Additional Deputy Commissioner B.T. Kumaraswamy's instructions at the SSLC exam pre-examination meeting

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಜಿಲ್ಲೆಯಲ್ಲಿ ಅತ್ಯಂತ ವ್ಯವಸ್ಥಿತವಾಗಿ ಮತ್ತು ಪಾರದರ್ಶಕವಾಗಿ ನಡೆಸಲು ಸಕಲ ಸಿದ್ಧತೆಗಳನ್ನು ಕೈಗೊಳ್ಳಬೇಕು ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ವಹಿಸುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪರೀಕ್ಷೆಯು ವಿದ್ಯಾರ್ಥಿಗಳ ಭವಿಷ್ಯದ ಪ್ರಮುಖ ಘಟ್ಟವಾಗಿದ್ದು, ಯಾವುದೇ ಲೋಪದೋಷಗಳಿಗೆ ಅವಕಾಶ ನೀಡದಂತೆ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಬೇಕು. ಪೊಲೀಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಯ ಸಮನ್ವಯದೊಂದಿಗೆ ಸಕಲ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ನಿರ್ದೇಶನ ನೀಡಿದರು.

ವಾಹನಗಳ ನಿಯೋಜನೆ: ಪರೀಕ್ಷಾ ಕಾರ್ಯಗಳಿಗಾಗಿ ಚಿತ್ರದುರ್ಗ ತಾಲೂಕಿಗೆ 9, ಚಳ್ಳಕೆರೆಗೆ 8, ಹಿರಿಯೂರಿಗೆ 6, ಹೊಸದುರ್ಗಕ್ಕೆ 5 ಹಾಗೂ ಮೊಳಕಾಲ್ಮೂರು ತಾಲೂಕಿಗೆ 4 ವಾಹನಗಳನ್ನು ನಿಯೋಜಿಸಲಾಗಿದೆ. ಪರೀಕ್ಷಾ ಸಾಮಗ್ರಿಗಳನ್ನು ಸಾಗಿಸಲು ಈಗಾಗಲೇ ಮಾರ್ಗಸೂಚಿ ಸಿದ್ಧಪಡಿಸಲಾಗಿದೆ. ವಿಶೇಷವಾಗಿ ರೈಲ್ವೆ ಕ್ರಾಸಿಂಗ್ ಇರುವ ಮಾರ್ಗಗಳಲ್ಲಿ ರೈಲು ಸಂಚಾರದ ಅವಧಿಯನ್ನು ಗಮನದಲ್ಲಿಟ್ಟುಕೊಂಡು, ಯಾವುದೇ ವಿಳಂಬವಾಗದಂತೆ ಪರ್ಯಾಯ ವ್ಯವಸ್ಥೆ ಅಥವಾ ಮುನ್ನೆಚ್ಚರಿಕೆ ವಹಿಸಬೇಕು. ಸಂಬಂಧಪಟ್ಟ ಬಿಇಒಗಳು ಈ ವಾಹನಗಳನ್ನು ಪಡೆದುಕೊಂಡು ಪರೀಕ್ಷಾ ಕೇಂದ್ರಗಳಿಗೆ ಸಕಾಲದಲ್ಲಿ ತಲುಪಲು ಬಳಸಿಕೊಳ್ಳಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಕ್ರಮ ನಡೆಯದಂತೆ ತಡೆಯಲು ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ವೀಕ್ಷಕರನ್ನಾಗಿ ನೇಮಿಸಲಾಗುತ್ತಿದೆ. ಪ್ರತಿ 4 ರಿಂದ 5 ಕೇಂದ್ರಗಳಿಗೆ ಒಬ್ಬರಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳನ್ನು ಮೇಲ್ವಿಚಾರಣೆಗೆ ನಿಯೋಜಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

