ಸಾರಾಂಶ
ಸುತ್ತಮುತ್ತಲ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಕಂಡುಬರುತ್ತಿರುವ ತ್ಯಾಜ್ಯ ತುಂಗಾ ಒಡಲಿದೆ ಸೇರುತ್ತಾ ನೀರು ಮಲಿನಗೊಳ್ಳುತ್ತಾ ಸ್ವಚ್ಛತೆಗೆ ಧಕ್ಕೆಯುಂಟಾಗಿದೆ.
ನೆಮ್ಮಾರ್ ಅಬೂಬಕರ್
ಶೃಂಗೇರಿ : ಜಿಲ್ಲೆಯ ಪ್ರಸಿದ್ಧ ಧಾರ್ಮಿಕ, ಪ್ರವಾಸಿ ತಾಣಗಳಲ್ಲಿ ಒಂದಾದ ಶೃಂಗೇರಿ ಕ್ಷೇತ್ರಕ್ಕೆ ಪ್ರತಿನಿತ್ಯ ಸಾವಿರಾರು ಅಂದರೆ ವರ್ಷಕ್ಕೆ ಸರಾಸರಿ 70- 80 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಾರೆ. ಇಂತಹ ಪ್ರಮುಖ ಪಟ್ಟಣ, ಸುತ್ತಮುತ್ತಲ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಕಂಡುಬರುತ್ತಿರುವ ತ್ಯಾಜ್ಯ ತುಂಗಾ ಒಡಲಿದೆ ಸೇರುತ್ತಾ ನೀರು ಮಲಿನಗೊಳ್ಳುತ್ತಾ ಸ್ವಚ್ಛತೆಗೆ ಧಕ್ಕೆಯುಂಟಾಗಿದೆ.
ಅದರಲ್ಲೂ ಪ್ಲಾಸ್ಟಿಕ್ ತ್ಯಾಜ್ಯದ ಹಾವಳಿಯೂ ಹೆಚ್ಚಾಗಿಯೇ ಇದೆ. ಕಸ ಸಂಗ್ರಹವಾಗುತ್ತಿದ್ದಂತೆ ವಿಲೇವಾರಿಯಾಗುತ್ತಿದ್ದರೂ ಮೊತ್ತೊಂದೆಡೆ ಅಷ್ಟೇ ಪ್ರಮಾಣದಲ್ಲಿ ತ್ಯಾಜ್ಯ ಸೃಷ್ಠಿಯಾಗುತ್ತಿರುತ್ತದೆ. ಹೀಗಾಗಿ ಎಲ್ಲೆಂದರಲ್ಲಿ ಕಸದ ರಾಶಿಗಳು ಕಂಡುಬರುತ್ತದೆ.
ಪಟ್ಟಣದ ಜನ ನಿಬಿಡ, ವಾಹನ ನಿಲುಗಡೆ ಪ್ರದೇಶವಾಗಿರುವ ಗಾಂಧಿ ಮೈದಾನ ಸಂಪೂರ್ಣ ತ್ಯಾಜ್ಯಮಯವಾಗಿದೆ. ಇಲ್ಲಿ ಅಲ್ಲಲ್ಲಿ ಪ್ಲಾಸ್ಟಿಕ್, ಬಾಟಲ್ ಗಳು, ತ್ಯಾ ಜ್ಯ ರಾಶಿ ರಾಶಿಯೇ ಇದೆ. ವರ್ಷವಿಡೀ ಕಸದ ರಾಶಿ, ಗಾಂಧಿ ಮೈದಾನದಿಂದ ಕೆವಿಆರ್ ವೃತ್ತದವರೆಗೂ ತಂಗಾ ನದಿಯ ದಡದುದ್ದಕ್ಕೂ ತ್ಯಾಜ್ಯ ರಾಶಿ, ಕೊಳಕು ನೀರು ತುಂಗೆ ಒಡಲು ಸೇರುತ್ತಿದೆ. ಗಂಗಾ ಸ್ನಾನಂ ತುಂಗಾ ಪಾನಂ ಎಂಬ ನಾಣ್ನುಡಿಗೆ ಅಪವಾದ ವೆಂಬಂತೆ ಇಲ್ಲಿಯ ಪರಿಸ್ಥಿತಿ ಕಂಡುಬರುತ್ತದೆ.
