ಜಿಲ್ಲಾ ನೋಂದಣಿ ಕಚೇರಿ ಮಳಿಗೆಗಳ ತೆರವಿಗೆ ವಿರೋಧಿಸಿ ಶ್ರೀರಾಮುಲು ಧರಣಿ

| Published : Jul 07 2024, 01:24 AM IST

ಜಿಲ್ಲಾ ನೋಂದಣಿ ಕಚೇರಿ ಮಳಿಗೆಗಳ ತೆರವಿಗೆ ವಿರೋಧಿಸಿ ಶ್ರೀರಾಮುಲು ಧರಣಿ
Share this Article
  • FB
  • TW
  • Linkdin
  • Email

ಸಾರಾಂಶ

ಕಚೇರಿ ಸ್ಥಳಾಂತರಗೊಳ್ಳುವವರೆಗೆ ಮಳಿಗೆಗಳು ಹಾಗೆಯೇ ಇರಬೇಕು. ಪತ್ರ ಬರಹಗಾರರ ಕೆಲಸಕ್ಕೆ ಅನುಕೂಲ ಕಲ್ಪಿಸಬೇಕು.

ಬಳ್ಳಾರಿ: ನಗರದ ಜಿಲ್ಲಾ ನೋಂದಣಿ ಕಚೇರಿ (ಸಬ್‌ ರಿಜಿಸ್ಟ್ರಾರ್‌) ಆವರಣದಲ್ಲಿರುವ ಮಳಿಗೆಗಳ ತೆರವು ವಿರೋಧಿಸಿ ಮಾಜಿ ಸಚಿವ ಬಿ.ಶ್ರೀರಾಮುಲು ಶನಿವಾರ ಧರಣಿ ನಡೆಸಿದರು.

ಕಳೆದ 40 ವರ್ಷಗಳಿಂದ ಸಬ್‌ ರಿಜಿಸ್ಟ್ರಾರ್ ಕಚೇರಿ ಆವರಣದಲ್ಲಿ ಪತ್ರ ಬರಹಗಾರರು ಮಳಿಗೆ ಮಾಡಿಕೊಂಡಿದ್ದಾರೆ. ಪತ್ರ ಬರಹಗಾರರಿಗೆ ಯಾವುದೇ ನೊಟೀಸ್ ನೀಡದೆ ಏಕಾಏಕಿ ತೆರವಿಗೆ ಕ್ರಮ ಕೈಗೊಳ್ಳುವುದು ಸರಿಯಲ್ಲ. ಕಚೇರಿ ಸ್ಥಳಾಂತರಗೊಳ್ಳುವವರೆಗೆ ಮಳಿಗೆಗಳು ಹಾಗೆಯೇ ಇರಬೇಕು. ಪತ್ರ ಬರಹಗಾರರ ಕೆಲಸಕ್ಕೆ ಅನುಕೂಲ ಕಲ್ಪಿಸಬೇಕು. ನಗರ ಸೇರಿದಂತೆ ದೂರದ ಊರುಗಳಿಂದ ಬರುವ ಜನರು ಕುಳಿತುಕೊಳ್ಳಲು ಸಹ ಮಳಿಗೆಗಳು ಅನುಕೂಲವಾಗಿದ್ದು, ತೆರವು ಕಾರ್ಯಾಚರಣೆಯ ನಿರ್ಧಾರದಿಂದ ಹಿಂದಕ್ಕೆ ಸರಿಯಬೇಕು ಎಂದು ಒತ್ತಾಯಿಸಿದರು.

ಧರಣಿ ಮುನ್ನ ಜಿಲ್ಲಾ ನೋಂದಣಾಧಿಕಾರಿ ಮೆಹಮುನ್ನೀಸಾ ಬೇಗಂ ಅವರನ್ನು ಭೇಟಿ ಮಾಡಿದ ಬಿ.ಶ್ರೀರಾಮುಲು, ಮಳಿಗೆಗಳನ್ನು ತೆರವುಗೊಳಿಸುವ ಇಲಾಖೆಯ ನಿರ್ಧಾರ ಕುರಿತು ಚರ್ಚಿಸಿದರು. ಕಚೇರಿಯ ಕಟ್ಟಡ ತುಂಬಾ ಹಳೆಯದಾಗಿದ್ದು ಸ್ಥಳಾಂತರ ಮಾಡಬೇಕಾಗಿದೆ ಎಂದು ಹೇಳಿದರು.

ಧರಣಿ ವೇಳೆ ಸಚಿವ ಕೃಷ್ಣ ಭೈರೇಗೌಡ ಅವರಿಗೆ ಕರೆ ಮಾಡಿ ಶ್ರೀರಾಮುಲು ಚರ್ಚಿಸಿದರು.

ಬಳಿಕ ಪ್ರತಿಭಟನಾ ನಿರತರನ್ನು ಭೇಟಿ ಮಾಡಿದ ಜಿಲ್ಲಾ ನೋಂದಣಾಧಿಕಾರಿ, ಸದ್ಯ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಲಾಗುವುದು. ಇನ್ನೆರಡು ದಿನಗಳಲ್ಲಿ ಪತ್ರ ಬರಹಗಾರರ ಸಮ್ಮುಖದಲ್ಲಿ ನಗರ ಶಾಸಕರು ಸೇರಿದಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಧರಣಿ ಹಿಂಪಡೆಯಲಾಯಿತು.

ಶ್ರೀರಾಮುಲು ಜೊತೆ ಪಾಲಿಕೆ ಸದಸ್ಯ ಗೋವಿಂದರಾಜುಲು, ಹನುಮಂತಪ್ಪ, ಬಿಜೆಪಿ ಮುಖಂಡ ಎಸ್.ಗುರುಲಿಂಗನಗೌಡ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುಗುಣ, ಪ್ರಧಾನ ಕಾರ್ಯದರ್ಶಿ ಕೆ.ಪುಷ್ಪಾ ಚಂದ್ರಶೇಖರ್, ವೇಮಣ್ಣ ಬೆಂಬಲಿಗರು ಧರಣಿಯಲ್ಲಿ ಪಾಲ್ಗೊಂಡಿದ್ದರು.