*ಪ್ರಶ್ನೆ ಪತ್ರಿಕೆಗಳ ಭದ್ರತೆಗೆ ಆದ್ಯತೆ: ಪರೀಕ್ಷಾ ಮಂಡಳಿಯಿಂದ ಸರಬರಾಜು ಆಗುವ ಪ್ರಶ್ನೆ ಪತ್ರಿಕೆಗಳನ್ನು ಆಯಾ ತಾಲೂಕು ಕೇಂದ್ರಗಳ ಉಪ ಖಜಾನೆಗಳಲ್ಲಿ ಅತ್ಯಂತ ಭದ್ರತೆಯೊಂದಿಗೆ ಸಂಗ್ರಹಿಸಿಡಬೇಕು. ಪರೀಕ್ಷಾ ಸಾಮಗ್ರಿಗಳನ್ನು ಮಾರ್ಗಾಧಿಕಾರಿಗಳಿಗೆ ಹಸ್ತಾಂತರಿಸಲು ತಹಸೀಲ್ದಾರ್, ಬಿಇಒ ಮತ್ತು ಒಬ್ಬರು ಪ್ರೌಢಶಾಲಾ ಮುಖ್ಯೋಪಾಧ್ಯಾಯರನ್ನು ಒಳಗೊಂಡ ತ್ರಿಸದಸ್ಯ ಸಮಿತಿಯನ್ನು ರಚಿಸಬೇಕು. ಇವರ ಸಮ್ಮುಖದಲ್ಲೇ ಪ್ರಶ್ನೆ ಪತ್ರಿಕೆಗಳ ವಿತರಣೆ ಮತ್ತು ಉತ್ತರ ಪತ್ರಿಕೆಗಳ ಸಂಗ್ರಹ ನಡೆಯಬೇಕು. ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಸಣ್ಣ ಸುದ್ದಿಯೂ ವೇಗವಾಗಿ ಹರಡುವುದರಿಂದ ಅಧಿಕಾರಿಗಳು ಅತ್ಯಂತ ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಎಚ್ಚರಿಸಿದರು.

*ಮೂಲಭೂತ ಸೌಕರ್ಯಕ್ಕೆ ಒದಗಿಸಲು ಸೂಚನೆ: ಪರೀಕ್ಷಾ ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರು ಹಾಗೂ ಸ್ವಚ್ಛವಾದ ಶೌಚಾಲಯ ವ್ಯವಸ್ಥೆ ಇರಬೇಕು. ನೀರು ಮತ್ತು ಶೌಚಾಲಯಕ್ಕೆ ಸಮರ್ಪಕ ನೀರು ಸರಬರಾಜು ಇರುವುದನ್ನು ಅಧಿಕಾರಿಗಳು ಮುಂಚಿತವಾಗಿ ಖಚಿತಪಡಿಸಿಕೊಳ್ಳಬೇಕು. ಪರೀಕ್ಷಾ ಕೇಂದ್ರಗಳಲ್ಲಿ ಬಿಸಿಲಿನ ತಾಪ ಹೆಚ್ಚಿರುವುದರಿಂದ ವಿದ್ಯಾರ್ಥಿಗಳ ನೆರವಿಗೆ ಪ್ರಥಮ ಚಿಕಿತ್ಸಾ ಪೆಟ್ಟಿಗೆ ಹಾಗೂ ಆರೋಗ್ಯ ಸಿಬ್ಬಂದಿಯನ್ನು ನಿಯೋಜಿಸಲು ಡಿಎಚ್‌ಒ ಅವರಿಗೆ ಸಭೆಯಲ್ಲಿ ಸೂಚನೆ ನೀಡಲಾಯಿತು. ಪರೀಕ್ಷಾ ಕೇಂದ್ರದ ಸುತ್ತಲಿನ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದ್ದು, ಈ ವ್ಯಾಪ್ತಿಯಲ್ಲಿರುವ ಝೆರಾಕ್ಸ್ ಅಂಗಡಿಗಳನ್ನು ಪರೀಕ್ಷಾ ಅವಧಿಯಲ್ಲಿ ಕಡ್ಡಾಯವಾಗಿ ಮುಚ್ಚಬೇಕು. ಬೆಸ್ಕಾಂ ಅಧಿಕಾರಿಗಳು ಪರೀಕ್ಷಾ ಕೇಂದ್ರಗಳಿಗೆ ನಿರಂತರ ವಿದ್ಯುತ್ ಸಂಪರ್ಕ ಇರುವಂತೆ ನೋಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ನಿರ್ದೇಶನ ನೀಡಿದರು.

