ಬ್ರಾಹ್ಮಿ ಅಲಂಕಾರದಲ್ಲಿ ಕಂಗೊಳಿಸಿದ ಶೃಂಗೇರಿ ಶಾರದಾಂಬೆ

| Published : Oct 05 2024, 01:30 AM IST

ಸಾರಾಂಶ

ಶೃಂಗೇರಿ, ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ ಎರಡನೇ ದಿನವಾದ ಶುಕ್ರವಾರ ಪೀಠದ ಅಧಿದೇವತೆ ಶ್ರೀ ಶಾರದಾಂಬೆಗೆ ಬ್ರಾಹ್ಮಿ ಅಲಂಕಾರ ಮಾಡಿ ಸಿಂಗರಿಸಲಾಗಿತ್ತು. ಕೈಯಲ್ಲಿ ,ಅಕ್ಷರಮಾಲೆ, ಪುಸ್ತಕ, ಪಾಶ ಮತ್ತು ಚಿನ್ಮುದ್ರೆಗಳನ್ನು ಧರಿಸಿ ಹಂಸವಾಹನರೂಢಳಾದ ಶಾರದೆ ಅಲಂಕಾರ ನಯನ ಮನೋಹರವಾಗಿತ್ತು.

ಕನ್ನಡಪ್ರಭ ವಾರ್ತೆ, ಶೃಂಗೇರಿ

ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿ ನಡೆಯುತ್ತಿರುವ ನವರಾತ್ರಿ ಉತ್ಸವದ ಎರಡನೇ ದಿನವಾದ ಶುಕ್ರವಾರ ಪೀಠದ ಅಧಿದೇವತೆ ಶ್ರೀ ಶಾರದಾಂಬೆಗೆ ಬ್ರಾಹ್ಮಿ ಅಲಂಕಾರ ಮಾಡಿ ಸಿಂಗರಿಸಲಾಗಿತ್ತು. ಕೈಯಲ್ಲಿ ,ಅಕ್ಷರಮಾಲೆ, ಪುಸ್ತಕ, ಪಾಶ ಮತ್ತು ಚಿನ್ಮುದ್ರೆಗಳನ್ನು ಧರಿಸಿ ಹಂಸವಾಹನರೂಢಳಾದ ಶಾರದೆ ಅಲಂಕಾರ ನಯನ ಮನೋಹರವಾಗಿತ್ತು.

ಬೆಳಿಗ್ಗೆ ಶ್ರೀ ಶಾರದಾಂಬೆಗೆ ನವರಾತ್ರಿ ವಿಶೇಷ ಪೂಜೆ, ಮಹಾಮಂಗಳಾರತಿ ನೆರವೇರಿತು. ನವರಾತ್ರಿ ಅಂಗವಾಗಿ ಶ್ರೀಮಠದಲ್ಲಿ ನಾಲ್ಕು ವೇದಗಳ ಪಾರಾಯಣ, ವಾಲ್ಮಿಕಿ ರಾಮಾಯಣ, ದೇವಿ ಭಾಗವತ, ಮಾಧವೀಯ ಶಂಕರ ದಿಗ್ವಿಜಯ, ಸೂತ ಸಂಹಿತೆ, ಲಕ್ಷ್ಮಿ ನಾರಾಯಣ ಹೃದಯ, ದುರ್ಗಾ ಸಪ್ತಶತಿ, ಪಾರಾಯಣಗಳು ನೆರವೇರಿದವು. ದುರ್ಗಾ ಭುವನೇಶ್ವರಿ, ಶ್ರೀ ಸೂಕ್ತ ಜಪಗಳು, ಶ್ರೀ ಚಂದ್ರಮೌಳೇಶ್ವರ ಸ್ವಾಮಿಗೆ ಶತ ರುದ್ರಾಭಿಷೇಕ, ಶ್ರೀ ಚಕ್ರಕ್ಕೆ ನವಾವರಣ ಪೂಜೆ, ಸುವಾಸಿನಿ ಪೂಜೆ, ಕುಮಾರಿ ಪೂಜೆ ನೆರವೇರಿದವು.

ಜಗದ್ಗುರುಗಳು ಶಾರದಾಂಬೆಗೆ ನವರಾತ್ರಿ ವಿಶೇಷ ಪೂಜೆ ನೆರವೇರಿಸಿದರು. ನವರಾತ್ರಿ ಅಂಗವಾಗಿ ಶ್ರೀಮಠದ ಆವರಣದಲ್ಲಿರುವ ಎಲ್ಲಾ ದೇವಾಲಯಗಳನ್ನು ಸಿಂಗರಿಸಲಾಗಿದ್ದು, ವಿಶೇಷ ಪೂಜೆಗಳು ನಡೆಯಿತು.

ಶ್ರೀಮಠದ ಆವರಣದ ಶ್ರೀ ಚಂದ್ರಶೇಖರ ಭಾರತೀ ಸಭಾಂಗಣದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಮಹೋತ್ಸವದಲ್ಲಿ ವಿಧುಷಿ ಐಶ್ವರ್ಯ ಮಹೇಶ್ ತಂಡದವರಿಂದ ಹಾಡುಗಾರಿಕೆ ನಡೆಯಿತು. ಸಂಜೆ ಬೀದಿ ಉತ್ಸವದಲ್ಲಿ ಶೃಂಗೇರಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಭಕ್ತಾದಿಗಳು ಪಾಲ್ಗೊಂಡಿದ್ದರು. ವಿವಿಧ ಸಂಘ ಸಂಸ್ಥೆಗಳು, ಕಲಾ ತಂಡಗಳು, ಭಜನಾ ಮಂಡಳಿ, ಸುತ್ತಮುತ್ತಲ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಶನಿವಾರ ಶಾರದಾಂಬೆಗೆ ಮಾಹೇಶ್ವರಿ ಅಲಂಕಾರ ನಡೆಯಲಿದ್ದು, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಮನಾಥ ಭಾಗವತ್ ರವರಿಂದ ಹಾಡುಗಾರಿಕೆ ನಡೆಯಲಿದೆ. ಸಂಜೆ ಬೀದಿ ಉತ್ಸವದಲ್ಲಿ ಕೂತಗೋಡು ಗ್ರಾಮಸ್ಥರೊಂದಿಗೆ ವಿವಿಧ ಸಂಘ ಸಂಸ್ಥೆಗಳು, ಭಜನಾ ತಂಡಗಳು ಪಾಲ್ಗೊಳ್ಳಲಿವೆ.

4 ಶ್ರೀ ಚಿತ್ರ 1- ಶೃಂಗೇರಿ ನವರಾತ್ರಿ ಉತ್ಸವದಲ್ಲಿ ಶಾರದಾಂಬೆಗೆ ಬ್ರಾಹ್ಮಿಯಲಂಕಾರ ಮಾಡಲಾಗಿತ್ತು.

4 ಶ್ರೀ ಚಿತ್ರ 2- ಶೃಂಗೇರಿ ಶಾರದಾಂಬೆ ಅಭಿಷೇಕಕ್ಕೆ ತುಂಗಾ ನದಿಯಿಂದ ಆನೆಯ ಮೇಲೆ ಗಂಗಾಜಲವನ್ನು ಮೆರವಣಿಗೆ ಮೂಲಕ ತರುತ್ತಿರುವುದು.