ಫಲಿತಾಂಶವನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯ, ಚುನಾವಣಾ ಆಯೋಗಕ್ಕೆ ಸಲ್ಲಿಕೆ । ಬಿಜೆಪಿ ಅಭ್ಯರ್ಥಿ ಡಿ.ಎನ್‌. ಜೀವರಾಜ್‌ ಇದೀಗ 52 ಮತಗಳ ಮುನ್ನಡೆ

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ 2023ರಲ್ಲಿ ಹಾಲಿ ಕಾಂಗ್ರೆಸ್‌ ಶಾಸಕ ಟಿ.ಡಿ.ರಾಜೇಗೌಡ ಪಡೆದ ಮತಗಳ ಪೈಕಿ ಬರೋಬ್ಬರಿ 255 ಮತ ಅಸಿಂಧು ಎಂದು ಪರಿಗಣಿಸಲಾಗಿದೆ. ಹೀಗಾಗಿ, ಪರಾಜಿತ ಬಿಜೆಪಿ ಅಭ್ಯರ್ಥಿ ಡಿ.ಎನ್‌. ಜೀವರಾಜ್‌ ಇದೀಗ 52 ಮತಗಳ ಮುನ್ನಡೆ ಸಾಧಿಸಲಾಗಿದೆ.

ಹೈಕೋರ್ಟ್‌ ಆದೇಶದ ಮೇರೆಗೆ ಅಂಚೆ ಮತ ಪತ್ರಗಳ ಮರು ಎಣಿಕೆ ಕಾರ್ಯ ನಡೆಸಿದ ಹಿನ್ನೆಲೆಯಲ್ಲಿ ಜಿಲ್ಲಾ ಚುನಾವಣಾಧಿ ಕಾರಿಗಳು ಫಲಿತಾಂಶವನ್ನು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಮತ್ತು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಕಾರಣ ಅಧಿಕೃತವಾಗಿ ಫಲಿತಾಂಶ ಪ್ರಕಟಿಸಿಲ್ಲ.

ಎಣಿಕೆ ಕಾರ್ಯದ ಶುರುನಿಂದ ಅಂತ್ಯದವರೆಗೂ ಹಲವು ಗೊಂದಲ, ಹೈಡ್ರಾಮಕ್ಕೆ ಮಾತ್ರ ಶೃಂಗೇರಿ ವಿಧಾನಸಭಾ ಕ್ಷೇತ್ರ ಅಂಚೆ ಮತ ಮರು ಎಣಿಕೆ ಸಾಕ್ಷಿ ಆಯಿತು.


ಟಿ.ಡಿ,ರಾಜೇಗೌಡ 2023ರ ಮತ ಎಣಿಕೆ ವೇಳೆ ಇವಿಎಂ ಮತಗಳ ಪೈಕಿ 324 ಮತದ ಮುನ್ನಡೆ ಸಾಧಿಸಿದ್ದರು. ಆದರೆ, ಅಂಚೆ ಮತ ಪತ್ರದಲ್ಲಿ ಜೀವರಾಜ್‌ಗಿಂತ 123 ಹಿನ್ನೆಡೆ ಉಂಟಾಗಿದ್ದರೂ ಒಟ್ಟಾರೆ 201 ಮತದಿಂದ ಗೆಲುವು ಸಾಧಿಸಿದ್ದರು.

ಅಂಚೆ ಮತ ಪತ್ರದ ಎಣಿಕೆ ಪ್ರಶ್ನಿಸಿ ಜೀವರಾಜ್‌ ನ್ಯಾಯಾಲಯದ ಮೊರೆ ಹೋಗಿದ್ದರು. ಅಂತಿಮವಾಗಿ ನ್ಯಾಯಾಲಯ ಏ.6 ರಂದು ಅಂಚೆ ಮತ ಮರು ಎಣಿಕೆಗೆ ಆದೇಶಿಸಿತ್ತು. ಅದರಂತೆ ಶನಿವಾರ ನಡೆಸಲಾದ ಮರು ಎಣಿಕೆಯಲ್ಲಿ ಜೀವರಾಜ್‌ 690, ರಾಜೇಗೌಡ 314 ಅಂಚೆ ಮತ ಮಾತ್ರ ಪಡೆದುಕೊಂಡಿದ್ದಾರೆ.