---

*ಬಿಗಿ ಪೊಲೀಸ್ ಬಂದೋಬಸ್ತ್: ಜಿಲ್ಲೆಯ ಒಟ್ಟು 84 ಪರೀಕ್ಷಾ ಕೇಂದ್ರಗಳಿಗೆ ಅಗತ್ಯವಿರುವ ಪೊಲೀಸ್ ಸಿಬ್ಬಂದಿ ನೇಮಿಸಲಾಗುವುದು. ನಗರದ ಸೆಂಟ್ ಜೋಸೆಫ್ ಶಾಲೆಯಲ್ಲಿ ಉತ್ತರ ಪತ್ರಿಕೆಗಳನ್ನು ಸಂಗ್ರಹಿಸಲು ತಾತ್ಕಾಲಿಕ ಭದ್ರತಾ ಕೊಠಡಿ ನಿರ್ಮಿಸಿದ್ದು. ಇಲ್ಲಿ ಚುನಾವಣೆ ಮಾದರಿಯಲ್ಲೇ 24*7 ಬಿಗಿ ಪೊಲೀಸ್ ಕಾವಲು ಇರಿಸಲಾಗುವುದು. ಜಿಲ್ಲೆಯ 6 ಮೌಲ್ಯಮಾಪನ ಕೇಂದ್ರಗಳಿಗೂ ಪರೀಕ್ಷೆ ಮುಗಿಯುವವರೆಗೆ ಸೂಕ್ತ ಪೊಲೀಸ್ ಭದ್ರತೆ ಒದಗಿಸುಲಾಗುವುದು. ಸೂಕ್ಷ್ಮ ಪರೀಕ್ಷಾ ಕೇಂದ್ರಗಳಿಗೆ ಹೆಚ್ಚಿನ ಪೊಲೀಸ್ ಭದ್ರತೆ ಬೇಕಾದಲ್ಲಿ ಬಿಇಓಗಳು ಸಂಬಂಧಪಟ್ಟ ವಿಭಾಗ ಡಿವೈಎಸ್ಪಿಗಳನ್ನು ಸಂಪರ್ಕಿಸುವಂತೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್ ಸಭೆಯಲ್ಲಿ ತಿಳಿಸಿದರು.ಪರೀಕ್ಷೆಗೆ 24,567 ವಿದ್ಯಾರ್ಥಿಗಳು ನೋಂದಣಿ:

2025-26ನೇ ಸಾಲಿನ ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆ-1 ಪರೀಕ್ಷೆಗಳು ಮಾರ್ಚ್‌ 18 ರಿಂದ ಏಪ್ರಿಲ್‌ 02 ರವರೆಗೆ ನಡೆಯಲಿವೆ. ಜಿಲ್ಲೆಯಲ್ಲಿ ಒಟ್ಟು 84 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, 24,567 ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಾಯಿಸಿಕೊಂಡಿದ್ದಾರೆ.

ಈ ಪೈಕಿ ಚಿತ್ರದುರ್ಗ ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ 7,058 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಚಳ್ಳಕೆರೆ 20, ಚಿತ್ರದುರ್ಗ 23, ಹಿರಿಯೂರು 13, ಹೊಳಲ್ಕೆರೆ 09, ಹೊಸದುರ್ಗ 11 ಮತ್ತು ಮೊಳಕಾಲ್ಮೂರ ತಾಲೂಕು ವ್ಯಾಪ್ತಿಯಲ್ಲಿ 08 ಪರೀಕ್ಷಾ ಕೇಂದ್ರಗಳಿವೆ. ಜಿಲ್ಲಾ ಪಂಚಾಯತ್‍ನಲ್ಲಿ ಪರೀಕ್ಷೆಯ ವೆಬ್ ಕಾಸ್ಟಿಂಗ್ ನಿಯಂತ್ರಣ ಕೊಠಡಿ ಕೇಂದ್ರಿಕೃತ ವೀಕ್ಷಣಾ ಘಟಕ ಸ್ಥಾಪಿಸಲಾಗಿದೆ. ಪರೀಕ್ಷೆಯ ನಂತರ ಉತ್ತರ ಪತ್ರಿಕೆಗಳನ್ನು ಚಿತ್ರದುರ್ಗ ನಗರದ ಸಂತ ಜೋಸೆಫ್ ಬಾಲಕಿಯರ ಪ್ರೌಢಶಾಲೆಯ ಭದ್ರತಾ ಕೊಠಡಿಯಲ್ಲಿ ಸಂಗ್ರಹಿಸಿಡಲಾಗುವುದು. ಮೌಲ್ಯಮಾಪನಕ್ಕಾಗಿ ಜಿಲ್ಲೆಯಲ್ಲಿ 06 ಕೇಂದ್ರಗಳನ್ನು ಗುರುತಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಮಂಜುನಾಥ ಎಂ.ಆರ್ ತಿಳಿಸಿದರು.

ಸಭೆಯಲ್ಲಿ ಡಯಟ್ ಪ್ರಾಂಶುಪಾಲ ನಾಗಭೂಷಣ್, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ ಪರೀಕ್ಷಾ ವೀಕ್ಷಕಿ ಹನುಮಕ್ಕ ಸೇರಿದಂತೆ, ಎಲ್ಲಾ ತಾಲೂಕುಗಳ ಬಿಇಒ 84 ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು.