ಸಾರಾಂಶ
ಕೊಳ್ಳೇಗಾಲ: ಗಾರೆ ಕೆಲಸ ವೃತ್ತಿನಿರತ ನಿಂಗರಾಜು ಮತ್ತು ಜಯ ದಂಪತಿ ಪುತ್ರ ಮಹದೇವಸ್ವಾಮಿ ಇತ್ತೀಚೆಗೆ ನಡೆದ 10ನೇ ತರಗತಿ ಪರೀಕ್ಷೆಯಲ್ಲಿ 625ಕ್ಕೆ 609 ಅಂಕ ಗಳಿಸಿ ಶೇ.97.44ರಷ್ಟು ಸಾಧನೆಗೈದಿದ್ದಾನೆ. ಸುರಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಅಧ್ಯಯನ ಮಾಡುತ್ತಿದ್ದ ಮಹದೇವಸ್ವಾಮಿ ಸಾಧನೆಗೆ ಮುಖ್ಯಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿ ಆತನನ್ನು ಅಭಿನಂದಿಸಿ ಮುಂದಿನ ದಿನಗಳಲ್ಲಿ ಹೆಚ್ಚು ಸಾಧನೆ ಮಾಡುವಂತೆ ಸಲಹೆ ನೀಡಿದೆ. ಇದೇ ವೇಳೆ ಸಾಧಕ ವಿದ್ಯಾರ್ಥಿಯ ನಿವಾಸಕ್ಕೆ ತೆರಳಿದ ಮಾಜಿ ಸಚಿವ ಎನ್. ಮಹೇಶ್ ವಿದ್ಯಾರ್ಥಿಗೆ ಸಿಹಿ ತಿನ್ನಿಸಿ ಶಾಲು ಹೊದಿಸಿ ಪ್ರೋತ್ಸಾಹಿಸಿದ್ದಾರೆ.ಶಾಲೆಗೆ 72ರಷ್ಟು ಫಲಿತಾಂಶ: ಈ ಬಾರಿ ಸುರಾಪುರ ಸರ್ಕಾರಿ ಪ್ರೌಢಶಾಲೆ ಶೇ.72ರ ಫಲಿತಾಂಶಕ್ಕೆ ಭಾಜನವಾಗಿದೆ. ಪರೀಕ್ಷೆಗೆ ಹಾಜದರಾದ 57 ವಿದ್ಯಾರ್ಥಿಗಳ ಪೈಕಿ 41 ಮಂದಿ ಮಕ್ಕಳು ಉತ್ತೀರ್ಣರಾಗಿದ್ದು, ಇದರಲ್ಲಿ 2 ಅತ್ಯುನ್ನತ, 16 ಪ್ರಥಮ ದರ್ಜೆಯಲ್ಲಿ ಹಾಗೂ ದ್ವಿತೀಯ ದರ್ಜೆಯಲ್ಲಿ 7 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ ಎಂದು ಮುಖ್ಯಶಿಕ್ಷಕ ಲೋಕೇಶ್ ತಿಳಿಸಿದ್ದಾರೆ.
ಶಾಲೆಯ ವಿದ್ಯಾರ್ಥಿ ಮಹದೇವಸ್ವಾಮಿ( 609), ಸ್ನೇಹ 578) ಅಂಕಗಳಿಸಿ ಅತ್ಯುನ್ನತ ದರ್ಜೆಯಲ್ಲಿ ತೇರ್ಗಡೆಯಾಗಿ ಶಾಲೆಗೆ ಕೀರ್ತಿ ತಂದಿದ್ದಾರೆ. ಕಡಿಮೆ ಅಂಕ ಗಳಿಸಿದ ವಿದ್ಯಾರ್ಥಿಗಳು ಚಿಂತಾಕ್ರಾಂತರಾಗದೆ, ಹೆಚ್ಚು ಅಂಕ ಗಳಿಸಿದವರು ಬೀಗದೆ ಮುಂದಿನ ಭವಿಷ್ಯಕ್ಕೆ ಕಠಿಣ ಪರಿಶ್ರಮ ಪಡಬೇಕು, ಆ ಮೂಲಕ ಶಿಕ್ಷಕರು ಹಾಗೂ ಪೋಷಕರಿಗೆ ಕೀರ್ತಿ ತರಬೇಕು ಎಂದರು.ಈ ವೇಳೆ ಎಸ್‌ಡಿಎಂಸಿ ಅಧ್ಯಕ್ಷ ಸೋಮಣ್ಣ, ಶಿಕ್ಷಕರಾದ ಮೇರಿ ನಿರ್ಮಲ, ಪಳನಿಸ್ವಾಮಿ ಜಾಗೇರಿ, ಗೋವಿಂದರಾಜು, ಪಿ ಲಿಂಗರಾಜು, ಮಲ್ಲೇಶ್ ಬಾಬು, ಶ್ರೀಕಾಂತ್ ಹಾಜರಿದ್ದರು.