2023ರಲ್ಲಿ ಪಡೆದ ಮತಗಳಿಗೆ ಹೋಲಿಸಿದರೆ, ಜೀವರಾಜ್‌ಗೆ 2 ಮತ ಕಡಿಮೆ ಆಗಿವೆ, ರಾಜೇಗೌಡರಿಗೆ ಬರೋಬ್ಬರಿ 255 ಮತ ಕಡಿಮೆ ಆಗಿದೆ. 2023ರಲ್ಲಿ ಪಡೆದ ಅಂಚೆ ಮತ 255 ಮತ ಮರು ಎಣಿಕೆಯಲ್ಲಿ ಅಸಿಂಧು ಎಂದು ಪರಿಗಣಿಸಿರುವುದು ರಾಜೇಗೌಡ ಹಿನ್ನಡೆಗೆ ಮುಖ್ಯ ಕಾರಣ. ಆಗ ಸಿಂಧು ಎಂದು ಪರಿಗಣಿಸಿದ ಮತ ಪತ್ರದಲ್ಲಿ ಇದೀಗ ರಾಜೇಗೌಡ ಸೇರಿದಂತೆ ಮತ್ತೊಬ್ಬ ಅಭ್ಯರ್ಥಿಗೆ ಮತ ಚಲಾವಣೆ ಆಗಿದೆ. ಇಬ್ಬರು ಅದಕ್ಕಿಂತ ಹೆಚ್ಚಿನ ಅಭ್ಯರ್ಥಿಗೆ ಮತ ಚಲಾವಣೆ ಆಗಿರುವುದರಿಂದ ಆ ಮತವನ್ನು ಅಸಿಂಧು ಎಂದು ಪರಿಗಣಿಸಲಾಗಿದೆ. ಹೀಗಾಗಿ, ರಾಜೇಗೌಡ ಅವರಿಗೆ 255 ಮತ ಕಡಿಮೆ ಆಗಿದೆ.

ಶನಿವಾರ 7.30ರ ಬೆಳಗ್ಗೆ ಸ್ಟ್ರಾಂಗ್‌ ರೂಂನಿಂದ ಮತಪತ್ರ ತೆರಲು ಹೋದಾಗಲೇ ಮತಪತ್ರ ಸಂಗ್ರಹಿಸಿದ್ದ ಬಾಕ್ಸ್‌ಗಳ ಬೀಗ ಮುರಿಯಲಾಗಿದೆ ಎಂಬ ಆರೋಪದೊಂದಿಗೆ ಶುರುವಾದ ಗೊಂದಲ ಎಣಿಕಾ ಕಾರ್ಯ ಮುಕ್ತಾಯದವರೆಗೂ ಮುಂದುವರಿಯಿತು.

ಮತ ವ್ಯತ್ಯಾಸದ ಕುರಿತು ವರದಿ

ಎಣಿಕೆ ಪ್ರಕ್ರಿಯೆ ಮುಗಿದ ಬಳಿಕ ಮಾಹಿತಿ ನೀಡಿದ ಚುನಾವಣಾಧಿಕಾರಿ ಗೌರವ ಕುಮಾರ್‌ ಶೆಟ್ಟಿ, ‘2023ರ ಮತ ಎಣಿಕೆ ವೇಳೆ ಚಲಾವಣೆಯಾಗಿದ್ದ 1,822 ಅಂಚೆ ಮತಗಳ ಪೈಕಿ ಬಿಜೆಪಿ ಅಭ್ಯರ್ಥಿ ಜೀವರಾಜ್ ಅವರಿಗೆ 692 ಮತಗಳು, ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಅವರಿಗೆ 569 ಮತಗಳು ಲಭಿಸಿದ್ದವು. ಆದರೆ, ಶನಿವಾರ ನಡೆದ ಪರಿಶೀಲನೆ ಮತ್ತು ಮರು ಎಣಿಕೆ ಬಳಿಕ ಜೀವರಾಜ್ ಅವರ ಮತಗಳು 690 ಆಗಿದ್ದರೆ. ರಾಜೇಗೌಡ ಅವರ ಮತಗಳು 314ಕ್ಕೆ ಇಳಿದಿವೆ. ರಾಜೇಗೌಡ ಅವರಿಗೆ 255 ಮತಗಳು ಕಡಿಮೆಯಾಗಿದೆ ಎಂದು ಹೇಳಿದರು.ಹೈಕೋರ್ಟ್‌ ನಿರ್ದೇಶನದಂತೆ ಪರಿಶೀಲನೆ ಮತ್ತು ಮರುಎಣಿಕೆ ಪ್ರಕ್ರಿಯೆ ನಡೆಸಿ ಮತಪತ್ರಗಳನ್ನು ಮತ್ತೆ ಸ್ಟ್ರಾಂಗ್ ರೂಮಿ ನಲ್ಲಿ ಇರಿಸಿ ಸೀಲ್ ಮಾಡಲಾಗಿದೆ. ಮರು ಎಣಿಕೆ ನಂತರ ಕಂಡು ಬಂದ ಮತ ವ್ಯತ್ಯಾಸದ ಕುರಿತು ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಲಾಗಿದೆ ಎಂದು ವಿವರಿಸಿದರು.

