ಸಾರಾಂಶ
ಅಳ್ನಾವರ: ಶಿಕ್ಷಣ ಕಾಶಿಯ ಹೆಸರನ್ನು ಮತ್ತೆ ಎಸ್ಸೆಸ್ಸೆಲ್ಸಿ ಫಲಿತಾಂಶದ ಮೂಲಕ ಮುನ್ನಲೆಗೆ ತರಲು ಸಂಕಲ್ಪ ಮಾಡಿರುವ ಜಿಲ್ಲಾಧಿಕಾರಿ ದಿವ್ಯಪ್ರಭು, ಎಸ್ಸೆಸ್ಸೆಲ್ಸಿ ಪರೀಕ್ಷೆಯ ಕೊನೆ ದಿನ ಶುಕ್ರವಾರ ತೃತೀಯ ಭಾಷಾ ಪರೀಕ್ಷೆಗೆ ಧಾರವಾಡ ಸಮೀಪದ ಮುಗದ ಮತ್ತು ಅಳ್ನಾವರ ಪಟ್ಟಣದಲ್ಲಿರುವ ಮಿಲ್ಲತ್ ಹೈಸ್ಕೂಲ್ ಹಾಗೂ ಎನ್.ಇ.ಎಸ್ ಶಾಲೆಗಳಲ್ಲಿದ್ದ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿ ಮಕ್ಕಳೊಂದಿಗೆ ಕೆಲಹೊತ್ತು ಕಾಲಕಳೆದರು.
ಇಲ್ಲಿಯ ಎನ್.ಇ.ಎಸ್.ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಮುಗಿಯುವವರಗೂ ನಿಂತು ವಿದ್ಯಾರ್ಥಿಗಳ ಅನಿಸಿಕೆ ಪಡೆದುಕೊಂಡರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗೆ ರೂಢಿ ಪರೀಕ್ಷೆ ಮತ್ತು ಮಿಷನ್ ವಿದ್ಯಾಕಾಶಿ ಕಾರ್ಯಕ್ರಮಗಳು ಮಕ್ಕಳ ಕಲಿಕೆಗೆ ಉಪಯುಕ್ತವಾಗಿವೆ. ಓದಿನಲ್ಲಿ ಆಸಕ್ತಿ ಮೂಡಿಸಿಕೊಳ್ಳಲು ಸಹ ಅಷ್ಟೇ ಸಹಕಾರಿವಾಗಿವೆ. ಈ ಕಾರ್ಯಕ್ರಮದಲ್ಲಿ ಜಿಲ್ಲಾಡಳಿತದೊಂದಿಗೆ ಎಲ್ಲ ಇಲಾಖೆಗಳು, ಶಾಲಾ ಉಸ್ತುವಾರಿ ಸಮಿತಿ ಮತ್ತು ಜನಪ್ರತಿನಿಧಿಗಳು, ಸಾರ್ವಜನಿಕರು ಪಾಲ್ಗೊಂಡು ಮಕ್ಕಳಿಗೆ ಪ್ರೇರೆಪಿಸಿದ್ದಾರೆ. ಇವರೆಲ್ಲರ ಪ್ರಯತ್ನದ ಫಲವಾಗಿ ರಾಜ್ಯದ ಒಟ್ಟಾರೆ ಫಲಿತಾಂಶದಲ್ಲಿ ಧಾರವಾಡ ಜಿಲ್ಲೆ ಮೊದಲ ಹತ್ತು ಸ್ಥಾನದಲ್ಲಿರಲಿದೆ ಎನ್ನುವ ಭರವಸೆ ಇದೆ ಎಂದರು.ಸುಧಾರಣೆ ಕ್ರಮ ತೃಪ್ತಿ ತಂದಿವೆ: ಜಿಲ್ಲೆಯಲ್ಲಿ ಕೈಗೊಂಡ ಫಲಿತಾಂಶ ಸುಧಾರಣಾ ಕಾರ್ಯಕ್ರಮ ತೃಪ್ತಿ ತಂದಿವೆ ಎಂದ ಅವರು, ಪರಿಕ್ಷಾ ಮಾರ್ಗಸೂಚಿಯಂತೆ ಯಾವುದೇ ಆತಂಕ ಅಡೆತಡೆಗಳಿಲ್ಲದೆ ಜಿಲ್ಲೆಯಲ್ಲಿ ಪರೀಕ್ಷೆ ಮುಗಿದಿದ್ದು ಪರೀಕ್ಷೆಯಲ್ಲಿ ನಕಲನ್ನು ತಡೆಯಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದೆ. ಸಿಸಿ ಕ್ಯಾಮೇರಾ ಅಳವಡಿಸಿ ಅದರ ವೀಕ್ಷಣೆಗೆ ಸಿಇಒ ನೇತೃತ್ವದಲ್ಲಿ ತಂಡ ರಚನೆ ಮಾಡಿ ಮೇಲ್ವಿಚಾರಣೆ ಮಾಡಲಾಗಿದೆ. ಜಿಲ್ಲೆಯಲ್ಲಿ 106 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. 