ಮಕ್ಕಳಿಗೆ ಎಸ್‌ಎಸ್‌ಎಲ್‌ಸಿ ಟರ್ನಿಂಗ್ ಪಾಯಿಂಟ್: ಡಾ.ಸೂರ್ಯಕಲಾ

| Published : Jan 05 2024, 01:45 AM IST

ಮಕ್ಕಳಿಗೆ ಎಸ್‌ಎಸ್‌ಎಲ್‌ಸಿ ಟರ್ನಿಂಗ್ ಪಾಯಿಂಟ್: ಡಾ.ಸೂರ್ಯಕಲಾ
Share this Article
  • FB
  • TW
  • Linkdin
  • Email

ಸಾರಾಂಶ

ಮಕ್ಕಳೇ ಪರೀಕ್ಷೆಗೆ ಸಿದ್ಧರಾಗಿ ಪ್ರಾಯೋಗಿಕ ಸಂವಾದ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ತುಮಕೂರು

ಮಕ್ಕಳ ಪಾಲಿಗೆ ಶೈಕ್ಷಣಿಕ ಜೀವನದಲ್ಲಿ ಎಸ್‌ಎಸ್ಎಲ್‌ಸಿ ಎಂಬುದು ಟರ್ನಿಂಗ್ ಪಾಯಿಂಟ್ ಇದ್ದಂತೆ. ಹಾಗಾಗಿ ವಿದ್ಯಾರ್ಥಿಗಳು ತಮ್ಮ ಅಭ್ಯಾಸದ ಬಗ್ಗೆ ನಿರ್ಲಕ್ಷ ವಹಿಸದೆ ಕಠಿಣ ಅಭ್ಯಾಸದಲ್ಲಿ ತೊಡಗಿ ಹೆಚ್ಚಿನ ಅಂಕಗಳೊಂದಿಗೆ ಉತ್ತೀರ್ಣರಾಗುವಂತೆ ತುಮಕೂರು ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಸೂರ್ಯಕಲಾ ಸಲಹೆ ನೀಡಿದರು.

ತಾಲೂಕಿನ ಕೋರ ಹೋಬಳಿ ಬೆಳಧರ ಗ್ರಾಮದ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ಆಯೋಜಿಸಿದ್ದ ಮಕ್ಕಳೇ ಪರೀಕ್ಷೆಗೆ ಸಿದ್ಧರಾಗಿ ಪ್ರಾಯೋಗಿಕ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಮುಂದಿನ 80 ದಿನಗಳಲ್ಲಿ ಹತ್ತನೇ ತರಗತಿಯ ಪರೀಕ್ಷೆ ನಡೆಯಲಿದೆ. ಇಂದಿನಿಂದ ಕಠಿಣ ಅಭ್ಯಾಸದಲ್ಲಿ ತೊಡಗಿದರೂ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಬಹುದು. ಹಾಗಾಗಿ ಮಕ್ಕಳು ಪರೀಕ್ಷೆಯ ಭಯ ಬಿಟ್ಟು, ಆತ್ಮಸ್ಥೈರ್ಯದಿಂದ, ಟೈಮ್ ಟೇಬಲ್ ಹಾಕಿಕೊಂಡು ಓದಲು ಮುಂದಾಗಬೇಕು ಎಂದರು.

ಈ ಸಾಲಿನ ಪರೀಕ್ಷೆ ಅತ್ಯಂತ ಕಟ್ಟು ನಿಟ್ಟಿನಿಂದ ಕೂಡಿರುತ್ತದೆ. ನಕಲು ಮಾಡಲು ಅವಕಾಶವಿಲ್ಲ. ಉಚಿತವಾಗಿ ಆಸ್ತಿ ಬೇಕಾದರೂ ಸಿಗಬಹುದು, ಅಂಕ ಸಿಗುವುದಿಲ್ಲ. ಹಾಗಾಗಿ ಬೇರೆಲ್ಲಾ ಅಡ್ಡದಾರಿ ಆಲೋಚನೆಗಳನ್ನು ಬದಿಗಿರಿಸಿ, ಶಿಕ್ಷಕರು ಹಾಕಿಕೊಟ್ಟ ಮಾರ್ಗ ದರ್ಶನದಂತೆ ವಿದ್ಯಾರ್ಥಿಗಳು ಹಗಲಿರುಳು ಓದಿ ಉತ್ತಮ ಅಂಕದೊಂದಿಗೆ ತೆರ್ಗಡೆಯಾಗಿ ಜಿಲ್ಲೆಗೆ, ತಾಲೂಕಿಗೆ ಕೀರ್ತಿ ತರಬೇಕು ಎಂದು ಹೇಳಿದರು.

