ಶೃಂಗೇರಿ: ಮಳೆ ತಗ್ಗಿದರೂ ನಿಲ್ಲದ ಗಾಳಿ ಆರ್ಭಟ,

| Published : Jul 28 2024, 02:06 AM IST

ಸಾರಾಂಶ

ಶೃಂಗೇರಿ, ತಾಲೂಕಿನಾದ್ಯಂತ ಶುಕ್ರವಾರ ಅಬ್ಬರಿಸಿದ ಪುಷ್ಯ ಮಳೆಯಿಂದಾಗಿ ರಾತ್ರಿ ತುಂಗಾ ನದಿಯಲ್ಲಿ ಪ್ರವಾಹ ಉಂಟಾಗಿ ಗಾಂಧಿ ಮೈದಾನ ಸಂಪೂರ್ಣ ಜಲಾವೃತಗೊಂಡಿತ್ತು. ಮಂಗಳೂರು ಶೃಂಗೇರಿ ರಾಷ್ಟ್ರೀಯ ಹೆದ್ದಾರಿ 169 ರ ನೆಮ್ಮಾರು ಕುರಾದಮನೆ ಬಳಿ ತುಂಗಾ ನದಿ ಪ್ರವಾಹ ರಸ್ತೆಯ ಮೇಲೆ ಹರಿದು ಸಂಪರ್ಕ ಕಡಿತಗೊಂಡಿತ್ತು. ನೆಮ್ಮಾರು ಹೊಳೆಹದ್ದು ಸಂಪರ್ಕ ಕಲ್ಪಿಸುವ ತೂಗು ಸೇತುವೆ ಅರ್ಧ ಮುಳುಗಡೆಯಾದರೆ, ಮಾಣಿ ಬೈಲು ಕಿಗ್ಗಾ ಸಿರಿಮನೆ ಸಂಪರ್ಕ ರಸ್ತೆ ಕಡಿತಗೊಂಡು ಬೆಳಿಗ್ಗೆ ಪ್ರವಾಹ ಇಳಿಮುಖವಾಗಿ ಸಂಚಾರ ಪುನರ್ ಆರಂಭಗೊಂಡಿತು.

ಗಾಂಧಿ ಮೈದಾನ ಸಹಿತ ತಗ್ಗು ಪ್ರದೇಶಗಳು ಜಲಾವೃತ । ಹಲವೆಡೆ ರಸ್ತೆ ಸಂಪರ್ಕ ಕಡಿತ ।ವಿದ್ಯುತ್, ಮೊಬೈಲ್, ಸಂಪರ್ಕ, ಕುಡಿಯುವ ನೀರಿಗೆ ಪರದಾಟ

ಕನ್ನಡಪ್ರಭ ವಾರ್ತೆ, ಶೃಂಗೇರಿ

ತಾಲೂಕಿನಾದ್ಯಂತ ಶುಕ್ರವಾರ ಅಬ್ಬರಿಸಿದ ಪುಷ್ಯ ಮಳೆಯಿಂದಾಗಿ ರಾತ್ರಿ ತುಂಗಾ ನದಿಯಲ್ಲಿ ಪ್ರವಾಹ ಉಂಟಾಗಿ ಗಾಂಧಿ ಮೈದಾನ ಸಂಪೂರ್ಣ ಜಲಾವೃತಗೊಂಡಿತ್ತು. ಮಂಗಳೂರು ಶೃಂಗೇರಿ ರಾಷ್ಟ್ರೀಯ ಹೆದ್ದಾರಿ 169 ರ ನೆಮ್ಮಾರು ಕುರಾದಮನೆ ಬಳಿ ತುಂಗಾ ನದಿ ಪ್ರವಾಹ ರಸ್ತೆಯ ಮೇಲೆ ಹರಿದು ಸಂಪರ್ಕ ಕಡಿತಗೊಂಡಿತ್ತು. ನೆಮ್ಮಾರು ಹೊಳೆಹದ್ದು ಸಂಪರ್ಕ ಕಲ್ಪಿಸುವ ತೂಗು ಸೇತುವೆ ಅರ್ಧ ಮುಳುಗಡೆಯಾದರೆ, ಮಾಣಿ ಬೈಲು ಕಿಗ್ಗಾ ಸಿರಿಮನೆ ಸಂಪರ್ಕ ರಸ್ತೆ ಕಡಿತಗೊಂಡು ಬೆಳಿಗ್ಗೆ ಪ್ರವಾಹ ಇಳಿಮುಖವಾಗಿ ಸಂಚಾರ ಪುನರ್ ಆರಂಭಗೊಂಡಿತು.

