ಸಾರಾಂಶ
- ಶ್ರೀ ಮಠದಲ್ಲಿ ಆಯುಧಪೂಜೆ, ವಿಜಯದಶಮಿ,ಶಮೀಪೂಜೆ, ಶತಚಂಡೀಯಾಗದ ಪೂರ್ಣಾಹುತಿ,
- ಶುಕ್ರವಾರ ಶಾರದಾಂಬಾ ಮಹಾರಥೋತ್ಸವ, ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ.ಕನ್ನಡಪ್ರಭ ವಾರ್ತೆ, ಶೃಂಗೇರಿ
ಶ್ರೀ ಶಾರದಾಪೀಠದಲ್ಲಿ ವಿಜೃಂಭಣೆಯಿಂದ ನಡೆಯುತ್ತಿರುವ ಶರನ್ನವರಾತ್ರಿ ಮಹೋತ್ಸವದಲ್ಲಿ ಬುಧವಾರ ಶಾರದೆಗೆ ಚಾಮುಂಡಿ ಅಲಂಕಾರ ಮಾಡಿ ಪೂಜಿಸಲಾಯಿತು.ಶಾರದಾಂಬೆ ಸಿಂಹವಾಹನವನ್ನೇರಿ ಕೈಯಲ್ಲಿ ತ್ರಿಶೂಲ ಧರಿಸಿ ಚಂಡಮುಂಡಾದಿ ದುಷ್ಟದೈತ್ಯರನ್ನು ಸಂಹರಿಸಿ ಶಿಷ್ಟರಕ್ಷಕಿ ಯಾಗಿ ಭಕ್ತರನ್ನು ಅನುಗ್ರಹಿಸುತ್ತಿರುವ ಚಾಮುಂಡಿ ಅಲಂಕಾರ ಮಾಡಿದ ದೇವಿಗೆ ಜಗದ್ಗುರುಗಳು ನವರಾತ್ರಿಯ ವಿಶೇಷ ಪೂಜೆ ಸಲ್ಲಿಸಿದರು. ವರಹಾ, ವಾಮನ ಪುರಾಣ, ಪದ್ಮಪುರಾಣ, ಬ್ರಹ್ಮಾಂಡ ಪುರಾಣ,ಶ್ರೀ ವಿದ್ಯಾರಣ್ಯವ ತಂತ್ರ ಮೊದಲಾದ ಹಲವು ಆಕರಗಳಲ್ಲಿ ದೇವಿ ಚಾಮುಂಡಿ ವರ್ಣನೆಯಿದೆ. ದರ್ಬಾರಿನಲ್ಲಿ ದೇವಿ ಕಾಣಿಕೆ, ಶಾರದೆಗೆ ಪೂಜೆ ಸಲ್ಲುತ್ತದೆ.
ಆಯುಧಪೂಜೆ, ಗಜಾಶ್ವಪೂಜೆ:ಆಯುಧಪೂಜೆ ಅಂಗವಾಗಿ ಶ್ರೀ ಮಠದ ನರಸಿಂಹವನದಲ್ಲಿ ಶ್ರೀಮಠದ ವಾಹನಗಳಿಗೆ ಪೂಜೆ ನೆರವೇರಿತು. ಗಜಶಾಲೆಯಲ್ಲಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರು ಶ್ರೀ ಮಠದ ಆನೆಗಳಿಗೆ,ಅಶ್ವಗಳಿಗೆ ಪೂಜೆ ಸಲ್ಲಿಸಿದರು.ಶ್ರೀ ಮಠದ ಆವರಣದಲ್ಲಿರುವ ಎಲ್ಲಾ ದೋವಾಲಯಗಳಿಗೆ ತೆರಳಿ ನವರಾತ್ರಿಯ ವಿಶೇಷ ಪೂಜೆ ನೆರವೇರಿಸಿದರು.ನವರಾತ್ರಿಯ ಅಂಗವಾಗಿ ಶ್ರೀ ಮಠದ ಯಾಗಶಾಲೆಯಲ್ಲಿ ನಡೆಯುತ್ತಿದ್ದ ಶತಚಂಡೀ ಯಾಗದ ಪೂರ್ಣಾಹುತಿ ಜಗದ್ಗುರುಗಳ ದಿವ್ಯ ಸಾನಿದ್ಯದಲ್ಲಿ ನಡೆಯಿತು.
