ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕೆಲ ದಿನಗಳಷ್ಟೇ ಬಾಕಿ ಇರುವಾಗ 2700ಕ್ಕೂ ಹೆಚ್ಚು ಪರೀಕ್ಷಾ ಕೇಂದ್ರಗಳಲ್ಲಿ ಪ್ರತಿಯೊಂದು ಕೊಠಡಿಯಲ್ಲೂ ಸಿಸಿಕ್ಯಾಮರಾ ಅಳವಡಿಕೆ ಮತ್ತು ವೆಬ್‌ಕಾಸ್ಟಿಂಗ್‌ ವ್ಯವಸ್ಥೆ ಮಾಡುವಂತೆ ಸರ್ಕಾರ ಸೂಚಿಸಿದೆ. ಈ ಏಕಾಏಕಿ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕೆಲ ದಿನಗಳಷ್ಟೇ ಬಾಕಿ ಇರುವಾಗ 2700ಕ್ಕೂ ಹೆಚ್ಚು ಪರೀಕ್ಷಾ ಕೇಂದ್ರಗಳಲ್ಲಿ ಪ್ರತಿಯೊಂದು ಕೊಠಡಿಯಲ್ಲೂ ಸಿಸಿಕ್ಯಾಮರಾ ಅಳವಡಿಕೆ ಮತ್ತು ವೆಬ್‌ಕಾಸ್ಟಿಂಗ್‌ ವ್ಯವಸ್ಥೆ ಮಾಡುವಂತೆ ಸರ್ಕಾರ ಸೂಚಿಸಿದೆ. ಆದರೆ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರಿಗೆ ದೊಡ್ಡ ತಲೆನೋವು ತಂದೊಡ್ಡಿದ್ದು, ಈ ಏಕಾಏಕಿ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗಿದೆ.

ಈ ಮಧ್ಯೆ, ನಿರ್ಗಮಿತ ವಿಧಾನ ಪರಿಷತ್‌ ಸದಸ್ಯ ಮರಿತಿಬ್ಬೇಗೌಡ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮತ್ತು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಈ ಸಂಬಂಧ ಪತ್ರ ಬರೆದು, ಪ್ರತಿ ಪರೀಕ್ಷಾ ಕೊಠಡಿಯಲ್ಲಿ ಸಿಸಿಕ್ಯಾಮರಾ, ವೆಬ್‌ಕಾಸ್ಟಿಂಗ್‌ನಂತಹ ವ್ಯವಸ್ಥೆಯನ್ನು ಕೆಪಿಎಸ್ಸಿ ಪರೀಕ್ಷೆಯಲ್ಲೂ ಇಲ್ಲ. 

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಇಂತಹ ಅವೈಜ್ಞಾನಿಕ ನಿಯಮ ತಂದು ಮಕ್ಕಳಲ್ಲಿ ಭಯದ ವಾತಾವರಣ ಸೃಷ್ಟಿಸುವ ಪ್ರಯತ್ನ ನಡೆದಿದೆ. ಇದನ್ನು ಕೂಡಲೇ ಕೈಬಿಡಲು ಅಧಿಕಾರಿಗಳಿಗೆ ಸೂಚಿಸಬೇಕೆಂದು ಒತ್ತಾಯಿಸಿದ್ದಾರೆ.

ಜೊತೆಗೆ ಎಸ್ಸೆಸ್ಸೆಲ್ಸಿ ಪರೀಕ್ಷಾ ಮೌಲ್ಯಮಾಪನ ಕಾರ್ಯಕ್ಕೆ ಮಾತ್ರ ಅನುದಾನರಹಿತ ಖಾಸಗಿ ಶಾಲಾ ಶಿಕ್ಷಕರನ್ನು ಬಳಸಿಕೊಳ್ಳುವ ಸರ್ಕಾರ, ಪರೀಕ್ಷಾ ಕೊಠಡಿ ಮೇಲ್ವಿಚಾರಕರನ್ನಾಗಿ ನೇಮಿಸಿಕೊಳ್ಳದೆ ತಾರತಮ್ಯ ಮಾಡುತ್ತಿದೆ. ಇದನ್ನು ಸರಿಪಡಿಸಲು ಕೂಡ ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಆಗ್ರಹಿಸಿದ್ದಾರೆ. ಏನಾಗಿತ್ತು?

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ತಿಂಗಳ ಹಿಂದೆಯೇ ಮಾರ್ಗಸೂಚಿ ಹೊರಡಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರತಿ ಪರೀಕ್ಷಾ ಕೇಂದ್ರದ ಹೊರಾಂಗಣ, ಆವರಣ ಮತ್ತು ಕೇಂದ್ರದ ಮುಖ್ಯಸ್ಥರ ಕೊಠಡಿ ಈ ಮೂರು ಕಡೆ ಮಾತ್ರ ಸಿಸಿಕ್ಯಾಮರಾ ಅಳವಡಿಸಲು ಸೂಚಿಸಲಾಗಿತ್ತು. 

ಆದರೆ, ಮಾ.20ರಂದು ಮುಖ್ಯಕಾರ್ಯದರ್ಶಿ ಅವರ ನೇತೃತ್ವದಲ್ಲಿ ನಡೆದ ವಿಡಿಯೋ ಕಾನ್ಫರೆನ್ಸ್‌ ಸಭೆಯಲ್ಲಿ ಏಕಾಏಕಿ ಎಲ್ಲ ಕೇಂದ್ರಗಳ ಪ್ರತಿಯೊಂದು ಕೊಠಡಿಗೂ ಸಿಸಿಕ್ಯಾಮರಾ ಅಳವಡಿಸಬೇಕು ಮತ್ತು ಇದನ್ನು ವೆಬ್‌ಕಾಸ್ಟಿಂಗ್‌ ಮಾಡಬೇಕೆಂದು ಸೂಚಿಸಿತ್ತು.

ಆದರೆ, ಮಾ.25ರಿಂದ ಪರೀಕ್ಷೆ ಆರಂಭವಾಗಲಿದೆ. ಉಳಿದಿರುವ ಮೂರು ನಾಲ್ಕು ದಿನಗಳಲ್ಲಿ ಶಾಲಾ ಸಂಚಿತ ನಿಧಿಯಿಂದ ಹಣ ಪಡೆಯುವುದು, ಟೆಂಡರ್‌ ಕರೆಯಲು ಹೇಗೆ ಸಾಧ್ಯ. 

ಇದನ್ನು ಸರ್ಕಾರಕ್ಕೆ ಮನವರಿಕೆ ಮಾಡದೆ ಇಲಾಖಾ ಅಧಿಕಾರಿಗಳು ತಲೆನೋವು ತಂದಿಟ್ಟಿದ್ದಾರೆ ಎಂದು ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರಾಗಿರುವ ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.