ಎಸ್‌ಎಸ್‌ಎಲ್‌ಸಿ ಪರೀಕ್ಷೆ: ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ತನುಶ್ರೀ

| Published : May 03 2025, 12:15 AM IST

ಸಾರಾಂಶ

ಮಾರಿಕಾಂಬಾ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿನಿ ತನುಶ್ರೀ ಜೋಶಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೨೫ಕ್ಕೆ ೬೨೪ ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾಳೆ.

ಶಿರಸಿ: ಇಲ್ಲಿನ ಮಾರಿಕಾಂಬಾ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿನಿ ತನುಶ್ರೀ ಜೋಶಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ೬೨೫ಕ್ಕೆ ೬೨೪ ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾಳೆ.

ಅಂದಿನ ಅಭ್ಯಾಸ ಅಂದೇ ಮಾಡುತ್ತಿದ್ದ ಈಕೆ ಯಾವುದೇ ಟ್ಯೂಶನ್ ಕೂಡ ಪಡೆಯದೇ ಈ ಸಾಧನೆ ಮಾಡಿದ್ದಾಳೆ.

ಸೋಂದಾ ಸಮೀಪದ ಬಾಡಲಕೊಪ್ಪದ ತನುಶ್ರೀ, ನರಸಿಂಹ ಜೋಶಿ ಮತ್ತು ಶ್ವೇತಾ ಜೋಶಿ ದಂಪತಿಯ ಪುತ್ರಿ. ವಿಜ್ಞಾನ ವಿಷಯದಲ್ಲಿ ಒಂದು ಅಂಕ ಕಳೆದುಕೊಂಡು ೬೨೫ಕ್ಕೆ ೬೨೪ ಅಂಕ ಪಡೆದುಕೊಂಡಿದ್ದಾಳೆ.

ಸಂತಸ ಹಂಚಿಕೊಂಡ ತನುಶ್ರೀ, ನಾನು ೧ ನೇ ತರಗತಿಯಿಂದ ೭ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ, ೮ನೇ ತರಗತಿಗೆ ಮಾರಿಕಾಂಬಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಪ್ರವೇಶ ಪಡೆದಿದ್ದೇನೆ. ಶಾಲೆಯ ಶಿಕ್ಷಕರು ಹೇಳಿಕೊಟ್ಟ ವಿಷಯ ಅರ್ಥವಾಗುತ್ತಿರುವುದರಿಂದ ಟ್ಯೂಷನ್ ಅವಶ್ಯಕತೆ ಬಂದಿಲ್ಲ. ಕಲಿಸುವುದರ ಜತೆ ಅನುಮಾನ ಇರುವ ವಿಷಯವನ್ನು ಪುನಃ ಹೇಳಿಕೊಡುತ್ತಿದ್ದರು. ಶಾಲೆಯಲ್ಲಿ ನಡೆಸುವ ಪರೀಕ್ಷೆಯಲ್ಲಿ ಉತ್ತರ ತಪ್ಪು ಬರೆದಿದ್ದರೆ ಅದನ್ನು ಕೇಳಿ ಅರ್ಥವಾಗುವ ರೀತಿಯಲ್ಲಿ ಹೇಳಿಕೊಡುತ್ತಿದ್ದರು. ಎಲ್ಲ ಶಿಕ್ಷಕರಿಗೆ, ಪಾಲಕರಿಗೆ ಧನ್ಯವಾದ ಅರ್ಪಿಸುತ್ತೇನೆ. ಅಂದು ಕಲಿಸಿದ ವಿಷಯವನ್ನು ಅಂದೇ ಮನೆಯಲ್ಲಿ ಅಭ್ಯಾಸ ಮಾಡುತ್ತಿದ್ದೆ. ಸರ್ಕಾರಿ ಪ್ರೌಢಶಾಲೆಯಲ್ಲಿ ಉತ್ತಮ ರ‍್ಯಾಂಕ್ ಪಡೆಯಬಹುದು ಎಂಬುದು ನನಗೆ ಅರ್ಥವಾಯಿತು ಎಂದಳು.