ಶೃಂಗೇರಿ ಗಾಂಧಿ ಮೈದಾನದಲ್ಲಿ ಶನಿವಾರ ಬೆಳಿಗ್ಗೆಯೂ ಪ್ರವಾಹ ತುಂಬಿದ್ದು ಅಂಗಡಿ ಮಳಿಗೆಗಳೆಲ್ಲ ಜಲಾವೃತ ವಾಗಿತ್ತು. ಭಾರತೀ ಬೀದಿ ಕೆವಿಆರ್ ವೃತ್ತ ಸಂಪರ್ಕದ ಬೈಪಾಸ್ ರಸ್ತೆಯುದ್ದಕ್ಕೂ ತುಂಗಾ ನದಿ ಪ್ರವಾಹ ತುಂಬಿದ್ದು ರಸ್ತೆ ಸಂಪರ್ಕ ಸಂಪೂರ್ಣ ಸ್ಥಗಿತವಾಗಿತ್ತು. ಶೃಂಗೇರಿ ಗಾಂಧಿ ಮೈದಾನ ಕಲ್ಕಟ್ಟೆ ತೂಗುಸೇತುವೆ ಮಾರ್ಗ ಜಲಾವೃತಗೊಂಡಿದ್ದರಿಂದ ಸಂಪರ್ಕಕ್ಕೆ ಅಡ್ಡಿಯಾಗಿತ್ತು. ಶೃಂಗೇರಿ ವಿದ್ಯಾರಣ್ಯಪುರ ಸಂಪರ್ಕ ರಸ್ತೆ ಮೇಲೆ ತುಂಗೆ ಪ್ರವಾಹ ಉಕ್ಕಿ ಹರಿಯುತ್ತಿದ್ದರಿಂದ ಶನಿವಾರ ಮದ್ಯಾಹ್ನದವರೆಗೂ ಸಂಚಾರ ಬಂದ್ ಆಗಿತ್ತು.

ಶ್ರೀಮಠದ ತುಂಗಾ ನದಿ ತೀರದ ಕಪ್ಪೆಶಂಕರ ದೇವಾಲಯ, ನರಸಿಂಹವನದ ತುಂಗಾ ನದಿ ತೀರದ ಸಂದ್ಯಾವಂದನ ಮಂಟಪ ಹಾಗೂ ತಗ್ಗು ಪ್ರದೇಶಗಳೆಲ್ಲ ಸಂಪೂರ್ಣ ಮುಳುಗಡೆಯಾಗಿತ್ತು. ಅಡಕೆ ತೋಟಗಳು, ಹೊಲಗೆದ್ದೆಗಳು ತುಂಗೆಯ ಪ್ರವಾಹದಲ್ಲಿ ಜಲಾವೃತವಾಗಿ, ಗಾಳಿಗೆ ಮರಗಳು ಧರೆಗುರುಳುತ್ತಿದ್ದು ವಿದ್ಯುತ್ ಕಂಬಗಳು, ಲೈನ್‌ಗಳು ತುಂಡಾಗಿ ಬೀಳುತ್ತಿವೆ. ಶೃಂಗೇರಿ ತ್ಯಾವಣ ಬಳಿ ರಾಷ್ಟ್ರೀಯ ಹೆದ್ದಾರಿ ಬಳಿ ಗುಡ್ಡ ಕುಸಿದು ಮರಗಳು ರಸ್ತೆಗುರುಳಿ ಬಿದ್ದ ಪರಿಣಾಮ ಕೆಲ ಹೊತ್ತು ಸಂಚಾರ ಅಸ್ತವ್ಯಸ್ತಗೊಂಡಿತ್ತು.