ಇದು ಹರೆಯದ ವಯಸ್ಸು, ಮನಸ್ಸು ವಿವಿಧ ಆಕರ್ಷಣೆಗಳಿಗೆ ಒಳಗಾಗುವುದು ಸಹಜ. ಒಂದಿಷ್ಟು ಎಚ್ಚರ ತಪ್ಪಿದರೆ ಮುಂದಿನ 80 ವರ್ಷಗಳ ಕಾಲ ಬಹಳ ತೊಂದರೆಗೆ ಒಳಗಾಗುತ್ತೀರಿ. ಹಾಗಾಗಿ ಮನಸ್ಸನ್ನು ಹೋದ ಕಡೆಯಲೆಲ್ಲಾ ಹರಿಯಲು ಬಿಡದೆ, ಓದಿನ ಮೇಲೆ ಕೇಂದ್ರೀಕರಿಸಿದರೆ, ಪಾಸಾಗುವುದರ ಜೊತೆಗೆ, ಉತ್ತಮ ಅಂಕಗಳನ್ನು ಪಡೆಯಬಹುದು. ಇಂದೇ ಎಲ್ಲರೂ ಈ ನಿಟ್ಟಿನಲ್ಲಿ ಪ್ರತಿಜ್ಞೆ ಮಾಡಿ, ಯಶಸ್ಸು ಸಾಧಿಸುವಂತೆ ಡಾ. ಸೂರ್ಯಕಲಾ ಶುಭ ಹಾರೈಸಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಜಕ್ಕೇನಹಳ್ಳಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಜಗದೀಶ್, ಶೈಕ್ಷಣಿಕ ಅವಧಿಯಲ್ಲಿ ಎಸ್‌ಎಸ್ಎಲ್‌ಸಿ ಎಂಬುದು ಮೊದಲ ಮೆಟ್ಟಿಲು, ಇದನ್ನು ನೀವು ಮೆಟ್ಟಿ ನಿಂತರೆ ಜೀವನದಲ್ಲಿ ಬರುವ ಎಲ್ಲಾ ಸಮಸ್ಯೆಗಳನ್ನು ಸುಲಭವಾಗಿ ಎದುರಿಸಬಹುದು. ಹಾಗಾಗಿ ಮುಂದಿನ 80 ದಿನ ಹತ್ತನೆ ತರಗತಿಯ ಮಕ್ಕಳಿಗೆ ಪರ್ವ ಕಾಲ. ಎಷ್ಟು ಗಮನವಿಟ್ಟು ಓದುತ್ತೀರಿ, ಅಷ್ಟೇ ಉತ್ತಮ ಅಂಕಗಳು ನಿಮ್ಮದಾಗಲಿವೆ ಎಂದರು.

ಇಲಾಖೆ ಸಹ ನಿಮ್ಮೊಂದಿಗೆ ಕೈಜೋಡಿಸಿ, ಮಕ್ಕಳಲ್ಲಿರುವ ಭಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಮಕ್ಕಳೇ ಪರೀಕ್ಷೆಗೆ ಸಿದ್ಧರಾಗಿ ಎಂಬ ಈ ಕಾರ್ಯಕ್ರಮವನ್ನು ಮೊದಲ ಬಾರಿಗೆ ಕೋರ ಹೋಬಳಿಯಲ್ಲಿ ಹಮ್ಮಿಕೊಂಡಿದೆ. ಇದರ ಪ್ರಯೋಜನ ಪಡೆದು ಉತ್ತಮ ಅಂಕ ಗಳಿಸುವಂತೆ ಸಲಹೆ ನೀಡಿದರು.

ಇದೇ ವೇಳೆ ನ್ಯಾಷನಲ್ ರೈಫಲ್ ಶೂಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಪದಕ ಪಡೆದ ಗುರುಕುಲ ಶಾಲೆಯ ಮಹಾಲಕ್ಷ್ಮಿ ಅವರನ್ನು ಅಭಿನಂದಿಸಲಾಯಿತು.

ಅನುದಾನಿತ ಪ್ರೌಢಶಾಲೆ ಸಂಘಗಳ ಒಕ್ಕೂಟ ಕಾರ್ಯದರ್ಶಿ ಮಂಜುನಾಥ್, ಇಸಿಒ ನವೀನ್, ಚಂದ್ರಶೇಖರ್ , ಕೋರ ಹೋಬಳಿಯ ಸರಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳ ನೂರಾರು ವಿದ್ಯಾರ್ಥಿಗಳು ಸಂವಾದದಲ್ಲಿ ಪಾಲ್ಗೊಂಡಿದ್ದರು.