ಎಸ್ಸೆಸ್ಸೆಲ್ಸಿ ಪರೀಕ್ಷೆ: ಮೊದಲ ದಿನ 204 ವಿದ್ಯಾರ್ಥಿಗಳು ಗೈರು; 2 ಸಾವು

| Published : Mar 26 2024, 01:01 AM IST

ಎಸ್ಸೆಸ್ಸೆಲ್ಸಿ ಪರೀಕ್ಷೆ: ಮೊದಲ ದಿನ 204 ವಿದ್ಯಾರ್ಥಿಗಳು ಗೈರು; 2 ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಾದ್ಯಂತ ಸೋಮವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಯಾವುದೇ ಅಡ್ಡಿ-ಆತಂಕಗಳಿಲ್ಲದೆ ಸುಗಮವಾಗಿ ನಡೆಯಿತು. 78 ಕೇಂದ್ರಗಳಲ್ಲಿ 22036 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, ಮೊದಲ ದಿನವೇ 149 ರೆಗ್ಯುಲರ್ ಸೇರಿದಂತೆ ಒಟ್ಟಾರೆ 204 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಇನ್ನು ಪರೀಕ್ಷೆ ಬರಿಯಬೇಕಿದ್ದ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆಯೂ ನಡೆದಿದೆ.

ಶಿವಮೊಗ್ಗ: ಜಿಲ್ಲೆಯಾದ್ಯಂತ ಸೋಮವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಯಾವುದೇ ಅಡ್ಡಿ-ಆತಂಕಗಳಿಲ್ಲದೆ ಸುಗಮವಾಗಿ ನಡೆಯಿತು. 78 ಕೇಂದ್ರಗಳಲ್ಲಿ 22036 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದು, ಮೊದಲ ದಿನವೇ 149 ರೆಗ್ಯುಲರ್ ಸೇರಿದಂತೆ ಒಟ್ಟಾರೆ 204 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಇನ್ನು ಪರೀಕ್ಷೆ ಬರಿಯಬೇಕಿದ್ದ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿರುವ ಘಟನೆಯೂ ನಡೆದಿದೆ.

ಸೋಮವಾರ ಪ್ರಥಮ ಭಾಷೆ ವಿಷಯದ ಪರೀಕ್ಷೆ ನಡೆದಿದ್ದು, 21601 ರೆಗ್ಯೂಲರ್‌ ವಿದ್ಯಾರ್ಥಿಗಳು, 435 ಪುನರಾವರ್ತಿತ ವಿದ್ಯಾರ್ಥಿಗಳು ಸೇರಿ ಒಟ್ಟು 22036 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. ಇದರಲ್ಲಿ 21832 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 149 ರೆಗ್ಯೂಲರ್‌ ವಿದ್ಯಾರ್ಥಿಗಳು, 55 ಪುನರಾವರ್ತಿತ ವಿದ್ಯಾರ್ಥಿಗಳು ಗೈರಾಗಿದ್ದರು.

ಜಿಲ್ಲೆಯ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ಸಿಸಿ ಕ್ಯಾಮರಾ ಕಣ್ಣಾವಲಿರಿಸಲಾಗಿತ್ತು. ಕ್ರಮವಾಗಿ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀ. ದೂರದವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಅಲ್ಲದೆ, ಜೆರಾಕ್ಸ್ ಸೆಂಟರ್‌ಗಳನ್ನೂ ಮುಚ್ಚಲಾಗಿತ್ತು. ಪ್ರತಿ ಸೆಂಟರ್‌ಗೂ ಪೊಲೀಸ್ ಭದ್ರತೆಯನ್ನೂ ಕಲ್ಪಿಸಲಾಗಿತ್ತು. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಡಿಡಿಪಿಐ ಸಿ.ಆ‌ರ್.ಪರಮೇಶ್ವರಪ್ಪ ಸೇರಿದಂತೆ ಹಿರಿಯ ಅಧಿಕಾರಿಗಳು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಆನಂದಪುರದಲ್ಲಿ 9 ವಿದ್ಯಾರ್ಥಿಗಳು ಗೈರು: ಸ್ಥಳೀಯ ಕರ್ನಾಟಕ ಪಬ್ಲಿಕ್ ಶಾಲೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ 364 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದು, ಇದರಲ್ಲಿ 355 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. 9 ವಿದ್ಯಾರ್ಥಿಗಳು ಗೈರಾಗಿದ್ದಾರೆ.