--ಕೋಟ್‌---ಹೈಕೋರ್ಟ್ ಸೂಚನೆಯಂತೆ ಅಂಚೆ ಮತ ಪತ್ರ ಮರು ಎಣಿಕೆ ಮಾಡಲಾಗಿದೆ. ಇವಿಎಂ ಮತ್ತು ಅಂಚೆ ಮತ ಎರಡನ್ನೂ ಕೂಡಿಸಿ ಫಲಿತಾಂಶ ಪ್ರಕಟಿಸಬೇಕಿದೆ. ಆದರೆ, ಈಗ ಅಂಚೆ‌ ಮತ ಮಾತ್ರ ಮರು ಎಣಿಕೆ ಮಾಡಲಾಗಿದೆ. ಹೀಗಾಗಿ, ಫಲಿತಾಂಶ ಪ್ರಕಟಿಸಲು ಅವಕಾಶವಿಲ್ಲ. ಎಲ್ಲವನ್ನೂ ಚುನಾವಣೆ ಆಯೋಗಕ್ಕೆ ಮತ್ತೆ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡುತ್ತೇನೆ.- ಗೌರವ್ ಕುಮಾರ್ ಶೆಟ್ಟಿ, ಚುನಾವಣಾಧಿಕಾರಿ

----ಕೋಟ್‌---

ಸ್ಟ್ರಾಂಗ್‌ ರೂಂನಿಂದಲೇ ಹಲವು ಗೊಂದಲ ಶುರುವಾಗಿದೆ. ಯಾಕೆ ಸ್ಟ್ರಾಂಗ್‌ ರೂಂ ಆ ರೀತಿ ನಿರ್ವಹಣೆ ಮಾಡಲಾಗಿದೆ ಎಂದು ಗೊತ್ತಿಲ್ಲ. ತಿರಸ್ಕೃತ ಮತ ಪರಿಶೀಲನೆ ಹಾಗೂ ಮರು ಎಣಿಕೆಯಲ್ಲಿ ಬಹುಮತ ಸಿಕ್ಕಿದೆ. ಚುನಾವಣಾಧಿಕಾರಿ ಫಲಿತಾಂಶ ಘೋಷಣೆ ಮಾಡಿ ಪ್ರಮಾಣ ಪತ್ರ ನೀಡುತ್ತಾರೆ ಎಂದು ನಿರೀಕ್ಷೆ ಮಾಡಿದ್ದೆ. ಆದರೆ, ಪ್ರಮಾಣಪತ್ರ ನೀಡಿಲ್ಲ. ಅಧಿಕಾರಿಗಳು ಏನು ಕ್ರಮ ಕೈಗೊಳ್ಳುತ್ತಾರೆ ಎಂಬುದು ಗೊತ್ತಿಲ್ಲ, ಕಾಯುತ್ತೇನೆ. ನನ್ನ ಹೋರಾಟಕ್ಕೆ ಗೆಲುವು ಸಿಕ್ಕಿದೆ. ಸೋಲು ಉಂಟಾದ ತಕ್ಷಣ ಟ್ಯಾಂಪರಿಂಗ್‌ ಆಗಿದೆ ಎನ್ನುವುದು, ಗೆಲುವು ಸಿಕ್ಕಾಗ ಜನಾಭಿಪ್ರಾಯ, ಸಂವಿಧಾನದ ಗೆಲುವು ಎನ್ನುವುದು ಸರಿಯಲ್ಲ.

