ಭದ್ರಾ ನೀರಿನ ವಿಚಾರವಾಗಿ ಮನವಿ ನೀಡಲು ಬಂದಿದ್ದ ಹರಿಹರದ ರೈತರ ಎದುರಲ್ಲೇ ಶಾಸಕ ಬಿ.ಪಿ.ಹರೀಶ್‌ರನ್ನು ಅವಾಚ್ಯವಾಗಿ, ಅಶ್ಲೀಲ ಪದ ಬಳಸಿ, ದುರಂಹಕಾರದ ಮಾತುಗಳನ್ನಾಡಿದ ಜಿಲ್ಲಾ ಮಂತ್ರಿ ಎಸ್ಸೆಸ್ ಮಲ್ಲಿಕಾರ್ಜುನ ಸಾರ್ವಜನಿಕವಾಗಿ ಕ್ಷಮೆಯಾಚಿಸದಿದ್ದರೆ ನಾವೂ ತಕ್ಕ ಪ್ರತ್ಯುತ್ತರ ನೀಡಬೇಕಾಗುತ್ತದೆ ಎಂದು ಬಿಜೆಪಿ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್ ಎಚ್ಚರಿಸಿದ್ದಾರೆ.
ಕನ್ನಡಪ್ರಭ ವಾರ್ತೆ ದಾವಣಗೆರೆ
ಭದ್ರಾ ನೀರಿನ ವಿಚಾರವಾಗಿ ಮನವಿ ನೀಡಲು ಬಂದಿದ್ದ ಹರಿಹರದ ರೈತರ ಎದುರಲ್ಲೇ ಶಾಸಕ ಬಿ.ಪಿ.ಹರೀಶ್‌ರನ್ನು ಅವಾಚ್ಯವಾಗಿ, ಅಶ್ಲೀಲ ಪದ ಬಳಸಿ, ದುರಂಹಕಾರದ ಮಾತುಗಳನ್ನಾಡಿದ ಜಿಲ್ಲಾ ಮಂತ್ರಿ ಎಸ್ಸೆಸ್ ಮಲ್ಲಿಕಾರ್ಜುನ ಸಾರ್ವಜನಿಕವಾಗಿ ಕ್ಷಮೆಯಾಚಿಸದಿದ್ದರೆ ನಾವೂ ತಕ್ಕ ಪ್ರತ್ಯುತ್ತರ ನೀಡಬೇಕಾಗುತ್ತದೆ ಎಂದು ಬಿಜೆಪಿ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಯಶವಂತ ರಾವ್ ಜಾಧವ್ ಎಚ್ಚರಿಸಿದ್ದಾರೆ.ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹರಿಹರ ಶಾಸಕ ಬಿ.ಪಿ.ಹರೀಶರನ್ನು ವಾಚಾಮಗೋಚರವಾಗಿ ಏಕವಚನದಲ್ಲಿ ಅವಾಚ್ಯ ಪದಗಳಿಂದ ನಿಂದಿಸಿದ್ದು ಖಂಡನೀಯ. ವಿಪಕ್ಷದ ಶಾಸಕರೊಬ್ಬರನ್ನು ಇಷ್ಟೊಂದು ಕೀಳು ಮಟ್ಟದ ಪದಗಳಿಂದ ಮಂತ್ರಿಯೊಬ್ಬರು ನಿಂದಿಸಿರುವುದು ರಾಜ್ಯದ ಇತಿಹಾಸದಲ್ಲೇ ಮೊದಲು. ಹರೀಶರನ್ನು ಅವಾಚ್ಯವಾಗಿ ನಿಂದಿಸಿದ ಎಸ್ಸೆಸ್ ಮಲ್ಲಿಕಾರ್ಜುನ ವಿಚಾರವನ್ನೇ ಇಲ್ಲಿಗೆ ಬಿಡುವ ಪ್ರಶ್ನೆಯೇ ಇಲ್ಲ ಎಂದರು.
