ಧಾರವಾಡ: ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳಿಗೆ ಎಸ್ಸೆಸ್ಸೆಲ್ಸಿ ಹಂತ ಪ್ರಮುಖ ಘಟ್ಟ. ಕಲಿಕಾ ಗುಣಮಟ್ಟ ಹಾಗೂ ಉತ್ತೀರ್ಣತೆ ಅವರ ಭವಿಷ್ಯದ ದಿಕ್ಸೂಚಿ ಎಂದು ರಾಷ್ಟ್ರೀಯ ಶಿಕ್ಷಕರ ಫೆಡರೇಶನ್‌ ಅಧ್ಯಕ್ಷ ಬಸವರಾಜ ಗುರಿಕಾರ ಹೇಳಿದರು.

ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 100ರಷ್ಟು ಉತ್ತೀರ್ಣತೆ ಸಾಧಿಸಲು ರಾಜ್ಯ ಪ್ರೌಢಶಾಲಾ ಸಹಶಿಕ್ಷಕರ ಸಂಘ ರಚಿಸಿದ ಸರಳ ಕೈಪಿಡಿ ಬಿಡುಗಡೆ ಮಾಡಿದ ಅವರು, ಶಿಕ್ಷಣ ಮಂತ್ರಿಗಳಾದ ಮಧು ಬಂಗಾರಪ್ಪ ಮತ್ತು ಶಿಕ್ಷಣದ ಪ್ರಧಾನ ಕಾರ್ಯದರ್ಶಿ ರಶ್ಮೀ ಮಹೇಶ ಮಾರ್ಗದರ್ಶನದಲ್ಲಿ ಮಿಷನ್ 40 ಪ್ಲಸ್‌ ಜಾರಿ ಮಾಡಿದ್ದು ಉತ್ತಮ ಬೆಳವಣಿಗೆ ಎಂದರು.

ವಾರ್ಷಿಕ ಪರೀಕ್ಷೆಗೆ ಡಿಎಸ್‌ಆರ್‌ಇಟಿ ಪಾಠ ಆಧಾರಿತ ಮೌಲ್ಯಾಂಕನ ಕೈಪಿಡಿ, ಕೆಎಸ್‌ಇಎಬಿ ಮಾದರಿ ಪ್ರಶ್ನೆ ಪತ್ರಿಕೆಗಳು ಎಸ್ಸೆಸ್ಸೆಲ್ಸಿ ಮಕ್ಕಳಿಗೆ ದಿಕ್ಸೂಚಿಯಾಗಿವೆ. ಇದನ್ನು ಅಧ್ಯಯನ ಮಾಡಿ ಮಕ್ಕಳಿಗೆ ಸರಳವಾಗಿ ತಿಳಿಯುವಂತೆ ಕಿರು ಹೊತ್ತಿಗೆ ರಚಿಸಲಾಗಿದೆ ಎಂದು ಸಂಘದ ಅಧ್ಯಕ್ಷ ನಾರಾಯಣ ಭಜಂತ್ರಿ ತಿಳಿಸಿದರು.

ಮಕ್ಕಳಿಗೆ ಇದು ಉಪಯುಕ್ತ ಕೈಪಿಡಿ ಆಗಿದೆ ಎಂದು ಸಂಪನ್ಮೂಲ ವ್ಯಕ್ತಿ ಡಾ, ಶಿವಾನಂದ ಕವಟಕೊಪ್ಪ ಹೇಳಿದರು. ಕಾರ್ಯದರ್ಶಿ ಬಿ.ಜಿ. ಬಶೆಟ್ಟಿ, ಗುರು ತಿಗಡಿ, ಹಂಗರಕಿ ಗ್ರಾಪಂ ಉಪಾಧ್ಯಕ್ಷ ಚನ್ನಬಸು ಚಿತ್ತೂರು, ಶಂಕರ ಗಟ್ಟಿ, ಡಾ, ಶಿವಾನಂದ ಕವಟಕೊಪ್ಪ, ಕಾಶಪ್ಪ ದೊಡವಾಡ, ರಮೇಶ ತಳವಾರ, ಸಿದ್ಧಲಿಂಗ ಶಿವಶಿಂಪಿ, ಚಂದ್ರು ತಿಗಡಿ, ರಾಜು ಮಾಳವಾಡ, ನಾಗರಾಜ ತಳವಾರ ಇದ್ದರು.