಗ್ ನೀಡಿದ್ದರು. ಈ ಸಭೆಗೆ ಸಚಿವ ಶಿವರಾಜ ತಂಗಡಗಿ ಗೈರಾಗಿ ತಾವು ಅನ್ಸಾರಿ ಬಣದ ಕಡೆ ಎಂಬ ಸಂದೇಶ ರವಾನಿಸಿದ್ದರಿಂಂದ ಸಭೆಯಲ್ಲಿ ಶ್ರೀನಾಥ ಅವರು ತಂಗಡಗಿ ವಿರುದ್ಧ ಹರಿಹಾಯ್ದಿದ್ದರು.

ಈ ಸಭೆಯ ನಂತರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ ಅವರು ಗಂಗಾವತಿ ಕಾಂಗ್ರೆಸ್‌ನ ಬಣ ರಾಜಕಾರಣ ಶಮನ ಮಾಡಲಾಗುವುದು. ಗಂಗಾವತಿಯಲ್ಲಿ ಇನ್ನು ಮುಂದೆ ನಡೆಯುವ ಪ್ರಚಾರ ಸಭೆಯಲ್ಲಿ ಅನ್ಸಾರಿ ಮತ್ತು ಎಚ್.ಆರ್. ಶ್ರೀನಾಥ ಅವರನ್ನು ಒಂದೇ ವೇದಿಕೆಗೆ ಬರುವಂತೆ ಮಾಡಿ ಒಗ್ಗಟ್ಟಿನಿಂದ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದಾಗಿ ಭರವಸೆ ನೀಡಿದ್ದರು.

ಆದರೆ ಇಕ್ಬಾಲ್ ಅನ್ಸಾರಿ ಶುಕ್ರವಾರ ತಾಲೂಕಿನ ಸಂಗಾಪುರ ಗ್ರಾಮದಲ್ಲಿ ಎಚ್.ಆರ್. ಶ್ರೀನಾಥ, ಮಲ್ಲಿಕಾರ್ಜುನ ನಾಗಪ್ಪ ಮತ್ತಿತರನ್ನು ಆಹ್ವಾನಿಸದೇ ಪ್ರತ್ಯೇಕವಾಗಿ ಕಾರ್ಯಕ್ರಮ ನಡೆಸಿದ್ದಾರೆ. ಸಂಗಾಪುರ ಕಾಂಗ್ರೆಸ್ ಸಭೆಗೆ ಆಹ್ವಾನಿಸಿಲ್ಲ: ಸಂಗಾಪುರ ಗ್ರಾಮದಲ್ಲಿ ಕಾಂಗ್ರೆಸ್ ಚುನಾವಣೆ ಪ್ರಚಾರ ಸಭೆ ನಡೆಸಲಾಗಿದೆ. ಆದರೆ ಈ ಸಭೆ ಕುರಿತು ನನಗೆ, ಮಲ್ಲಿಕಾರ್ಜುನ ನಾಗಪ್ಪ ಅವರಿಗೆ ಯಾವುದೇ ಮಾಹಿತಿ ನೀಡಿಲ್ಲ. ಗಂಗಾವತಿ ಕ್ಷೇತ್ರದಲ್ಲಿ ಪಕ್ಷದ ಸಭೆ ನಡೆಸಿರುವ ಅಭ್ಯರ್ಥಿ ಹಿಟ್ನಾಳ್ ಈ ರೀತಿ ಭಿನ್ನ ನಿಲುವು ತಾಳುವುದು ಸರಿಯಲ್ಲ. ಇದರಿಂದ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡುತ್ತದೆ. ಮತ್ತು ಮುಖಂಡರಲ್ಲಿ ಭಿನ್ನಮತವಿದೆ ಎಂಬುದು ಮತ್ತಷ್ಟು ಬಹಿರಂಗವಾಗುತ್ತದೆ. ಇದರಿಂದ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಈ ಕುರಿತು ವಿಚಾರಿಸುತ್ತೇನೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಆರ್. ಶ್ರೀನಾಥ ಹೇಳಿದರು.