ಮೂಲಭೂತ ಸಮಸ್ಯೆಗಳ ಸುಳಿಯಲ್ಲಿ ಶೃಂಗೇರಿ ಬಸ್ ನಿಲ್ದಾಣ

| Published : Dec 02 2024, 01:16 AM IST

ಮೂಲಭೂತ ಸಮಸ್ಯೆಗಳ ಸುಳಿಯಲ್ಲಿ ಶೃಂಗೇರಿ ಬಸ್ ನಿಲ್ದಾಣ
Share this Article
  • FB
  • TW
  • Linkdin
  • Email

ಸಾರಾಂಶ

ಶೃಂಗೇರಿ, ಗೋಡೆಗಳು ಸುಣ್ಣ ಬಣ್ಣ ಕಾಣದ ಹಲವು ವರ್ಷಗಳೇ ಕಳೆದಿವೆ. ವಿವಿಧ ಊರಿಗೆ ಸಂಚಾರದ ಬಸ್‌ ನಿಲ್ಲುವ ಸ್ಥಳಗಳ ನಾಮಫಲಕಗಳಿಲ್ಲ. ಚರಂಡಿಗಳು ಸ್ವಚ್ಛ ಗೊಳ್ಳದೆ ದುರ್ನಾತ ಬೀರುತ್ತಿವೆ. ಕಾಂಪೌಂಡ್‌ ಕುಸಿದು ಬಿದ್ದು ತಿಂಗಳುಗಳೇ ಕಳೆದಿವೆ. ಸುತ್ತಮುತ್ತಲ ಪರಿಸರ ಮಲಿನ ಗೊಂಡು ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಈ ಇಡೀ ಪರಿಸರವೇ ಮೂಲಭೂತ ಸಮಸ್ಯೆಗಳಿಂದ ಸೊರಗಿದೆ.

ದುರಸ್ತಿ, ಸುಣ್ಣ ಬಣ್ಣ ಭಾಗ್ಯವಿಲ್ಲ । ನೈರ್ಮಲ್ಯ, ಸೌಲಭ್ಯಗಳಿಂದ ವಂಚಿತವಾದ ತಂಗುದಾಣ

ನೆಮ್ಮಾರ್ ಅಬೂಬಕರ್

ಕನ್ನಡಪ್ರಭ ವಾರ್ತೆ, ಶೃಂಗೇರಿ

ಗೋಡೆಗಳು ಸುಣ್ಣ ಬಣ್ಣ ಕಾಣದ ಹಲವು ವರ್ಷಗಳೇ ಕಳೆದಿವೆ. ವಿವಿಧ ಊರಿಗೆ ಸಂಚಾರದ ಬಸ್‌ ನಿಲ್ಲುವ ಸ್ಥಳಗಳ ನಾಮಫಲಕಗಳಿಲ್ಲ. ಚರಂಡಿಗಳು ಸ್ವಚ್ಛ ಗೊಳ್ಳದೆ ದುರ್ನಾತ ಬೀರುತ್ತಿವೆ. ಕಾಂಪೌಂಡ್‌ ಕುಸಿದು ಬಿದ್ದು ತಿಂಗಳುಗಳೇ ಕಳೆದಿವೆ. ಸುತ್ತಮುತ್ತಲ ಪರಿಸರ ಮಲಿನ ಗೊಂಡು ಜನರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಈ ಇಡೀ ಪರಿಸರವೇ ಮೂಲಭೂತ ಸಮಸ್ಯೆಗಳಿಂದ ಸೊರಗಿದೆ.

ಇದು ಪ್ರಸಿದ್ಧ ಪ್ರವಾಸಿ ಕ್ಷೇತ್ರವಾದ ಶೃಂಗೇರಿ ಬಸ್ ನಿಲ್ದಾಣದ ದುಸ್ಥಿತಿಯ ಕಥೆ-ವ್ಯಥೆ.ಈ ಮೊದಲು ಪಟ್ಟಣ ಪಂಚಾಯಿತಿ ಕಚೇರಿ ಸಮೀಪದಲ್ಲಿದ್ದ ನಿಲ್ದಾಣ ನೂತನವಾಗಿ ನಿರ್ಮಾಣಗೊಂಡಿದ್ದ ಈ ಸ್ಥಳಕ್ಕೆ ಸ್ಥಳಾಂತರ ಗೊಂಡು 20 ವರ್ಷಗಳು ಕಳೆದರೂ ಅಗತ್ಯ ಮೂಲಸೌಕರ್ಯ ಒದಗಿಸಲು ಈವರೆಗೂ ಸಾಧ್ಯವಾಗಿಲ್ಲ.

