ಸಾರಾಂಶ
ಸಂಸ್ಕೃತ ಅಧ್ಯಯನ ಮಾಡಿದರೆ ಭವಿಷ್ಯವಿದೆ: ಪ್ರಶಾಂತ್‌ಕನ್ನಡಪ್ರಭ ವಾರ್ತೆ ಬೇಲೂರುಪಟ್ಟಣದ ಪೂರ್ಣಪ್ರಜ್ಞಾ ಶಾಲೆಯಲ್ಲಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕರ ಸಂಘ ಹಾಗೂ ಜಿಲ್ಲಾ ಘಟಕದ ವತಿಯಿಂದ ಏರ್ಪಡಿಸಲಾಗಿದ್ದ ಸಂಸ್ಕೃತ ಭಾಷೆಯಲ್ಲಿ ಎಸ್‌ಎಸ್‌ಎಲ್ಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಹಾಸನ ಜಿಲ್ಲಾ ಸಂಸ್ಕೃತ ಘಟಕದ ಅಧ್ಯಕ್ಷ ಭೈರಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಂಸ್ಕೃತ ಒಂದು ಪ್ರಾಚೀನ ಭಾಷೆಯಾಗಿದ್ದು ಅದನ್ನು ಉತ್ತೇಜಿಸುವ ಸಲುವಾಗಿ ಸರ್ಕಾರ ಎಲ್ಲಾ ಶಾಲೆಗಳಿಗೆ ಸಂಸ್ಕೃತ ಪಠ್ಯದ ಬಗ್ಗೆ ಹೆಚ್ಚಿನ ಸಹಕಾರ ನೀಡುತ್ತಿದೆ. ಅದರಂತೆ ಪ್ರತಿವರ್ಷ ಸಂಸ್ಕೃತದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ತಾಲೂಕು ಮಟ್ಟದ ವಿದ್ಯಾರ್ಥಿಗಳನ್ನು ಗೌರವಿಸುವ ಕೆಲಸ ಮಾಡಿಕೊಂಡು ಬರಲಾಗುತ್ತಿದೆ ಎಂದರು.
ನಂತರ ಮಾತನಾಡಿದ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೇಮಂತ್, ಸಂಸ್ಕೃತ ಭಾಷೆ ಕಲಿತಂತ ವಿದ್ಯಾರ್ಥಿಗಳು ಹೆಚ್ಚು ಸುಸಂಸ್ಕೃತ ರಾಗಿ ಬೆಳೆಯುತ್ತಾರೆ. ಈ ಭಾಷೆ ಬಗ್ಗೆ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಪೋಷಕರ ಸಹಕಾರ ಅತಿ ಮುಖ್ಯ ಎಂದರು.ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಪೂರ್ಣಪ್ರಜ್ಞಾ ಶಾಲೆಯ ಪ್ರಾಂಶುಪಾಲ ಪ್ರಶಾಂತ್, ಸಂಸ್ಕೃತ ಭಾಷೆ ಅನಾದಿಕಾಲದಿಂದಲೂ ಬಳಕೆಯಲ್ಲಿದ್ದು ಇದನ್ನು ಪ್ರತಿಯೊಬ್ಬ ಮನುಷ್ಯನು ಬಳಸಿಕೊಂಡು ಅಧ್ಯಯನ ಮಾಡಿದರೆ ಭವಿಷ್ಯವಿದೆ. ಅದರಂತೆ ನಮ್ಮ ವಿದ್ಯಾಸಂಸ್ಥೆಯಲ್ಲಿ ಪರಮ ಪೂಜ್ಯರ ಆಶಯದಂತೆ ಸಂಸ್ಕೃತ ಅಧ್ಯಯನಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದ್ದು, ಚಿಕ್ಕ ವಯಸ್ಸಿನಿಂದಲೇ ಸಂಸ್ಕೃತ ಭಾಷೆಗೆ ಹೆಚ್ಚಿನ ಪ್ರಾಮುಖ್ಯತೆ ಪಡೆದಂತ ಮಗು ಭವಿಷ್ಯದ ಬಹುದೊಡ್ಡ ವ್ಯಕ್ತಿಯಾಗುತ್ತಾನೆ ಎಂದರು.
ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಸುನೀತಾ, ಸಂಸ್ಕೃತ ಅಧ್ಯಾಪಕರಾದ ವಿಶ್ವನಾಥ ಶರ್ಮ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್, ಶಿಕ್ಷಕರಾದ ಅನಂತರಾಮ, ಉದಯ್ ಭಟ್ ಇತರರು ಹಾಜರಿದ್ದರು.