ಎಸ್ಸೆಸ್ಸೆಲ್ಸಿ: ಬಾಲಕಲ್ಯಾಣ ಕೇಂದ್ರದ ಸಹೋದರಿಯರ ಸಾಧನೆ

| Published : May 05 2025, 12:47 AM IST

ಎಸ್ಸೆಸ್ಸೆಲ್ಸಿ: ಬಾಲಕಲ್ಯಾಣ ಕೇಂದ್ರದ ಸಹೋದರಿಯರ ಸಾಧನೆ
Share this Article
  • FB
  • TW
  • Linkdin
  • Email

ಸಾರಾಂಶ

ಇಬ್ಬರೂ ಸಹೋದರಿಯರು ಕಳೆದ 10 ವರ್ಷಗಳಿಂದ ಬಾಲಕಲ್ಯಾಣ ಕೇಂದ್ರದಲ್ಲಿ ಆಶ್ರಯ ಪಡೆದು ಶಿಕ್ಷಣ ಪಡೆಯುತ್ತಿದ್ದಾರೆ. ಇವರೊಂದಿಗೆ ಇದೇ ಬಾಲಕಲ್ಯಾಣ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಇನ್ನೂ ಮೂವರು ವಿದ್ಯಾರ್ಥಿನಿಯರಾದ ಅಖಿಲಾ ಶೇಖ್ ಶೇ.79.36, ನಾಗಮ್ಮ ಕುಂಬಾರ ಶೇ.72.8 ಹಾಗೂ ಪ್ರಿತಿಕಾ ಹವಾಡೆ ಶೇ.52 ಅಂಕಗಳನ್ನು ಪಡೆದು ತೇರ್ಗಡೆಯಾಗಿದ್ದಾರೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ: ಸಾಧನೆಗೆ ಬಡತನ, ಶ್ರೀಮಂತಿಕೆ, ಅನಾಥೆಯರು ಎಂಬುದು ಎಂದಿಗೂ ಅಡ್ಡಿಯಾಗದು. ಬಾಲಕಲ್ಯಾಣ ಕೇಂದ್ರದಲ್ಲಿ ಆಶ್ರಯ ಪಡೆದ ಇಬ್ಬರು ಸಹೋದರಿಯರು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದು ಸಾಧನೆ ತೋರಿದ್ದಾರೆ.

ಇಲ್ಲಿನ ಕೇಶ್ವಾಪುರದ ಬನಶಂಕರಿ ಬಡಾವಣೆಯಲ್ಲಿರುವ ಸೇವಾಭಾರತಿ ಟ್ರಸ್ಟ್‌ನ ಮಾತೃಛಾಯಾ ಕಲ್ಯಾಣ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಸಹೋದರಿಯರಾದ ಅನಿತಾ ಕಣವಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ನಲ್ಲಿ ಹಾಗೂ ಸುನಿತಾ ಕಣವಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಇಬ್ಬರೂ ಸಹೋದರಿಯರು ಕಳೆದ 10 ವರ್ಷಗಳಿಂದ ಬಾಲಕಲ್ಯಾಣ ಕೇಂದ್ರದಲ್ಲಿ ಆಶ್ರಯ ಪಡೆದು ಶಿಕ್ಷಣ ಪಡೆಯುತ್ತಿದ್ದಾರೆ. ಇವರೊಂದಿಗೆ ಇದೇ ಬಾಲಕಲ್ಯಾಣ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಇನ್ನೂ ಮೂವರು ವಿದ್ಯಾರ್ಥಿನಿಯರಾದ ಅಖಿಲಾ ಶೇಖ್ ಶೇ.79.36, ನಾಗಮ್ಮ ಕುಂಬಾರ ಶೇ.72.8 ಹಾಗೂ ಪ್ರಿತಿಕಾ ಹವಾಡೆ ಶೇ.52 ಅಂಕಗಳನ್ನು ಪಡೆದು ತೇರ್ಗಡೆಯಾಗಿದ್ದಾರೆ.

