ಕಲ್ಯಾಣ ಕರ್ನಾಟದಲ್ಲಿ ಶನಿವಾರ, ಭಾನುವಾರವೂ ಎಸ್ಸೆಸ್ಸೆಲ್ಸಿ ಕ್ಲಾಸ್‌

| Published : Feb 21 2025, 11:45 PM IST

ಸಾರಾಂಶ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದಲ್ಲಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳು ಸಹ ರಾಜ್ಯ ಫಲಿತಾಂಶದ ಕೊನೆಯ ಹತ್ತು ಸ್ಥಾನಗಳಲ್ಲಿ ಇರುವುದರಿಂದ ಫಲಿತಾಂಶ ಸುಧಾರಣೆಗೆ ಕಲಬುರಗಿ ವ್ಯಾಪ್ತಿಯ ಶಾಲಾ ಶಿಕ್ಷಣ ಇಲಾಖೆ ಹಲವಾರು ಕ್ರಮ ವಹಿಸುತ್ತಿದೆ. ಇನ್ಮುಂದೆ ಶನಿವಾರ, ಭಾನುವಾರವೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಲು ಸೂಚಿಸಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ:

ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶದಲ್ಲಿ ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳು ಸಹ ರಾಜ್ಯ ಫಲಿತಾಂಶದ ಕೊನೆಯ ಹತ್ತು ಸ್ಥಾನಗಳಲ್ಲಿ ಇರುವುದರಿಂದ ಫಲಿತಾಂಶ ಸುಧಾರಣೆಗೆ ಕಲಬುರಗಿ ವ್ಯಾಪ್ತಿಯ ಶಾಲಾ ಶಿಕ್ಷಣ ಇಲಾಖೆ ಹಲವಾರು ಕ್ರಮ ವಹಿಸುತ್ತಿದೆ. ಇನ್ಮುಂದೆ ಶನಿವಾರ, ಭಾನುವಾರವೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಲು ಸೂಚಿಸಿದೆ.

ಶಾಲಾ ಶಿಕ್ಷಣ ಇಲಾಖೆಯ ಕಲಬುರಗಿ ಅಪರ ಆಯುಕ್ತ ಡಾ. ಪ್ರಕಾಶ ಎಸ್., ಫೆ. 20ರಂದು ಈ ಕುರಿತು ಆದೇಶ ಹೊರಡಿಸಿ, 10 ಮಾರ್ಗಸೂಚಿ ನೀಡಿದ್ದಾರೆ. ಇದರಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದ್ದು, ಸರ್ಕಾರಿ ಮತ್ತು ಅನುದಾನಿತ ಹೈಸ್ಕೂಲ್‌ಗಳಲ್ಲಿ ಈ ವಾರದಿಂದ ಶನಿವಾರ ಮಧ್ಯಾಹ್ನದ ನಂತರವೂ 4.30ರ ವರೆಗೂ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ನಡೆಸಬೇಕು. ಹಾಗೆ ಭಾನುವಾರ ಬೆಳಗ್ಗೆ 10ರಿಂದ ಮಧ್ಯಾಹ್ನ ಬಿಸಿಯೂಟದ ವರೆಗೂ ವಿಶೇಷ ತರಗತಿ ನಡೆಸಿ, ವಿದ್ಯಾರ್ಥಿಗಳಿಗೆ ಹೆಚ್ಚು ಅಭ್ಯಾಸ ಮಾಡಿಸಬೇಕು. ಇದಕ್ಕಾಗಿ ಆಯಾ ಶಾಲೆಯ ಇಬ್ಬರು ಶಿಕ್ಷಕರನ್ನು ನಿಯೋಜಿಸಬೇಕೆಂದು ಸೂಚಿಸಿದೆ.

ವಿಶೇಷ ತರಗತಿಗಳಿಗೆ ಭಾನುವಾರ ಹಾಜರಾಗುವ ವಿದ್ಯಾರ್ಥಿಗಳಿಗೆ ಬಿಸಿಯೂಟದ ವ್ಯವಸ್ಥೆಯನ್ನು ಕಡ್ಡಾಯವಾಗಿ ಮಾಡಬೇಕು. ಈ ಕುರಿತು ಆಯಾ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಆದೇಶ ಹೊರಡಿಸಿ, ಉಸ್ತುವಾರಿ ನೋಡಿಕೊಳ್ಳಬೇಕು. ಹಾಗೆ ಸ್ಥಳೀಯ ಮಟ್ಟದ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ, ತರಗತಿಗಳು ನಡೆಯುತ್ತಿರುವ ಕುರಿತು ಮಾಹಿತಿ ಪಡೆಯಬೇಕು ಎಂದು ಆದೇಶದಲ್ಲಿ ತಿಳಿಸಿದೆ.

