22ಕ್ಕೆ ಎಸ್‌ಎಸ್‌ಎಂ 57ನೇ ಜನ್ಮದಿನ, ಮತದಾರರಿಗೆ ಕೃತಜ್ಞತೆ

| Published : Sep 20 2024, 01:33 AM IST

ಸಾರಾಂಶ

ಸುದ್ದಿಗೋಷ್ಠಿಯಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮಾತನಾಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಸಚಿವ ಎಸ್.ಎಸ್‌.ಮಲ್ಲಿಕಾರ್ಜುನರ 57ನೇ ಜನ್ಮದಿನವನ್ನು ಅಭಿಮಾನಿಗಳು ಸೆ.22ರಂದು ನಗರದ ಬಾಪೂಜಿ ಸಮುದಾಯ ಭವನದಲ್ಲಿ ಅದ್ಧೂರಿಯಾಗಿ ಹಮ್ಮಿಕೊಂಡಿದ್ದು, ಅದೇ ಸಮಾರಂಭದಲ್ಲಿ ಮತಗದಾರರಿಗೆ ಕೃತಜ್ಞತಾ ಕಾರ್ಯಕ್ರಮ ನಡೆಯಲಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ತಿಳಿಸಿದರು.

ನಗರದ ತಮ್ಮ ಗೃಹ ಕಚೇರಿ ಶಿವ ಪಾರ್ವತಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 11 ಗಂಟೆಗೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಇದೇ ವೇಳೆ ದಾವಣಗೆರೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣರಾದ ಉತ್ತರ, ದಕ್ಷಿಣ ಕ್ಷೇತ್ರಗಳ ಮತದಾರರಿಗೆ ಅಭಿನಂದಿಸಲಾಗುವುದು ಎಂದರು.

ಮಹಾ ನಗರದಲ್ಲಿ ಈಗಾಗಲೇ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ಅದು ಎಸ್‌.ಎಸ. ಮಲ್ಲಿಕಾರ್ಜುನರ ಹಬ್ಬ ಎಂಬುದಾಗಿ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಹಿತೈಷಿಗಳು ಆಚರಿಸುತ್ತಿದ್ದಾರೆ. ಈಗಾಗಲೇ ಸಮಾರಂಭಕ್ಕೆ ಎಲ್ಲಾ ಸಿದ್ಧತೆಗಳನ್ನೂ ಮಾಡಿಕೊಳ್ಳುತ್ತಿದ್ದಾರೆ. ಗೋ ಶಾಲೆಗಳಿಗೆ ಮೇವು ವಿತರಣೆಯೊಂದಿಗೆ ಎಸ್‌ಎಸ್‌ಎಂ ಜನ್ಮ ದಿನಾಚರಣೆಗೆ ಸಮಾಜಮುಖಿ ಕಾರ್ಯ ಶುರುವಾಗಿದೆ. ನಿತ್ಯವೂ ವಿವಿಧ ಭಾಗಗಳಲ್ಲಿ ಕಾರ್ಯಕ್ರಮ ನಡೆಯುತ್ತಿವೆ ಎಂದು ಅವರು ಹೇಳಿದರು.

