ಹಳಿಯಾಳ ಮಾರ್ಕೆಟಿಂಗ್ ಸೊಸೈಟಿ ಅಧ್ಯಕ್ಷರಾಗಿ ಶ್ರೀನಿವಾಸ ಘೋಟ್ನೇಕರ

| Published : Oct 04 2025, 12:00 AM IST

ಹಳಿಯಾಳ ಮಾರ್ಕೆಟಿಂಗ್ ಸೊಸೈಟಿ ಅಧ್ಯಕ್ಷರಾಗಿ ಶ್ರೀನಿವಾಸ ಘೋಟ್ನೇಕರ
Share this Article
  • FB
  • TW
  • Linkdin
  • Email

ಸಾರಾಂಶ

ಹಳಿಯಾಳ ಪಟ್ಟಣದ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ (ಮಾರ್ಕೆಟಿಂಗ್‌ ಸೊಸೈಟಿ) ನೂತನ ಅಧ್ಯಕ್ಷರಾಗಿ ಶ್ರೀನಿವಾಸ ಶ್ರೀಕಾಂತ ಘೋಟ್ನೇಕರ ಹಾಗೂ ಉಪಾಧ್ಯಕ್ಷರಾಗಿ ಹರಿದಾಸ ಬೊಬ್ಲಿ ಅವಿರೋಧವಾಗಿ ಆಯ್ಕೆಯಾದರು.

ಹಳಿಯಾಳ: ಪಟ್ಟಣದ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ (ಮಾರ್ಕೆಟಿಂಗ್‌ ಸೊಸೈಟಿ) ನೂತನ ಅಧ್ಯಕ್ಷರಾಗಿ ಶ್ರೀನಿವಾಸ ಶ್ರೀಕಾಂತ ಘೋಟ್ನೇಕರ ಹಾಗೂ ಉಪಾಧ್ಯಕ್ಷರಾಗಿ ಹರಿದಾಸ ಬೊಬ್ಲಿ ಅವಿರೋಧವಾಗಿ ಆಯ್ಕೆಯಾದರು.

ಶುಕ್ರವಾರ ಸಂಘದ ಕಾರ್ಯಾಲಯದಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಆಯ್ಕೆ ಮಾಡುವ ಪ್ರಕ್ರಿಯೆ ನಡೆಯಿತು. ಈ ಸಂದರ್ಭದಲ್ಲಿ ಸಾಮಾನ್ಯ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದ ಶ್ರೀನಿವಾಸ ಶ್ರೀಕಾಂತ ಘೋಟ್ನೇಕರ ಅವರನ್ನು ಅಧ್ಯಕ್ಷರನ್ನಾಗಿ ಹಾಗೂ ಯಡೋಗಾ ಸೇವಾ ಸಹಕಾರಿ ಸಂಘದಿಂದ ಮಾರ್ಕೆಟಿಂಗ್‌ ಸೊಸೈಟಿಗೆ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದ ಹರಿದಾಸ ಬೊಬ್ಲಿ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷ, ಉಪಾಧ್ಯಕ್ಷ, ನಿರ್ದೇಶಕ ಮಂಡಳಿಯ ಸದಸ್ಯರನ್ನು ಅಭಿನಂದಿಸಿದ ಮಾಜಿ ಶಾಸಕ ಸುನೀಲ ಹೆಗಡೆ ಹಾಗೂ ವಿಧಾನಪರಿಷತ್‌ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ ಅವರು ಸೊಸೈಟಿಯ ಚಟುವಟಿಕೆ ಮೇಲೆ ಯಾವುದೇ ಆರೋಪಗಳು ಕೇಳಿಬರದಂತೆ ಭ್ರಷ್ಟಾಚಾರರಹಿತ, ರೈತಸ್ನೇಹಿ, ಗ್ರಾಹಕರ ಪರವಾದ ಸೇವೆ ಸಲ್ಲಿಸಿ ಎಂದರು.

ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಪಾಟೀಲ, ಸಿಬ್ಬಂದಿ ಅನಂತ ಗೌಡಾ, ಚಂದ್ರಕಾಂತ ಗೌಡಾ ಇದ್ದರು.

ಬಿಜೆಪಿ ಪಾಲಾದ ಸೊಸೈಟಿ: ಬಹುವರ್ಷಗಳಿಂದ ಕಾಂಗ್ರೆಸ್ ಭದ್ರಕೋಟೆಯಾದಂತಿದ್ದ ಮಾರ್ಕೆಟಿಂಗ್‌ ಸೊಸೈಟಿ ಈಗ ಕೈ ಹಿಡಿತ ಕಳಚಿಕೊಂಡು ಬಿಜೆಪಿಯ ಪಾಲಾಗಿದೆ. ಮಾರ್ಕೆಟಿಂಗ್‌ ಸೊಸೈಟಿಯ 13 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 12 ಸ್ಥಾನಗಳಿಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು. ಇನ್ನುಳಿದ ಪರಿಶಿಷ್ಟ ಜಾತಿಯ ಸ್ಥಾನಕ್ಕೆ ಮಾತ್ರ ಚುನಾವಣೆಯು ನಡೆದು ಬಿಜೆಪಿ ಬೆಂಬಲಿತ ಅಭ್ಯರ್ಥಿ ಆಯ್ಕೆಯಾಗುವ ಮೂಲಕ ಎಲ್ಲ 13 ಸ್ಥಾನಗಳಲ್ಲಿ ಬಿಜೆಪಿ ಆಯ್ಕೆಯಾಗಿದ್ದರು.