ಸಾರಾಂಶ
ಚಾಮರಾಜನಗರ ಪರೀಕ್ಷಾ ಕೇಂದ್ರದ ಬಳಿ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ತೆರಳುವ ಮುನ್ನಾ ನೋಂದಣಿ ಸಂಖ್ಯೆ ಹುಡುಕುತ್ತಿರುವುದು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲಾದ್ಯಂತ 47 ಪರೀಕ್ಷಾ ಕೇಂದ್ರಗಳಲ್ಲೂ ಪ್ರಥಮ ಭಾಷೆ ಕನ್ನಡ ಪರೀಕ್ಷೆ ಯಶಸ್ವಿಯಾಗಿ ಶುಕ್ರವಾರ ನಡೆಯಿತು.ಜಿಲ್ಲೆಯ ಚಾಮರಾಜನಗರ 15, ಗುಂಡ್ಲುಪೇಟೆ 10, ಹನೂರು 9, ಕೊಳ್ಳೇಗಾಲ 9 ಮತ್ತು ಯಳಂದೂರು 4 ಪರೀಕ್ಷಾ ಕೇಂದ್ರಗಳತ್ತ ವಿದ್ಯಾರ್ಥಿಗಳ ಬೆಳಗ್ಗೆ ಹಾಜರಾಗುವ ಮೂಲಕ ಪರೀಕ್ಷಾ ಕೇಂದ್ರಗಳಲ್ಲಿ ನೋಂದಣಿ ಸಂಖ್ಯೆಖಚಿತ ಪಡಿಸಿಕೊಂಡು ಪರೀಕ್ಷಾ ಕೇಂದ್ರದ ಮುಂಭಾಗದಲ್ಲಿ ಕುಳಿತು ಅಂತಿಮ ಕ್ಷಣದ ಓದಿನಲ್ಲಿ ತಲೀನರಾಗಿದ್ದು ಎಲ್ಲೆಡೆ ಕಂಡು ಬಂದಿತು.
ಪರೀಕ್ಷಾ ಕೇಂದ್ರಗಳಿಗೆ ಡಿಡಿಪಿಐ ರಾಮಚಂದ್ರರಾವ್ ಭೇಟಿ ನೀಡಿ ಪರಿಶೀಲನೆ ಮಾಡಿದರು. ಎಲ್ಲೆಡೆ ಪೊಲೀಸ್ ಬಿಗಿಬಂದೂಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಹನೂರು ಶೈಕ್ಷಣಿಕ ವಲಯದ ವಿವಿಧ ಪ್ರೌಢಶಾಲೆಗಳಲ್ಲಿ ವಿಷಯವಾರು ಶಿಕ್ಷಕರು ಇಲ್ಲದೆ ಸರಿಯಾಗಿ ಪಾಠ ಪ್ರವಚನಗಳು ನಡೆದಿಲ್ಲ ಈ ಹಿನ್ನೆಲೆ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ಕೈಗೆ ಕಪ್ಪು ಬಟ್ಟೆಯನ್ನು ಧರಿಸಿ ಹಾಜರಾಗುವಂತೆ ಕಿಸಾನ್ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಮಾಪುರ ರಾಜೇಂದ್ರ ಕರೆ ಕೊಟ್ಟ ಬೆನ್ನಲೇ ಶುಕ್ರವಾರದಂದು ಬೆಳಗ್ಗೆಯಿಂದಲೇ ಪರೀಕ್ಷಾ ಕೆಂದ್ರಗಳಿಗೆ ತೆರಳಿದ ಹನೂರು ಪೊಲೀಸರು ಪರಿಶೀಲಿಸಿದರು.ಸಾಮಾಜಿಕ ಜಾಲತಾಣ ಮುಖಪುಟದಲ್ಲಿ ಕಿಸಾನ್ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ರಾಮಾಪುರ ರಾಜೇಂದ್ರ ಮಾತನಾಡಿ, ಹನೂರು ಶೈಕ್ಷಣಿಕ ವಲಯದಲ್ಲಿನ ಪ್ರೌಢಶಾಲೆಗಳಲ್ಲಿ ವಿಷಯವಾರು ಶಿಕ್ಷಕರು ಇಲ್ಲದೆ ಇರುವುದರಿಂದ ವಿದ್ಯಾರ್ಥಿಗಳು ಪಾಠ ಕೇಳದೆ ಪರೀಕ್ಷೆಯಲ್ಲಿ ಯಾವ ಪ್ರಶ್ನೆಗೆ ಯಾವ ಉತ್ತರ ಬರೆಯುತ್ತಾರೆ. ಈ ನಿಟ್ಟಿನಲ್ಲಿ ಶಿಕ್ಷಕರನ್ನು ನೇಮಕ ಮಾಡದೆ ನಿರ್ಲಕ್ಷ್ಯವಹಿಸಿದ ಸರಕಾರ ವಿರುದ್ದ ವಿದ್ಯಾರ್ಥಿಗಳು ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಕರಾಳ ದಿನಾಚರಣೆ ಆಚರಣೆ ಮಾಡಬೇಕು ಎಂದು ಕೋರಿದ್ದರು.
ಈ ಹಿನ್ನಲೆ ಶುಕ್ರವಾರದಂದು ಹನೂರಿನ ಪರೀಕ್ಷಾ ಕೇಂದ್ರಗಳಿಗೆ ಹನೂರು ಪೊಲೀಸ್ ಇನ್ಸ್‌ಪೆಕ್ಟರ್ ಆನಂದ್ ಮೂರ್ತಿ ನೇತ್ರತ್ವದಲ್ಲಿ ಸೂಕ್ತ ಬಂದೋಬಸ್ತ್ ಕಲ್ಲಿಸಿ ಪರೀಕ್ಷಾ ಕೇಂದ್ರದ ಬಳಿ ಯಾವುದೇ ರೀತಿಯ ಗೊಂದಲಕ್ಕೆ ಆಸ್ಪದ ನೀಡದೆ ವಿದ್ಯಾರ್ಥಿಗಳು ನಿರ್ಭಿತಿಯಿಂದ ಪರೀಕ್ಷಾ ಕೆಂದ್ರಗಳಿಗೆ ತೆರಳಲು ಅವಕಾಶ ಕಲ್ಪಿಸಲಾಯಿತು.