ಸಂಜೆಯ ಬೀದಿ ಉತ್ಸವದಲ್ಲಿ ಕೆರೆ ಪಂಚಾಯಿತಿ ವ್ಯಾಪ್ತಿಯ ಭಕ್ತಾದಿಗಳೊಂದಿಗೆ ವಿವಿಧ ಸಂಘ ಸಂಸ್ಥೆಗಳು,ಭಜನಾ ತಂಡಗಳು, ಜಾನಪದ ಕಲಾತಂಡಗಳು, ಸ್ತಬ್ದ ಚಿತ್ರಗಳು ಪಾಲ್ಗೊಂಡಿದ್ದವು. ನವರಾತ್ರಿ ಆರಂಭದಿಂದ ಶ್ರೀಮಠದ ಪ್ರವಚನ ಮಂದಿರದಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಮಹೋತ್ಸವದಲ್ಲಿ ಬುಧವಾರ ಬೆಂಗಳೂರಿನ ವಿದ್ವಾನ್ ಶ್ರೀ ಮಧುಸೂದನ್ ಭಾಗವತರ್ ತಂಡದಿಂದ ಹಾಡುಗಾರಿಕೆ ನಡೆಯಿತು.ನವರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ಸಂಪನ್ನಗೊಂಡಿತು.ವಿಜಯದಶಮಿ,ಶಮೀ ಪೂಜೆ ಸಂಭ್ರಮ:
ವಿಜಯದಶಮಿ ದಿನವಾದ ಗುರುವಾರ ಶಾರದೆಗೆ ಗಜಲಕ್ಷ್ಮಿ ಅಲಂಕಾರ ಮಾಡಲಾಗಿತ್ತು. ವಜ್ರಾಯುಧ ಧರಿಸಿ ದೇವೇಂದ್ರನ ಪಟ್ಟಮಹಿಷಿಯಾಗಿ ಐರಾವತವನ್ನೇರಿ ಕಂಗಳೊಳಿಸುತ್ತಿದ್ದ ಶಾರದೆ ಅಲಂಕಾರ ನಯನ ಮನೋಹರವಾಗಿತ್ತು. ಬೆಳಿಗ್ಗೆ ಶ್ರೀ ಶಾರದಾಂಬೆ ಸನ್ನಿದಿಯಲ್ಲಿ ಜಗದ್ಗುರುಗಳು ವಿಶೇಷ ಪೂಜೆ, ಮಹಾಮಂಗಳಾರತಿ ನೆರವೇರಿಸಿದರು. ಶ್ರೀಮಠದ ಆವರಣದ ಎಲ್ಲಾ ದೇವಾಲಯಗಳಿಗೂ ತೆರಳಿ ಪೂಜೆ ಸಲ್ಲಿಸಿದರು.ವಿಜಯಯೋತ್ಸವ ಹಾಗೂ ಶಮೀಪೂಜೆ ನಡೆಯಿತು. ಮಧ್ಯಾಹ್ನ ಭವ್ಯ ಮೆರವಣಿಗೆಯಲ್ಲಿ ಅಮ್ಮನವರ ಉತ್ಸವ ಪಟ್ಟಣ ದಲ್ಲಿರುವ ಶ್ರೀ ಕಾಳಿಕಾಂಬಾ ದೇವಸ್ಥಾನಕ್ಕೆ ಸಾಗಿತು. ಅಲ್ಲಿ ಕಾಳಿಕಾಂಬೆ ಸನ್ನಿದಿಯಲ್ಲಿ ದೇವಿಗೆ ವಿಶೇಷ ಪೂಜೆ ನೆರವೇರಿತು. ಬನ್ನಿ ಪೂಜೆ,ಬನ್ನಿ ಪತ್ರೆಯಿಂದ ಉತ್ಸವ ಮೂರ್ತಿಗೂ, ಕಾಳಿಕಾಂಬೆಗೂ ವಿಶೇಷ ಪೂಜೆ, ಮಹಾಮಂಗಳಾರತಿ ನೆರವೇರಿತು. ರಾಮಪಟ್ಟಾಭಿಷೇಕ ಸರ್ಗಪಾರಾಯಣ ಪಠಣ ನಡೆಯಿತು.ನವರಾತ್ರಿ ಪಾರಾಯಣ ನಡೆಯಿತು.
