ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಪಾಂಡವಪುರ ತಾಲೂಕಿನಿಂದ 2276 ವಿದ್ಯಾರ್ಥಿಗಳು ನೋಂದಣಿ

| Published : Mar 21 2024, 01:13 AM IST

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಪಾಂಡವಪುರ ತಾಲೂಕಿನಿಂದ 2276 ವಿದ್ಯಾರ್ಥಿಗಳು ನೋಂದಣಿ
Share this Article
  • FB
  • TW
  • Linkdin
  • Email

ಸಾರಾಂಶ

ಪಾಂಡವಪುರ ತಾಲೂಕಿನಲ್ಲಿ ಒಟ್ಟು 2276 ವಿದ್ಯಾರ್ಥಿಗಳಲ್ಲಿ 1119 ಹೆಣ್ಣು ಮಕ್ಕಳು, 1157 ಗಂಡು ಮಕ್ಕಳಿದ್ದಾರೆ.ಸರಕಾರಿ ಶಾಲೆಯ-1061, ಅನುದಾನಿತ ಶಾಲೆ-467, ಅನುದಾನ ರಹಿತ-511 ಹಾಗೂ ವಸತಿ ಶಾಲೆಯ-237 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷಾ ಮಂಡಳಿಯ ಸಲಹೆ, ಸೂಚನೆಗಳು ಹಾಗೂ ಮಾರ್ಗದರ್ಶನದಂತೆ ಪ್ರತಿಯೊಬ್ಬ ಶಿಕ್ಷಕರು, ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಹಾಗೂ ಸಿಬ್ಬಂದಿ ಕೆಲಸ ಮಾಡಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಎಸ್‌ಎಸ್‌ಎಲ್‌ಸಿ ಪರೀಕ್ಷೆಯೂ ಮಾ.25ರಿಂದ ಆರಂಭಗೊಂಡು ಏ.4ರವರೆಗೆ ನಡೆಯಲಿದೆ. ತಾಲೂಕಿನಲ್ಲಿ ಒಟ್ಟು 2276 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಚಂದ್ರಶೇಖರ್ ತಿಳಿಸಿದರು.

ಪಟ್ಟಣದ ಬಿಆರ್‌ಸಿ ಕೇಂದ್ರದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಸಂಬಂಧ ಪರೀಕ್ಷಾ ಕೇಂದ್ರದ ಅಧೀಕ್ಷಕರು, ಉಪ ಮುಖ್ಯ ಅಧೀಕ್ಷಕರಿಗೆ ನಡೆಸಿದ ಕಾರ್ಯಾಗಾರದಲ್ಲಿ ಮಾತನಾಡಿ, ಯಾವುದೇ ಗೊಂದಲಗಳು ಎದುರಾಗದಂತೆ ಪರೀಕ್ಷೆ ನಡೆಸುವಂತೆ ಸೂಚಿಸಿದರು.

ಪರೀಕ್ಷಾ ಮಂಡಳಿಯ ಸಲಹೆ, ಸೂಚನೆಗಳು ಹಾಗೂ ಮಾರ್ಗದರ್ಶನದಂತೆ ಪ್ರತಿಯೊಬ್ಬ ಶಿಕ್ಷಕರು, ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಹಾಗೂ ಸಿಬ್ಬಂದಿ ಕೆಲಸ ಮಾಡಬೇಕು. ವಿದ್ಯಾರ್ಥಿಗಳು ಯಾವುದೇ ಗೊಂದಲ, ಸಮಸ್ಯೆಗಳು ಎದುರಾಗದಂತೆ ಪರೀಕ್ಷೆ ಬರೆಯಲು ಕ್ರಮವಹಿಸಬೇಕು ಎಂದು ಸಲಹೆ ನೀಡಿದರು.

ತಾಲೂಕಿನಲ್ಲಿ ಒಟ್ಟು 2276 ವಿದ್ಯಾರ್ಥಿಗಳಲ್ಲಿ 1119 ಹೆಣ್ಣು ಮಕ್ಕಳು, 1157 ಗಂಡು ಮಕ್ಕಳಿದ್ದಾರೆ.ಸರಕಾರಿ ಶಾಲೆಯ-1061, ಅನುದಾನಿತ ಶಾಲೆ-467, ಅನುದಾನ ರಹಿತ-511 ಹಾಗೂ ವಸತಿ ಶಾಲೆಯ-237 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದರು.