ಗಾಂಧಿ ಮೈದಾನದ ತುಂಗಾ ನದಿ ಸ್ನಾನಘಟ್ಟದ ದಡದಲ್ಲಿ ಉದ್ದಕ್ಕೂ ಕಸದ ಗುಡ್ಡೆಯೇ ಕಂಡುಬರುತ್ತದೆ. ಇವೆಲ್ಲವೂ ತುಂಗೆಯ ಒಡಲಿಗೆ ಸೇರುತ್ತಾ ತುಂಗೆ ಮಲೀನವಾಗುತ್ತಿದೆ. ಇಡೀ ಗಾಂಧಿ ಮೈದಾನ ಪ್ರದೇಶವೇ ಅಲ್ಲಲ್ಲಿ ಕಸದ ರಾಶಿಗಳಿಂದ ಸಂಪೂರ್ಣ ತ್ಯಾಜ್ಯ ಮಯವಾಗಿದೆ. ಗಾಂಧಿ ಮೈದಾನದಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಯಿಂದ ಒಂದೆಡೆ ವಾಹನಗಳು ನಿಲ್ಲುತ್ತಿದ್ದರೆ ಇನ್ನೊಂದೆಡೆ ಅಂಗಡಿ ಮುಂಗಟ್ಟುಗಳು, ಜನನಿಬಿಡ ಪ್ರದೇಶಗಳು ಸಂಪೂರ್ಣ ಕಸಮಯವಾಗಿದೆ.
ಸುಮಾರು 3925 ಜನಸಂಖ್ಯೆ ಹೊಂದಿರುವ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ 13 ಪೌರಕಾರ್ಮಿಕರಿದ್ದು, 10 ಮಂದಿ ನೇರಪಾವತಿ, 3 ಜನ ಖಾಯಂ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಶೃಂಗೇರಿ ಪಟ್ಟಣದಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇದ ಜಾರಿಯಲ್ಲಿದೆ. ಪ್ಲಾಸ್ಟಿಕ್ ಬಳಸಿದವರಿಗೆ ದಂಡ ವಿಧಿಸಲಾಗುತ್ತಿದೆ. ಮನೆ ಮನೆಯಿಂದ ಕಸ ಸಂಗ್ರಹಿಸಲಾಗುತ್ತಿದೆ. ಕಸ ಸಂಗ್ರಹಿಸಲು 2 ಟ್ರಾಕ್ಟರ್ ಗಳು,1 ಆಪೆ, ಒಂದು ಮೊಪೆಡ್ ವಾಹನಗಳಿವೆ. ಬೆಳಿಗ್ಗೆ 2 ಟ್ರಿಪ್, ಮಧ್ಯಾಹ್ನ 1 ಟ್ರಿಪ್ ಅಂದರೆ ದಿನದಲ್ಲಿ 3 ಟನ್ ಗೂ ಅಧಿಕ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ.
ಪಟ್ಟಣದ ಬಸ್ ನಿಲ್ದಾಣದಿಂದ ಹಿಡಿದು ಕೆರೆ ಆಂಜನೇಯ ಬೀದಿ, ಹನುಮಂತನಗರ, ಭಾರತೀ ಬೀದಿ, ಹರಿಹರ ಬೀದಿ, ವೆಲ್ಕಂ ಗೇಟ್, ಸಂತೇ ಮಾರುಕಟ್ಟೆ, ಶಾರದಾ ನಗರ ಸೇರಿದಂತೆ ಪ್ರಮುಖ ಪ್ರದೇಶಗಳಿಂದ ಸಂಗ್ರಹವಾದ ಘನತ್ಯಾಜ್ಯಗಳನ್ನು ಹನುಮಂತನಗರದ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಕೊಂಡೊಯ್ಯಲಾಗುತ್ತಿದೆ.