ಎಂಸಿಸಿ ಬಿ ಬ್ಲಾಕ್‌ನ ಐಎಂಎ ಸಭಾಂಗಣ, ವಿನೋಬ ನಗರದ ಶ್ರೀ ಶಂಭುಲಿಂಗೇಶ್ವರ ಕಲ್ಯಾಣ ಮಂಟಪ ಸೇರಿದಂತೆ ಪಾಲಿಕೆಯ 16, 17, 22 ಹಾಗೂ 24ನೇ ವಾರ್ಡ್‌ನ ಸಮಸ್ತ ನಾಗರೀಕರಿಂದ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಎಸ್‌ಎಸ್‌ ಮಲ್ಲಿಕಾರ್ಜುನರ 55ನೇ ದಿನದ ಅಂಗವಾಗಿ ಕಳೆದ ವರ್ಷ 5,555 ಯುನಿಟ್ ರಕ್ತದಾನ ಸಂಗ್ರಹ ಅಭಿಯಾನದಲ್ಲಿ ಈ‍ವರೆಗೆ 3500 ಯುನಿಟ್ ಸಂಗ್ರಹಿಸಿ, ಅಗತ್ಯವಿದ್ದವರಿಗೆ ಉಚಿತವಾಗಿ ನೀಡಲಾಗಿದೆ. ಗುರಿಯಂತೆ 5555 ಯುನಿಟ್ ಸಂಗ್ರಹವಾಗುವವರೆಗೂ ಅಭಿಯಾನ ಮುಂದುವರಿಯುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ಮೂರನೇ ಬಾರಿಗೆ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ ದಾವಣಗೆರೆ ನಗರ, ಜಿಲ್ಲೆಯನ್ನು ಭಾರತದ ಭೂಪಟದಲ್ಲಿ ಗುರುತಿಸುವಂತಹ ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತಿದ್ದಾರೆ. ಎಸ್‌ಎಸ್‌ಎಂ ರ ಸೇವೆ ಮತ್ತಷ್ಟು ನಗರ, ಜಿಲ್ಲೆಗೆ ಸಿಗಲಿ ಎಂಬ ಹಾರೈಕೆಯೊಂದಿಗೆ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು, ಮುಖಂಡರು, ಪದಾಧಿಕಾರಿಗಳು, ಸಂಘ-ಸಂಸ್ಥೆಗಳು, ಮಹಿಳಾ ಸ್ವಸಹಾಯ ಸಂಘಗಳು, ಕಾಂಗ್ರೆಸ್ಸಿನ ಎಲ್ಲಾ ಘಟಕಗಳ ಪದಾಧಿಕಾರಿಗಳು, ಎಸ್‌ಎಸ್‌ಎಂ ಅಭಿಮಾನಿಗಳು, ಕಾರ್ಯಕರ್ತರು, ಪಕ್ಷದ ಎಲ್ಲಾ ಘಟಕಗಳ ಸೆ.22ರಂದು ಬಾಪೂಜಿ ಬ್ಯಾಂಕ್ ಸಮುದಾಯ ಭವನಕ್ಕೆ ಆಗಮಿಸಿ, ಸಮಾರಂಭವನ್ನು ಯಶಸ್ವಿಗೊಳಿಸುವಂತೆ ಅವರು ಮನವಿ ಮಾಡಿದರು.

ಮುಂದಿನ ದಿನಗಳಲ್ಲಿ ದಾವಣಗೆರೆ ನಗರ, ಜಿಲ್ಲೆಗೆ ಕೈಗಾರಿಕೆಗಳನ್ನು ತರುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ. ಗಾರ್ಮೆಂಟ್ಸ್‌ ಗಳನ್ನು ತರುವ ಬಗ್ಗೆ ಗಮನ ಹರಿಸಲಾಗುವುದು. ರೈತರು, ಕಾರ್ಮಿಕರು, ವಿದ್ಯಾರ್ಥಿ, ಯುವಜನರು, ಮಹಿಳೆಯರು, ಕೂಲಿ ಕಾರ್ಮಿಕರು, ವಿಕಲಚೇತನರು ಹೀಗೆ ಎಲ್ಲರ ಅಭಿವೃದ್ಧಿ ಬಗ್ಗೆ ಪ್ರಾಮಾಣಿಕ ಪ್ರಯತ್ನಿಸಲಾಗುವುದು. ಲೀಡ್ ಬ್ಯಾಂಕ್ ಸಭೆಯಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ನೀಡುವ ಬಗ್ಗೆ ಬ್ಯಾಂಕ್ ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ನಗರ, ಜಿಲ್ಲೆಯ ಅಭಿವೃದ್ಧಿಗೆ ತಾವು ಬದ್ಧರಿದ್ದು, ಸೆ.25ರಂದು ಜಿಪಂ ಸಭಾಂಗಣದಲ್ಲಿ ನಡೆಯುವ ದಿಶಾ ಸಮಿತಿ ಸಭೆಯಲ್ಲಿ ಸಾಕಷ್ಟು ವಿಷಯಗಳ ಬಗ್ಗೆ ಚರ್ಚಿಸಲಾಗುವುದು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ತಿಳಿಸಿದರು.

ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ, ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಮುದೇಗೌಡ್ರ ಗಿರೀಶ, ಪಾಲಿಕೆ ಸದಸ್ಯರಾದ ಕೆ.ಚಮನ್ ಸಾಬ್‌, ಜಿ.ಎಸ್.ಮಂಜುನಾಥ ಗಡಿಗುಡಾಳ, ಎ.ನಾಗರಾಜ, ಎಲ್.ಎಂ.ಎಚ್.ಸಾಗರ್‌, ಮುಖಂಡರಾದ ಮಾಗಾನಹಳ್ಳಿ ಬಿ.ಕೆ.ಪರಶುರಾಮ, ಕೆ.ಜಿ.ಶಿವಕುಮಾರ, ಜಿಪಂ ಮಾಜಿ ಸದಸ್ಯ ಹದಡಿ ಜಿ.ಸಿ.ನಿಂಗಪ್ಪ, ಹಾಲೇಶ ಗೌಡ ಇತರರು ಇದ್ದರು.

ಆಸ್ಪತ್ರೆಗೆ ಸಿಸಿ ಕ್ಯಾಮೆರಾ, ಭದ್ರತೆಗೆ ಸೂಚನೆ: ಡಾ.ಪ್ರಭಾ

ಕನ್ನಡಪ್ರಭ ವಾರ್ತೆ ದಾವಣಗೆರೆ

ಕೊಲ್ಕತಾದಲ್ಲಿ ವೈದ್ಯೆ ಹತ್ಯೆ ಪ್ರಕರಣದ ನಂತರ ದಾವಣಗೆರೆ ಜಿಲ್ಲಾ ಆಸ್ಪತ್ರೆಗೆ ತಾವು ಭೇಟಿ ನೀಡಿ, ವೈದ್ಯಾಧಿಕಾರಿಗಳು, ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳು, ಸಿಬ್ಬಂದಿ ಜೊತೆಗೆ ಸಭೆ ನಡೆಸಿ, ಆಸ್ಪತ್ರೆಯಲ್ಲಿ ಸಿಸಿ ಕ್ಯಾಮೆರಾ ಕಣ್ಗಾವಲಿಡುವ ಜೊತೆಗೆ ಸೂಕ್ತ ಭದ್ರತೆ ಕಲ್ಪಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ, ಸುಮಾರು 3-4 ಗಂಟೆ ಪರಿಶೀಲನೆ ನಡೆಸಿದ್ದೇವೆ. ಆಸ್ಪತ್ರೆಯಲ್ಲಿ ಪ್ರಮುಖ ಸ್ಥಳ, ಆಯಕಟ್ಟಿನ ಜಾಗ, ಅಗತ್ಯವಿರುವಲ್ಲೆಲ್ಲಾ ಸಿಸಿ ಕ್ಯಾಮೆರಾ ಅಳವಡಿಸಲು, ಭದ್ರತೆ ಕಲ್ಪಿಸುವ ಜೊತೆಗೆ ಪಾರ್ಕಿಂಗ್ ಸ್ಥಳದ ಕಡೆಗೂ ಗಮನ ಹರಿಸುವಂತೆ ವೈದ್ಯಾಧಿಕಾರಿಗೆ ಸೂಚನೆ ನೀಡಲಾಗಿದೆ ಎಂದರು.

ಜಿಲ್ಲಾಸ್ಪತ್ರೆ ಅಧೀಕ್ಷಕರಿಗೆ ಕಾಲಮಿತಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳ ಜೊತೆಗೆ ವೈದ್ಯರು, ವೈದ್ಯಕೀಯ ವಿದ್ಯಾರ್ಥಿಗಳ ಸಮಸ್ಯೆಗಳ ಬಗ್ಗೆಯೂ ಆಲಿಸಿದ್ದೇವೆ ಎಂದು ಅವರು ಹೇಳಿದರು.