ಉತ್ತರ ಕನ್ನಡದಲ್ಲಿ ಸುಗಮವಾಗಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ

| Published : Mar 26 2024, 01:01 AM IST

ಉತ್ತರ ಕನ್ನಡದಲ್ಲಿ ಸುಗಮವಾಗಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪ್ರಥಮ ಭಾಷೆಯ ವಾರ್ಷಿಕ ಪರೀಕ್ಷೆ ಸೋಮವಾರ ಸುಗಮವಾಗಿ ನಡೆದಿದೆ. ಒಟ್ಟೂ 9,574 ವಿದ್ಯಾರ್ಥಿಗಳು ಪರೀಕ್ಷೆಗೆ ಕಟ್ಟಿದ್ದು, 9,492 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಅಂತ್ಯಂತ ಸುಸೂತ್ರವಾಗಿ ನಡೆದಿದೆ. ಒಟ್ಟೂ ೯೬೮೭ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ೬೩ ವಿದ್ಯಾರ್ಥಿಗಳು ಗೈರಾಗಿದ್ದಾರೆ.

ಕಾರವಾರ: ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪ್ರಥಮ ಭಾಷೆಯ ವಾರ್ಷಿಕ ಪರೀಕ್ಷೆ ಸೋಮವಾರ ಸುಗಮವಾಗಿ ನಡೆದಿದೆ. ಒಟ್ಟೂ 9,574 ವಿದ್ಯಾರ್ಥಿಗಳು ಪರೀಕ್ಷೆಗೆ ಕಟ್ಟಿದ್ದು, 9,492 ವಿದ್ಯಾರ್ಥಿಗಳು ಹಾಜರಾಗಿದ್ದಾರೆ.

ಅಂಕೋಲಾದಲ್ಲಿ 1301 ವಿದ್ಯಾರ್ಥಿಗಳಲ್ಲಿ 1287 ಜನರು, ಭಟ್ಕಳ ತಾಲೂಕಿನಲ್ಲಿ 2181 ವಿದ್ಯಾರ್ಥಿಗಳಲ್ಲಿ 2163, ಹೊನ್ನಾವರದಲ್ಲಿ 1976 ವಿದ್ಯಾರ್ಥಿಗಳಲ್ಲಿ 1969, ಕಾರವಾರದಲ್ಲಿ 1959 ಜನರಲ್ಲಿ 1942, ಕುಮಟಾ ತಾಲೂಕಿನಲ್ಲಿ 2157 ವಿದ್ಯಾರ್ಥಿಗಳಲ್ಲಿ 2131 ವಿದ್ಯಾರ್ಥಿಗಳು ಮೊದಲ ದಿನದ ಪರೀಕ್ಷೆಗೆ ಹಾಜರಾಗಿದ್ದಾರೆ. ಒಟ್ಟೂ ಶೇ. 99.14 ರಷ್ಟು ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದಂತಾಗಿದೆ.

