ಶೃಂಗೇರಿ ಶ್ರೀ ಹೊಸಪೇಟೆ ಪುರಪ್ರವೇಶ: ಪೂರ್ಣಕುಂಭದೊಂದಿಗೆ ಶೋಭಾಯಾತ್ರೆ

| Published : Jan 23 2025, 12:49 AM IST

ಶೃಂಗೇರಿ ಶ್ರೀ ಹೊಸಪೇಟೆ ಪುರಪ್ರವೇಶ: ಪೂರ್ಣಕುಂಭದೊಂದಿಗೆ ಶೋಭಾಯಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಚಂದ್ರಮೌಳೇಶ್ವರಸ್ವಾಮಿಯ ಪೂಜೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಿತು.

ಹೊಸಪೇಟೆ: ಶೃಂಗೇರಿ ಶಾರದಾ ಪೀಠ ಸಂಸ್ಥಾನದ ವಿಧುಶೇಖರ ಭಾರತಿ ಶ್ರೀಗಳ ಪುರಪ್ರವೇಶ ಹಿನ್ನೆಲೆಯಲ್ಲಿ ನಗರದಲ್ಲಿ ಅವರಿಗೆ ಪೂರ್ಣಕುಂಭ ಹಾಗೂ ಭಜನಾ ಮಂಡಳಿಯ ಗೀತಗಾಯನ, ಋತ್ವಿಕರ ವೇದಘೋಷಗಳೊಂದಿಗೆ ಭವ್ಯ ಸ್ವಾಗತ ನೀಡಲಾಯಿತು.

ನಗರದ ಚಿಂತಾಮಣಿ ಮಠದ ಶಿವಾನಂದ ಭಾರತಿ ಚಿಂತಾಮಣಿ ಶ್ರೀ, ಬ್ರಾಹ್ಮಣ ಸಂಘದ ಪದಾಧಿಕಾರಿಗಳು, ಮಹಿಳಾ ಭಜನಾ ಮಂಡಳಿಯ ಸದಸ್ಯರು, ವಿವಿಧ ಸಮಾಜದ ಗಣ್ಯರು ಸ್ವಾಗತ ಕೋರಿದರು. ಬಳಿಕ ಶೋಭಾಯಾತ್ರೆ ನಡೆಸಲಾಯಿತು.

ಹಂಪಿಗೂ ಶೃಂಗೇರಿಗೂ ನಂಟು: ವಿಜಯನಗರ ಸಂಸ್ಥಾನದ ಸ್ಥಾಪಕ ವಿದ್ಯಾರಣ್ಯರು ಶೃಂಗೇರಿ ಸಂಸ್ಥಾನ 12ನೇ ಪೀಠಾಧಿಪತಿಗಳಾಗಿದ್ದು, ಆ ಪರಂಪರೆಗೂ ಪುಣ್ಯಕ್ಷೇತ್ರ ಹಂಪಿ, ಹೊಸಪೇಟೆಗೂ ಅವಿನಾಭಾವ ಸಂಬಂಧ ಇದೆ. ಈ ಹಿನ್ನೆಲೆಯಲ್ಲಿ ಶ್ರೀಗಳು ಮೂರು ದಿನಗಳ ಪ್ರವಾಸದ ಮೊದಲ ದಿನ ಹಂಪಿಯ ಆನೆಗುಂದಿ ಮಹಾ ಸಂಸ್ಥಾನಕ್ಕೆ ಭೇಟಿ ನೀಡಿ ಕಾಶಿ ವಿಶ್ವೇಶ್ವರ ಸ್ವಾಮಿಗೆ ಅಭಿಷೇಕ ಸಲ್ಲಿಸಿದರು. ಸಂಜೆ ಹುಲಿಗೆಮ್ಮತಾಯಿಯ ದರ್ಶನ ಪಡೆದು ಹೊಸಪೇಟೆ ಪುರ ಪ್ರವೇಶ ಮಾಡಿದರು. ನಗರದ ವಡಕರಾಯಸ್ವಾಮಿ ದೇವಸ್ಥಾನದಿಂದ ವಾಸವಿ ಕಲ್ಯಾಣ ಮಂಟಪವರೆಗೆ ಪೂರ್ಣಕುಂಭ ಸ್ವಾಗತ ಹಾಗೂ ಶೋಭಾಯಾತ್ರೆ ನಡೆಯಿತು.

ವಾಸವಿ ದೇವಸ್ಥಾನದಲ್ಲಿ ಶ್ರೀಗಳ ಧೂಳಿ ಪಾದಪೂಜೆ ಮತ್ತು ಫಲ ಮಂತ್ರಾಕ್ಷತೆ ನಡೆಯಿತು. ನಂತರ ಚಂದ್ರಮೌಳೇಶ್ವರಸ್ವಾಮಿಯ ಪೂಜೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಿತು.

ಬ್ರಾಹ್ಮಣ ಸಂಘದ ಅಧ್ಯಕ್ಷ ಕೆ.ದಿವಾಕರ, ಕಾರ್ಯದರ್ಶಿ ವೇಣುಗೋಪಾಲ ವೈದ್ಯ, ಮುಖಂಡರಾದ ಚಂದ್ರಕಾಂತ ಕಾಮತ್, ಅನಂತಪದ್ಮನಾಭ, ನಾಗರಾಜ್, ಶ್ರೀಕಾಂತ್‌, ಪವನ್‌, ಭಜನಾ ಮಂಡಳಿಯ ಸಂಚಾಲಕರು, ಸದಸ್ಯರು ಇತರರು ಪಾಲ್ಗೊಂಡಿದ್ದರು.