ಹೇಳಿ ಕೇಳಿ ಶೃಂಗೇರಿ ಪ್ರಸಿದ್ಧ ಪ್ರವಾಸಿ ಕ್ಷೇತ್ರವಾಗಿರುವುದರಿಂದ ಪ್ರತಿದಿನ ಇಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಹಾಗೂ ಪ್ರತೀ ವರ್ಷ ಲಕ್ಷಾಂತರ ಪ್ರವಾಸಿಗರು ಬಂದು ಹೋಗುತ್ತಾರೆ. ವರ್ಷದಲ್ಲಿ ಸುಮಾರು 75 ರಿಂದ 80 ಲಕ್ಷ ಪ್ರವಾಸಿಗರು ಭೇಟಿ ನೀಡುವ ಇಲ್ಲಿನ ಬಸ್ ನಿಲ್ದಾಣದ ಪರಿಸ್ಥಿತಿಯಂತು ಹೇಳ ತೀರದಾಗಿದೆ.

ಈ ನಿಲ್ದಾಣದ ಕಟ್ಟಡ ಸುಣ್ಣ ಬಣ್ಣ ಕಾಣದೇ ಹಲವು ವರ್ಷಗಳೇ ಕಳೆದಿವೆ. ನೀತಿ ನಿಯಮಗಳ ಪಾಲನೆಯೇ ಇಲ್ಲ. ಯಾರೂ ಕೇಳುವವರೆ ಇಲ್ಲವಾಗಿದೆ. ಅಲ್ಲಲ್ಲಿ ಕಂಡು ಬರುವ ತ್ಯಾಜ್ಯ, ಬಸ್‌ ಗಳು ವಿವಿಧ ಊರುಗಳಿಗೆ ಸಂಚರಿಸುವ ಕುರಿತು ನಾಮಫಲಕಗಳೇ ಇಲ್ಲ. ಪ್ರಯಾಣಿಕರು ಅಂಗಡಿ, ಬಸ್ ಎಜೆಂಟರು, ಜನರ ಬಳಿ ಕೇಳಿಕೊಂಡು ಬಸ್ ಗಾಗಿ ಕಾಯುತ್ತಾ ಕುಳಿತುಕೊಳ್ಳಬೇಕಾದ ದುಸ್ಥಿತಿ. ಅಲ್ಲದೆ ಬಸ್ ಗಳು ಎಷ್ಟು ಹೊತ್ತಿಗೆ, ಎಲ್ಲಿ ಸಂಚರಿಸುತ್ತವೇ ಎಂಬುದು ಬಸ್ ಬಂದು ನಿಂತ ಮೇಲೆ ಅದರಲ್ಲಿರುವ ನಾಮಫಲಕ ನೋಡಿ ಪ್ರಯಾಣಿಸಬೇಕಾದ ದಯನೀಯ ಸ್ಥಿತಿ ಪ್ರಯಾಣಿಕರದ್ದಾಗಿದೆ.

