ಶೃಂಗೇರಿ: ಯಡದಾಳು ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ.

| Published : Apr 05 2024, 01:03 AM IST

ಶೃಂಗೇರಿ: ಯಡದಾಳು ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ.
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಮರ್ಕಲ್ ಪಂಚಾಯಿತಿ ಯಡದಾಳು ಗ್ರಾಮಸ್ಥರು ಸೆಕ್ಷನ್‌ 4(1),17 ಕೈಬಿಡುವಂತೆ ತಮ್ಮ ಮನೆ, ಜಮೀನುಗಳನ್ನು ಉಳಿಸಿಕೊಡುವಂತೆ ಆಗ್ರಹಿಸಿ 2024ರ ಲೋಕಸಭೆ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

- ಕಂದಾಯ, ಅರಣ್ಯ, ಚುನಾವಣಾ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲೇ ಸಭೆಯಲ್ಲಿ ತರಾಟೆ

ಕನ್ನಡಪ್ರಭ ವಾರ್ತೆ, ಶೃಂಗೇರಿ

ತಾಲೂಕಿನ ಮರ್ಕಲ್ ಪಂಚಾಯಿತಿ ಯಡದಾಳು ಗ್ರಾಮಸ್ಥರು ಸೆಕ್ಷನ್‌ 4(1),17 ಕೈಬಿಡುವಂತೆ ತಮ್ಮ ಮನೆ, ಜಮೀನುಗಳನ್ನು ಉಳಿಸಿಕೊಡುವಂತೆ ಆಗ್ರಹಿಸಿ 2024ರ ಲೋಕಸಭೆ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಿದ್ದಾರೆ.

ಗುರುವಾರ ಯಡದಾಳು ಗ್ರಾಮದಲ್ಲಿ ಸಭೆ ಸೇರಿದ ಗ್ರಾಮಸ್ಥರೊಂದಿಗೆ ತಹಸೀಲ್ದಾರ್‌, ವಲಯಾರಣ್ಯಾಧಿ ಕಾರಿಗಳು, ಕಂದಾಯ, ಅರಣ್ಯ, ಚುನಾವಣೆ ಇಲಾಖೆ ಅಧಿಕಾರಿಗಳು ಪಾಲ್ಗೊಂಡು ಗ್ರಾಮಸ್ಥರ ಮನವೊಲಿಸಲು ಪ್ರಯತ್ನಿಸಿದರೂ ಗ್ರಾಮಸ್ಥರು ಮಾತ್ರ ತಮ್ಮ ಪಟ್ಟು ಬಿಡಲಿಲ್ಲ.

ಈ ಸಂದರ್ಭದಲ್ಲಿ ಕೃಷಿಕರಾದ ತೋರಣಗದ್ದೆ ನಟರಾಜ್ ಮಾತನಾಡಿ ಅರಣ್ಯ ಕಾಯ್ದೆ ಕಾನೂನುಗಳು ಜನರ ಬದುಕಿಗೆ ಪೂರಕವಾಗಿರಬೇಕೆ ಹೊರತು ಮಾರಕವಾಗಬಾರದು. ಪ್ರಾಣಿ, ಪಕ್ಷಿಗಳು, ಕಾಡು ಉಳಿಯಬೇಕು. ಹಾಗೆಯೇ ಮನುಷ್ಯರು ಬದುಕಬೇಕು. ಅರಣ್ಯ ಇಲಾಖೆಯವರು ಮನುಷ್ಯರ ಬದುಕನ್ನು ಕಸಿಯುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸೆಕ್ಷನ್‌ 4(1) ಘೋಷಣೆ ಮಾಡುವಾಗ ಸ್ಥಳೀಯರ ಮಾಹಿತಿ ಪಡೆದಿಲ್ಲ. ವಾಸದ ಮನೆಗಳು, ಜಮೀನುಗಳು ಎಲ್ಲವನ್ನು ಸೇರಿಸಿ ಮಾಡಲಾಗಿದೆ. ಯಾರ ಗಮನಕ್ಕೂ ತಂದಿಲ್ಲ. ಎಲ್ಲವನ್ನು ಕಾನೂನು ವ್ಯಾಪ್ತಿಯೊಳಗೆ ತರಲು ಸಾದ್ಯವಿಲ್ಲ. ಜನರ ಬದುಕುವ ಹಕ್ಕನ್ನು ಕಸಿದುಕೊಳ್ಳಬಾರದು. ಕಾಡನ್ನು ಉಳಿಸಿ ಬೆಳೆಸಿದವರು ಜನರು, ಅರಣ್ಯ ಇಲಾಖೆಯವರು ಅಕೇಶಿಯ ತೋಪು ಬೆಳೆಸಿ ಸ್ವಾಭಾವಿಕ ಕಾಡನ್ನು ನಾಶಮಾಡುತ್ತಿದ್ದಾರೆ ಎಂದು ದೂರಿದರು.

