ರಾಯಚೂರು ಜಿಲ್ಲಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಸೂತ್ರ

| Published : Mar 26 2024, 01:01 AM IST

ರಾಯಚೂರು ಜಿಲ್ಲಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಸೂತ್ರ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಾದ್ಯಂತ 98 ಪರೀಕ್ಷೆ ಕೇಂದ್ರಗಳಲ್ಲಿ ನಡೆದ ಮೊದಲ ದಿನ ಕನ್ನಡ ಭಾಷೆ ಪರೀಕ್ಷೆಗೆ 30,228 ಹಾಜರು, 871 ವಿದ್ಯಾರ್ಥಿಗಳು ಗೈರು. ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮ ನಡೆಯದಂತೆ ಪರೀಕ್ಷಾ ಕೇಂದ್ರದ ಎಲ್ಲ ಕೊಠಡಿಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಿ, ನಿಗಾವಹಿಸಲಾಗಿತ್ತು.

ಕನ್ನಡಪ್ರಭ ವಾರ್ತೆ ರಾಯಚೂರು

ಲೋಕಸಭಾ ಚುನಾವಣೆ ಘೋಷಣೆ ಮಾದರಿ ನೀತಿ ಸಂಹಿತೆ ಜಾರಿ, ಹೋಳಿ ಹಬ್ಬ, ರಂಜಾನ್‌ ರೋಜಾ ದಿನಗಳ ಆಚರಣೆಯ ನಡುವೆ ಸೋಮವಾರದಿಂದ ಆರಂಭಗೊಂಡ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಸುಸೂತ್ರವಾಗಿ ಜರುಗಿದವು.

ನಗರ ಸೇರಿದಂತೆ ಜಿಲ್ಲೆಯಾದ್ಯಂತ 98 ಪರೀಕ್ಷಾ ಕೇಂದ್ರಗಳಲ್ಲಿ ಮೊದಲ ದಿನ ಕನ್ನಡ ಭಾಷೆ ಪರೀಕ್ಷೆ ನಡೆಯಿತು. ಒಟ್ಟು 31,099 ವಿದ್ಯಾರ್ಥಿಗಳು ಪರೀಕ್ಷೆಗೆ ಬರೆಯಲು ನೋಂದಾಯಿಸಿಕೊಂಡಿದ್ದರು. ಆದರೆ 30228 ವಿದ್ಯಾರ್ಥಿಗಳು ಹಾಜರು, ಇನ್ನುಳಿದ 871 ವಿದ್ಯಾರ್ಥಿಗಳು ಗೈರು ಹಾಜರು ಆಗಿದ್ದಾರೆ.

ದೇವದುರ್ಗ ತಾಲೂಕಿನ 4261 ವಿದ್ಯಾರ್ಥಿಗಳ ಪೈಕಿ, 4186 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರೆ, 75 ಜನ ವಿದ್ಯಾರ್ಥಿಗಳು ಗೈರು ಆಗಿದ್ದಾರೆ. ಲಿಂಗಸೂಗೂರು ತಾಲೂಕಿನಲ್ಲಿ 6394 ವಿದ್ಯಾರ್ಥಿಗಳಲ್ಲಿ 6241 ಪರೀಕ್ಷೆಗೆ ಬರೆದಿದ್ದು, 153 ಜನ ಗೈರು ಆಗಿದ್ದಾರೆ. ಮಾನ್ವಿ ತಾಲೂಕಿನಲ್ಲಿ 5752 ವಿದ್ಯಾರ್ಥಿಗಳಲ್ಲಿ 5568 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರು ಆಗಿದ್ದರೆ ಇನ್ನುಳಿದ 184 ಪರೀಕ್ಷೆಗೆ ಗೈರು ಹೊಂದಿದ್ದರೆ. ರಾಯಚೂರು ತಾಲೂಕಿನಲ್ಲಿ 8945 ವಿದ್ಯಾರ್ಥಿಗಳಲ್ಲಿ 8645 ಪರೀಕ್ಷೆ ಬರೆದರೆ 300 ಜನ ಗೈರುಗೊಂಡಿದ್ದರೆ. ಸಿಂಧನೂರು ತಾಲೂಕಿನಲ್ಲಿ 5747 ವಿದ್ಯಾರ್ಥಿಗಳಲ್ಲಿ 5588 ಪರೀಕ್ಷೆ ಬರೆದಿದ್ದು, 159 ಪರೀಕ್ಷೆ ಗೈರು ಹಾಜರು ಆಗಿದ್ದರು.

ಜಿಲ್ಲೆಯಾದ್ಯಂತ 98 ಪರೀಕ್ಷೆ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದ್ದು, ಇದರಲ್ಲಿ 93 ಸಾಮಾನ್ಯ ಪರೀಕ್ಷೆ ಕೇಂದ್ರಗಳು, 05 ಸೂಕ್ಷ್ಮ ಕೇಂದ್ರಗಳನ್ನಾಗಿ ಗುರುತಿಸಲಾಗಿದೆ. ಇದರಲ್ಲಿ ದೇವದುರ್ಗ 15, ಲಿಂಗಸೂಗೂರಿನಲ್ಲಿ 17 ಸಾಮಾನ್ಯ, 4 ಸೂಕ್ಷ್ಮ ಕೇಂದ್ರಗಳು, ಮಾನ್ವಿ 18, ರಾಯಚೂರು 24, ಸಿಂಧನೂರು 19 ಸಾಮಾನ್ಯ, 01 ಸೂಕ್ಷ್ಮ ಕೇಂದ್ರ ಪರೀಕ್ಷೆ ಕೇಂದ್ರಗಳು ಒಟ್ಟು 1347 ಕೊಠಡಿಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದರು.

ಮೊದಲ ದಿನದ ಪರೀಕ್ಷೆ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳನ್ನು ಸುಂದರವಾಗಿ ಅಲಂಕರಿಸಲಾಗಿತ್ತು. ಬೆಳಗ್ಗೆ ಪರೀಕ್ಷಾ ಕೊಠಡಿಗೆ ತೆರಳಲು ಆಗಮಿಸಿದ ಮಕ್ಕಳಿಗೆ ಕಂದಾಯ, ಶಿಕ್ಷಣ, ಆರೋಗ್ಯ ಸೇರಿ ಇತರೆ ಇಲಾಖೆಯ ಅಧಿಕಾರಿ, ಸಿಬ್ಬಂದಿ ವರ್ಗದವರು ಹೂವು- ಸಿಹಿ ಹಂಚಿ ಸ್ವಾಗತಿಸಿದರು. ಯಾವುದೇ ರೀತಿಯ ಆತಂಕವಿಲ್ಲದೇ ಧೈರ್ಯವಾಗಿ ಪರೀಕ್ಷೆ ಎದುರಿಸುವಂತೆ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಭೀತಿ ನಿವಾರಣೆ ಮಾಡುವಂತಹ ಕಿವಿ ಮಾತುಗಳನ್ನು ಹೇಳಿದರು.

ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮ ನಡೆಯದಂತೆ ಪರೀಕ್ಷಾ ಕೇಂದ್ರದ ಎಲ್ಲ ಕೊಠಡಿಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಕೆ ಮಾಡಿ, ನಿಗಾವಹಿಸಲಾಗಿತ್ತು. ಇಷ್ಟೇ ಅಲ್ಲದೇ ಪರೀಕ್ಷಾ ಕೇಂದ್ರಗಳ ಸುತ್ತಲು ಬಿಗಿ ಪೊಲೀಸ್‌ ಬಂದೋಬಸ್ತ್‌ ಕಲ್ಪಿಸಲಾಗಿತ್ತು.