ಶಿರಸಿಯಲ್ಲಿ ೬೩ ವಿದ್ಯಾರ್ಥಿಗಳು ಗೈರು: ಪ್ರಸಕ್ತ ವರ್ಷದ ಎಸ್‌ಎಸ್‌ಎಲ್‌ಸಿ ಮೊದಲ ಪರೀಕ್ಷೆಯು ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಅಂತ್ಯಂತ ಸುಸೂತ್ರವಾಗಿ ನಡೆದಿದೆ. ಒಟ್ಟೂ ೯೬೮೭ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ೬೩ ವಿದ್ಯಾರ್ಥಿಗಳು ಗೈರಾಗಿದ್ದಾರೆ.ಹಳಿಯಾಳ ತಾಲೂಕಿನಲ್ಲಿ ೨೮೦೮ ವಿದ್ಯಾರ್ಥಿಗಳು ಹಾಜರಾದರೆ, ೨೦ ವಿದ್ಯಾರ್ಥಿಗಳು ಗೈರಾಗಿದ್ದಾರೆ. ಜೋಯಿಡಾದಲ್ಲಿ ೮೦೪ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದರೆ, ೪ ವಿದ್ಯಾರ್ಥಿಗಳು ಗೈರಾಗಿದ್ದು, ಮುಂಡಗೋಡ ತಾಲೂಕಿನಲ್ಲಿ ೧೨೫೧ ವಿದ್ಯಾರ್ಥಿಗಳು ಹಾಜರಾದರೆ, ೭ ವಿದ್ಯಾರ್ಥಿಗಳು ಗೈರಾಗಿದ್ದಾರೆ. ಸಿದ್ದಾಪುರ ತಾಲೂಕಿನಲ್ಲಿ ೧೨೨೧ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರೆ, ೩ ವಿದ್ಯಾರ್ಥಿಗಳು ಗೈರಾಗಿದ್ದಾರೆ. ಶಿರಸಿ ತಾಲೂಕಿನಲ್ಲಿ ೨೫೫೯ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದರೆ, ೨೦ ವಿದ್ಯಾರ್ಥಿಗಳು ಗೈರಾಗಿದ್ದಾರೆ. ಯಲ್ಲಾಪುರದಲ್ಲಿ ೧೦೪೪ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರೆ, ೯ ವಿದ್ಯಾರ್ಥಿಗಳು ಗೈರಾಗಿದ್ದಾರೆ.

ಹಳಿಯಾಳದಲ್ಲಿ ಮೊದಲ ದಿನ 2808 ಪರೀಕ್ಷಾರ್ಥಿಗಳು ಹಾಜರು: ತಾಲೂಕಿನಾದ್ಯಂತ ಎಸ್.ಎಸ್.ಎಲ್.ಸಿ. ಪರೀಕ್ಷೆ ಸೋಮವಾರದಿಂದ ಸುಗಮ ಹಾಗೂ ಶಾಂತಿಯುತವಾಗಿ ಆರಂಭಗೊಂಡವು.

ಹಳಿಯಾಳ ಮತ್ತು ದಾಂಡೇಲಿ ತಾಲೂಕು ಸೇರಿ ಒಟ್ಟು 2828 ಪರೀಕ್ಷಾರ್ಥಿಗಳಿದ್ದು, ಮೊದಲ ದಿನ ನಡೆದ ಪ್ರಥಮ ಭಾಷಾ ಪರೀಕ್ಷೆಗೆ 2808 ಪರೀಕ್ಷಾರ್ಥಿಗಳು ಹಾಜರಾಗಿದ್ದರೆ, 20 ಪರೀಕ್ಷಾರ್ಥಿಗಳು ಗೈರು ಹಾಜರಾಗಿದ್ದರು.ಹಳಿಯಾಳ ಮತ್ತು ದಾಂಡೇಲಿ ತಾಲೂಕಿನಲ್ಲಿ ಒಟ್ಟು 7 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದವು. ಹಳಿಯಾಳ ತಾಲೂಕಿನಲ್ಲಿ 4 ಪರೀಕ್ಷಾ ಕೇಂದ್ರಗಳನ್ನು ಆರಂಭಿಸಲಾಗಿದ್ದು, ಪಟ್ಟಣದ ಶ್ರೀ ಶಿವಾಜಿ ಸರ್ಕಾರಿ ಪದವಿ ಪೂರ್ವ ಕಾಲೇಜ, ಕಾರ್ಮೆಲ್ ಪ್ರೌಢಶಾಲೆ, ಗ್ರಾಮೀಣ ಭಾಗದಲ್ಲಿ ಮುರ್ಕವಾಡ ಪಬ್ಲಿಕ್ ಸ್ಕೂಲ್, ತೇರಗಾಂವ ಸರ್ಕಾರಿ ಪ್ರೌಢಶಾಲೆ ಹಾಗೂ ದಾಂಡೇಲಿಯಲ್ಲಿ 3 ಪರೀಕ್ಷಾ ಕೇಂದ್ರಗಳಿದ್ದು, ಜನತಾ ವಿದ್ಯಾಲಯ ಮತ್ತು ಸೆಂಟ್ ಮೈಕಲ್ ಪ್ರಾಥಮಿಕ ಶಾಲೆ ಹಾಗೂ ರೋಟರಿ ಕನ್ನಡ ಪ್ರೌಢಶಾಲೆ ಪರೀಕ್ಷಾ ಕೇಂದ್ರಗಳಾಗಿವೆ ಎಂದು ಬಿಇಒ ಪ್ರಮೋದ ಮಹಾಲೆ ತಿಳಿಸಿದ್ದಾರೆ.