ಪಿಕ್‌ಅಪ್‌ನಲ್ಲಿ ಬಂದ ವಿದ್ಯಾರ್ಥಿಗಳು

ರಿಪ್ಪನ್‍ಪೇಟೆ: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷಾ ಕೇಂದ್ರಕ್ಕೆ ಪರೀಕ್ಷೆ ಬರೆಯಲು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳನ್ನು ಪಿಕ್‍ಅಪ್‍ನಲ್ಲಿ ತುಂಬಿಕೊಂಡು ಬಂದಿದ್ದು ಸಾರ್ವಜನಿಕರ ಮತ್ತು ಪೋಷಕರ ಅಸಮಾಧಾನಕ್ಕೆ ಕಾರಣವಾಗಿದೆ. ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜ್ ಮತ್ತು ಪ್ರೌಢಶಾಲೆಯಲ್ಲಿ ಎರಡು ಪರೀಕ್ಷಾ ಕೇಂದ್ರಗಳಿವೆ. ಪರೀಕ್ಷೆ ಬರೆಯಲು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರಿ ಬಸ್ ವ್ಯವಸ್ಥೆಯೊಂದಿಗೆ ಉಚಿತ ಬಸ್ ಸಂಚಾರ ಕಲ್ಪಿಸಲಾಗಿದೆ. ಆದರೆ, ಹಿಂದುಳಿದ ಹೊಸನಗರ ತಾಲೂಕಿನ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ಮಾತ್ರ ಈ ಸೌಲಭ್ಯ ಇಲ್ಲವಾಗಿದ ಹಿನ್ನೆಲೆಯಲ್ಲಿ ಪಿಕ್‌ಅಪ್‌ ವಾಹನದಲ್ಲಿ ಬಂದಿದ್ದಾರೆ.

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಬೇಕಾಗಿದ್ದ ವಿದ್ಯಾರ್ಥಿ ಆತ್ಮಹತ್ಯೆ ಆನಂದಪುರ: ಎಸ್ಸೆಸ್ಸೆಲ್ಸಿ ಪರೀಕ್ಷೆ ಬರಿಯಬೇಕಾಗಿದ್ದ ವಿದ್ಯಾರ್ಥಿ ನೇಣಿಗೆ ಶರಣಾದ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ. ಸಮೀಪದ ಯಡೇಹಳ್ಳಿಯ ಪರಶುರಾಮ(17) ಎಂಬ ವಿದ್ಯಾರ್ಥಿ ಆನಂದಪುರ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದು, ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಾರಂಭವಾಗುವ ಮುನ್ನವೇ ನೇಣಿಗೆ ಶರಣಾಗಿದ್ದಾನೆ. ವಿದ್ಯಾರ್ಥಿ ಪರಶುರಾಮ್ ಮನೆಯ ಹಿಂಬದಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಷಯ ತಿಳಿದ ಸಬ್ ಇನ್ಸ್ಪೆಕ್ಟರ್ ಯುವರಾಜ್ ಕಂಬಳಿ ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಮಾಹಿತಿ ಇನ್ನು ಲಭ್ಯವಾಗಿಲ್ಲ. ಈ ಪ್ರಕರಣ ಆನಂದಪುರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ.

ವಿದ್ಯಾರ್ಥಿನಿ ಸಾವು:

ಹೊಳೆಹೊನ್ನೂರು: ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಬೇಕಿದ್ದ ವಿದ್ಯಾರ್ಥಿನಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಭಾನುವಾರ ಸಂಜೆ ಮೂಡಲವಿಠಲಾಪುರ ಗ್ರಾಮದಲ್ಲಿ ನಡೆದಿದೆ. ಜಂಬರಘಟ್ಟ ಗ್ರಾಮದ ವಿದ್ಯಾರ್ಥಿನಿ ಉಮ್ಮೆ ಕೂಲ್ಸುಂ(14) ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಹಾಜರಾಗಲೆಂದು ಗ್ರಾಮದಿಂದ ಶಿವಮೊಗ್ಗಕ್ಕೆ ತೆರಳಲು ಬಸ್ ಹತ್ತಲೆಂದು ರಸ್ತೆ ದಾಟುವಾಗ ಚನ್ನಗಿರಿ ಕಡೆಯಿಂದ ಶಿವಮೊಗ್ಗ ಕಡೆಗೆ ತೆರಳುತ್ತಿದ್ದ ಇನೋವಾ ಕಾರು ಡಿಕ್ಕಿ ಹೊಡೆದು ಬಾಲಕಿ ಸ್ಥಳದಲ್ಲೇ ಸಾವನಪ್ಪಿದ್ದಾಳೆ. ಈ ಬಗ್ಗೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.