ಶ್ರೀರಂಗಪಟ್ಟಣ ದಸರಾಗೆ ಜನಪ್ರತಿನಿಧಿಗಳು, ಸಂಘಟನೆಗಳು, ಸಾರ್ವಜನಿಕರ ಕಡೆಗಣನೆ

| Published : Sep 14 2025, 01:04 AM IST

ಶ್ರೀರಂಗಪಟ್ಟಣ ದಸರಾಗೆ ಜನಪ್ರತಿನಿಧಿಗಳು, ಸಂಘಟನೆಗಳು, ಸಾರ್ವಜನಿಕರ ಕಡೆಗಣನೆ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲಾಡಳಿತವೇ ಎಲ್ಲವನ್ನು ಮಾಡಿಕೊಳ್ಳುವುದಾದರೆ ಜಿಲ್ಲೆಯಲ್ಲೇ ಆಚರಣೆ ಮಾಡಿಕೊಳ್ಳಲಿ ನಮ್ಮದೇನು ತಕರಾಗಿಲ್ಲ. ಎಲ್ಲಾ ಸಂಘಟನೆ, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಜೊತೆಗೂಡಿ ಹಣ ಸಂಗ್ರಹಿಸಿ ನಾವೇ ಶ್ರೀರಂಗಪಟ್ಟಣ ದಸರಾ ಆಚರಣೆ ಮಾಡುತ್ತೇವೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಶ್ರೀರಂಗಪಟ್ಟಣ ಪಾರಂಪರಿಕ ದಸರಾಗೆ ಸ್ಥಳೀಯ ಜನಪ್ರತಿನಿಧಿಗಳು, ಸಂಘಟನೆಗಳು ಹಾಗೂ ಸಾರ್ವಜನಿಕರನ್ನು ಕಡೆಗಣಿಸಿ ಆಚರಿಸಲಾಗುತ್ತಿದೆ ಎಂದು ವಿವಿಧ ಸಂಘಟನೆಗಳ ಮುಖಂಡರು ಜಿಲ್ಲಾಡಳಿತ ಹಾಗೂ ಶಾಸಕರ ವಿರುದ್ಧ ಆರೋಪಿಸಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ 415 ವರ್ಷಗಳ ಇತಿಹಾಸವಿದೆ. ಕ್ರಿ.ಸ 1610ರಲ್ಲಿ ಅಂದಿನ ಮೈಸೂರು ಮಹಾರಾಜರು ಪ್ರಾರಂಭಿಸಿದ್ದರು. ನಂತರ ಮೈಸೂರಿಗೆ ಸ್ಥಳಾಂತರಗೊಂಡಿದೆ. ಇಂತಹ ಪರಂಪರೆಯುಳ್ಳ ದಸರಾ ಆಚರಣೆಯನ್ನು ಕೇವಲ ಜಿಲ್ಲಾಡಳಿತವೇ ಮಾಡಲು ಮುಂದಾಗಿದೆ ಎಂದರು.

ಇದು ಸಾರ್ವಜನಿಕರ ದಸರಾ ಅಲ್ಲ. ಕೇವಲ ಅಧಿಕಾರಿಗಳ ದಸರಾ ಎಂದು ಬಿಂಬಿಸುತ್ತಿದೆ. ಈಗಾಗಲೇ 4 ದಿನಗಳ ದಸರಾ ಆಚರಣೆಗೆ 12 ಸಮಿತಿ ಮಾಡಿಕೊಂಡಿದೆ. ಒಬ್ಬೊಬ್ಬ ಅಧಿಕಾರಿ ಮೂರ್‍ನಾಲ್ಕು ಸಮಿತಿಯಲ್ಲಿದ್ದಾರೆ. ಪಟ್ಟಣದ ಪ್ರಥಮ ಪ್ರಜೆ ಪುರಸಭೆ ಅಧ್ಯಕ್ಷರನ್ನು ಯಾವುದೇ ಸಮಿತಿಗೆ ಸೇರ್ಪಡೆ ಮಾಡಿಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳೀಯ ಗ್ರಾಪಂ ಸದಸ್ಯರು, ಪುರಸಭೆ ಸದಸ್ಯರು ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಸಂಘಟನೆಗಳು ಹಾಗೂ ಹಿರಿಯ ಸಾರ್ವಜನಿಕರಿಗೆ ಯಾವುದೇ ಸ್ಥಾನ ಮಾನ ನೀಡದೆ ಕಡಿಗಣಿಸಿದ್ದಾರೆ. ಜೊತೆಗೆ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ ಅವರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಿಕೊಳ್ಳುವ ಮೂಲಕ ಇದು ಕಾಂಗ್ರೆಸ್‌ನ ಕಾರ್ಯಕ್ರಮವನ್ನಾಗಿ ಮಾಡಲು ಹೊರಟಿದ್ದಾರೆ ಎಂದು ದೂರಿದರು.

ದಸರಾ ಆಚರಣೆ ಸಂಬಂಧ ಸೆ.6ರಂದು ಪೂರ್ವಭಾವಿ ಸಭೆ ಕರೆದಿದ್ದು, ಈ ಸಭೆಗೆ ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಗೈರಾಗುವ ಮೂಲಕ ಸಭೆ ಮುಂದೂಡಲಾಗಿತ್ತು. ನಂತರ ಇಲ್ಲಿಯ ತನಕ ಶಾಸಕರು ಹಾಗೂ ಜಿಲ್ಲಾಡಳಿತ ಮತ್ತೊಮ್ಮೆ ಸಭೆಯನ್ನೇ ಕರೆಯದೇ ಸಮಿತಿ ರಚನೆ, ಲೋಗೊ ಬಿಡುಗಡೆ, ಉದ್ಘಾಟಕರನ್ನು ಸಹ ಇವರೇ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಕಿಡಿಕಾರಿದರು.

ಸರ್ಕಾರ ಸಹ ಪ್ರತಿಬಾರಿ ಕನಿಷ್ಠ 3-4 ಕೋಟಿ ಹಣ ನೀಡುತ್ತಿದೆ. ಆದರೂ ಈಗಾಗಲೇ ಎಲ್ಲಾ ಗ್ರಾಪಂ ಪಿಡಿಒ ಹಾಗೂ ವಿವಿಧ ಇಲಾಖೆಗಳಿಂದ ಹಣ ವಸೂಲಿ ಮಾಡುತ್ತಿರುವುದು ತಿಳಿದು ಬಂದಿದೆ. ಈ ಹಣವನ್ನು ಏನು ಮಾಡುತ್ತಾರೆ ಎಂದು ತಿಳಿಯುತಿಲ್ಲ ಎಂದರು.

ಸ್ಥಳೀಯರಿಗೆ ಆದ್ಯತೆ ಎಂದು ಹೇಳಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ದೊಡ್ಡ ದೊಡ್ಡ ನಟರನ್ನು ಕರೆಸುತ್ತಿದೆ. ಕಾರ್ಯಕ್ರಮದಂದೆ ಅವರಿಗೆ ಚೆಕ್ ನೀಡಿ ಕಳುಹಿಸುತ್ತಾರೆ. ಆದರೆ, ಸ್ಥಳೀಯ ಕಲಾವಿದರಿಗೆ ಐದಾರು ತಿಂಗಳಾದರೂ ಸಂಭಾವನೆ ನೀಡುವುದಿಲ್ಲ. ಕಳೆದ ಬಾರಿಯ ದಸರಾ ಆಚರಣೆಯ ಲೆಕ್ಕಪತ್ರ ನೀಡುವಂತೆ ಕೇಳುತ್ತಿದ್ದರೂ ಕೊಡುತ್ತಿಲ್ಲ ಎಂದು ಆರೋಪಿಸಿದರು.

ಜಿಲ್ಲಾಡಳಿತವೇ ಎಲ್ಲವನ್ನು ಮಾಡಿಕೊಳ್ಳುವುದಾದರೆ ಜಿಲ್ಲೆಯಲ್ಲೇ ಆಚರಣೆ ಮಾಡಿಕೊಳ್ಳಲಿ ನಮ್ಮದೇನು ತಕರಾಗಿಲ್ಲ. ಎಲ್ಲಾ ಸಂಘಟನೆ, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಜೊತೆಗೂಡಿ ಹಣ ಸಂಗ್ರಹಿಸಿ ನಾವೇ ಶ್ರೀರಂಗಪಟ್ಟಣ ದಸರಾ ಆಚರಣೆ ಮಾಡುತ್ತೇವೆ ಎಂದರು.

ಕಳೆದ ಕೊವೀಡ್ ಸಮಯದಲ್ಲಿ ಸ್ವತಃ ನಾವೇ ಆಚರಿಸಿರುವ ಉದಾಹರಣೆ ಇದೆ. ಒಂದೆರಡು ದಿನಗಳಲ್ಲಿ ಶಾಸಕರು ಹಾಗೂ ಜಿಲ್ಲಾಡಳಿತ ಸ್ಥಳೀಯ ಜನಪ್ರತಿನಿದಿಗಳು, ಸಂಘಟನೆಗಳು ಹಾಗೂ ಸಾರ್ವಜನಿಕರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಪೂರ್ವಭಾವಿ ಸಭೆ ನಡೆಸಿ ದಸರಾ ಆಚರಣೆ ಮುಂದಾಗಬೇಕು. ಇಲ್ಲದಿದ್ದರೆ ತಾಲೂಕು ಕಚೇರಿ ಮುಂದೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಕಸಾಪ ತಾಲೂಕು ಅಧ್ಯಕ್ಷ ಸಿದ್ದಲಿಂಗು, ಕರವೇ ತಾಲೂಕು ಅಧ್ಯಕ್ಷ ಚಂದಗಾಲು ಶಂಕರ್, ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಗೌಡಹಳ್ಳಿ ದೇವರಾಜು, ಕರವೇ ಜಿಲ್ಲಾ ಕಾರ್ಯದರ್ಶಿ ಸ್ವಾಮೀಗೌಡ, ರೈತ ಸಂಘ ಮುಖಂಡ ರಮೇಶ, ಕೆಂಪೇಗೌಡ, ಯುವ ಶಕ್ತಿ ವೇದಿಕೆ ತಾಲೂಕು ಅಧ್ಯಕ್ಷ ಮಹೇಶ್, ರಾಜಶೇಖರ್, ಇಂದ್ರಕುಮಾರ್, ಪುರುಷೋತ್ತಮ್, ಕೃಷ್ಣಪ್ಪ, ಕೆ.ಶೆಟ್ಟಹಳ್ಳಿ ಸುರೇಶ್ ಸೇರಿದಂತೆ ಇತರರು ಇದ್ದರು.