ವಿ.ಆರ್.ಡಿ. ಟ್ರಸ್ಟ್‌ನಿಂದ ಬಿಸ್ಕತ್ ವಿತರಣೆ: ಪ್ರತಿ ವರ್ಷದಂತೆ ಈ ವರ್ಷವೂ ವಿ.ಆರ್.ಡಿ.ಎಂ. ಟ್ರಸ್ಟ್ ಸಹಯೋಗದಲ್ಲಿ ಬ್ರಿಟಾನಿಯಾ ಇಂಡಸ್ಟ್ರೀಸ್ ಲಿಮಿಟೆಡ್ ಪ್ರಾಯೋಜಕತ್ವದಲ್ಲಿ ಹಳಿಯಾಳ, ದಾಂಡೇಲಿ ಮತ್ತು ಜೋಯಿಡಾ ತಾಲೂಕಿನ ಒಟ್ಟು 4253 ಎಸ್.ಎಸ್.ಎಲ್.ಸಿ. ಪರೀಕ್ಷಾರ್ಥಿಗಳಿಗೆ ಗ್ಲೂಕೋಜ್ ಮತ್ತು ಟಾನಿಕ್‌ಯುಕ್ತ ಬಿಸ್ಕಿಟ್‌ಗಳನ್ನು ವಿತರಿಸಲಾಯಿತು. ಎಸ್.ಎಸ್.ಎಲ್.ಸಿ. ಪರೀಕ್ಷೆ ಮುಗಿಯುವರೆಗೂ ನಿತ್ಯವೂ ಬಿಸ್ಕಿಟ್‌ಗಳನ್ನು ವಿತರಿಸಲಾಗುವುದೆಂದು ವಿ.ಆರ್.ಡಿ.ಎಂ. ಟ್ರಸ್ಟ್ ತಿಳಿಸಿದೆ.

ಭಟ್ಕಳದಲ್ಲಿ ಎಸ್ಸೆಸ್ಸೆಲ್ಸಿಗೆ ಪರೀಕ್ಷೆಗೆ ಇಬ್ಬರು ಗೈರು: ತಾಲೂಕಿನಲ್ಲಿ ಸೋಮವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಸೂತ್ರವಾಗಿ ಆರಂಭವಾಗಿದ್ದು, ಪ್ರಥಮ ದಿನದ ಪರೀಕ್ಷೆಗೆ ಇಬ್ಬರು ವಿದ್ಯಾರ್ಥಿನಿಯರು ಅನಾರೋಗ್ಯದ ಕಾರಣ ನೀಡಿ ಪರೀಕ್ಷೆಗೆ ಗೈರಾಗಿದ್ದಾರೆ.ಭಟ್ಕಳದ ನ್ಯಾಷನಲ್ ಪಬ್ಲಿಕ್ ಸ್ಕೂಲಿನ ಒಬ್ಬಳು ವಿದ್ಯಾರ್ಥಿನಿ ಹಾಗೂ ಅಂಜುಮನ್ ಗರ್ಲ್ಸ್ ಹೈಸ್ಕೂಲಿನ ಒಬ್ಬಳು ವಿದ್ಯಾರ್ಥಿನಿ ಅನಾರೋಗ್ಯದ ಸಮಸ್ಯೆಯಿಂದ ಪರೀಕ್ಷೆಗೆ ಹಾಜರಾಗಿಲ್ಲ. ಉಳಿದಂತೆ 1993 ವಿದ್ಯಾರ್ಥಿಗಳ ಪೈಕಿ 1991 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ತಾಲೂಕಿನ ಎಂಟು ಶಾಲೆಯಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದ್ದು, ಎಲ್ಲಿಯೂ ಗೊಂದಲಗಳಿಲ್ಲದೆ ವಿದ್ಯಾರ್ಥಿಗಳು ಪ್ರಥಮ ದಿವಸ ಪರೀಕ್ಷೆಯನ್ನು ಬರೆದಿದ್ದಾರೆ ಎಂದು ಬಿಇಒ ವಿ.ಡಿ. ಮೊಗೇರ ತಿಳಿಸಿದ್ದಾರೆ. ಇದೇ ಮೊದಲ ಬಾರಿಗೆ ಖಾಸಗಿಯಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವವರಿಗೆ ಕಾರವಾರದ ಬದಲಾಗಿ ಭಟ್ಕಳದಲ್ಲಿ ಅವಕಾಶ ನೀಡಲಾಗಿತ್ತು. ಖಾಸಗಿಯಾಗಿ ಪರೀಕ್ಷೆ ಬರೆಯಲು ನೋಂದಣಿ ಮಾಡಿಸಿಕೊಂಡ 343 ಬಾಲಕ -ಬಾಲಕಿಯರಲ್ಲಿ 16 ಮಂದಿ ಪ್ರಥಮ ದಿನ ಕಾರಣಾಂತರದಿಂದ ಪರೀಕ್ಷೆಗೆ ಹಾಜರಾಗಿಲ್ಲ ಎಂದೂ ಅವರು ತಿಳಿಸಿದ್ದಾರೆ.

ಯಲ್ಲಾಪುರದಲ್ಲಿ ಮೊದಲ ದಿನ ಪರೀಕ್ಷೆ ಬರೆದ 1034 ವಿದ್ಯಾರ್ಥಿಗಳು: ರಾಜ್ಯಾದ್ಯಂತ ಆರಂಭಗೊಂಡಿರುವ ಪ್ರಸಕ್ತ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ತಾಲೂಕಿನ ೬ ಕೇಂದ್ರಗಳಲ್ಲಿ ಆರಂಭಗೊಂಡಿದ್ದು, ನೋಂದಾಯಿತ ೧೦೪೪ ವಿದ್ಯಾರ್ಥಿಗಳಲ್ಲಿ ೧೦ ವಿದ್ಯಾರ್ಥಿಗಳು ಗೈರಾಗಿ, ಒಟ್ಟೂ ೧೦೩೪ ವಿದ್ಯಾರ್ಥಿಗಳು ಮೊದಲ ದಿನದಂದು ಪ್ರಥಮ ಭಾಷೆ ಪರೀಕ್ಷೆಯಲ್ಲಿ ಪಾಲ್ಗೊಂಡರು.ಪಟ್ಟಣದ ವೈ.ಟಿ.ಎಸ್.ಎಸ್. ಸಂಯುಕ್ತ ಪ.ಪೂ. ಕಾಲೇಜಿನಲ್ಲಿ ೧೯೮ (೨ ಗೈರು), ವಿಶ್ವದರ್ಶನ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ೨೬೫ (೨ ಗೈರು), ಸರ್ಕಾರಿ ಪ್ರೌಢಶಾಲೆಯಲ್ಲಿ ೧೫೧, ಮಂಚೀಕೇರಿಯ ರಾಜರಾಜೇಶ್ವರಿ ಪ್ರೌಢಶಾಲೆಯಲ್ಲಿ ೧೬೮ (೧ ಗೈರು), ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯಲ್ಲಿ ೧೧೦ (೩ ಗೈರು), ಕಿರವತ್ತಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ೧೫೨ (೧ ಗೈರು) ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್. ಹೆಗಡೆ ತಿಳಿಸಿದ್ದಾರೆ.