ವೆಬ್ ಕಾಸ್ಟಿಂಗ್‌:

ಫೆ. 25ರಿಂದ ಪ್ರಾರಂಭವಾಗುವ ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆಯಲ್ಲಿಯೂ ಸಹ ಕಡ್ಡಾಯವಾಗಿ ವೆಬ್ ಕಾಸ್ಟಿಂಗ್ ಅನ್ನು ಮಾಡಬೇಕು. ಇದರ ಮೇಲೆ ನಿಗಾ ಸಹ ಇಡಬೇಕು ಎಂದು ಹೇಳಲಾಗಿದೆ.

ಕಟ್ಟುನಿಟ್ಟಿನ ಕ್ರಮ:

ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಈ ವರ್ಷವೂ ಸಹ ಕಟ್ಟಾನಿಟ್ಟಾಗಿ ನಡೆಸಲು ನಿರ್ದೇಶನ ನೀಡಲಾಗಿದೆ. ನಕಲು ಮಾಡುವುದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ಇರುವುದಿಲ್ಲ ಹಾಗೂ ಈ ಕುರಿತು ನಿಗಾವಹಿಸಲು ಎಐ ತಂತ್ರಜ್ಞಾನ ಸಹ ಬಳಸಲಾಗುತ್ತದೆ.

ವೆಬ್‌ಕಾಸ್ಟಿಂಗ್‌ ಶುರುವಾಗಿದ್ದೆ ಕಲ್ಯಾಣ ಕರ್ನಾಟಕದಲ್ಲಿಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವ್ಯಾಪಕ ನಕಲು ನಡೆಯುವುದನ್ನು ತಡೆಯಲು ಕಳೆದ ವರ್ಷ ಮೊಟ್ಟಮೊದಲು ವೆಬ್‌ಕಾಸ್ಟಿಂಗ್ ಅಳವಡಿಸಿದ್ದೇ ಕಲ್ಯಾಣ ಕರ್ನಾಟಕದಲ್ಲಿ. ಈ ವ್ಯಾಪ್ತಿಯಲ್ಲಿ ಆರಂಭಿಸಿ ಆದೇಶಿಸಿದ ಬಳಿಕ ಸಿಎಂ ಸಿದ್ದರಾಮಯ್ಯ ಅವರನ್ನು ಈ ಭಾಗದ ಜನಪ್ರತಿನಿಧಿಗಳು ಭೇಟಿಯಾಗಿ ರಾಜ್ಯಾದ್ಯಂತ ಈ ವ್ಯವಸ್ಥೆ ಜಾರಿಗೊಳಿಸಿ. ಕಲ್ಯಾಣ ಕರ್ನಾಟಕಕ್ಕೆ ಮಾತ್ರ ಸೀಮಿತವಾದರೆ ಬೇಡ ಎಂದು ಲಿಖಿತ ಮನವಿ ನೀಡಿದ್ದಾರೆ. ಬಳಿಕ ರಾಜ್ಯಾದ್ಯಂತ ವೆಬ್‌ಕಾಸ್ಟಿಂಗ್ ವಿಸ್ತರಿಸಲಾಯಿತು. ಇದರಿಂದ ಪರೀಕ್ಷೆಯಲ್ಲಿ ನಕಲು ಮಾಡಲು ಬ್ರೇಕ್‌ ಬಿದ್ದಿತ್ತು. ಇದರಿಂದ ಎಸ್‌ಎಸ್‌ಎಲ್‌ಸಿ ಫಲಿತಾಂಶ ಗಣನೀಯವಾಗಿ ಇಳಿಕೆ ಆಯಿತು. ಈ ವರ್ಷ ಎಐ ತಂತ್ರಜ್ಞಾನದ ಮೂಲಕ ಪರೀಕ್ಷೆಯ ಮೇಲೆ ನಿಗಾ ಇಡಲಾಗುತ್ತಿದೆ.ಶನಿವಾರ ಹಾಗೂ ಭಾನುವಾರ ವಿಶೇಷ ತರಗತಿ ನಡೆಸಿ ಕಾಲಕಾಲಕ್ಕೆ ವರದಿ ನೀಡಬೇಕು. ಇದನ್ನು ಸ್ಥಳೀಯ ಡಿಡಿಪಿಐಗಳು ಉಸ್ತುವಾರಿ ನೋಡಿಕೊಳ್ಳಬೇಕು. ಏ. 4ರ ವರೆಗೆ ಈ ಆದೇಶ ಚಾಲ್ತಿಯಲ್ಲಿ ಇರಲಿದೆ ಎಂದು ಕಲಬುರಗಿ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತ ಡಾ. ಪ್ರಕಾಶ ಎಸ್. ಹೇಳಿದ್ದಾರೆ.