ಮೊದಲ ದಿನ ಭಾಷಾ ವಿಷಯದ ಪರೀಕ್ಷೆ ನಡೆದಿದ್ದು ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿದರು.
ಬಳ್ಳಾರಿ: ಜಿಲ್ಲೆಯ 65 ಪರೀಕ್ಷಾ ಕೇಂದ್ರಗಳಲ್ಲಿ ಬುಧವಾರ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಶುರುಗೊಂಡವು. ಮೊದಲ ದಿನ ಭಾಷಾ ವಿಷಯದ ಪರೀಕ್ಷೆ ನಡೆದಿದ್ದು ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿದರು.
ಜಿಲ್ಲೆಯಲ್ಲಿ 19,733 ರೆಗ್ಯುಲರ್, 1328 ಖಾಸಗಿ, 2009 ಪುನರಾವರ್ತಿತ ಹಾಗೂ 212 ಖಾಸಗಿ ಪುನರಾವರ್ತಿತ ಸೇರಿದಂತೆ ಒಟ್ಟು 23,282 ಪರೀಕ್ಷಾರ್ಥಿಗಳು ನೋಂದಣಿಯಾಗಿದ್ದರು. ಮೊದಲ ದಿನ 336 ವಿದ್ಯಾರ್ಥಿಗಳು ಗೈರಾಗಿದ್ದರು. ಜಿಲ್ಲೆಯ ಪೈಕಿ ಬಳ್ಳಾರಿ ಪೂರ್ವ ವಲಯದ ಅತಿ ಹೆಚ್ಚು 133 ವಿದ್ಯಾರ್ಥಿಗಳು ಪರೀಕ್ಷೆಯಿಂದ ದೂರ ಉಳಿದಿದ್ದರು. ಸಂಡೂರು ತಾಲೂಕಿನಲ್ಲಿ ಅತಿಕಡಿಮೆ ವಿದ್ಯಾರ್ಥಿಗಳು ಗೈರಾಗಿರುವುದು ಕಂಡು ಬಂತು. ಮೊದಲ ದಿನ ಯಾವುದೇ ಡಿಬಾರ್ ಪ್ರಕರಣಗಳಾಗಿಲ್ಲ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣದ ವ್ಯವಸ್ಥೆ ಮಾಡಲಾಗಿತ್ತು. ಪರೀಕ್ಷೆಯಲ್ಲಿ ಅಕ್ರಮ ತಡೆಯಲು ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಪರೀಕ್ಷಾ ಕೇಂದ್ರಗಳಲ್ಲಿ ಕುಡಿವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಡಿಡಿಪಿಐ ಉಮಾದೇವಿ ಸೇರಿದಂತೆ ವಲಯ ಶಿಕ್ಷಣಾಧಿಕಾರಿಗಳು ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ನಿಷೇಧಾಜ್ಞೆ ಜಾರಿಗೊಳಿಸಿದ್ದರಿಂದ ಪೊಲೀಸ್ ಬಂದೋಬಸ್ತ್ ಇತ್ತು. ವಿದ್ಯಾರ್ಥಿಗಳು ಪೋಷಕರೊಂದಿಗೆ ಪರೀಕ್ಷಾ ಕೇಂದ್ರಗಳಿಗೆ ಒಂದು ಗಂಟೆ ಮುಂಚಿತವಾಗಿಯೇ ಆಗಮಿಸಿದ್ದರು. ಪರೀಕ್ಷೆಯಲ್ಲಿ ಯಾವುದೇ ಗೊಂದಲ ಮಾಡಿಕೊಳ್ಳದಂತೆ ಪರೀಕ್ಷೆ ಎದುರಿಸುವಂತೆ ಪೋಷಕರು ಮನವರಿಕೆ ಮಾಡಿಕೊಡುವ ದೃಶ್ಯಗಳು ಕಂಡು ಬಂದವು. ಇದೇ ವೇಳೆ ವಿದ್ಯಾರ್ಥಿಗಳ ಶರ್ಟ್ ಹಾಗೂ ಪ್ಯಾಂಟಿನ ಜೇಬುಗಳನ್ನು ಪರಿಶೀಲಿಸಿ ಪರೀಕ್ಷಾ ಕೇಂದ್ರಕ್ಕೆ ಕಳಿಸಿಕೊಡಲಾಯಿತು.
ಪರೀಕ್ಷೆಗೆ ಬರುವ ವಿದ್ಯಾರ್ಥಿಗಳನ್ನು ಕೇಂದ್ರಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿ ನಗುಮೊಗದಿಂದ ಸ್ವಾಗತಿಸಿಕೊಂಡು ಪರೀಕ್ಷೆಗೆ ಶುಭ ಹಾರೈಸಿದರು. ಕಳೆದ ವರ್ಷ ಜಿಲ್ಲೆಯ ಫಲಿತಾಂಶ ಸಮಾಧಾನಕರವಾಗಿರಲಿಲ್ಲ. ಈ ಬಾರಿ ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದೇವೆ. ಫಲಿತಾಂಶ ಹೆಚ್ಚಳಕ್ಕಾಗಿ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶೇಷ ಗಮನ ಹರಿಸಿ, ವಿಶೇಷ ತರಗತಿಗಳನ್ನು ತೆಗೆದುಕೊಳ್ಳಲಾಗಿದೆ. ಕಳೆದ ಆರು ತಿಂಗಳಿನಿಂದ ಪರೀಕ್ಷಾರ್ಥಿಗಳ ಫಲಿತಾಂಶ ಹೆಚ್ಚಳಕ್ಕೆ ಪೂರಕ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಡಿಡಿಪಿಐ ಬಿ.ಉಮಾದೇವಿ ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದ್ದಾರೆ.