ತಾಲೂಕಿನಲ್ಲಿ ಕಳೆದ 7-8 ದಿನಗಳಿಂದ ವಿದ್ಯುತ್‌ ಸ್ಥಗಿತವಾಗಿದ್ದಂತೆ ಶುಕ್ರವಾರವೂ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದೆಲ್ಲೆಡೆ ವಿದ್ಯುತ್‌ ಸ್ಥಗಿತ ಮುಂದುವರೆದಿತ್ತು. ಕೆರೆಕಟ್ಟೆ, ನೆಮ್ಮಾರು, ಕಿಗ್ಗಾ, ಬೇಗಾರು, ಕೂತಗೋಡು, ಧರೆಕೊಪ್ಪ, ಬೇಗಾರು ಪಂಚಾಯಿತಿ ವ್ಯಾಪ್ತಿಯಲ್ಲಿ ವಿದ್ಯುತ್‌ ಸಂಪರ್ಕ ವಿಲ್ಲದೆ, ಕುಡಿಯುವ ನೀರು,ಮೊಬೈಲ್ ಸಂಪರ್ಕ ಸಹಿತ ಅಗತ್ಯ ಕೆಲಸ ಕಾರ್ಯಗಳಿಗೆ ಪರದಾಡುವಂತಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಶೃಂಗೇರಿ ಪಟ್ಟಣದಲ್ಲಿ ಕಳೆದ ಐದು ದಿನಗಳಿಂದ ವಿದ್ಯುತ್‌ ಸಂಪರ್ಕವಿಲ್ಲ. ಶುಕ್ರವಾರವೆಲ್ಲ ಗಾಳಿ ಆರ್ಭಟವಿದ್ದರೆ, ರಾತ್ರಿ ಗುಡುಗು ಸಿಡಿಲಿನ ಆರ್ಭಟವೂ ಇದ್ದು ವಿದ್ಯುತ್ ಇಲ್ಲದೇ ಕಗ್ಗತ್ತಲ ಖಂಡವಾಗಿತ್ತು.

ಮಳೆ ಗಾಳಿಯಿಂದ ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಶೃಂಗೇರಿ ಪಟ್ಟಣದಲ್ಲಿ ,ಶ್ರೀಮಠದಲ್ಲಿ ಪ್ರವಾಸಿಗರ ಸಂಖ್ಯೆ ಸಂಪೂರ್ಣ ವಿರಳವಾಗಿತ್ತು. ಶನಿವಾರ ಬೆಳಿಗ್ಗೆಯಿಂದ ಮಳೆ ಕೊಂಚ ತಗ್ಗಿದ್ದರೂ ಗಾಳಿಯ ಆರ್ಭಟ ಮುಂದುವರೆದಿತ್ತು.ಗಾಂಧಿ ಮೈದಾನ, ಬೇಪಾಸ್‌ ರಸ್ತೆ, ಶೃಂಗೇರಿ ವಿದ್ಯಾರಣ್ಯಪುರ ರಸ್ತೆಯ ಮೇಲೆ ಪ್ರವಾಹದ ನೀರು ಹರಿಯುತ್ತಿತ್ತು.

--

ಜಿಲ್ಲೆಯಲ್ಲಿ ತಗ್ಗಿದ ಮಳೆಯ ಅಬ್ಬರ

ಚಿಕ್ಕಮಗಳೂರು: ಕಳೆದ ಆರೇಳು ದಿನಗಳಿಂದ ಬಿಡುವಿಲ್ಲದೆ ಸುರಿದ ಭಾರೀ ಮಳೆ ಶನಿವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಬಿಡುವು ನೀಡಿತ್ತು.ಕಳಸ, ಶೃಂಗೇರಿ ಹೊರತುಪಡಿಸಿದರೆ ಚಿಕ್ಕಮಗಳೂರು, ಕಡೂರು, ತರೀಕೆರೆ ಸೇರಿದಂತೆ ಮಲೆನಾಡಿನ ಕೆಲವು ತಾಲೂಕು ಗಳಲ್ಲೂ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಬಿಸಿಲಿತ್ತು. ನಂತರ ಮತ್ತೆ ಮೋಡ ಕವಿದ ವಾತಾವರಣ ಆಗಾಗ ಮಳೆ ಬಂದು ಹೋಗುತ್ತಿತ್ತು.