ಹರಿಹರದ ರೈತರು ಸಹಜವಾಗಿಯೇ ಜಿಲ್ಲಾ ಮಂತ್ರಿಗೆ ಭದ್ರಾ ನಾಲೆಗೆ ನೀರು ಹರಿಸುವಂತೆ ಮನವಿ ಸಲ್ಲಿಸುತ್ತಾ ಅಲ್ಲಿನ ಶಾಸಕರಿಗೆ ಹರೀಶಣ್ಣ ಅಂದಿದ್ದಕ್ಕೆ ಜಿಲ್ಲಾ ಮಂತ್ರಿ ಮಲ್ಲಿಕಾರ್ಜುನಗೆ ತಡೆಯಲಾಗಿಲ್ಲ. ಅದೇ ಮಲ್ಲಿಕಾರ್ಜುನ ತಂದೆ ಶಾಮನೂರು ಶಿವಶಂಕಪ್ಪನವರಿಗೆ ಎಷ್ಟೋ ಜನ ಕಾಂಗ್ರೆಸ್ ಪಕ್ಷದ ಚೇಲಾಗಳು ಅಪ್ಪಾಜಿ ಎನ್ನುತ್ತಿದ್ದರು. ಹಾಗೆಲ್ಲಾ ಅಂದಾಗ ಸಂತೋಷಪಡುತ್ತಿದ್ದ ಜಿಲ್ಲಾ ಮಂತ್ರಿಗೆ ವಿಪಕ್ಷ ಶಾಸಕರಿಗೆ ರೈತರು ಅಣ್ಣ ಅಂದಿದ್ದಕ್ಕೆ ಮೈಗೆ ಬೆಂಕಿ ಬಿದ್ದವರಂತೆ ದುರ್ವರ್ತನೆ ತೋರಿದ್ದಾರೆ ಎಂದು ಅವರು ದೂರಿದರು.ನಮ್ಮ ಪಕ್ಷದ ಯಾರ ತಂಟೆಗೆ ನೀವು ಬಂದರೂ ನಾವು ಸುಮ್ಮನಿರುವುದಿಲ್ಲ. ಪಕ್ಷವೆಂದ ಮೇಲೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಇದ್ದೇ ಇರುತ್ತವೆ. ನಾಳೆ ಹೊನ್ನಾಳಿ ರೇಣುಕಾಚಾರ್ಯರ ಬಗ್ಗೆ ಮಾತನಾಡಿದರೂ ಖಂಡಿಸುತ್ತೇವೆ, ಒಂದು ಪಕ್ಷವಾಗಿ ನಾವೆಲ್ಲರೂ ಒಟ್ಟಾಗಿದ್ದೇವೆ, ಒಗ್ಗಟ್ಟಾಗಿದ್ದೇವೆ. ಜಿಲ್ಲಾ ಮಂತ್ರಿಯ ದುರಂಹಕಾರದ ವಿರುದ್ಧ ಒಟ್ಟಾಗಿ ಹೋರಾಟ ನಡೆಸುತ್ತೇವೆ. ಸೆ.12ರಂದು ನಮ್ಮ ಪಕ್ಷದ ನಾಯಕರು, ಪದಾಧಿಕಾರಿಗಳು, ಕಾರ್ಯಕರ್ತರ ಸಭೆ ಮಾಡುತ್ತೇವೆ, ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಶಾಮನೂರು ಒಡೆತನದ ಸ್ಯಾಮ್ಸನ್ ಡಿಸ್ಟಿಲರಿಯಲ್ಲಿ ತಯಾರಾದ ಥರ್ಡ್ಸ್ ಬ್ರಾಂಡಿ ಕುಡಿದು ಕೂಲಿ ಕಾರ್ಮಿಕ ಸತ್ತಿದ್ದ. ಸುದ್ದಿ ಪ್ರಕಟಿಸಿದ್ದ ಹಿರಿಯ ಪತ್ರಕರ್ತರೊಬ್ಬರಿಗೆ ಬಸವ ನಗರ ಪೊಲೀಸ್ ಠಾಣೆಯಲ್ಲೇ ಚಪ್ಪಲಿಯಲ್ಲಿ ಹೊಡೆದಿದ್ದನ್ನು ಜನ ಮರೆತಿಲ್ಲ. ವಿಪಕ್ಷದವರ ಆರೋಪಕ್ಕೆ ಸಭ್ಯವಾಗಿ, ಸನ್ನಡತೆಯಿಂದ ಪ್ರತಿಕ್ರಿಯಿಸುವ ಯೋಗ್ಯತೆ ಜಿಲ್ಲಾ ಮಂತ್ರಿಗಿಲ್ಲ. ಹಣ, ಅಧಿಕಾರದ ಮದದಿಂದ ಏನೇ ಮಾಡಿದರೂ ನಡೆಯುತ್ತದೆಂದು ಭಾವಿಸಿದಂತಿದೆ. ರೌಡಿಸಂ, ಗೂಂಡಾಗಿರಿ ಇಂತಹವರ ಹುಟ್ಟುಗುಣ. ಇವೆಲ್ಲಾ ಹೆಚ್ಚು ದಿನ ನಡೆಯಲ್ಲ. ಅದಕ್ಕೆಲ್ಲಾ ಹೆದರುವವರು ಈಗ ಯಾರೂ ಇಲ್ಲ ಎಂದು ಅವರು,ಕಾಂಗ್ರೆಸ್ಸಿನ ಶಾಸಕರಾದ ಬಿ.ದೇವೇಂದ್ರಪ್ಪ, ಬಸವರಾಜ ಶಿವಗಂಗಾಗೆ ಏಕವಚನದಲ್ಲಿ ನೆತ್ತಿಯ ಮೇಲೆ ಮಾಂಸವೂ ಆಗಿಲ್ಲವೆಂಬ ಪದವನ್ನು ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ಬಳಸಿದ್ದಾರೆ.