ಗೋಕರ್ಣದಲ್ಲಿ ಉತ್ಸಾಹದಿಂದ ಪರೀಕ್ಷೆ ಬರೆದ ವಿದ್ಯಾರ್ಥಿಗಳು: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸೋಮವಾರದಿಂದ ಆರಂಭವಾಗಿದ್ದು, ಇಲ್ಲಿನ ಭದ್ರಕಾಳಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳು ಉತ್ಸಾಹದಿಂದ ಬಂದು ಪರೀಕ್ಷೆ ಬರೆದಿದ್ದಾರೆ. ಮುಂಜಾನೆ ತಮ್ಮ ನೋಂದಣಿ ಸಂಖ್ಯೆಯ ಪರೀಕ್ಷಾ ಕೊಠಡಿ ಎಲ್ಲಿದೆ ಎಂಬುದನ್ನು ಕುತೂಹಲದಿಂದ ತಿಳಿದು ತೆರಳಿದರು. ಮೊದಲ ದಿನ ಪ್ರಥಮ ಭಾಷೆ ಪರೀಕ್ಷೆ ನಡೆದಿದೆ.ಒಟ್ಟು ಒಂಭತ್ತು ಪ್ರೌಢಶಾಲೆಯಿಂದ ನಿಗದಿಪಡಿಸಿದ 334 ವಿದ್ಯಾರ್ಥಿಗಳಲ್ಲಿ 332 ಪರೀಕ್ಷೆಗೆ ಹಾಜರಾಗಿದ್ದು, ಇಬ್ಬರು ಗೈರಾಗಿದ್ದರು. ಕೇಂದ್ರ ಅಧೀಕ್ಷರಾಗಿ ಹಿರೇಗುತ್ತಿ ಪ್ರೌಢಶಾಲೆ ಮುಖ್ಯಾಧ್ಯಾಪಕರಾದ ರೋಹಿದಾಸ್ ಗಾಂವಕರ, ಕಸ್ಟೋಡಿಯನ್‍ಯಾಗಿ ಚಿತ್ರಗಿ ಪ್ರೌಢಶಾಲೆ ಮುಖ್ಯಾಧ್ಯಾಪಕ ಪಾಂಡುರಂಗ ವಾಗ್ರೇಕರ ಕಾರ್ಯನಿರ್ವಹಿಸಿದ್ದರು. ಭದ್ರಕಾಳಿ ಪ್ರೌಢಶಾಲೆ ಮುಖ್ಯಾಧ್ಯಾಪಕರು ಹಾಗೂ ಶಿಕ್ಷಕರು, ಶಿಕ್ಷೇತರ ಸಿಬ್ಬಂದಿ ಅಚ್ಚುಕಟ್ಟಿನ ವ್ಯವಸ್ಥೆ ಕಲ್ಪಿಸಿದ್ದರು. ವಿದ್ಯಾರ್ಥಿಗಳಿಗೆ ಆರೋಗ್ಯ ಸಮಸ್ಯೆಯಾದರೆ ತುರ್ತಾಗಿ ನೆರವಾಗಲು ಆರೋಗ್ಯ ಇಲಾಖೆ ವತಿಯಿಂದ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರನ್ನು ನಿಯೋಜಿಸಲಾಗಿತ್ತು. ಪೊಲೀಸ್ ಸಿಬ್ಬಂದಿ ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು. ಪರೀಕ್ಷಾ ಕೇಂದ್ರದಲ್ಲಿ ಸಿ.ಸಿ. ಕ್ಯಾಮೆರಾ ಸಹ ಅಳವಡಿಸಿ ನಿಗಾ ಇಡಲಾಗಿತ್ತು.