ಬಸ್ ನಿಲ್ದಾಣದ ಸುತ್ತಲ ಕಾಂಪೌಂಡ್ ಕುಸಿದು ಬಿದ್ದು ತಿಂಗಳುಗಳೇ ಕಳೆದರೂ ಇನ್ನು ದುರಸ್ತಿಗೊಂಡಿಲ್ಲ. ಜಾಹಿರಾತು ನಾಗಫಲಕಗಳು ಕಂಬ ಸಹಿತ ಉರುಳಿ ಬಿದ್ದಿದ್ದರೂ ತೆರವುಗೊಳಿಸಿಲ್ಲ. ಚರಂಡಿಗಳು ಸ್ವಚ್ಛಗೊಳ್ಳದೇ ತ್ಯಾಜ್ಯ ನೀರಿನ ಕೆಟ್ಟ ವಾಸನೆ ಸುತ್ತಮುತ್ತಲ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಮಳೆಗಾಲ, ಬೇಸಿಗೆ ಕಳೆದರೂ ಚರಂಡಿಗಳನ್ನು ಮಾತ್ರ ಸ್ವಚ್ಛಗೊಳಿಸಿಲ್ಲ. ಬಿಸಿಲು ಹೆಚ್ಚಾದಂತೆ ದುರ್ನಾತ ಹೆಚ್ಚುವುದರಿಂದ ಜನರು ಮೂಗುಮುಚ್ಚಿಕೊಂಡು ಓಡಾಡುವಂತಹ ಪರಿಸ್ಥಿತಿ ಉಂಟಾಗಿದೆ.

ಬಸ್ ನಿಲ್ದಾಣದಲ್ಲಿರುವ ಆಟೋ ನಿಲ್ದಾಣ ಕೂಡ ಶಿಥಿಲಗೊಂಡು ಹಲವು ವರ್ಷಗಳೇ ಕಳೆದಿವೆ. ದುರಸ್ತಿ ಭಾಗ್ಯವಂತೂ ಇಲ್ಲ. ಬಸ್ ನಿಲ್ದಾಣ, ಅಂಗಡಿ ಮಳಿಗೆಗಳ ಹಿಂಭಾಗವಂತೂ ತ್ಯಾಜ್ಯಗಳ ಗುಡ್ಡೆ, ಅಲ್ಲಲ್ಲಿ ಮೂತ್ರ ವಿಸರ್ಜನೆ, ತ್ಯಾಜ್ಯ ,ಚರಂಡಿಗಳ ಗಬ್ಬು ವಾಸನೆ ಇಲ್ಲಿ ಯಾರೂ ಓಡಾಡದಂತಹ ವಾತಾವರಣ ಅಲ್ಲಿ ನಿರ್ಮಾಣವಾಗಿದೆ.

ಇದು ಖಾಸಗಿ ಬಸ್ ನಿಲ್ದಾಣವಾಗಿದ್ದರೂ ಸರ್ಕಾರಿ ಮತ್ತು ಖಾಸಗಿ ಬಸ್ ಗಳೆರಡಕ್ಕೂ ಏಕೈಕ ಬಸ್ ನಿಲ್ದಾಣ. ಕಟ್ಟಡದ ಮೇಲ್ಛಾವಣಿ ಶೀಟ್ ಗಳಲ್ಲಿ ಪಾಚಿಗಟ್ಟಿ ಮಳೆಗಾಲದಲ್ಲಿ ಸೋರುತ್ತಿದ್ದು, ಒಟ್ಟಾರೆ ಈ ಬಸ್ ನಿಲ್ದಾಣ ಅವ್ಯವಸ್ಥೆಯ ಆಗರ.ಇನ್ನೂ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಅಗತ್ಯವಾಗಿ ಇರಬೇಕಾದ ಸಿಸಿ ಕ್ಯಾಮರಾ ವ್ಯವಸ್ಥೆಯೇ ಇಲ್ಲ.