ಶರನ್ನವರಾತ್ರಿ ಕೊನೆ ದಿನದ ದಿಂಡೀ ದೀಪಾರಾಧನೆ, ಸ್ವರ್ಣ ರಥೋತ್ಸವ ,ಜಗದ್ಗುರುಗಳ ನವರಾತ್ರಿಯ ರಾತ್ರಿ ದರ್ಬಾರ್ ಉತ್ಸವ ನಡೆಯಿತು. ಸ್ವರ್ಣ ರಥೋತ್ಸವದ ನಂತರ ಶಾರದೆ ಸನ್ನಿದಿಯಲ್ಲಿ ಸಪ್ತಶತಿ ಪಾರಾಯಣ, ಋಗ್ವೇದ ಪಾರಾಯಣ, ಯಜುರ್ವೇದ ಪಾರಾಯಣ, ಸಾಮವೇದ ಪಾರಾಯಣ,ಅಥರ್ವಣವೇದ ಪಾರಾಯಣ ಪಠಿಸಲಾಯಿತು. ಪಂಚಾಂಗ ಶ್ರವಣ ಪಠಣ, ಸರ್ವವಾದ್ಯ ಸೇವೆ ನಡೆಯಿತು. ರಾಜಬೀದಿ ಉತ್ಸವದಲ್ಲಿ ಸಮಸ್ತ ಭಕ್ತಾದಿಗಳು, ಭಜನಾ ತಂಡಗಳು,ಜಾನಪದ ಕಲಾತಂಡಗಳು ಪಾಲ್ಗೊಂಡಿದ್ದವು.ಇದರೊಂದಿಗೆ ನವರಾತ್ರಿ ರಾಜಬೀದಿ ಉತ್ಸವ ಕೊನೆಗೊಂಡಿತು.ಇಂದು ಮಹಾರಥೋತ್ಸವ,ಅಡ್ಡಪಲ್ಲಕ್ಕಿ ಉತ್ಸವಶ್ರೀ ಶಾರದಾಂಬೆಗೆ ಮಹಾಭಿಷೇಕದೊಂದಿಗೆ ಆರಂಭಗೊಂಡ ಶರನ್ನವರಾತ್ರಿ ಮಹೋತ್ಸವದ ಕೊನೆ ದಿನವಾದ ಅ.3 ರ ಶುಕ್ರವಾರ ಶಾರದಾಂಬಾ ಮಹೋತ್ಸವ ನಡೆಯಲಿದೆ.
ಬೆಳಿಗ್ಗೆ ರಥಬೀದಿಯಲ್ಲಿ ಶ್ರೀ ಶಾರದಾಂಬಾ ಮಹಾರೋತ್ಸವದೊಂದಿಗೆ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ನಡೆಯಲಿದೆ. ರಥೋತ್ಸವದ ನಂತರ ಶ್ರೀ ಶಾರದಾಂಬೆ ಸನ್ನಿದಿಯಲ್ಲಿ ಶ್ರೀ ಶಾರದಾಂಬೆಗೆ ವಿಶೇಷ ಪೂಜೆ, ಮಹಾಮಂಗಳಾರತಿ ನಡೆಯಲಿದೆ. ಜಗದ್ಗುರುಗಳ ಹಗಲು ದರ್ಬಾರ್ ನಡೆಯುತ್ತದೆ. ನವರಾತ್ರಿಯ ಹಗಲು ದರ್ಬಾರ್ ನಡೆಯುವ ಏಕೈಕ ದಿನ ವಿದು.ಇಂದಿನ ಮಹಾರಥೋತ್ಸವದೊಂದಿಗೆ ನವರಾತ್ರಿ 9 ದಿನಗಳ ವಿಜೃಂಭಣೆ ಕಾರ್ಯಕ್ರಮಕ್ಕೆ ತೆರೆ ಬೀಳುತ್ತದೆ. ಹುಣ್ಣಿಮೆವರೆಗೆ ಶಾರದೆ ಮತ್ತೆ 3ದಿನಗಳ ಕಾಲ ಇಂದ್ರಾಣಿ, ಕಾಂಮಧೇನು, ಭುವನೇಶ್ವರಿಯಾಗಿ ಪೂಜಿಸಲ್ಪಡುತ್ತಾಳೆ.ಭೂಮಿ ಹುಣ್ಣಿಮೆಯಂದು ಶಾರದಾಂಬೆಗೆ ಮತ್ತೆ ಮಹಾಭಿಷೇಕ ನಡೆಯುತ್ತದೆ. ರಾತ್ರಿ ರಾಜಬೀದಿ ಉತ್ಸವ,ತುಂಗಾನದಿಯಲ್ಲಿ ಶಾರಾ ತೆಪ್ಪೋತ್ಸವದೊಂದಿಗೆ ನವರಾತ್ರಿ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಳ್ಳುತ್ತದೆ.2 ಶ್ರೀ ಚಿತ್ರ 1-
ಶೃಂಗೇರಿ ಶಾರದೆಗೆ ಚಾಮುಂಡಿ ಅಲಂಕಾರ ಮಾಡಲಾಗಿತ್ತು.2 ಶ್ರೀ ಚಿತ್ರ 2-
ಶೃಂಗೇರಿ ಶ್ರೀಮಠದ ಯಾಗಶಾಲೆಯಲ್ಲಿ ಶತಚಂಡೀಯಾಗದ ಪೂರ್ಣಾಹುತಿ ನಡೆಯಿತು.2 ಶ್ರೀ ಚಿತ್ರ 3-
ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರು ಗಜಾಶ್ವಪೂಜೆ ನೆರವೇರಿಸಿದರು.