ದಿನಕಳೆದಂತೆ ಗಾಂಧಿ ಮೈದಾನದಲ್ಲಿ ತ್ಯಾಜ್ಯ ರಾಶಿ ಹೆಚ್ಚುತ್ತಿದ್ದರೂ ಪರಿಸರ ಸ್ವಚ್ಛತೆಗೆ ಆದ್ಯತೆ ನೀಡದಿರುವುದು ಅಚ್ಚರಿ ಮೂಡಿಸುತ್ತಿದೆ. ಮೆಲೇರಿಯ, ಡೆಂಘೀ ಸಾಂಕ್ರಮಿಕ ರೋಗಗಳು ಹರಡಲು ಈ ತ್ಯಜ್ಯ ಸಮಸ್ಯೆಯೇ ಕಾರಣವಾದಂತಿದೆ. ಪ್ರವಾಸಿ ಕ್ಷೇತ್ರವಾಗಿರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು, ಸ್ಥ ಳೀಯ ಆಡಳಿತ ಇನ್ನಾದರೂ ಎಚ್ಚೆತ್ತುಕೊಂಡು ಈ ಪ್ರದೇಶದ ಸ್ವಚ್ಛತೆಗೆ ಆದ್ಯತೆ ನೀಡಿ ತ್ಯಾಜ್ಯ ತೆರವುಗೊಳಿಸಿ ಇಲ್ಲಿ ಕಸ ಹಾಕದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ. ಅಲ್ಲಲ್ಲಿ ನಾಮಫಲಕಗಳನ್ನು ಅಳವಡಿಸಬೇಕಿದೆ. ತುಂಗೆ ಮಲೀನಗೊಳ್ಳದಂತೆ ಜನರಲ್ಲಿ ಜನಜಾಗೃತಿ ಮೂಡಿಸಬೇಕಿದೆ. ಮಲೆನಾಡಿನ ಜೀವನದಿ ತುಂಗೆಯನ್ನು ಶುದ್ಧವಾಗಿಟ್ಟುಕೊಳ್ಳುವುದು ನಮ್ಮೆಲ್ಲರ ಕರ್ತವ್ಯ.
ಪಟ್ಟಣದ ಸ್ವಚ್ಚತೆಗೆ ಆದ್ಯತೆ :
ಪಟ್ಟಣದ 11 ವಾರ್ಡಗಳಿಂದ ಪ್ರತಿದಿನ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ಶೃಂಗೇರಿ ಪ್ರವಾಸಿ ತಾಣವಾಗಿರುವುದರಿಂದ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗಿದೆ. ಪೌರಕಾರ್ಮಿಕರ ಕೊರತೆಯಿದೆ. ಈ ಬಗ್ಗೆ ಸರ್ಕಾರಕ್ಕೆ ಬರೆಯಲಾಗಿದೆ. ಈಗಾಗಲೇ ಇರುವ 13 ಪೌರಕಾರ್ಮಿಕರು ಕಾರ್ಯನಿರ್ವಹಿಸಿಕೊಂಡು ಹೋಗುತ್ತಿದ್ದಾರೆ. ಹೆಚ್ಚುವರಿ ಕಾರ್ಮಿಕರು ಇದ್ದರೆ ಒಳ್ಳೆಯ ದಿತ್ತು. ಇನ್ನುಳಿದಂತೆ ಎಲ್ಲಾ ರೀತಿಯಲ್ಲಿ ಕಾರ್ಯನಿರ್ವಹಣೆ ಮಾಡಲಾಗುತ್ತಿದೆ
ಸರಸ್ವತಿ ಷಣ್ಮುಗ ಸುಂದರಿ, ಪಪಂ ಮುಖ್ಯಾಧಿಕಾರಿ.
ಸ್ವಚ್ಛತೆಗೆ ಆದ್ಯತೆ ನೀಡಿ
ಕೇವಲ ಪ್ಲಾಸ್ಟಿಕ್ ಬಳಕೆ ನಿಷೇಧಸಿ ದಂಡವಿಧಿಸಿದ ಮಾತ್ರಕ್ಕೆ ತ್ಯಾಜ್ಯಮುಕ್ತ ಪರಿಸರ ನಿರ್ಮಾಣ, ಪರಿಸರ ಸ್ವಚ್ಛತೆ ಸಾಧ್ಯವಿಲ್ಲ. ಪ್ಲಾಸ್ಟಿಕ್ ಅಲ್ಲದೇ ಇತರೆ ತ್ಯಾಜ್ಯ ಉತ್ಪನ್ನಗಳನ್ನು ಹಾಕದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಪ್ರಮುಖ ರಸ್ತೆ, ಬಡಾವಣೆಗಳಲ್ಲಿ , ಬಸ್ ನಿಲ್ದಾಣ ಇತರೆಡೆ ಕಸ, ತ್ಯಾಜ್ಯ ಹಾಕದಂತೆ ನಾಮಫಲಕ ಅಳವಡಿಸಿದರೆ ಒಳ್ಳೆಯದು. ಗಾಂಧಿ ಮೈದಾನದಲ್ಲಿ ತ್ಯಾಜ್ಯ, ಕಸ ಸಂಗ್ರಹವಾಗದಂತೆ ಕ್ರಮ ಕೈಗೊಳ್ಳಬೇಕು.
--ಶೂನ್ಯ ರಮೇಶ್. ಜೆಸಿಐ ವಲಯ 14 ರ ಅಧಿಕಾರಿ, ಶೃಂಗೇರಿ