ಇನ್ನಾದರೂ ಸರ್ಕಾರ, ಸ್ಥಳೀಯ ಆಡಳಿತ ಬಸ್ ನಿಲ್ದಾಣದಲ್ಲಿ ಅಗತ್ಯ ಮೂಲಸೌಕರ್ಯಗಳ ವ್ಯವಸ್ಥೆ ಕಲ್ಪಿಸುವತ್ತ ಗಮನ ಹರಿಸಿ, ಸರ್ಕಾರ ಅಗತ್ಯ ಅನುದಾನ ಬಿಡುಗಡೆ ಮಾಡಬೇಕಿದೆ. ಬಸ್ ನಿಲ್ದಾಣಕ್ಕೆ ಸುಣ್ಣಬಣ್ಣಗಳನ್ನು ಮಾಡಿಸಿ ನಾಮ ಫಲಕಗಳನ್ನು ಅಳವಡಿಸಿ ಬರುವ ಪ್ರಯಾಣಿಕರಿಗೆ ಮಾಹಿತಿ ನೀಡಬೇಕು. ಜನರ ಆರೋಗ್ಯದ ದೃಷ್ಠಿಯಿಂದ ಗಬ್ಬುವಾಸನೆ ಚರಂಡಿಗಳನ್ನು ಸ್ವಚ್ಛಗೊಳಿಸಬೇಕಿದೆ. ಬಸ್ ನಿಲ್ದಾಣದಲ್ಲಿ ಪರಿಸರ ನೈರ್ಮಲ್ಯ ಕಾಪಾಡುವ ಜೊತೆಗೆ ಮೂಲಭೂತ ಸಮಸ್ಯೆ ಸರಿಪಡಿಸಬೇಕಿದೆ.

-- ಕೋಟ್ಸ್--

ಚರಂಡಿಯಲ್ಲಿನ ಕೊಳಚೆಯಿಂದ ಉಂಟಾದ ಕೆಟ್ಟ ವಾಸನೆ ಸುತ್ತಮುತ್ತಲಿನ ವಾತವಾರಣದ ಮೇಲೆ ಪರಿಣಾಮ ಬೀರುತ್ತಿದ್ದು, ಇದರಿಂದ ಜನರ ಆರೋಗ್ಯದ ಮೇಲೂ ಪ್ರಭಾವ ಬೀರುತ್ತಿದೆ. ಕೂಡಲೇ ಸ್ವಚ್ಛ ಮಾಡಲು ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ಬಸ್ ನಿಲ್ದಾಣದ ಸುತ್ತಮುತ್ತಲಿನ ಪರಿಸರ ನೈಮಲ್ಯಕ್ಕೆ ಆದ್ಯತೆ ನೀಡಬೇಕು.

- ಎ.ಎಸ್.ನಯನಾ

ಅಧ್ಯಕ್ಷೆ, ಪೀಕಾರ್ಡ್ ಬ್ಯಾಂಕ್

--

ಬಸ್ ನಿಲ್ದಾಣದ ಸಮಸ್ಯೆ ಇಂದು ನಿನ್ನೆಯದಲ್ಲ. ಹಲವು ವರ್ಷಗಳ ಸಮಸ್ಯೆಯಾಗಿರುವುದರಿಂದ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಅಗತ್ಯ ನಾಮಫಲಕ, ಸುಣ್ಣ ಬಣ್ಣಗಳನ್ನುಮಾಡಿಸಿ, ಕಟ್ಟಡಕ್ಕೆ ಅಗತ್ಯ ಕಾಯಕಲ್ಪ ತುರ್ತಾಗಿ ಮಾಡಬೇಕು. ಸ್ಥಳೀಯ ಆಡಳಿತವಾಗಲೀ, ಸರ್ಕಾರವಾಗಲೀ ಯಾರೇ ಆದರೂ ಮೊದಲು ಪ್ರಯಾಣಿಕರ ಹಿತದೃಷ್ಠಿಯಿಂದ ಅಗತ್ಯ ಮೂಲಸೌಕರ್ಯ ಒದಗಿಸಿಕೊಡಬೇಕು

--ಕೆ.ಎಂ.ರಾಮಣ್ಣ ಕರುವಾನೆ

ಸದಸ್ಯ, ಜಿಲ್ಲಾ ದಸಸಂ ಸಮಿತಿ .

1 ಶ್ರೀ ಚಿತ್ರ 1-ಶೃಂಗೇರಿ ಪಟ್ಟಣದಲ್ಲಿ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿರುವ ಬಸ್ ನಿಲ್ದಾಣ

2 ಶ್ರೀ ಚಿತ್ರ 2-3 ಕೆ.ಎಂ.ರಾಮಣ್ಣ ಕರುವಾನೆ.ಜಿಲ್ಲಾ ದಸಸಂ ಸಮೀತಿ ಸದಸ್ಯರು.