125ಕ್ಕೆ 125 ಪಡೆದ ಅನಿತಾ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅನಿತಾ ಕಣವಿ ಪ್ರಥಮ ಭಾಷೆ ಕನ್ನಡಕ್ಕೆ 125ಕ್ಕೆ 125 ಅಂಕ ಪಡೆದಿದ್ದಾಳೆ. ಇನ್ನುಳಿದ ವಿಷಯಗಳಾದ ಇಂಗ್ಲಿಷ್‌-80, ಹಿಂದಿ-88, ಗಣಿತ-63, ವಿಜ್ಞಾನ-82, ಸಮಾಜ ವಿಜ್ಞಾನ-98 ಸೇರಿ ಒಟ್ಟು 536 ಪಡೆದಿದ್ದಾಳೆ. ಇವಳ ಸಹೋದರಿ ಸುನಿತಾ ಕನ್ನಡ-124, ಇಂಗ್ಲಿಷ-84, ಹಿಂದಿ-77, ಗಣಿತ- 60, ವಿಜ್ಞಾನ-80, ಸಮಾಜ ವಿಜ್ಞಾನ-71 ಸೇರಿ ಒಟ್ಟು 496 ಅಂಕ ಪಡೆದಿದ್ದಾಳೆ.

ಕಳೆದ 25 ವರ್ಷಗಳಿಂದ ಸೇವಾಭಾರತಿ ಟ್ರಸ್ಟಿನ ಅಡಿ ಮಾತೃಛಾಯಾ ಬಾಲಕಲ್ಯಾಣ ಕೇಂದ್ರವು ಕಾರ್ಯನಿರ್ವಹಿಸುತ್ತಿದ್ದು, ನೂರಾರು ಅನಾಥ ಮಕ್ಕಳ ಆಶ್ರಯ ತಾಣವಾಗುವುದರೊಂದಿಗೆ ಮಕ್ಕಳಿಗೆ ತಂದೆ-ತಾಯಿಯ ಕೊರಗು ಬರದಂತೆ ಆರೈಕೆ ಮಾಡುತ್ತ ಮುನ್ನಡೆಯುತ್ತಿದೆ. ಈ ಸಂಸ್ಥೆಯಲ್ಲಿ ಪ್ರಸ್ತುತ 1 ನೇ ತರಗತಿಯಿಂದ ಹಿಡಿದು ಪದವಿಯ ವರೆಗೆ 35 ಹೆಣ್ಣುಮಕ್ಕಳು ಆಶ್ರಯ ಪಡೆದಿದ್ದಾರೆ.

ಮಕ್ಕಳ ಸಾಧನೆ ಸಂತಸ ತಂದಿದೆ: ನಮ್ಮ ಬಾಲಕಲ್ಯಾಣ ಕೇಂದ್ರದಲ್ಲಿ ಆಶ್ರಯ ಪಡೆದಿರುವ ಐವರು ಬಾಲಕಿಯರು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿರುವುದು ಸಂತಸ ತಂದಿದೆ. ಇವರಲ್ಲಿ ಅನಿತಾ- ಸುನಿತಾ ಇಬ್ಬರೂ ಸಹೋದರಿಯರು ಡಿಸ್ಟಿಂಗ್ಷನ್‌, ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗುವುದರೊಂದಿಗೆ ಬಾಲಕಲ್ಯಾಣ ಕೇಂದ್ರದ ಹೆಸರು ತಂದಿದ್ದಾರೆ. ಇದು ಸೇವಾಭಾರತಿ ಟ್ರಸ್ಟ್‌ಗೆ ಸಲ್ಲುವ ಗೌರವ ಎಂದು ಮಾತೃಛಾಯಾ ಬಾಲಕಲ್ಯಾಣ ಕೇಂದ್ರದ ಅಧ್ಯಕ್ಷೆ ಕವಿತಾ ಗೋವಿಂದ ಜೋಶಿ ಕನ್ನಡಪ್ರಭಕ್ಕೆ ಸಂತಸ ಹಂಚಿಕೊಂಡರು.

ಪ್ರಸಕ್ತ ಸಾಲಿನಲ್ಲಿ ಮಾತೃಛಾಯಾ ಬಾಲಕಲ್ಯಾಣ ಕೇಂದ್ರದ ಐವರು ವಿದ್ಯಾರ್ಥಿನಿಯರು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕುಳಿತಿದ್ದರು. ಎಲ್ಲರೂ ತೇರ್ಗಡೆಯಾಗಿರುವುದು ಸಂತಸ ತಂದಿದೆ ಎಂದು ಮಾತೃಛಾಯಾ ಬಾಲಕಲ್ಯಾಣ ಕೇಂದ್ರದ ನಿರ್ವಹಣೆಯ ಉಸ್ತುವಾರಿ ರತ್ನಾ ಮಾತಾಜಿ ಹೇಳಿದರು.