ಮೊದಲ ಸಲ ಶಾಸಕರಾಗಿ ನಿಮ್ಮ ಗಮನ ನೆತ್ತಿಯ ಮೇಲಿನ ಮಾಂಸ ಆಗಿದೆಯಾ? ಇಲ್ಲವಾ ಎಂಬುದನ್ನು ಸಾರ್ವಜನಿಕವಾಗಿ ತಿಳಿಸಿ. ನಾನು ಶಾಮನೂರು ಕುಟುಂಬದ ವಿರುದ್ಧ ಅಸಭ್ಯ ಪದ ಬಳಸಿದ್ದಾಗಿ ವೀರಾವೇಶದಿಂದ ಪತ್ರಿಕಾಗೋಷ್ಟಿ ಮಾಡಿದ ಕಾಂಗ್ರೆಸ್ ಮುಖಂಡರು ಈಗ ಹರಿಹರ ಶಾಸಕ ಹರೀಶರ ಬಗ್ಗೆ ಜಿಲ್ಲಾ ಮಂತ್ರಿ ಮಲ್ಲಿಕಾರ್ಜುನ ಆಡಿದ ಮಾತುಗಳನ್ನು ಯಾಕೆ ಖಂಡಿಸಿಲ್ಲ? ಈ ಎಲ್ಲರೂ ಸಚಿವ ಮಲ್ಲಿಕಾರ್ಜುನ ಗುಲಾಮರೆಂಬುದು ಇದರಿಂದಲೇ ತಿಳಿಯುತ್ತದೆ ಎಂದು ಯಶವಂತರಾವ್ ಜಾಧವ್ ಕುಟುಕಿದರು.ಪಕ್ಷದ ಮುಖಂಡರಾದ ಅಣಬೇರು ಜೀವನಮೂರ್ತಿ, ಎಂ.ಹಾಲೇಶ, ಬಿ.ರಮೇಶ ನಾಯ್ಕ, ಟಿಂಕರ್ ಮಂಜಣ್ಣ, ಜಯಪ್ರಕಾಶ, ಶಿವನಗೌಡ ಪಾಟೀಲ, ಪುಲಾಯ, ಕಿಶೋರಕುಮಾರ, ಎರ್ರಿಸ್ವಾಮಿ, ವೀರಣ್ಣ ಇತರರು ಇದ್ದರು.
ಚರ್ಚೆಗೆ ಸಮಯ, ಸ್ಥಳ ಘೋಷಿಸಿ: ದಿನೇಶ ಶೆಟ್ಟಿಗೆ ಕರೆದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ ಬಲಗೈ ಬಂಟರು. ದಿನೇಶ ಶೆಟ್ಟರಿಗೆ ತುಂಬಾ ಕೆಲಸವಿರುತ್ತದೆ. ನಾವು ನಿರುದ್ಯೋಗಿಗಳು, ಹಾಗಾಗಿ ಅಕ್ರಮಗಳ ಬಗ್ಗೆ ಚರ್ಚೆಗೆ ದೂಡಾ ಅಧ್ಯಕ್ಷ ದಿನೇಶ ಶೆಟ್ಟರೆ ಸಮಯ, ಸ್ಥಳ, ದಿನಾಂಕ ನಿಗದಿಪಡಿಸಲು. ಚರ್ಚೆಗೆ ಬರುವಾಗ ದಾಖಲೆಗಳ ಸಮೇತವೇ ಬರಬೇಕು. ನಮ್ಮ ಮೇಲಿನ ಆರೋಪ ಸಾಬೀತಾದರೆ ಅಕ್ರಮವಾಗಿ ಮಾಡಿಕೊಂಡ ಆಸ್ತಿ ಇದ್ದರೆ ತಾವು, ತಮ್ಮ ಪತ್ನಿ, ಪುತ್ರ ಮೂವರು ಖಾಲಿ ಸ್ಟ್ಯಾಂಪ್ ಪೇಪರ್ ಮೇಲೆ ಸಹಿ ಮಾಡುತ್ತೇವೆ. ಆಸ್ತಿಗಳನ್ನು ದೂಡಾ, ಪಾಲಿಕೆ ಹಿಂಪಡೆಯಲಿ. ಅದೇ ರೀತಿ ದಿನೇಶ ಶೆಟ್ಟಿ, ಜೊತೆಗೆ ಕುಳಿತಿದ್ದ ದೂಡಾ ಮಾಜಿ ಅಧ್ಯಕ್ಷರು, ಮಾಜಿ ಮೇಯರ್, ಪಾಲಿಕೆ ಮಾಜಿ ಸದಸ್ಯರು ತಮ್ಮ ಆಕ್ರಮ ಆಸ್ತಿಗಳನ್ನು ಸಂಬಂಧಿಸಿದ ಪ್ರಾಧಿಕಾರಕ್ಕೆ ಹಿಂದಿರುಗಿಸಬೇಕು. ದೂಡಾ ಅಧ್ಯಕ್ಷ ದಿನೇಶ ಶೆಟ್ಟಿ ಬೇಗ ಚರ್ಚೆಯ ದಿನಾಂಕ, ಸ್ಥಳ, ಸಮಯ ಬೇಗ ಘೋಷಿಸಲಿ.