ಪರೀಕ್ಷೆಗಾಗಿ 6 ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದೆ. ಸರ್ಕಾರಿ ಪದವಿ ಪೂರ್ವ ಕಾಲೇಜು(ಪ್ರೌಢಶಾಲಾ ವಿಭಾಗ) ಪಾಂಡವಪುರ, ವಿಜಯ ಪದವಿ ಪೂರ್ವಕಾಲೇಜು ಪಾಂಡವಪುರ, ಪಿಇಎಸ್ ಬಾಲಕೀಯರ ಪದವಿ ಪೂರ್ವ ಕಾಲೇಜು ಪಾಂಡವಪುರ, ಪಿಎಸ್‌ಎಸ್‌ಕೆ ಪ್ರೌಢಶಾಲೆ ರೈಲ್ವೇನಿಲ್ದಾಣ ಪಾಂಡವಪುರ, ಸ.ಪ.ಪೂ.ಕಾಲೇಜು(ಕೆಪಿಎಸ್) ಚಿನಕುರಳಿ ಪಾಂಡವಪುರ ತಾ., ಗುರುಶನೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಮೇಲುಕೋಟೆ ಪಾಂಡವಪುರ ತಾಲೂಕು ಗುರುತಿಸಲಾಗಿದೆ ಎಂದರು.

ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ, ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಪರೀಕ್ಷೆ ಆರಂಭವಾಗುವ 1 ಗಂಟೆ ಮುಂಚಿತವಾಗಿ ಆಯಾ ಪರೀಕ್ಷಾ ಕೇಂದ್ರದ ಅಧೀಕ್ಷಕರು, ಅಧಿಕಾರಿಗಳು, ಶಿಕ್ಷಕರು, ಸಿಬ್ಬಂದಿ ಆಗಮಿಸಿ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.

ಪರೀಕ್ಷಾ ಕೇಂದ್ರಕ್ಕೆ ಬರುವ ಪ್ರಶ್ನೆ ಪತ್ರಿಕೆಯನ್ನು ಕ್ರಮಬದ್ಧವಾಗಿ ಅಧಿಕಾರಿಗಳ ಮುಂದೆಯೇ ತೆರೆದು ವಿದ್ಯಾರ್ಥಿಗಳ ನೀಡಬೇಕು. ಈ ಹಿಂದೆ ಖಾಸಗಿ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಮಂಡ್ಯಗೆ ತೆರಳಬೇಕಿತ್ತು. ಇದೀಗ ಖಾಸಗಿ ಅಭ್ಯರ್ಥಿಗಳು ಸಹ ಅವರು ಪರೀಕ್ಷೆ ಕಟ್ಟಿರುವ ಶಾಲಾ ವ್ಯಾಪ್ತಿಯ ಪರೀಕ್ಷಾ ಕೇಂದ್ರದಲ್ಲಿಯೇ ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷಾ ಕೇಂದ್ರದಲ್ಲಿ ಯಾವುದೇ ಸಮಸ್ಯೆ ಹೊಂದಲ ಎದುರಾದರೆ ತಕ್ಷಣ ನಮ್ಮ ಗಮನಕ್ಕೆ ತರಬೇಕು ಎಂದರು.

ಪರೀಕ್ಷಾ ಕೇಂದ್ರದ ಸೂಕ್ತ ಬಂದೂ ಬಸ್ತ್‌ಗೆ ಪೊಲೀಸರಿಗೆ, ಆರೋಗ್ಯ ಸಿಬ್ಬಂದಿಗೆ ಹಾಗೂ ವಿದ್ಯುತ್ ಸಮಸ್ಯೆ ಆಗದಂತೆ ಕ್ರಮವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರಬರೆಯಲಾಗಿದೆ ಎಂದರು.

ತಾಪಂ ಇಒ ಲೋಕೇಶ್ ಮೂರ್ತಿ ಮಾತನಾಡಿದರು. ಸಭೆಯಲ್ಲಿ ಪ್ರೌಢಶಾಲಾ ಮುಖ್ಯಶಿಕ್ಷಕರ ಸಂಘದ ಅಧ್ಯಕ್ಷ ಬೀರಶೆಟ್ಟಹಳ್ಳಿ ಎಂ.ರಮೇಶ್, ನೋಡಲ್ ಅಧಿಕಾರಿ ಅನಿತಾ, ಟೌನ್ ಸಿಆರ್‌ಪಿ ಅನುಸೂಯ, ಪರೀಕ್ಷಾ ಕೇಂದ್ರದ ಮುಖ್ಯಅಧೀಕ್ಷಕರು, ಉಪ ಮುಖ್ಯಅಧೀಕ್ಷಕರು, ಮಾರ್ಗಾಧಿಕಾರಿಗಳು, ಸ್ಥಾನಿಕ ದಳದ ಅಧಿಕಾರಿಗಳು, ಮೊಬೈಲ್ ಸ್ವಾಧೀನಾಧಿಕಾರಿಗಳು ಸೇರಿದಂತೆ ಹಲವರು ಹಾಜರಿದ್ದರು.