- ಜೀವರಾಜ್‌, ಬಿಜೆಪಿ ಅಭ್ಯರ್ಥಿ

--ಕೋಟ್‌--

ಸ್ಟ್ರಾಂಗ್‌ ರೂಂ ವ್ಯವಸ್ಥೆ ನೋಡಿದ ತಕ್ಷಣ ಮತ ಟ್ಯಾಂಪರಿಂಗ್‌ ಆಗಿದೆ ಎಂದು ಮತ ಎಣಿಕೆ ಆರಂಭಕ್ಕೂ ಮುನ್ನವೇ ಹೇಳಿದ್ದೇವು. 2023ರಲ್ಲಿ ಸಿಂಧು ಆಗಿದ್ದ ನನಗೆ ಚಲಾವಣೆಯಾಗಿದ್ದ ಮತ ಪತ್ರಗಳ ಮೇಲೆ ಹೆಚ್ಚುವರಿ ಗುರುತುಗಳು ಕಾಣಿಸಿವೆ. ಬೇರೆಯವರ ಹೆಸರಿನ ಮುಂದೆ ಕೂಡ ಗೆರೆ ಎಳೆಯಲಾಗಿದೆ. ಇದು ಹೇಗೆ ಆಗಿದೆ ಎಂಬುದು ಗೊತ್ತಿಲ್ಲ. ಬೇರೆ ಪೆನ್‌ ಸಹ ಬಳಕೆ ಆಗಿರುವುದು ಮತ ಪತ್ರದಲ್ಲಿ ಕಾಣುತ್ತಿದೆ. ಸೀಲ್‌ ಕಿತ್ತು ಬಿದ್ದಿದೆ. ಜೀವರಾಜ್‌ ಹಾಗೂ ಅವರಿಗೆ ಬೆಂಬಲ ನೀಡಿದವರ ವಿರುದ್ಧ ಮತಗಳ ಟ್ಯಾಂಪರಿಂಗ್‌ ದೂರು ದಾಖಲಿಸುತ್ತೇನೆ. 2023ರ ಮತ ಎಣಿಕೆ ವೇಳೆ ಎಲ್ಲ ಪಕ್ಷಗಳ ಏಜೆಂಟ್‌ಗಳ ಸಮ್ಮುಖದಲ್ಲಿ ಈ ಮತಪತ್ರಗಳನ್ನು ಸಿಂಧು ಎಂದು ಪರಿಗಣಿಸಲಾಗಿತ್ತು. ಈಗ ಅದೇ ಮತಗಳನ್ನು ಅಸಿಂಧು ಎಂದು ಘೋಷಿಸಲಾಗಿದೆ.

- ಟಿ.ಡಿ,ರಾಜೇಗೌಡ, ಹಾಲಿ ಕಾಂಗ್ರೆಸ್‌ ಶಾಸಕ,

---ಕೋಟ್‌--

2023ರ ಮತ ಎಣಿಕೆ ವೇಳೆ ಆಗಿನ ಚುನಾವಣಾಧಿಕಾರಿ ಎಲ್ಲ ಪಕ್ಷಗಳ ಏಜೆಂಟ್‌ಗಳ ಸಮ್ಮುಖದಲ್ಲೇ ಅಂಚೆ ಮತಗಳನ್ನು ಎಣಿಸಿದ್ದರು. ಆದರೆ, ಈಗ ರಾಜೇಗೌಡ ಅವರಿಗೆ ಬಂದ ಮತಪತ್ರಗಳ ಕಟ್ಟುಗಳಷ್ಟೇ ಅಮಾನ್ಯ ಎಂದು ಪರಿಗಣಿಸಲಾಗಿದೆ. 2023ರ ಎಣಿಕೆಯಲ್ಲಿ ಇವೆಲ್ಲವೂ ಮಾನ್ಯ ಮತಗಳಾಗಿದ್ದವು. ಈಗ ಮತಪತ್ರಗಳಲ್ಲಿ ಮತ್ತೊಬ್ಬ ಅಭ್ಯರ್ಥಿಗೂ ಗೆರೆ ಎಳೆ ದಿರುವುದು ಕಾಣಿಸುತ್ತಿವೆ. ನಮ್ಮ ಕಣ್ಣುಗಳನ್ನು ನಾವೇ ನಂಬದ ಸ್ಥಿತಿ ಎದುರಾಗಿದೆ.