28666 ಮಕ್ಕಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದು, ಹಿಂದಿನ ಸಾಲಿನ ಪರೀಕ್ಷೆಯ ಅಂಕಿ ಸಂಖ್ಯೆ ನೋಡಿದರೆ ಈ ಬಾರಿ ಗೈರಾದವರ ಸಂಖ್ಯೆ ಅತಿ ಕಡಿಮೆ ಇದೆ. ಕೊನೆ ದಿನವಾದ ಶುಕ್ರವಾರ ತೃತಿಯ ಭಾಷಾ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ 494 ಮಕ್ಕಳು ಗೈರು ಉಳಿದಿದ್ದು 28010 ಮಕ್ಕಳು ಹಾಜರಾಗಿದ್ದರು ಎಂದರು.
ಶಾಲಾ ಪ್ರಾರಂಭದ ದಿನದಿಂದಲೇ ಮಕ್ಕಳಿಗೆ ಪರೀಕ್ಷೆಯ ಬಗ್ಗೆ ಮಾರ್ಗದರ್ಶನ, ವಿಶೇಷ ತರಗತಿಗಳ ಆಯೋಜನೆ, ಶಿಬಿರಗಳ ಆಯೋಜನೆ ಮತ್ತು ಅವರಲ್ಲಿದ್ದ ಭಯ ನಿವಾರಣೆಗೆ ತೆಗೆದುಕೊಂಡ ಕ್ರಮಗಳ ಪರಿಣಾಮ ಹೆಚ್ಚಿನ ಮಕ್ಕಳು ಧೈರ್ಯದಿಂದ ಈ ಭಾರಿ ಪರೀಕ್ಷೆ ಬರೆಯುವಂತಾಗಿದೆ. ಪಾರದರ್ಶಕವಾಗಿ ಪರೀಕ್ಷೆ ನಡೆಸಲಾಗಿದ್ದು ಮಕ್ಕಳು ಹೆಚ್ಚಿನ ಅಂಕ ಪಡೆಯುವ ವಿಶ್ವಾಸ ಮಕ್ಕಳು ಸಹ ವ್ಯಕ್ತಪಡಿಸಿದ್ದಾರೆ. ಖುಷಿಯಿಂದ ಪರೀಕ್ಷೆ ಬರೆದಿದ್ದಾರೆ. ಈಗಾಗಲೇ ಜಿಲ್ಲೆಯ ಎಲ್ಲ ತಾಲೂಕುಗಳಿಗೂ ಭೇಟಿ ನೀಡಿ ವೀಕ್ಷಣೆ ಮಾಡಲಾಗಿದೆ ಎಂದರು.ತಹಸೀಲ್ದಾರ್ ಬಸವರಾಜ ಬೆಣ್ಣೆಶಿರೂರ, ತಾಪಂ ಇಒ ಪ್ರಶಾಂತ ತುರಕಾಣಿ, ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ ಇದ್ದರು.
ಪ್ರಾಥಮಿಕದಿಂದ ಸುಧಾರಣೆ: ಬರುವ ಶೈಕ್ಷಣಿಕ ವರ್ಷದಿಂದ ಪ್ರಾಥಮಿಕ ಹಂತದಲ್ಲಿಯೆ ಮಿಷನ ವಿದ್ಯಾಕಾಶಿಯ ಮೂಲಕ ಮಕ್ಕಳಲ್ಲಿ ಓದು, ಬರಹ, ಆಲಿಸುವಿಕೆ ಹಾಗೂ ವಾಕ್ ಚಾತುರ್ಯತೆ ಬೆಳೆಸುವ ನಿಟ್ಟಿನಲ್ಲಿ ಶೈಕ್ಷಣಿಕ ಸುಧಾರಣೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಈ ಬಗ್ಗೆ ಯೋಜನೆಗಳನ್ನು ತಯಾರಿ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.