ಕೃಷಿಕ ಕೆ.ಎಸ್‌.ಚಂದ್ರಶೇಖರ ರಾವ್‌ ಮಾತನಾಡಿ ಈಗಾಗಲೇ ಈ ಭಾಗದಲ್ಲಿ ಪಾರಂಪರಿಕ ಕೃಷಿ ಜಮೀನುಗಳು, ಮನೆಗಳು, ದೇವಸ್ಥಾನಗಳು, ರಸ್ತೆಗಳು ಇಳಗೊಂಡಂತೆ ಬಹುತೇಕ ಪ್ರದೇಶಗಳನ್ನು 4(1) ಎಂದು ಘೋಷಣೆ ಮಾಡಿ ಸೆ 17 ಮಾಡಲು ಹೊರಟಿದ್ದಾರೆ. ತಲೆತಲಾಂತರದಿಂದ ಬದುಕುತ್ತಿರುವ ರೈತರು ಎಲ್ಲಿಗೆ ಹೋಗಬೇಕು. ಇದು ಅವರ ಬದುಕಿನ ಪ್ರಶ್ನೆ. ಸಂಸದರು, ಶಾಸಕರು ಹೇಳಿದರೂ ಅವರ ಮಾತಿಗೆ ಬೆಲೆಯಿಲ್ಲ. ಅರಣ್ಯ ಇಲಾಖೆಯವರು ತಮಗೆ ಇಷ್ಟಬಂದಂತೆ ಸರ್ವೆ ಮಾಡುತ್ತಿದ್ದಾರೆ. ನಮ್ಮ ಸಮಸ್ಯೆಗೆ ಸ್ಪಂದಿಸಬೇಕು. ಲಿಖಿತ ಭರವಸೆ ನೀಡಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ಬಿಡುವುದಿಲ್ಲ. ಚುನಾವಣೆ ಸಂಪೂರ್ಣವಾಗಿ ಬಹಿಷ್ಕಾರ ಮಾಡುತ್ತೇವೆ ಎಂದರು.

ಕೆ.ಎಂ.ಶ್ರೀನಿವಾಸ್‌ ಮಾತನಾಡಿ ರೈತರ ಜಮಿನುಗಳನ್ನು, ಮನೆಗಳನ್ನು, ಧಾರ್ಮಿಕ ಕೇಂದ್ರಗಳನ್ನು ,ರಸ್ತೆಗಳನ್ನು ಹೊರತು ಪಡಿಸಬೇಕು. ಅರಣ್ಯ ಬೆಳೆಸಿ ಉಳಿಸಿ ನಮ್ಮ ವಿರೋಧವಿಲ್ಲ. ಆದರೆ ಜಮೀನು, ಮನೆಗಳನ್ನು ನಾಶಮಾಡಬೇಡಿ. ಅರಣ್ಯ ಇಲಾಖೆ,ಕಂದಾಯ ಇಲಾಖೆ ಮತ್ತೆ ಜಂಟೀ ಸರ್ವೆ ಮಾಡಿ, ಸಮಸ್ಯೆ ಪರಿಹರಿಸಬೇಕು ಎಂದರು.

ತಹಸೀಲ್ದಾರ್‌ ಗೌರಮ್ಮ ಪ್ರತಿಕ್ರಿಯೆ ನೀಡಿ ನಿಮ್ಮ ಸಮಸ್ಯೆ ಅರಿವಿದೆ. ಜಿಲ್ಲಾಧಿಕಾರಿಗಳನ್ನು ಡಿಎಫ್‌ ಓ ,ಎಸ್‌ಎಫ್‌ ಒ ಗಳನ್ನು ಕರೆಸುತ್ತೇವೆ. ನಿಮ್ಮೊಂದಿಗೆ ಚರ್ಚೆ ಮಾಡುತ್ತೇವೆ. ಅಲ್ಲಿಯವನರೆಗೆ ಕಾಯಿರಿ. ಚುನಾವಣೆ ಬಹಿಷ್ಕಾರ ಮಾಡಬೇಡಿ ಎಂದು ಮನವಿ ಮಾಡಿದರು.

ವಲಯಾರಣ್ಯಧಿಕಾರಿ ಅನಿಲ್‌ ಡಿಸೋಜಾ ಮಾತನಾಡಿ ತಾಲೂಕಿನಲ್ಲಿ ಯಾವುದೂ ಸೆಕ್ಷನ್‌ 17 ಆಗಿಲ್ಲ.4(1) ಆಗಿದೆ.ಆ ಬಗ್ಗೆ ಪರಿಶೀಲಿಸುತ್ತೇವೆ ಎಂದರು. ಆದರೂ ಗ್ರಾಮಸ್ಥರು ಅಂತಿಮವಾಗಿ ಯಾವುದೇ ಭರವಸೆ ಲೆಕ್ಕಿಸದೇ ಚುನಾವಣೆ ಬಹಿಷ್ಕಾರದ ನಿರ್ಧಾರ ಮುಂದುವರೆಸಿದರು. ಕಂದಾಯ ಇಲಾಖೆ ಪ್ರವೀಣ್‌, ಗ್ರಾಮಸ್ಥರಾದ ರಾಮಣ್ಣ ನಾಯಕ್, ಮಂಜುನಾಥ್‌, ವಿಷ್ಣುಮೂರ್ತಿ, ಹರೀಶ್‌,ಕೆ.ಎಂ.ನಾಗರಾಜ್‌ ಮತ್ತಿತರರು ಇದ್ದರು.

4 ಶ್ರೀ ಚಿತ್ರ 1-

ಶೃಂಗೇರಿ ತಾಲೂಕಿನ ಯಡದಾಳು ಗ್ರಾಮಸ್ಥರು ಕಂದಾಯ, ಅರಣ್ಯ ಇಲಾಖೆ ಅಧಿಕಾರಿಗಳು ಸಮ್ಮುಖದಲ್ಲೆ ಬ್ಯಾನರ್‌ಹಿಡಿದು ಚುನಾವಣೆ ಬಹಿಷ್ಕಾರದ ಕರೆ ನೀಡಿದರು.