- ಸುಧೀರ್‌ಕುಮಾರ್ ಮುರೊಳ್ಳಿ, ವಕೀಲರು ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ಬೂತ್‌ ಏಜೆಂಟ್‌

-- ಬಾಕ್ಸ್‌ --

ಬರೋಬ್ಬರಿ 16 ತಾಸು ಮತ ಎಣಿಕೆಹೈಕೋರ್ಟ್‌ ಆದೇಶದಂತೆ ಮೇ 2ರ ಶನಿವಾರ ಜಿಲ್ಲಾ ಚುನಾವಣಾಧಿಕಾರಿ ಶೃಂಗೇರಿ ವಿಧಾನಸಭಾ ಕ್ಷೇತ್ರದ 1,822 ಅಂಚೆ ಮತ ಪತ್ರ ಪರಿಶೀಲನೆ ಮತ್ತು ಮರು ಎಣಿಕೆ ನಡೆಸಿದರು. ಶನಿವಾರ ಬೆಳಗ್ಗೆ 7.30ಕ್ಕೆ ಸ್ಟ್ರಾಂಗ್‌ ರೂಂ ಒಪನ್‌ ಮಾಡಿ, 8.30ರ ಸುಮಾರಿಗೆ ಎಣಿಕಾ ಕೇಂದ್ರಕ್ಕೆ ಮತ ಪತ್ರ ತರಲಾಯಿತು. 9 ಕ್ಕೆ ಮತ ಎಣಿಕೆ ಆರಂಭವಾಯಿತು. ನಿರಂತರವಾಗಿ ಶನಿವಾರ ತಡರಾತ್ರಿ 1.30ರ ಸುಮಾರಿಗೆ ಎಣಿಕಾ ಕಾರ್ಯ ಮುಕ್ತಾಯವಾಗಿ, ರಾತ್ರಿ 2 ಗಂಟೆ ಸುಮಾರಿಗೆ ಅಂಚೆ ಮತಪತ್ರಗಳನ್ನು ಸ್ಟ್ರಾಂಗ್‌ ರೂಂಗೆ ಸೇರಿಸಲಾಯಿತು.

-- ಬಾಕ್ಸ್‌ --ಅಂಚೆ ಮತದ ವಿವರ

ಅಭ್ಯರ್ಥಿ2023ಮರು ಎಣಿಕೆವ್ಯತ್ಯಾಸಜೀವರಾಜ್‌69269002 (ಕಡಿಮೆ)ರಾಜೇಗೌಡ569314255 (ಕಡಿಮೆ)

-- ಬಾಕ್ಸ್‌ --

279 ತಿರಸ್ಕೃತ ಅಂಚೆ ಮತ ಪೈಕಿ 12 ನಾಪತ್ತೆ

ಕೋರ್ಟ್‌ ತಿರಸ್ಕೃತ ಪುನರ್‌ ಪರಿಶೀಲನೆ ಮಾಡಿ, ಮಾನ್ಯಗೊಂಡ 1,543 ಮತಗಳ ಮರು ಎಣಿಕೆ ಮಾಡಿ ಎಂದು ಸೂಚಿಸಿತ್ತು. ತಿರಸ್ಕೃತಗೊಂಡ 279 ಮತಗಳಲ್ಲಿ 12 ಮತ ಲಭ್ಯವಾಗಿಲ್ಲ. ಸಿಬ್ಬಂದಿ ಸಾಕಷ್ಟು ಹುಡುಕಾಟ ನಡೆಸಿದರೂ ಸಿಕ್ಕಿಲ್ಲ. ಆ 12 ಮತ ಎಲ್ಲಿ ಹೋಗಿವೆ ಎಂಬುದು ಅಧಿಕಾರಿಗಳಿಗೆ ಯಕ್ಷ ಪ್ರಶ್ನೆಯಾಗಿದೆ. ಕೇವಲ 267 ತಿರಸ್ಕೃತ ಮತ ಸಿಕ್ಕಿವೆ. ಉಳಿದಂತೆ 1,543 ಮತ ಮರು ಎಣಿಕೆ ಮಾಡಲಾಗಿದೆ ಎಂದು ಗೌರವ್‌ ಕುಮಾರ್ ಶೆಟ್ಟಿ ಮಾಹಿತಿ ನೀಡಿದ್ದಾರೆ.ಅಂಕಿ ಅಂಶ

ಒಟ್ಟು ಅಂಚೆ ಮತ 1,822

ತಿರಸ್ಕೃತ ಮತ ಸಂಖ್ಯೆ: 267

--

ಫೋಟೋ

ಬಿಜೆಪಿಯ ಕಾರ್ಯಕರ್ತರು ತಡ ರಾತ್ರಿ ಜೀವರಾಜ್‌ ಮುನ್ನೆಡೆ ಗಳಿಸಿದ್ದಾರೆ ಎಂಬ ವಿಷಯ ತಿಳಿಯುತ್ತಿದ್ದಂತೆ ಭರ್ಜರಿ ಸಂಭ್ರಮಾಚರಣೆ ನಡೆಸಿದರು.