ಸಾರಾಂಶ
ಮಂಡ್ಯ : ಶ್ರೀರಂಗಪಟ್ಟಣ ದಸರಾ ಈ ಬಾರಿ ಅ.4 ರಿಂದ 7 ವರೆಗೆ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಗುರುವಾರ ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ನಡೆದ ಶ್ರೀರಂಗಪಟ್ಟಣ ದಸರಾ ಮಹೋತ್ಸವ ಲೋಗೋ ಬಿಡುಗಡೆ ಮಾಡಿ ಮಾತನಾಡಿ, ನಾಡಹಬ್ಬ ದಸರಾ ಇಡೀ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿದ್ದು, ನಮ್ಮ ನಾಡಿನ ಕಲ್ಯಾಣಕ್ಕೋಸ್ಕರ ಶ್ರೀಚಾಮುಂಡೇಶ್ವರಿ ತಾಯಿಯನ್ನು ಪೂಜಿಸಲಾಗುವುದು. ಶ್ರೀರಂಗಪಟ್ಟಣ ದಸರಾ ಹಬ್ಬದಲ್ಲಿ ಅನೇಕ ರೀತಿಯ ವಿಭಿನ್ನ ಸಾಂಸ್ಕೃತಿಕ ಉತ್ಸವಗಳು ನಡೆಯಲಿದ್ದು, ಸಾರ್ವಜನಿಕರಿಗೆ ಹಬ್ಬದ ವಾತಾವರಣ ಉಂಟಾಗಲಿದೆ ಎಂದರು.
ಶ್ರೀರಂಗಪಟ್ಟಣ ದಸರಾ ಹಬ್ಬದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮಂಡ್ಯ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಬೇಕು. ಜೊತೆಗೆ ನಮ್ಮ ನಾಡಿನ ಪರಂಪರೆ ಉಳಿಸುವ ಕೆಲಸವಾಗಬೇಕು ಎಂದರು.
ಕಾವೇರಿ ಆರತಿಗೆ ದಸರಾ ವೇಳೆ ಚಾಲನೆಗೆ ಚಿಂತನೆ:
ಹರಿದ್ವಾರ ಮತ್ತು ವಾರಾಣಸಿಯಲ್ಲಿ ನಡೆಯವ ಗಂಗಾರತಿಯು ಹಲವಾರು ವರ್ಷಗಳ ಇತಿಹಾಸ ಹೊಂದಿದೆ. ಗಂಗಾರತಿಯ ಶೈಲಿಯಲ್ಲಿಯೇ ಕಾವೇರಿ ಆರತಿಯನ್ನು ಕೆಆರ್‌ಎಸ್‌ನಲ್ಲಿ ಪ್ರಾರಂಭಿಸಲಾಗುವುದು. ಈ ಬಾರಿಯ ಶ್ರೀರಂಗಪಟ್ಟಣ ದಸರಾ ಕಾರ್ಯಕ್ರಮದಲ್ಲೇ ಪ್ರಾರಂಭಿಸಲು ಚಿಂತಿಸಲಾಗುತ್ತಿದೆ ಎಂದರು.
ಇದರ ಸಂಬಂಧವಾಗಿ ಶುಕ್ರವಾರ (ಸೆ.20) ಹರಿದ್ವಾರ ಮತ್ತು ವಾರಣಾಸಿಗೆ 28 ಜನರ ನಿಯೋಗ ತೆರಳಲಿದೆ. ಅಲ್ಲಿಂದ ಬಂದ ನಂತರ ಕಾವೇರಿ ಮಾತೆಗೆ ಗಂಗಾರತಿ ಸಲ್ಲಿಸುವ ಸಂಬಂಧ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಶ್ರೀರಂಗಪಟ್ಟಣ ದಸರಾಗೆ ಸಂಬಂಧಿಸಿದಂತೆ ಈಗಾಗಲೇ ಹಲವಾರು ಸಮಿತಿ ರಚನೆ ಮಾಡಲಾಗಿದೆ. ದಸರಾ ಯಶಸ್ಸಿಗೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸೆಸ್ಕಾಂ ಅಧ್ಯಕ್ಷ ಹಾಗೂ ಶ್ರೀರಂಗಪಟ್ಟಣ ಶಾಸಕ ಎ.ಬಿ.ರಮೇಶ್ ಬಂಡಿಸಿದ್ದೇಗೌಡ, ಶಾಸಕ ಪಿ.ರವಿಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಕ್ ತನ್ವೀರ್ ಆಸೀಫ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಮೈಷುಗರ್‌ಅಧ್ಯಕ್ಷ ಸಿ.ಡಿ.ಗಂಗಾಧರ್, ಉಪ ವಿಭಾಗಾಧಿಕಾರಿ ಶಿವಮೂರ್ತಿ ಇತರರಿದ್ದರು.