ಶೃಂಗೇರಿ ಪಟ್ಟಣದಲ್ಲಿ ಮಳೆ ತಗ್ಗಿತ್ತಾದರೂ ಕೆರೆಕಟ್ಟೆ, ನೆಮ್ಮಾರ್‌ ಸುತ್ತಮುತ್ತ ಎಂದಿನಂತೆ ಮಳೆ ಬಂದಿತು. ಮಲೆನಾಡಿನಲ್ಲಿ ಮಳೆ ಕಡಿಮೆಯಾಗಿದ್ದರಿಂದ ತುಂಗಾ, ಭದ್ರಾ, ಹೇಮಾವತಿ ನದಿ ಪ್ರವಾಹ ಇಳಿಮುಖವಾಗಿತ್ತು. ಶೃಂಗೇರಿ ಪಟ್ಟಣದ ಗಾಂಧಿ ಮೈದಾನ, ಕೆವಿಆರ್‌ ಬೈಪಾಸ್‌ ರಸ್ತೆಯಲ್ಲಿ ಪ್ರವಾಹ ಕಡಿಮೆಯಾಗಿತ್ತು. ಶೃಂಗೇರಿ- ಮಂಗಳೂರು ರಸ್ತೆ ಸಂಚಾರ ಮುಕ್ತವಾಗಿತ್ತು.ಜಿಲ್ಲೆಯಲ್ಲಿ ಶನಿವಾರ ಮಳೆ ಕಡಿಮೆಯಾಗಿದ್ದರೂ ಕೂಡ ಬಲವಾಗಿ ಗಾಳಿ ಎಂದಿನಂತೆ ಮುಂದುವರೆದಿತ್ತು. ಮರ ಮತ್ತು ವಿದ್ಯುತ್‌ ಕಂಬಗಳು ಬೀಳುತ್ತಿರುವುದು ಮುಂದುವರಿದಿತ್ತು. ಅಯ್ಯನಕೆರೆ ತುಂಬಿ ಕೋಡಿ ಬಿದ್ದಿದೆ, ಮದಗದ ಕೆರೆಯೂ ತುಂಬಿ ಕೋಡಿ ಬಿದ್ದ ಪರಿಣಾಮ ಹಲವು ಅಡಕೆ ತೋಟಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ. ಮಳೆಯಿಂದ ಹಾನಿಯಾದ ಪ್ರದೇಶಕ್ಕೆ ಚಿಕ್ಕಮಗಳೂರು ಕ್ಷೇತ್ರದ ಶಾಸಕ ಎಚ್‌.ಡಿ. ತಮ್ಮಯ್ಯ ಭೇಟಿ ನೀಡಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್‌ ಭಾನುವಾರ ಭೇಟಿ ನೀಡಲಿದ್ದಾರೆ.27 ಶ್ರೀ ಚಿತ್ರ 1-ಶೃಂಗೇರಿ ಪಟ್ಟಣದ ಗಾಂಧಿ ಮೈದಾನದಲ್ಲಿ ಶನಿವಾರ ಬೆಳಗ್ಗೆಯಿಂದ ತುಂಗಾ ನದಿಯ ಪ್ರವಾಹ ತುಂಬಿರುವುದು.

27 ಶ್ರೀ ಚಿತ್ರ 2-ಶೃಂಗೇರಿ ‍ವಿದ್ಯಾರಣ್ಯಪುರ ರಸ್ತೆ ಮೇಲೆ ತುಂಗಾ ನದಿ ಪ್ರವಾಹದಿಂದ ಶನಿವಾರವೂ ಸಂಪರ್ಕ ಕಡಿತಗೊಂಡಿರುವುದು.