ಸಾರಾಂಶ
- ಜಗದ್ಗುರುಗಳಿಂದ ಶ್ರೀ ಶಾರದಾಂಬೆ, ಚಂದ್ರಮೌಳೀಶ್ವರ ಸಹಿತ ಎಲ್ಲಾ ದೇವತೆಗಳಿಗೂ ನವರಾತ್ರಿ ವಿಶೇಷ ಪಜೆ, ದಿಂಡೀ ದೀಪಾರಾಧನೆ, ಬೀದಿ ಉತ್ಸವ, ನವರಾತ್ರಿ ದರ್ಬಾರ್
ಕನ್ನಡಪ್ರಭ ವಾರ್ತೆ, ಶೃಂಗೇರಿಶರನ್ನವರಾತ್ರಿ ಆರನೇ ದಿನವಾದ ಶನಿವಾರ ಪೀಠದ ಅಧಿದೇವತೆ ಶ್ರೀ ಶಾರದಾಂಬೆಗೆ ಇಂದ್ರಾಣಿ ಅಲಂಕಾರದಲ್ಲಿ ಪೂಜಿಸಿ ಮಹಾಭಿಷೇಕದ ನಂತರ ಜಗತ್ ಪ್ರಸೂತಿಕ ಅಲಂಕಾರದೊಂದಿಗೆ ಉತ್ಸವ ಆರಂಭವಾಗಿದ್ದು ಶಾರದೆ ಐರವತವನ್ನೇರಿ ಭಕ್ತರನ್ನು ಅನುಗ್ರಹಿಸಿದಳು.
ವಜ್ರಾಯುಧ ಧರಿಸಿ ಐರಾವತವನ್ನೇರಿ ದೇವೆಂದ್ರನ ಪಟ್ಟಮಹಿಷಿಯಾಗಿ ವೃತ್ರಾಸುರ ಮೊದಲಾದ ದುಷ್ಟದೈತ್ಯರನ್ನು ಸಂಹರಿಸಿ ಶಿಷ್ಟರಕ್ಷಣೆ ಮಾಡುವ ಈ ಅಲಂಕಾರದಲ್ಲಿ ಶಾರದೆ ನಯನ ಮನೋಹರವಾಗಿ ಕಂಗೊಳಿಸಿದಳು.ಶಾರದಾಂಬೆಗೆ ವಿವಿಧ ಫಲಪುಷ್ಪ, ಸಕಲ ಆಭರಣಗಳಿಂದ ಸಿಂಗರಿಸಲಾಗಿತ್ತು. ಬೆಳಿಗ್ಗೆ ಜಗದ್ಗುರುಗಳಾದ ಶ್ರೀ ಭಾರತೀ ತೀರ್ಥರು, ಶ್ರೀ ವಿಧುಶೇಖರ ಭಾರತೀ ತೀರ್ಥರು ಶಾರದಾಂಬೆ ಸನ್ನಿದಿಯಲ್ಲಿ ನವರಾತ್ರಿಯ ವಿಶೇಷ ಪೂಜೆ, ಮಹಾಮಂಗಳಾರತಿ ನೆರವೇರಿಸಿದರು. ಶ್ರೀ ಶಂಕರಾಚಾರ್ಯ, ಶ್ರೀ ತೋರಣಗಣಪತಿ ದೇವಾಲಯಗಳಲ್ಲಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ಶ್ರೀಮಠದ ಆವರಣದಲ್ಲಿರುವ ಶ್ರೀ ವಿದ್ಯಾಶಂಕರ, ಶ್ರೀ ಜನಾರ್ದನ ಸ್ವಾಮಿ, ಶ್ರೀ ಸುಬ್ರಮಣ್ಯ ದೇವಾಲಯಗಳಲ್ಲೂ ಎಂದಿನಂತೆ ನವರಾತ್ರಿ ಪೂಜೆ ನೆರವೇರಿತು. ಜಗದ್ಗುರುಗಳು ಶ್ರೀ ಚಂದ್ರಮೌಳೀಶ್ವರ ಪೂಜೆ ನೆರವೇರಿಸಿ, ತಚಂಡೀಯಾಗದ ಪ್ರಯುಕ್ತ ಶಾಲಾಪ್ರವೇಶ, ಪುರಶ್ಚರಣಾರಂಭಗೊಂಡಿತು.ಶ್ರೀ ಮಠದಲ್ಲಿ ಋಗ್ವೇದ, ಯಜುರ್ವೇದ,ಸಾಮವೇದಗಳ ಪಾರಾಯಣ, ದೇವಿಭಾಗವತ,ಶ್ರೀಮದ್ ಭಾಗವತ,ಶಂಕರ ದಿಗ್ವಿಜಯ, ಸೂತ ಸಂಹಿತೆ, ಲಲಿತೋಪಾಖ್ಯಾನ, ಪ್ರಸ್ಥನ್ನತ್ರಯ ಭಾಷ್ಯ ಪಾರಾಯಣ,ಮಹಾವಿದ್ಯೆ,ಲಕ್ಷ್ಮಿನಾರಾಯಣ ಹೃದಯ, ದುರ್ಗಾಸಪ್ತಶತಿ ,ಸೂರ್ಯನಮಸ್ಕಾರ,ಶ್ರೀ ಸೂಕ್ತ ಜಪ, ಭುವನೇಶ್ವರಿ ಜಪ, ದುರ್ಗಾಜಪ ಮೊದಲಾದ ಜಪಗಳು ನಡೆಯಿತು.
ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರು ಶ್ರೀ ಚಕ್ರಕ್ಕೆ ಪೂಜೆ ನೆರವೇರಿಸಿ ಸಂಪ್ರದಾಯಿಕ ದರ್ಬಾರು ಉಡುಗೆ ಧರಿಸಿ, ವಜ್ರಖಚಿತ ಕಿರೀಟ, ಅತ್ಯಮೂಲ್ಯ ಆಭರಣಗಳನ್ನು ತೊಟ್ಟು ರಾಜಪೋಷಾಕಿನೊಂದಿಗೆ ಚಂದ್ರಮೌಳೀಶ್ವರ ತೊಟ್ಟಿ ಯಿಂದ ಮೆರವಣಿಗೆಯಲ್ಲಿ ಶಾರದಾಂಬೆ ದೇವಾಲಯಕ್ಕೆ ಆಗಮಿಸಿ ಶ್ರೀ ಶಾರದಾಂಬೆ ಪೂಜೆ ನಂತರ ಸ್ವರ್ಣ ರಥದಲ್ಲಿ ಶ್ರೀ ಶಾರದಾಂಬೆ ಮೂರ್ತಿಯೊಂದಿಗೆ ಒಳಾಂಗಣ ಉತ್ಸವದಲ್ಲಿ ರಥಕ್ಕೆ ಅಭಿಮುಖರಾಗಿ ಮೂರು ಸುತ್ತು ಪ್ರದಕ್ಷಿಣೆ ಹಾಕಿ ನಂತರ ಶ್ರೀ ಶಾರದಾದೇವಿ ಮೂರ್ತಿ ಎದುರು ಸ್ವರ್ಣ ಸಿಂಹಾಸನದಲ್ಲಿ ಸಿಂಹಾಸನರೂಢರಾಗಿ ನವರಾತ್ರಿ ದರ್ಬಾರ್ ನಡೆಸಿದರು.--- ಶಾರದೆಗೆ ಮೋಹಿನಿ ಅಲಂಕಾರ ---
ರಾಜಬೀದಿ ಉತ್ಸವದಲ್ಲಿ ನೆಮ್ಮಾರು ಗ್ರಾಮಸ್ಥರೊಂದಿಗೆ ವಿವಿಧ ಸಂಘ ಸಂಸ್ಥೆಗಳು, ಭಜನಾ ತಂಡಗಳು, ವಿವಿಧ ಸ್ತಬ್ದಚಿತ್ರಗಳು ಪಾಲ್ಗೊಂಡಿದ್ದವು. ಪ್ರವಚನ ಮಂದಿರದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲಕ್ಕಾಡ್ ನ ವಿದ್ವಾನ್ ಶ್ರೀ ಮೆಲಾರ್ ಕೋಡ್ ರವಿ ಮತ್ತು ತಂಡದವರಿಂದ ಹಾಡುಗಾರಿಕೆ ನಡೆಯಿತು. ಭಾನುವಾರ ಶಾರದೆಗೆ ಮೋಹಿನಿಯಲಂಕಾರ ನಡೆಯಲಿದೆ. ರಾಜಬೀದಿ ಉತ್ಸವದಲ್ಲಿ ಬೇಗಾರು ಗ್ರಾಮಸ್ಥರು ಪಾಲ್ಗೊಳ್ಳಲಿದ್ದಾರೆ. ಮಹೋತ್ಸವದಲ್ಲಿ ಬೆಂಗಳೂರಿನ ಹರಿನಾಮದ್ವಾರ್ ಮತ್ತು ತಂಡದವರಿಂದ ಹಾಡುಗಾರಿಕೆ ನಡೆಯಲಿದೆ.27 ಶ್ರೀ ಚಿತ್ರ 4-ಶೃಂಗೇರಿ ಶಾರದೆ ಶನಿವಾರ ಇಂದ್ರಾಣಿಯಲಂಕಾರದಲ್ಲಿ ಕಂಗೊಳಿಸಿದಳು.