ಮಂಗಳೂರು: ಇತ್ತೀಚೆಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ‘ಪಂಚ ರಾಜ್ಯಗಳ ಚುನಾವಣೆಗೆ ಪಂಚಕಜ್ಜಾಯ’ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ಈ ಬಜೆಟ್‌ಗೂ ರಾಜ್ಯಗಳ ಚುನಾವಣೆಗೂ ಯಾವುದೇ ಸಂಬಂಧ ಇಲ್ಲ. ಇದು ದೇಶದ ಆರ್ಥಿಕ ಪ್ರಗತಿಗೆ ಪೂರಕವಾದ ಬಜೆಟ್ ಎಂದು ಹಿರಿಯ ಲೆಕ್ಕಪರಿಶೋಧಕ, ಆರ್ಥಿಕ ತಜ್ಞ ಎಸ್.ಎಸ್. ನಾಯಕ್ ಹೇಳಿದ್ದಾರೆ.ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್ ವತಿಯಿಂದ ನಗರದ ಖಾಸಗಿ ಹೊಟೇಲ್‌ನಲ್ಲಿ ಶನಿವಾರ ಕೇಂದ್ರ ಬಜೆಟ್ ಕುರಿತು ಅವರು ಪ್ರಧಾನ ಉಪನ್ಯಾಸ ನೀಡಿದರು.
ಈ ಬಾರಿಯ ಬಜೆಟ್‌ನಲ್ಲಿ ವಿಶೇಷವಾಗಿ ಯಾವ ಕೊಡುಗೆಯನ್ನೂ ನೀಡಿಲ್ಲ ಎಂದು ಹೇಳುವವರು ಬಜೆಟ್‌ನ್ನು ಪೂರ್ತಿಯಾಗಿ ತಿಳಿದುಕೊಳ್ಳುವ ಗೋಜಿಗೆ ಹೋಗಿಲ್ಲ ಎಂದು ಹೇಳಿದ ಎಸ್.ಎಸ್. ನಾಯಕ್, ಈ ಬಜೆಟ್‌ನಲ್ಲಿ ಅನೇಕ ಹೊಸ ಯೋಜನೆಗಳನ್ನು ಘೋಷಿಸಲಾಗಿದೆ. ಯಾವುದೇ ಹೆಚ್ಚುವರಿ ತೆರಿಗೆಯನ್ನು ಹಾಕದೆ ಜನರಿಗೆ ಅನೇಕ ಉಪಯೋಗಗಳನ್ನು ನೀಡಿದೆ ಎಂದರು.ಭಾರತ ಈಗ ವಿಶ್ವದ ಅತಿ ವೇಗದ ಆರ್ಥಿಕ ಶಕ್ತಿಯಾಗಿ ಮೂಡಿಬರುತ್ತಿದೆ. ಅದಕ್ಕೆ ಈ ಬಜೆಟ್ ಪೂರಕವಾಗಿ ರೂಪಿಸಲ್ಪಟ್ಟಿದೆ. ಬಂಡವಾಳ ವೆಚ್ಚದಲ್ಲಿ ಏರಿಕೆಯಾಗಿದ್ದು, 12.20 ಲಕ್ಷ ಕೋಟಿ ರು. ಮೀಸಲಿಡಲಾಗಿದೆ. ಇದು ಬಜೆಟ್ ಗಾತ್ರದ ಶೇ.22.80 ಆಗಿದ್ದು, ಆರ್ಥಿಕ ಪ್ರಗತಿಗೆ ಪೂರಕವಾಗಿದೆ. ಮುಂಬರುವ ದಿನಗಳಲ್ಲಿ ದೇಶದ ನಂ.1 ಆರ್ಥಿಕ ಶಕ್ತಿಯಾಗಿ ಮೂಡಿಬರಲು ಸಹಾಯಕವಾಗಿದೆ ಎಂದು ಎಸ್.ಎಸ್. ನಾಯಕ್ ಹೇಳಿದರು.ಬಜೆಟ್‌ನ ವಿವಿಧ ಆಯಾಮಗಳ ಕುರಿತು ಪವರ್ ಪಾಯಿಂಟ್ ಪ್ರೆಸೆಂಟೇಶನ್ ಮೂಲಕ ನಾಯಕ್ ಅವರು ಬಜೆಟ್ ಕುರಿತು ಸುದೀರ್ಘ ವಿವರಗಳನ್ನು ನೀಡಿದರು.
ಕೆನರಾ ಬ್ಯಾಂಕ್ ಸರ್ಕಲ್ ಆಫೀಸ್‌ನ ಜನರಲ್ ಮ್ಯಾನೇಜರ್ ಮತ್ತು ಸರ್ಕಲ್ ಹೆಡ್ ಮಂಜುನಾಥ್ ಬಿ.ಸ ಸಿಂಘೈ ಬಜೆಟ್ ಕುರಿತು ವಿಚಾರ ಮಂಡನೆ ಮಾಡಿದರು. ಸೆಂಟರ್ ಫಾರ್ ಟ್ರೈನಿಂಗ್ ಸಿಬಿಎಫ್‌ಎಸ್ ಒಮನ್‌ನ ನಿರ್ದೇಶಕ ಡಾ.ಕೆ. ರಾಜೇಶ್ ನಾಯಕ್, ಮಂಗಳೂರು ಪ್ರೊಡಕ್ಟಿವಿಟಿ ಕೌನ್ಸಿಲ್‌ನ ಅಧ್ಯಕ್ಷ ಯು.ರಾಮರಾವ್ ಮತ್ತಿತರರು ಇದ್ದರು.